ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆಯ 240 ಗ್ರಾಮಗಳಲ್ಲಿ ಜನಸಂಪರ್ಕ ಸಭೆ

ಜನಸಂಪರ್ಕ ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿ ಹೇಳಿಕೆ
Last Updated 13 ಡಿಸೆಂಬರ್ 2013, 8:09 IST
ಅಕ್ಷರ ಗಾತ್ರ

ಚಿತ್ರದುರ್ಗ: ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಕಾಲೊನಿ, ಹಟ್ಟಿಗಳು ಸೇರಿದಂತೆ ೨೪೦ ಗ್ರಾಮಗಳಿಗೂ ಖುದ್ದು ಭೇಟಿ ನೀಡಿ ಜನಸಂಪರ್ಕ ಸಭೆ ನಡೆಸಲಾಗುತ್ತದೆ ಎಂದು ಶಾಸಕ ಟಿ.ರಘುಮೂರ್ತಿ  ತಿಳಿಸಿದರು.

ತುರುವನೂರು ಹೋಬಳಿ ವ್ಯಾಪ್ತಿಯ ಮುದ್ದಾಪುರ, ಮಾಡನಾಯಕನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಜನಸಂಪರ್ಕ ಸಭೆಗಳನ್ನು ನಡೆಸಿ ಅವರು ಮಾತನಾಡಿದರು.

ತಾಲ್ಲೂಕಿನ ಹಿರೇಕಬ್ಬಿಗೆರೆ ಗೊಲ್ಲರಹಟ್ಟಿಯಲ್ಲಿ ಜನಸಂಪರ್ಕ ಸಭೆ  ನಡೆಸಿ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದ ಅವರು, ಈ ಹಿಂದೆ ಜೂನ್, ಜುಲೈ ತಿಂಗಳಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಗೆ ಬೇಕಾದ ಸೌಲಭ್ಯಗಳ ಪರಿಶೀಲನೆ ನಡೆಸಲಾಗಿದೆ. ಆರು ತಿಂಗಳ ನಂತರ ಮತ್ತೆ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಲಾಗುತ್ತಿದೆ. ನನ್ನೊಂದಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ ಎಂದರು.

ಸೌಲಭ್ಯಕ್ಕೆ ಆದ್ಯತೆ: ಗ್ರಾಮಗಳಲ್ಲಿ ಆಗಬೇಕಾದ ಕೆಲಸಗಳು ಹಾಗೂ ಜನರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಲ್ಪಿಸುವುದು ಜನಸಂಪರ್ಕ ಸಭೆಯ ಪ್ರಮುಖ ಉದ್ದೇಶವಾಗಿದೆ. ಗ್ರಾಮಗಳಿಗೆ ಭೇಟಿ ನೀಡಿದಾಗ ಜನರು ಅನೇಕ ಕುಂದುಕೊರತೆಗಳು, ಸೌಲಭ್ಯಗಳ ಬಗ್ಗೆ ಗಮನ ಸೆಳೆಯುತ್ತಾರೆ. ಇದರಿಂದ ಯಾವ ಗ್ರಾಮಕ್ಕೆ ಏನು ಕೆಲಸವಾಗಬೇಕು ಮತ್ತು ಅರ್ಹರಿಗೆ ಯಾವ ಸೌಲಭ್ಯಗಳನ್ನು ಕಲ್ಪಿಸ ಬಹುದೆಂದು ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ತಿಳಿಸಲಾಗುತ್ತದೆ ಎಂದರು.

ಈ ವರ್ಷ ಮಳೆಯ ಕೊರತೆ ಯಾಗಿರುವ ಕಾರಣ ಜನರು ವಲಸೆ ಹೋಗದಂತೆ ತಡೆಯಲು ಅವರಿಗೆ ಉದ್ಯೋಗ ನೀಡಬೇಕಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿಯಡಿ ನಮ್ಮ ಹೊಲ, ನಮ್ಮ ರಸ್ತೆ, ನಮ್ಮ ಕಣ,
ಜಮೀನು ಸಮತಟ್ಟು, ಚೆಕ್ ಡ್ಯಾಂ ನಿರ್ಮಾಣ ಸೇರಿದಂತೆ ರೈತರಿಗೆ ಉಪಯೋಗವಾಗುವ ಕೆಲಸಗಳನ್ನು ಕೈಗೆತ್ತಿಕೊಳ್ಳಲು ತಿಳಿಸಲಾಗಿದೆ ಎಂದರು.

ಸರ್ಕಾರವು ಮನಸ್ವಿನಿ ಯೋಜನೆಯನ್ನು ಜಾರಿಗೆ ತಂದಿದ್ದು ಅವಿವಾಹಿತ, ವಿಚ್ಛೇದಿತ ಮಹಿಳೆಯರಿಗೆ ಮಾಸಾಶನವನ್ನು ನೀಡುವ ಯೋಜನೆ ಇದಾಗಿದೆ. ಸಂಧ್ಯಾಸುರಕ್ಷಾ, ವೃದ್ದಾಪ್ಯ, ಅಂಗವಿಕಲರ ವೇತನ ಯೋಜನೆಯಡಿ ಅರ್ಹರಿಗೆ
ಮಾಸಾಶನ ಕಲ್ಪಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

₨ 53.50 ಲಕ್ಷ ಬಿಡುಗಡೆ: ಮುದ್ದಾಪುರದಲ್ಲಿ ೫ ನೇ ಹಂತದ ಸುವರ್ಣ ಗ್ರಾಮ ಯೋಜನೆಯಡಿ ಗ್ರಾಮದಲ್ಲಿ ರಸ್ತೆ, ಚರಂಡಿ ಕಾಮಗಾರಿಗಾಗಿ ₨ ೫೩.೫೦ ಲಕ್ಷ, ಅಂಗನವಾಡಿ ಹಾಗೂ ಆವರಣ ಗೋಡೆಯ ನಿರ್ಮಾಣವನ್ನು ₨ ೭.೪೩ ಲಕ್ಷ ಹಾಗೂ ಗ್ರಾಮದಲ್ಲಿ ಸಮುದಾಯ ಭವನವನ್ನು ₨ ೭.೪೩ ಲಕ್ಷ ಮತ್ತು ತ್ಯಾಜ್ಯ ವಸ್ತುಗಳ ವಿಲೇವಾರಿಗಾಗಿ ₨ ೭೦ ಸಾವಿರ ಸೇರಿದಂತೆ ₨ ೭೪.೩೦ ಲಕ್ಷದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾ ಗುತ್ತಿದೆ. ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ ಮುದ್ದಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ೭ ಹೊಸ ಕೊಠಡಿಗಳನ್ನು ₨ ೪೨ ಲಕ್ಷ ನಿರ್ಮಾಣ ಮಾಡಲಾಗುತ್ತಿದೆ. ಮತ್ತು ಇಲ್ಲಿನ ಶಾಲೆಯಲ್ಲಿ ೮ ನೇ ತರಗತಿ ವ್ಯಾಸಂಗ ಮಾಡುತ್ತಿರುವ ೭೦ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ನೀಡಲಾಗುತ್ತಿದೆ ಎಂದರು.

ಪ್ರತಿ ಗ್ರಾಮಕ್ಕೂ ಭೇಟಿ ನೀಡಿದಾಗ ಕುಡಿಯುವ ನೀರು, ಸರ್ಕಾರಿ ಶಾಲೆ, ಅಂಗನವಾಡಿ ಕಟ್ಟಡ, ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ, ಆರೋಗ್ಯ ಕೇಂದ್ರಗಳ ಸೌಲಭ್ಯ, ಆಶ್ರಯ ಮನೆ, ಮೂಲಸೌಕರ್ಯಗಳ ಪರಿಶೀಲನೆ ನಡೆಸಲಾಗುತ್ತದೆ ಎಂದರು.

ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ  ಜಿ.ಟಿ.ಬಾಬುರೆಡ್ಡಿ, ತಹಶೀಲ್ದಾರ್ ಕಾಂತರಾಜ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರ ನಿಂಗಪ್ಪ, ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಪಿ.ಬಸವರಾಜ್, ಗ್ರಾಮೀಣ ಮುಲ ಸೌಕರ್ಯ ಅಭಿವೃದ್ಧಿ ನಿಗಮದ  ಸಹಾಯಕ ನಿರ್ದೇಶಕ ರಮೇಶ್ ಬಾಬು  ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT