ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಯಿಂದ 26 ಕುರಿಗಳ ಸಾವು

Last Updated 5 ಡಿಸೆಂಬರ್ 2013, 8:19 IST
ಅಕ್ಷರ ಗಾತ್ರ

ಗದಗ: ತಾಲ್ಲೂಕಿನ ಅಡವಿಸೋಮಾಪುರ ಗ್ರಾಮ­ದಲ್ಲಿ ಬುಧವಾರ 26 ಕುರಿಮರಿಗಳು ಮೃತಪಟ್ಟಿರುವ ಘಟನೆ ನಡೆದಿದೆ.

ಗ್ರಾಮದ ಈರಪ್ಪ ಶಂಕ್ರಪ್ಪ ಹೊಸಳ್ಳಿ, ಪ್ರಕಾಶ ಖಾನಾಪೂರ, ಭೀಮಪ್ಪ ಕರಿ, ದೇವಪ್ಪ ಪೂಜಾರ ಎಂಬುವರಿಗೆ ಸೇರಿದ ಕುರಿ ಹಾಗೂ ಮೇಕೆ ಮರಿಗಳು ಮೃತಪಟ್ಟಿವೆ. ನಡೆಯಲು ಆಗದೆ, ಚಳಿಯಿಂದಾಗಿ ಈವರೆಗೂ ನೂರಕ್ಕೂ ಹೆಚ್ಚು ಮರಿಗಳು ಗ್ರಾಮದಲ್ಲಿ ಮೃತಪಟ್ಟಿವೆ.
ಗ್ರಾಮಕ್ಕೆ ಭೇಟಿ ನೀಡಿದ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿ.ಜಿ ಬಂಡಿ ಅವರನ್ನು ತರಾಟೆಗೆ ತೆಗೆದುಕೊಂಡ ಕುರಿಗಾರರು, ‘ವೈದ್ಯರ ನಿರ್ಲಕ್ಷ್ಯದಿಂದ ಮರಿಗಳು ಸತ್ತಿವೆ. ನೀವೆ ಹೊಣೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮರಿಗಳು ಸಾಯಲು ಆರಂಭಿಸಿದಾಗಲೇ ಆಸ್ಪತ್ರೆಯಲ್ಲಿ ಔಷಧ ಪಡೆದು ಮರಿಗಳಿಗೆ ನೀಡಿದರೂ ಪ್ರಯೋಜನವಾಗಲಿಲ್ಲ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮತ್ತೆ ಆಸ್ಪತ್ರೆಗೆ ಹೋದಾಗ ಔಷಧಿಗಳನ್ನು  ಹೊರಗಡೆಯಿಂದ ತರುವಂತೆ ವೈದ್ಯರು ಚೀಟಿ ಬರೆದು ಕೊಟ್ಟರು.
ಸಾವಿರಾರು ರೂಪಾಯಿ ಖರ್ಚು ಮಾಡಿ ಔಷಧ  ಹಾಕಿದರು ಮರಿಗಳು ಬದುಕಿ ಉಳಿಯಲಿಲ್ಲ. ಇವುಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದೇವು. ಮುಂದೆ ಏನು ಮಾಡಬೇಕು ತೋಚುತ್ತಿಲ್ಲ’ ಎಂದು ಕುರಿಗಾರ ಈರಪ್ಪ ಹೊಸಳ್ಳಿ ಅಳಲು ತೋಡಿಕೊಂಡರು.

‘ಮೃತ ಕುರಿಗಳು ಜನಿಸಿ 40 ರಿಂದ 60 ದಿನಗಳಾಗಿವೆ. ನ್ಯುಮೋನಿಯಾ,  ಅಜೀರ್ಣ, ರಕ್ತಹೀನತೆ, ಸೋಂಕು ಮತ್ತು ಜಾಂಡಿಸ್‌ನಿಂದ ಸತ್ತಿರುವುದು  ಶವ ಪರೀಕ್ಷೆಯಿಂದ ಗೊತ್ತಾಗಿದೆ.  ದೊಡ್ಡಕುರಿಗಳು ವಿಷಯುಕ್ತ ಪದಾರ್ಥ ಸೇವಿಸಿರುತ್ತವೆ. ಹಾಲು ಕುಡಿದಾಗ ಮರಿಗಳಿಗೂ ಸೋಂಕು ಹರಡುತ್ತದೆ.  ಮರಿಗಳು ಸೂಕ್ಷ್ಮವಾಗಿರುವುದರಿಂದ ಅವುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ತೆರಳಿ ಮರಿಗಳಿಗೆ ಅ್ಯಂಟಿಬಯೋಟಿಕ್ಸ್‌ ಇಂಜೆಕ್ಷನ್‌ ನೀಡಲಿದ್ದಾರೆ’ ಎಂದು  ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿ.ಜಿ.ಬಂಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕುರಿಗಳನ್ನೇ ನಂಬಿ ಜೀವನ ಸಾಗಿಸುತ್ತಿರುವ ಕುರಿಗಾರರು ಮರಿಗಳ ಸಾವಿನಿಂದ ಕಂಗಾಲಾಗಿದ್ದಾರೆ. ಮೃತ ಕುರಿಗಳ ಮಾಲೀಕರಿಗೆ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT