ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಯಿಂದ ತ್ವಚೆ ರಕ್ಷಿಸಿ

Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಚಳಿಗಾಲದಲ್ಲಿ ಹೆಚ್ಚು ಹಾನಿಗೊಳಗಾಗುವ ಅಂಗವೆಂದರೆ ತ್ವಚೆ. ತ್ವಚೆ ಶುಷ್ಕವಾಗುವುದು, ತುರಿಕೆ, ಸೀಳುವುದು, ಹಿಮ್ಮಡಿಗಳು ಸೀಳುವುದು ಇವೆಲ್ಲ ಚಳಿಯ ಪ್ರಭಾವದಿಂದ ಆಗುತ್ತವೆ. ಚರ್ಮದಲ್ಲಿ ಜಿಡ್ಡಿನ ಪ್ರಮಾಣ ಕಡಿಮೆ ಆಗುವುದರಿಂದ ಅದು ಶುಷ್ಕವಾಗುತ್ತದೆ. ಆದ್ದರಿಂದ ಚರ್ಮಕ್ಕೆ ಒಳಗಿನಿಂದ ಹಾಗೂ  ಹೊರಗಿನಿಂದ ಸ್ನಿಗ್ಧತೆ ಒದಗಿಸುವ ಅಗತ್ಯ ಇರುತ್ತದೆ. ಆದ್ದರಿಂದಲೇ ಚಳಿಗಾಲದಲ್ಲಿ ಎಳ್ಳು, ಕೊಬ್ಬರಿ, ಬೆಣ್ಣೆ, ತುಪ್ಪ, ಗೋಡಂಬಿಯಂಥ ಪದಾರ್ಥ ಸೇವಿಸಬೇಕಾಗುತ್ತದೆ.  

ಹೊರಗಿನಿಂದ ಚರ್ಮಕ್ಕೆ ಸ್ನಿಗ್ಧತೆ ನೀಡಲು ಸಾಸಿವೆ ಎಣ್ಣೆ, ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಯಾವುದಾದರೂ ಒಂದನ್ನು ಶರೀರಕ್ಕೆ ಲೇಪಿಸಿಕೊಂಡು ಚೆನ್ನಾಗಿ ಮಸಾಜ್ ಮಾಡಿಕೊಂಡು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ಚಳಿಗಾಲದಲ್ಲಿ  ತುಂಬಾ ಬಿಸಿಯಾದ ನೀರಿನಿಂದ ಸ್ನಾನ ಮಾಡುವುದು ಹಿತ ಎನಿಸುತ್ತದೆ. ಆದರೆ ಅದು ತ್ವಚೆಗೆ ಒಳ್ಳೆಯದಲ್ಲ. ಶರೀರಕ್ಕೆ ಎಣ್ಣೆಯ ಮಸಾಜ್ ಮಾಡಿಕೊಂಡ ನಂತರ ಸ್ವಲ್ಪ ಹೊತ್ತು ಎಳೆ ಬಿಸಿಲಿಗೆ ಮೈಯೊಡ್ಡಬೇಕು. ಸ್ನಾನಕ್ಕೆ ಗ್ಲಿಸರಿನ್‌ಯುಕ್ತ ಸಾಬೂನನ್ನೇ ಬಳಸಬೇಕು. ಶರೀರಕ್ಕೆ ಅಂಟಿಕೊಂಡ ಎಣ್ಣೆಯ ಜಿಡ್ಡನ್ನು ಹೋಗಲಾಡಿಸಲು ಕಡಲೆ ಹಿಟ್ಟು, ಹೆಸರಿನ ಹಿಟ್ಟು ಹಾಗೂ ಅರಿಶಿಣದ ಪುಡಿ ಬೆರೆಸಿದ ಮಿಶ್ರಣವನ್ನು ಬಳಸಬಹುದು. ಚಳಿಗಾಲದಲ್ಲಿ ಬೆಂಕಿ ಕಾಯಿಸುವುದು ತುಂಬಾ ಹಿತವೆನಿಸುತ್ತದೆ.

ಆದರೆ ಬೆಂಕಿಗೆ ತೀರಾ ಹತ್ತಿರ ಕುಳಿತು ಕಾಯಿಸುವುದರಿಂದ ತ್ವಚೆ ಒರಟಾಗುತ್ತದೆ. ಆದ್ದರಿಂದ ಬೆಂಕಿ ಕಾಯಿಸುವುದು ಅಷ್ಟು ಸರಿಯಲ್ಲ. ಚಳಿಗಾಲದಲ್ಲಿ ಬಿಸಿಲಿಗೆ ಮೈಯೊಡ್ಡಬೇಕೆಂಬ ಬಯಕೆಯಾಗುತ್ತದೆ. ಆದರೆ ಎಳೆಬಿಸಿಲಿಗೆ ಮಾತ್ರ ಮೈಯೊಡ್ಡಬೇಕು. ಮಧ್ಯಾಹ್ನದ ಬಿಸಿಲು ತುಂಬಾ ತೀಕ್ಷ್ಣವಾಗಿ ಇರುವುದರಿಂದ ಮೈಯೊಡ್ಡಬಾರದು.

ಮಧ್ಯಾಹ್ನ ಹೊರಗೆ ಹೋಗಬೇಕಾಗಿ ಬಂದರೆ ಶರೀರದ ಹೆಚ್ಚಿನ ಭಾಗ ಬಟ್ಟೆಯಿಂದ ಮುಚ್ಚಿರುವಂತೆ ನೋಡಿಕೊಳ್ಳಬೇಕು. ಉಳಿದ ಭಾಗಕ್ಕೆ ಸನ್‌ಸ್ಕ್ರೀನ್ ಲೋಶನ್ ಬಳಸಬೇಕು. ರಾತ್ರಿ ಮಲಗುವಾಗ ಮುಖ ಹಾಗೂ ತುಟಿಗೆ ಹಾಲಿನ ಕೆನೆ ಅಥವಾ ವ್ಯಾಸಲಿನ್ ಹಚ್ಚಿಕೊಳ್ಳಬೇಕು. ಒಡೆದ ಹಿಮ್ಮಡಿಗಳನ್ನು ಮೊದಲು ಬಿಸಿನೀರಿನಲ್ಲಿ ಚೆನ್ನಾಗಿ ತೊಳೆದು, ನಂತರ ಅದಕ್ಕೆ ಪೆಟ್ರೊಲಿಯಂ ಜೆಲ್ಲಿ ಹಚ್ಚಬೇಕು. ರಾತ್ರಿ ಮಲಗುವಾಗ ಅರಿಶಿಣ ಬೆರೆಸಿದ ಬಿಸಿ ಹಾಲನ್ನು ಕುಡಿಯಬೇಕು. ಮುಂಜಾನೆ ನಿಂಬೆರಸ ಬೆರೆಸಿದ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯಬೇಕು. ಆದಷ್ಟೂ ಮಲಬದ್ಧತೆ ಉಂಟಾಗದಂತೆ ನೋಡಿಕೊಳ್ಳಬೇಕು. ತಪ್ಪದೇ ವ್ಯಾಯಾಮ ಮಾಡಬೇಕು. ಚಳಿಗಾಲದಲ್ಲಿ ಅಲರ್ಜಿಯಿಂದ ಕೆಲವರಿಗೆ ಫಂಗಸ್ ಸೋಂಕು ಉಂಟಾಗಿ ಕೆಂಪು ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು. ಆಸಕ್ತರು ತ್ವಚೆ ರಕ್ಷಣೆಗಾಗಿ ವಿಂಟರ್‌ಲೋಶನ್, ಬಾಡಿಲೋಶನ್ ಬಳಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT