ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲಕ್ಕೆ ಯೋಗ...

Last Updated 21 ಜನವರಿ 2011, 10:30 IST
ಅಕ್ಷರ ಗಾತ್ರ

ಪ್ರತಿವರ್ಷ ಚಳಿಗಾಲಕ್ಕಿಂತ ಈ ಋತುವಿನ ಚಳಿಗಾಲ ಬಹಳಷ್ಟು ಶೀತ, ತಂಪಿನಿಂದ ಕೂಡಿದೆ. ಡಿಸೆಂಬರ್‌ನಿಂದ ಆರಂಭವಾದ ಚಳಿ ಜನವರಿ, ಫೆಬ್ರುವರಿವರೆಗೆ ಹೆಚ್ಚಾಗಿ ಇರುತ್ತದೆ. ಆದರೆ ಈ ಬಾರಿಯ ಚಳಿಗಾಲದಲ್ಲಿ ಉಷ್ಣಾಂಶ ತೀರಾ ಕಡಿಮೆಯಾಗಿದೆ. ರಾಜ್ಯದ ಹಲವು ಕಡೆ 117-118 ವರ್ಷಗಳ ಬಳಿಕ ಅತೀ ಕಡಿಮೆ ಚಳಿ ದಾಖಲಾಗಿದೆ. ಚಳಿಗಾಲದಲ್ಲಿ ಸುಮ್ಮಗೆ ಮೈಮುದುಡಿಕೊಂಡು ಬೆಚ್ಚಗೆ ವಿರಮಿಸಲು ಇಷ್ಟವಾಗುತ್ತದೆ.

ಚಳಿಗಾಲದಲ್ಲಿ ಯಾವುದೇ ರೀತಿಯ ಕೆಲಸಗಳನ್ನು ಸಮರ್ಪಕವಾಗಿ ಮಾಡಲು ಉತ್ಸಾಹ ಬರುವುದಿಲ್ಲ. ಆದರೆ ಈ ರೀತಿ ಚಳಿಗೆ ತುಂಬಾ ಹೊತ್ತು ಒಂದೆಡೆ ಇದ್ದಾಗ ದೇಹದಲ್ಲಿ ರಕ್ತ ಸಂಚಲನೆ ಸಮರ್ಪಕವಾಗಿ ಜರುಗದೆ ಕಾಯಿಲೆಗಳಿಗೆ ಆಸ್ಪದವಾಗುತ್ತದೆ. ಸಹಜವಾಗಿ ಕಾಡುವ ಶೀತ, ಅಲರ್ಜಿ, ಗಂಟುನೋವು, ಚರ್ಮದ ತುರಿಕೆ, ಜ್ವರ, ತಲೆನೋವು, ಬೆನ್ನುನೋವು, ಹುಳದ ಬಾಧೆ, ಕೆಲವೊಮ್ಮೆ ಅಕಸ್ಮಾತ್ತಾಗಿ ದೇಹಕ್ಕೆ ತಾಗಿ ಬಂದ ನೋವು ಬಹಳಷ್ಟು ಸಮಯ ದೀರ್ಘಾವಧಿವರೆಗೆ ಕಾಡುತ್ತಿರುತ್ತದೆ.

ಚಳಿಗಾಲಕ್ಕೆ ಸಾಮಾನ್ಯವಾಗಿ ಹೆಚ್ಚಿನವರು ರಕ್ಷಣೆ ಪಡೆಯಲು ಬಟ್ಟೆಯ ಹೊದಿಕೆ, ಮಫ್ಲರ್, ಮಂಕಿಕ್ಯಾಪ್, ಗ್ಲಿಸರಿನ್, ಲೋಶನ್,  ಮಾಯ್‌ಶ್ಚರೈಸರ್ ಇತ್ಯಾದಿ ಬಳಸುತ್ತಾರೆ.

ಚರ್ಮದ ಮೃದುತ್ವ ಕಾಪಾಡಲು ಎಣ್ಣೆಯ ಸ್ನಾನ, ಉತ್ತಮ ಅಹಾರ ಸೇವನೆ ಇತ್ಯಾದಿಗಳನ್ನು ಹೆಚ್ಚಿನವರು ಮಾಡುತ್ತಾರೆ. ಆದರೆ ಚಳಿಗಾಲದಲ್ಲಿ ದೇಹಕ್ಕೆ ನೈಜವಾಗಿ ರಕ್ತಸಂಚಾರವಾಗುವಂತಹ ಯೋಗ ವ್ಯಾಯಾಮದ ಅಗತ್ಯತೆ ಇದೆ. ಹೆಚ್ಚಿನವರು ಚಳಿಗಾಲದಲ್ಲಿ ಈ ಯೋಗ ವ್ಯಾಯಾಮವನ್ನು ಮಾಡಲು ಆಸಕ್ತಿ ಹೊಂದದೆ ಮುದುಡಿ ಕುಳಿತುಕೊಳ್ಳುತ್ತಾರೆ.

ದೇಹಕ್ಕೆ ಸಮರ್ಪಕವಾಗಿ ರಕ್ತಸಂಚಾರ ಜರುಗಲು ಸರಳ ವ್ಯಾಯಾಮ, ಯೋಗ ಸೂರ್ಯನಮಸ್ಕಾರ ಇತ್ಯಾದಿಗಳ ಅಗತ್ಯತೆ ಇದೆ.ಇಲ್ಲಿ ದೇಹವನ್ನು ಶಿಸ್ತುಬದ್ಧವಾಗಿ ಕ್ರಮವತ್ತಾಗಿ, ಉಸಿರಿನ ಗತಿಯೊಂದಿಗೆ ಬೇಕಾದ ರೀತಿಯಲ್ಲಿ ಬಾಗಿಸುವುದು, ತಿರುಗಿಸುವುದು, ಚಲಿಸುವಿಕೆ ಇತ್ಯಾದಿಗಳೂ ಇದೆ.

ಈ ರೀತಿ ದೇಹವನ್ನು ಬೇಕಾದ ರೀತಿಯಲ್ಲಿ ಬಾಗಿಸಿ, ಚುರುಕುಗೊಳಿಸಿ ಚಲಿಸುವುದರಿಂದ ದೇಹದ ಒಳಗಿನ ಅಂಗಗಳಿಗೂ, ಮಾಂಸಖಂಡಗಳಿಗೂ, ನರಮಂಡಲಕ್ಕೂ ಪ್ರಚೋದನೆ ಮತ್ತು ವಿಶ್ರಾಂತಿ ದೊರಕಿ ರಕ್ತ ಪರಿಚಲನೆ, ಪಚನಕ್ರಿಯೆ ಇತ್ಯಾದಿ ಸಮರ್ಪಕವಾಗಿ ನಡೆಯುವುದಲ್ಲದೆ ನರಮಂಡಲವೂ, ಮಾಂಸಖಂಡಗಳೂ, ಪೆಡಸಾಗಿದರೆ ಶಕ್ತಿಯುತವಾಗುವುವು ಮತ್ತು ಚೈತನ್ಯಭರಿತವಾಗುವುವು. ಯೋಗಾಸನಗಳನ್ನು ಮಾಡುವುದರಿಂದ ಜಡತ್ವ ಹೋಗಿ ಲಘುತ್ವ ಉಂಟಾಗುತ್ತದೆ.

ಚಳಿಗಾಲದಲ್ಲಿ ರಕ್ಷಣೆ ಪಡೆಯಲು ಬೆಳಿಗ್ಗೆ ಎದ್ದ ಕೂಡಲೇ ನಿತ್ಯ ವಿಧಿಗಳನ್ನು ಮುಗಿಸಿ ಒಂದು ಲೋಟ ಬಿಸಿ ದ್ರವಾಹಾರ ಸೇವಿಸಿ ಸರಳ ವ್ಯಾಯಾಮಗಳನ್ನು ಸೂರ್ಯನಮಸ್ಕಾರಗಳನ್ನು ಮಾಡಬೇಕು. ಸಾಧ್ಯವಾಗುವವರು ಕಪಾಲಭಾತಿ ಕ್ರಿಯೆ ಮಾಡಬೇಕು.

ಯೋಗಾಸನಗಳಲ್ಲಿ ಆಯ್ದ ಕೆಲವು ಆಸನಗಳಾದ ಅರ್ಧಚಕ್ರಾಸನ, ಪದಾಹಸ್ತಾನಸ, ವೀರಭದ್ರಾಸನ, ಪ್ರಸಾರಿತ ಪಾದೋತ್ಸಾನಾಸನ, ಬದ್ಧ ಕೋಣಾಸನ, ಪರ್ವತಾನಸ, ಪಶ್ಚಿಮೋತ್ತಾನಾಸನ, ಶಶಾಂಕಾಸನ, ಅರ್ಧ ಉಷ್ಟ್ರಾಸನ, ವಕ್ರಾಸನ ಸರ್ವಾಂಗಾಸನ, ಹಲಾಸನ, ಭುಜಂಘಾಸನ, ಶಲಭಾಸನ, ಊರ್ಧ್ವ ಧನುರಾಸನ, ಶವಾಸನ ಮತ್ತು  ಪ್ರಾಣಯಾಮಗಳನ್ನು ಮಾಡಬಹುದು. ಇನ್ನೂ ಸಾಧ್ಯವಾದರೆ ಕ್ಲಿಷ್ಟಕರ ಭಂಗಿಗಳನ್ನು ಸಮರ್ಪಕವಾಗಿ ಕಲಿತು ಅಭ್ಯಾಸ ಮಾಡಿದರೆ  ಒಳ್ಳೆಯದು. ವಿಶೇಷವಾಗಿ ಊರ್ಧ್ವ ಕುಕ್ಕುಟಾಸನ, ಬಕಾಸನ, ಯೋಗ ನಿದ್ರಾಸನ, ಶೀರ್ಷಾಸನ, ಪಿಂಭ ಮಯೂರಾಸನ, ಶಲಭ ವೃಶ್ಚಿಕಾಸನ ಇತ್ಯಾದಿ ಕಷ್ಟಕರ ಆಸನಗಳನ್ನು ಅಭ್ಯಾಸ ಮಾಡಿದರೆ ಶರೀರವು ಬೇಗನೆ ಬೆಚ್ಚಗಾಗುತ್ತದೆ, ಅದರಲ್ಲೂ ಯೋಗ ನಿದ್ರಾಸನದ ಅಭ್ಯಾಸದಿಂದ ದೇಹವು ಬಲುಬೇಗ ಶಾಖಗೊಳ್ಳುವುದು.

ಯೋಗಿಗಳು ಹೆಚ್ಚು ತಂಪಿರುವ ಪರ್ವತಪ್ರದೇಶ ಹಿಮಾಲಯಗಳಲ್ಲಿ ಈ ಆಸನಗಳನ್ನು ಮಾಡುತ್ತಾರೆ. ಈ ಆಸನವು ಬಹಳ ಕ್ಲಿಷ್ಟಕರ ಆಸನವಾಗಿದೆ.ಗುರುಮುಖೇನ ಹೆಚ್ಚಿನ ಸಲಹೆ ಮಾರ್ಗದರ್ಶನವನ್ನು ಪಡೆದುಕೊಂಡೇ ಈ ಆಸನವನ್ನು ಅಭ್ಯಾಸಮಾಡಬೇಕು.

ಯೋಗ ವ್ಯಾಯಾಮದ ಜೊತೆಗೆ ವಾಕಿಂಗ್ ಮಾಡಬೇಕು. ಬೆಳಿಗ್ಗೆ ಎದ್ದು ಉದಾಸೀನ ಮಾಡದೆ ವ್ಯಾಯಾಮ, ಯೋಗ ಅಭ್ಯಾಸ ಮಾಡುವುದರಿಂದ ಸುಲಭವಾಗಿ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು. ಆದ್ದರಿಂದ ಯೋಗ ಎನ್ನುವುದು ಆರೋಗ್ಯ ವರ್ಧಕ, ರೋಗನಿವಾರಕ, ರೋಗ ನಿರೋಧಕ ಎಂದೇ ಹಿರಿಯರು ಹೇಳಿದ್ದು ಸತ್ಯ. 

 ಲೇಖಕರ ದೂರವಾಣಿ: 9448394987   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT