ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ ರೈತನ ಶೇಂಗಾ ಚಮತ್ಕಾರ

Last Updated 18 ಜೂನ್ 2012, 19:30 IST
ಅಕ್ಷರ ಗಾತ್ರ

ಅತ್ಯಂತ ಕಡಿಮೆ ಮಳೆ ಬೀಳುವ, ಅಪ್ಪಟ ಬಯಲುಸೀಮೆ ಚಳ್ಳಕೆರೆಗೆ ಸದಾ ಬರ ಪೀಡಿತ ತಾಲ್ಲೂಕು ಎಂದೇ ಹಣೆಪಟ್ಟಿ. ಬೇಸಿಗೆ ಕಾಲದಲ್ಲಿ ಜನ- ಜಾನುವಾರುಗಳು ಕುಡಿಯುವ ನೀರಿಗೂ ತತ್ವಾರ ಪಡುವ ದುಸ್ಥಿತಿ ಇಲ್ಲಿನದು. ಇಂತಹ ಬಿಸಿಲ ಪ್ರದೇಶದಲ್ಲಿ ಹೇಳಿಕೊಳ್ಳುವ ಯಾವುದೇ ನೀರಾವರಿ ಯೋಜನೆಗಳೂ ಇಲ್ಲ.

ತಾಲ್ಲೂಕಿನ ಜೀವನದಿಯಾದ ವೇದಾವತಿಯಲ್ಲಿ ಎಗ್ಗಿಲ್ಲದೇ ಸಾಗಿರುವ ಮರಳು ದಂಧೆಯಿಂದಾಗಿ ಸುತ್ತಲ ಜಮೀನುಗಳ ಅಂತರ್ಜಲ ಮಟ್ಟ ಕ್ಷೀಣಿಸುತ್ತಾ ಪಂಪ್‌ಸೆಟ್‌ಗಳಲ್ಲಿ ನೀರಿಲ್ಲದಂತಾಗಿದೆ.

ಆದರೂ ಈ ತಾಲ್ಲೂಕಿನಲ್ಲಿ ರೈತರು ಸುಧಾರಿತ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಇಂಥವರ ಸಾಲಿಗೆ ಸೇರುತ್ತಾರೆ ಗೋಪನಹಳ್ಳಿ ಗ್ರಾಮದ ಓ. ನಾಗೇಂದ್ರಯ್ಯ.

ಜಿಲ್ಲಾ ಕೇಂದ್ರದಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಇವರು ಕೆಲ ವರ್ಷಗಳಿಂದ 10 ಎಕರೆ ನೀರಾವರಿ ಜಮೀನಿನಲ್ಲಿ ಅಧಿಕ ಇಳುವರಿಯ ಶೇಂಗಾ ಬೆಳೆಯನ್ನು ಬೆಳೆಯುವ ಮೂಲಕ ಗಮನ ಸೆಳೆದಿದ್ದಾರೆ. ಬಿತ್ತನೆ ಬೀಜದಿಂದ ಹಿಡಿದು ಪ್ರತೀ ಹಂತದಲ್ಲೂ ಕೃಷಿ ಅಧಿಕಾರಿಗಳ ಸಲಹೆ ಪಡೆದು ಜಿಪ್ಸಂ, ಪೊಟ್ಯಾಶ್, ರಂಜಕ ಹಾಗೂ ಕೆರೆಯ ಮಣ್ಣನ್ನು ಜಮೀನಿಗೆ ಹಾಕಿದ ಪರಿಣಾಮ ಅಧಿಕ ಶೇಂಗಾ ಇಳುವರಿ ಪಡೆದು ಯಶಸ್ವಿಯಾಗಿದ್ದಾರೆ.

ಒಣ ಭೂಮಿಯಲ್ಲಿ ಮಳೆಯನ್ನೇ ನಂಬಿಕೊಂಡು ಬೇಸಾಯ ಮಾಡುತ್ತಾ ಬಂದಿರುವ ಇಲ್ಲಿನ ರೈತರ ಪಾರಂಪರಿಕ ಬೆಳೆ ಶೇಂಗಾ. ಈಚೆಗೆ ಮೂರ‌್ನಾಲ್ಕು ವರ್ಷಗಳಿಂದ ಕಾಲಕ್ಕೆ ಸರಿಯಾಗಿ ಮಳೆ ಇಲ್ಲದೇ ಒಣ ಭೂಮಿಯಲ್ಲಿ ಶೇಂಗಾ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಆದರೆ, ನೀರಾವರಿ ಜಮೀನುಗಳಲ್ಲಿ ರೈತರು ಶೇಂಗಾ ಬಿಟ್ಟಿಲ್ಲ. ಇದರಲ್ಲಿಯೂ ನಷ್ಟ ಅನುಭವಿಸಿದವರೇ ಹೆಚ್ಚು.

ಆದರೆ, ಕೃಷಿ ಇಲಾಖೆಯ ಮಾರ್ಗದರ್ಶನದಲ್ಲಿ ಸಾಗಿದ ಈ ರೈತ ಯಶಸ್ವಿ ಬೆಳೆಗಾರನಾಗಿ ಗೋಚರಿಸಿದ್ದಾರೆ. ಬರಡು ಭೂಮಿಯಲ್ಲಿ ಏನೂ ಬೆಳೆಯಲು ಸಾಧ್ಯವಿಲ್ಲ ಎಂದು ವ್ಯವಸಾಯವನ್ನೇ ಬಿಟ್ಟವರಿದ್ದಾರೆ.

ಆದರೆ, ಭೂಮಿ ತಾಯಿಗೆ ಹಾಕಿದ ಬಂಡವಾಳ ಮತ್ತೆ ಬರುತ್ತದೆ ಎಂಬ ಹಿರಿಯರ ಮಾತಿನಂತೆ `ನಂಬಿದ ಭೂ ತಾಯಿ ಕೈಬಿಡುವುದಿಲ್ಲ~ ಎಂಬುದರಲ್ಲಿ ಅಚಲ ವಿಶ್ವಾಸ ಇಟ್ಟುಕೊಂಡಿದ್ದಾರೆ ನಾಗೇಂದ್ರಯ್ಯ.

 ಗೋಪನಹಳ್ಳಿ ಗ್ರಾಮದ ಅವರ 10 ಎಕರೆ ಬಂಜರು ಭೂಮಿ ಈಗ ನಳನಳಿಸುತ್ತಿದೆ. ಅಚ್ಚುಕಟ್ಟು ಮಾಡಿ ಜಮೀನಿನ ಸುತ್ತ ಹಾಗೂ ಮಧ್ಯೆ ನೀರು ಮತ್ತು ಮಣ್ಣು ಸಂರಕ್ಷಣೆ ಮಾಡುವ ಉದ್ದೇಶದಿಂದ ದೊಡ್ಡಗಾತ್ರದ ಬದುಗಳನ್ನು ನಿರ್ಮಿಸಿದ್ದೇ ಈ ಮಾರ್ಪಾಡಿಗೆ ಕಾರಣ.

ಹೋದ ಸಲ 10 ಎಕರೆ  ಜಮೀನಲ್ಲಿ ಮಾಗಿ ಉಳುಮೆ ಮಾಡಿ ಹದಗೊಳಿಸಿ ಬಿತ್ತನೆ ಪೂರ್ವದಲ್ಲೇ ಸುಮಾರು 300 ಲೋಡ್ ಕೆರೆ ಮಣ್ಣು, 50 ಚೀಲ ಜಿಪ್ಸಂ, ಸತುವು, ರಂಜಕ, ಪೋಟ್ಯಾಶ್ ಮಣ್ಣಿಗೆ ಬೆರೆಸಿ ಟಿಎಂವಿ-2 ತಳಿಯ ಶೇಂಗಾ ಬಿತ್ತನೆ ಮಾಡಿದರು.
 ಬೇರು ಹುಳುವಿನ ಹತೋಟಿಗೆ ಕ್ಲೋರೋಫೈರಿಫಾಸ್ ಬಳಸಬೇಕು, ಬೀಜೋಪಚಾರ ಮಾಡಬೇಕು ಹಾಗೂ ಬಿತ್ತನೆ ಸಮಯದಲ್ಲಿ ಪ್ರತಿ ಎಕರೆಗೆ 50 ಕಿಲೊ ಡಿಎಪಿ,  50 ಕಿಲೊ ಪೋಟ್ಯಾಶ್ ರಸಗೊಬ್ಬರಗಳನ್ನು ಬಳಸುವಂತೆ ಮಾರ್ಗದರ್ಶನ ನೀಡಲಾಗಿತ್ತು. ಅದರ ಜತೆಗೆ ಪರಿಶ್ರಮವನ್ನೂ ಹಾಕಿದ್ದರಿಂದ ಒಳ್ಳೆ ಇಳುವರಿ ಬಂತು ಎನ್ನುತ್ತಾರೆ ಕೃಷಿ ಅಧಿಕಾರಿ ಡಾ. ರವಿ.

ಕರಿ ಹೇನು ನಿಯಂತ್ರಣಕ್ಕಾಗಿ ಕ್ಲೋರೋಫೈರಿಫಾಸ್ ಪ್ರತಿ ಲೀಟರ್‌ಗೆ 2 ಮಿಲಿ ಲೀಟರ್‌ನಂತೆ ನೀರಿನಲ್ಲಿ ಬೆರೆಸಿ ಎಕರೆಗೆ 250 ಲೀ ದ್ರಾವಣವನ್ನು ಸಿಂಪರಣೆ ಮಾಡಿದ್ದರು. ಇದರ ಫಲವಾಗಿ ಪ್ರತಿ ಗಿಡಕ್ಕೆ 150 ರಿಂದ 210 ಕಾಯಿಗಳು ಕಟ್ಟಿ, ಸದೃಢವಾಗಿ ಬೆಳೆ ಬಂತು.

ರೈತರು ಪ್ರತಿ ವರ್ಷ ಹಾಕಿದ ಬೆಳೆಯನ್ನೇ ಹಾಕಬಾರದು. ಪರ್ಯಾಯ ಬೆಳೆ ಹಾಗೂ ಇಳಿಜಾರಿಗೆ ಅಡ್ಡಲಾಗಿ ಬಿತ್ತನೆ ಮಾಡಬೇಕು. ಕೃಷಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ಗುಣಮಟ್ಟದ ಬೀಜವನ್ನು ಖರೀದಿ ಮಾಡಬೇಕು ಎಂದು ನಾಗೇಂದ್ರಯ್ಯ ಸಲಹೆ ನೀಡುತ್ತಾರೆ.

 ರೈತರು ದುಬಾರಿ ಬೆಲೆಯ ರಾಸಾಯನಿಕ ಗೊಬ್ಬರ ಕೊಂಡು ಜಮೀನಿಗೆ ಹಾಕುವುದರಿಂದ ತಾತ್ಕಾಲಿಕವಾಗಿ ಇಳುವರಿ ಸಿಗಬಹುದು. ಆದರೆ ನಂತರ ಪೋಷಕಾಂಶವನ್ನು ಕಳೆದುಕೊಂಡು ಇಳುವರಿ ಕುಂಠಿತವಾಗುತ್ತದೆ. ಆದ್ದರಿಂದ ಕೊಟ್ಟಿಗೆ ಗೊಬ್ಬರ, ಹಸಿರೆಲೆ ತರಗಿನ ಗೊಬ್ಬರ ತಯಾರು ಮಾಡಿಕೊಂಡು ಹಾಕುವುದರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಿ ಮಳೆ ಕಡಿಮೆಯಾದರೂ ಫಸಲು ಚೆನ್ನಾಗಿ ಬರುತ್ತದೆ ಇಳುವರಿ ಹೆಚ್ಚುತ್ತದೆ ಎನ್ನುವುದು ಅವರ ಕಿವಿಮಾತು.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT