ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿ ಮಳೆ ಬಿಸಿಲಿನ `ಲವ್ ಸ್ಟೋರಿ'

Last Updated 1 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

`ಹಳೇ ಗುಜ್ರಿ.. ಹೊಸ ಬ್ಯಾಟ್ರಿ..' ಹಾಡು ತೆರೆಯ ಹಿಂದಿನಿಂದ ಬಂತು. ಬಳಿಕ ಟ್ರೇಲರ್ ಪ್ರದರ್ಶನ. ನಂತರ `ಬೆಳಿಗ್ಗೆ ಜಿಮ್ಮು, ಮಧ್ಯಾಹ್ನ ಕೇರಮ್ಮು, ರಾತ್ರಿ ರಮ್ಮು' ಹಾಡು. ತದನಂತರ ಭೂಮಿ ಮೇಲಿನ ವಸ್ತುಗಳೆಲ್ಲಾ ಮೇಲ್ಮುಖವಾಗಿ ಹಾರುವ ಹಾಡಿನ ಪ್ರದರ್ಶನ. ಹೀಗೆ ಒಂದರ ನಂತರ ಒಂದು ನೋಟ- ಹಿನ್ನೋಟಗಳ ನಡುವೆ, ಭರತ್ ಸಂಗೀತ ನಿರ್ದೇಶನದ `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ಆಡಿಯೋ ಬಿಡುಗಡೆಯಾಯಿತು.

ನಾಯಕ ನಟ ಶ್ರೀನಗರ ಕಿಟ್ಟಿ, ನಿರ್ಮಾಪಕ ಇ.ಕೃಷ್ಣಪ್ಪ, ಶಾಸಕ ನೆ.ಲ.ನರೇಂದ್ರಬಾಬು, ನಟಿ ಮೇಘನಾ ಗಾಂವ್ಕರ್ ಸಮಾರಂಭಕ್ಕೆ ಸಾಕ್ಷಿಯಾದರು.
ಮಂಗಳವಾರ ಚಿತ್ರದ ಮುಹೂರ್ತ, ಬುಧವಾರ ಚಿತ್ರೀಕರಣ ಆರಂಭ, ಗುರುವಾರ ಆಡಿಯೋ ಬಿಡುಗಡೆ, ಶುಕ್ರವಾರ ಸಿನಿಮಾ ಬಿಡುಗಡೆ, ಶನಿವಾರ ಶತದಿನೋತ್ಸವ ಆಚರಣೆ ಎಂದು ಯೋಜನೆ ಹಾಕಿಕೊಂಡಿದ್ದಾರಂತೆ ನಿರ್ದೇಶಕ ಸುನಿ. ಈಗಾಗಲೇ ಅವರ ಅರ್ಧ ಯೋಜನೆ ಯಶಸ್ವಿಯಾಗಿದೆ. ಇದು ಅವರ ನಿರ್ದೇಶನದ ಮೊದಲ ಸಿನಿಮಾ.

`ಚಿತ್ರದಲ್ಲಿ ಶೇ 90 ದೃಶ್ಯಗಳಲ್ಲಿ ನಾಯಕ-ನಾಯಕಿ ಎರಡೇ ಪಾತ್ರ ಇದೆ. ಎಂಟು ಜನ ನಿಭಾಯಿಸಬೇಕಾದ ಪಾತ್ರಗಳನ್ನು ಅವರಿಬ್ಬರೇ ನಿಭಾಯಿಸಿದ್ದಾರೆ' ಎಂದು ವಿವರಿಸಿದ ನಿರ್ದೇಶಕರು- ಚಳಿಗಾಲ, ಮಳೆಗಾಲ, ಬೇಸಿಗೆ ಕಾಲಗಳಿಗೆ ಕಾದು ಚಿತ್ರೀಕರಣ ಮಾಡಿದ್ದಾರಂತೆ.
`ಮದುವೆ ಮನೆ ಊಟದಲ್ಲಿ ನೀರಿನ ಲೋಟ ಖಾಲಿ ಇದೆ ಎಂದರೆ ಜನ ಮಜ್ಜಿಗೆಗೆ ನಿರೀಕ್ಷಿಸುತ್ತಿದ್ದಾರೆ ಎಂದರ್ಥ. ಹೀಗೆ ಕನ್ನಡದ ಪ್ರೇಕ್ಷಕರು ಹೊಸ ಸಂಭಾಷಣೆಗಳಿಗೆ ನಿರೀಕ್ಷಿಸುತ್ತಿದ್ದಾರೆ. ಆದ್ದರಿಂದಲೇ ಹೊಸ ರೀತಿಯ ಮಾತುಗಳನ್ನು ಹೊಸೆಯಲಾಗಿದೆ' ಎಂದರು. ಅಂದಹಾಗೆ ಈ ಚಿತ್ರದ ನಿರ್ಮಾಪಕರು ಕೂಡ ಅವರೇ. ಚಿತ್ರವನ್ನು ಫೆ.14ರ ಪ್ರೇಮಿಗಳ ದಿನದಂದು ಬಿಡುಗಡೆ ಮಾಡುವ ಯೋಚನೆ ಅವರದು.

ನಾಯಕ ರಕ್ಷಿತ್ ಶೆಟ್ಟಿ ಅವರಿಗೆ ಚಿತ್ರ ಚೆನ್ನಾಗಿ ಬಂದಿರುವ ಖುಷಿ ಇದೆ. ನಾಯಕಿ ಶ್ವೇತ ಶ್ರೀವಾಸ್ತವ್ ಅವರಿಗೆ ಚಿತ್ರದ ಸಂಭಾಷಣೆ, ಹಾಡುಗಳು, ಟ್ರೈಲರ್‌ಗೆ ಸಿಕ್ಕಿರುವ ಪ್ರತಿಕ್ರಿಯೆ ಸಿನಿಮಾಗೂ ಸಿಗಲಿದೆ ಎಂಬ ವಿಶ್ವಾಸ ಇದೆ.ಕಾರ್ಯಕ್ರಮದ ಕಡೆಯಲ್ಲಿ ಗಾಯಕಿ ಪ್ರಿಯಾಂಕಾ, `ಸ್ಮೈಲಿರುವಂತೆ ಸರಾಸರಿ..' ಹಾಡು ಹಾಡಿದರು. ಅವರು ಈ ಚಿತ್ರದ ಮೂಲಕ ಹಿನ್ನೆಲೆ ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT