ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಹಾಕ್ಕೂ ಬ್ರಾಂಡ್

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ವಿಶ್ವದಾದ್ಯಂತ ಕಾಫಿ ಜನಪ್ರಿಯ ಪೇಯವಾಗಿದ್ದರೂ, ನಮ್ಮಲ್ಲಿ ಚಹಾದ ಬಳಕೆಯೇ ಹೆಚ್ಚಿಗೆ ಇದೆ. ಅಂತರರಾಷ್ಟ್ರೀಯ ಮಾನ್ಯತೆ, ಜನಪ್ರಿಯತೆ ಪಡೆದಿರುವ ಕಾಫಿಗೆ ಇರುವ `ಬ್ರಾಂಡ್ ಮನ್ನಣೆ~ ಇನ್ನೂ ಚಹಾಕ್ಕೆ ದೊರೆತಿಲ್ಲ.

ಜಮ್ಮು ಮೂಲದ   ಸರ್ದಾರ್ಜಿ ಅಮುಲೀಕ್ ಸಿಂಗ್ ಬಿರ್ಜಾಲ್ ಅವರ ಚಹದ ಮೇಲಿನ ಪ್ರೀತಿಯ ಫಲವಾಗಿ ಚಹಕ್ಕೂ ಒಂದು `ಬ್ರಾಂಡ್ ವರ್ಚಸ್ಸು~ ಒದಗಿಸುವ ಪ್ರಯತ್ನ ಬೆಂಗಳೂರಿನಲ್ಲಿ ಸಾಕಾರಗೊಂಡಿದೆ. ಚಹ ಪೂರೈಸುವ ಸರಣಿ ಮಾರಾಟ ಮಳಿಗೆ `ಚಾಯ್ ಪಾಯಿಂಟ್~ಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ.   ಚಹ ಪ್ರಿಯ ಬಳಕೆದಾರರ ಹೃದಯಕ್ಕೆ ಲಗ್ಗೆ ಹಾಕುತ್ತಿವೆ.

ಅಮೆರಿಕದ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನ `ಎಂಬಿಎ~ ಪದವೀಧರ ಸಿಂಗ್ ಅವರ ಕನಸಿನ ಕೂಸು ಇದು. ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಸಿಂಗ್ ಅವರಿಗೆ ಅಂತರರಾಷ್ಟ್ರೀಯವಾಗಿ ಜನಪ್ರಿಯವಾಗಿರುವ ಕಾಫಿಗೆ ದೊರೆತಿರುವ ಮನ್ನಣೆಯನ್ನು ತಾಯ್ನಾಡಿನಲ್ಲಿ ಚಹಾಕ್ಕೂ ದೊರಕುವಂತೆ ಮಾಡಬೇಕೆಂಬ ಮನದ ತುಡಿತವೇ ಈ ಚಹಾ ವಹಿವಾಟು ಆರಂಭಿಸಲು ಮೂಲ ಕಾರಣ.

ಭಾರತದಲ್ಲಿ ಕಾಫಿಗಿಂತ ಚಹಾ ಬಳಕೆ ಗರಿಷ್ಠ ಮಟ್ಟದಲ್ಲಿದ್ದರೂ ಅದಕ್ಕೆ ಸಿಗಬೇಕಾದ ಮನ್ನಣೆ  ದೊರಕಿಸಿಕೊಡಬೇಕೆಂಬ ಸಿಂಗ್ ಅವರ ಕನಸು `ಚಾಯ್ ಪಾಯಿಂಟ್~ ಮೂಲಕ ನನಸಾಗಿದೆ.

ದೇಶದಲ್ಲಿ ವರ್ಷಕ್ಕೆ 70 ಸಾವಿರ ಟನ್ ಕಾಫಿ ಬಳಕೆಯಾದರೆ, ಅದರ 10 ಪಟ್ಟುಗಳಷ್ಟು- 8.70 ಲಕ್ಷ ಟನ್‌ಗಳಷ್ಟು ಚಹ ಬಳಕೆಯಾಗುತ್ತಿದೆ. ಆದರೂ `ಕಾಫಿ~ಗೆ ಹೋಲಿಸಿದರೆ ಚಹಾಕ್ಕೆ ಯಾವುದೇ `ಬ್ರಾಂಡ್ ಮಾನ್ಯತೆ~ ಇಲ್ಲ. ಚಹಾಕ್ಕೂ ಕಾಫಿಯಂತೆ ಜನಮಾನಸದಲ್ಲಿ ವಿಶಿಷ್ಟ ಜನಪ್ರಿಯತೆ ಬೆಳೆಸಿ, ಅದಕ್ಕೊಂದು `ಬ್ರಾಂಡ್ ಮನ್ನಣೆ~ ದೊರೆಯುವಂತೆ ಮಾಡುವುದೇ ಸಿಂಗ್ ಅವರ ಹೆಬ್ಬಯಕೆಯಾಗಿದೆ.

ನಗರದಲ್ಲಿ ಅಸ್ತಿತ್ವಕ್ಕೆ ಬಂದಿರುವ `ಚಾಯ್ ಪಾಯಿಂಟ್~ಗಳು ಬೆಂಗಳೂರಿನ 10 ತಾಣಗಳಲ್ಲಿ ಬಿಸಿ, ಬಿಸಿ ಸ್ವಾದಿಷ್ಟಕರ ವೈವಿಧ್ಯಮಯ ಚಹ ಪೂರೈಸುತ್ತಿವೆ.  ಸದ್ಯದಲ್ಲಿಯೇ ಇನ್ನೂ ಎರಡು ಮಳಿಗೆಗಳು ಆರಂಭಗೊಳ್ಳಲಿವೆ ಎಂದು ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ತೇಜಸ್ ಚಂದ್ರ ಹೇಳುತ್ತಾರೆ.

ಒಂದೂವರೆ ವರ್ಷದ ಹಿಂದೆ ಬೆಂಗಳೂರಿನ ಕೋರಮಂಗಲದಲ್ಲಿ ಮೊದಲ ಮಳಿಗೆ ಆರಂಭಿಸಿ ಯಶ ಕಂಡ ಸಂಸ್ಥೆಯು, ಕ್ರಮೇಣ ನಗರದ ವಿವಿಧ ಭಾಗಗಳಲ್ಲಿ ಮಳಿಗೆ ತೆರೆದು ಚಹಾಕ್ಕೊಂದು ವಿಶಿಷ್ಟ ಬ್ರಾಂಡ್ ಮನ್ನಣೆ ಬೆಳೆಯುವಂತೆ ಮಾಡುವಲ್ಲಿ ದೃಢ ಹೆಜ್ಜೆ ಹಾಕುತ್ತಿದೆ.

ಸಮಾಜದ ಉನ್ನತ ಸ್ಥರದ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು (ಟಿಯರ್-1 ಮಾರುಕಟ್ಟೆ) ಚಹಾಕ್ಕೆ ಹೊಸ ಬ್ರಾಂಡ್ ರೂಪಿಸುವ ಬದಲಿಗೆ,  ಜನಸಾಮಾನ್ಯರಲ್ಲಿ, ದುಡಿಯುವ ವರ್ಗದಲ್ಲಿ, ಜನರ ಓಡಾಟ ಹೆಚ್ಚಿರುವ,  ಸಣ್ಣ- ಪುಟ್ಟ ಕಚೇರಿಗಳು ಇರುವ ಕಡೆಗಳ್ಲ್ಲಲಿಯೇ (ಟಿಯರ್-2) `ಚಾಯ್ ಪಾಯಿಂಟ್~ ಆರಂಭಿಸಿ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರಿಗೆ ವಿಶಿಷ್ಟ ಸ್ವಾದ, ಗುಣಮಟ್ಟದ ಆರೋಗ್ಯಕರ ಚಹಾ ಪರಿಚಯಿಸಿ ಗ್ರಾಹಕರ ಮನಗೆಲ್ಲುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ.

ಇದಕ್ಕಾಗಿಯೇ ಜನನಿಬಿಡ ಪ್ರದೇಶದಲ್ಲಿ ಪುಟ್ಟದಾದ ಜಾಗದಲ್ಲಿಯೇ ಸ್ವಚ್ಛ ಪರಿಸರದಲ್ಲಿ ಅತ್ಯುತ್ತಮ ಗುಣಮಟ್ಟದ, ಸ್ವಾದಿಷ್ಟ ಚಹ ಒದಗಿಸುವ ಧ್ಯೇಯ ಸಾಕಾರಗೊಳಿಸಿ, ಜನಮನ್ನಣೆ ಪಡೆಯುವ ಉದ್ದೇಶದಲ್ಲಿ ಸಾಕಷ್ಟು ಸಫಲರಾಗಿದ್ದೇವೆ ಎಂದು ತೇಜಸ್ ಚಂದ್ರ ಹೇಳುತ್ತಾರೆ.

ಬೆಂಗಳೂರಿನ ದರ್ಶಿನಿ, ಹೋಟೆಲ್ ಮತ್ತಿತರ ಕಡೆಗಳಲ್ಲಿ ಕಾಫಿ ಪೇಯ ತುಂಬ ಜನಪ್ರಿಯ. ಇಂತಹ ಪ್ರತಿಕೂಲ ಪರಿಸರದಲ್ಲಿಯೂ ಚಹಾ ಅಂಗಡಿ ತೆರೆದು ಜನಪ್ರಿಯಗೊಳಿಸುವುದು ಸವಾಲಿನ ಕೆಲಸವಾಗಿದ್ದರೂ ಅದರಲ್ಲಿ ಯಶಸ್ವಿಯಾಗಿರುವುದು ಸಂಸ್ಥೆಯ ಆತ್ಮವಿಶ್ವಾಸ ಹೆಚ್ಚಿಸಿದೆ.

ಅದರಲ್ಲೂ ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದಲ್ಲಿ ಆರಂಭಿಸಿದ ಮಳಿಗೆಯು, ಆ ಭಾಗದಲ್ಲಿನ ಪರಂಪರಾಗತ ಕಾಫಿ ಪ್ರಿಯರ ಪ್ರಭಾವದ ನೆರಳಿನಲ್ಲಿಯೇ ಯಶಸ್ವಿಯಾಗಿ ವಹಿವಾಟು ನಡೆಸುತ್ತಿರುವುದು ನಮ್ಮ ಉತ್ಸಾಹ ನೂರ್ಮಡಿಗೊಳಿಸಿದೆ. ಕಾಫಿಯನ್ನೇ ಹೆಚ್ಚಾಗಿ ಸೇವಿಸುವವರ ಪ್ರದೇಶದಲ್ಲಿಯೇ ಚಹಾಕ್ಕೆ ಸಿಕ್ಕಿರುವ ಈ ಮನ್ನಣೆ, ಚಹಾ ಜನಪ್ರಿಯವಾಗಿರುವ ಇತರೆಡೆಗಳಲ್ಲಿನ ಗ್ರಾಹಕರಲ್ಲಿ ಖಂಡಿತವಾಗಿಯೂ ಇನ್ನಷ್ಟು ಜನಪ್ರಿಯತೆಗೆ ಪಾತ್ರವಾಗುವುದರಲ್ಲಿ ಸಂದೇಹ ಇಲ್ಲ ಎಂದೂ ತೇಜಸ್ ಆತ್ಮವಿಶ್ವಾಸದಿಂದ ಹೇಳುತ್ತಾರೆ.

`ಚಾಯ್ ಪಾಯಿಂಟ್~ ವೈಶಿಷ್ಟ್ಯ
ಚಹಾಕ್ಕೆ (ಚಾಯ್)   ಬ್ರಾಂಡ್ ನಿರ್ಮಾಣದ ಕನಸು ಹೊತ್ತ ಬಿರ್ಜಾಲ್ ಮತ್ತವರ ತಂಡವು ಈ ಪೇಯವನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಮುತುವರ್ಜಿಯಿಂದ ದುಡಿಯುತ್ತಿದ್ದು,  ಚಹದ ವಿಶಿಷ್ಟ ತಯಾರಿಕೆ ತಂತ್ರವನ್ನೂ ಅಳವಡಿಸಿಕೊಂಡಿದೆ.

ರುಚಿ, ಬಣ್ಣ ಮತ್ತು ಶಕ್ತಿ- ವಿಷಯದಲ್ಲಿ ಇತರ ಚಹ ಉತ್ಪನ್ನಗಳಿಗೆ ಹೋಲಿಸಿದರೆ ಹೆಚ್ಚು ಸಶಕ್ತವಾಗಿರುವ ಆಸ್ಸಾಂ ಮತ್ತು ದಾರ್ಜಿಲಿಂಗ್ ಚಹಾವನ್ನೇ ಇಲ್ಲಿ ಬಳಸಲಾಗುತ್ತಿದೆ. 

ಇತರ ಚಹಾ ಪುಡಿಗೆ ಹೋಲಿಸಿದರೆ ಇದರ ಬೆಲೆ ದುಬಾರಿ. ಚಹದ ಸೊಪ್ಪನ್ನು ಹದವಾಗಿ ಬೆರೆಸಿ ಸ್ವಾದಿಷ್ಟಕರ ಪೇಯ ಒದಗಿಸುವಲ್ಲಿ ನಾಲ್ಕು ಪರಿಕರಗಳು ಮುಖ್ಯವಾಗಿರುತ್ತವೆ. ಚಹಾ ಪುಡಿ +ನೀರು + ಹಾಲು +ಸಕ್ಕರೆ. ಬೆಂಗಳೂರಿನ ನೀರು ಕೆಲಮಟ್ಟಿಗೆ ಗಡುಸು ಆಗಿರುತ್ತದೆ.

ಈ ನೀರನ್ನು ಶೋಧಿಸಿ (ಫಿಲ್ಟರ್) ಚಹಾ ತಯಾರಿಕೆಗೆ ಸೂಕ್ತವಾಗಿ ಮಾರ್ಪಾಟು ಮಾಡುವಂತೆ ಮಾಡಲಾಗುತ್ತದೆ. ಎಮ್ಮೆ ಹಾಲು (ಹೆರಿಟೇಜ್) ಬಳಸಲಾಗುತ್ತದೆ. ತಾಮ್ರ ಲೇಪಿತ (ಕಾಪರ್ ಕೋಟಿಂಗ್) ಪಾತ್ರೆಯಲ್ಲಿಯೇ ಚಹಾ ಸಿದ್ಧಪಡಿಸಲಾಗುತ್ತದೆ. ಇದು ಚಹದ ರುಚಿ ಹೆಚ್ಚಿಸುತ್ತದೆ.

ಇಲ್ಲಿ ಸಿದ್ಧಪಡಿಸುವ `ದಮ್ ಚಾಯ್~ ವಿಶಿಷ್ಟವಾದದ್ದು. ಜನಪ್ರಿಯ ಖಾದ್ಯ `ದಮ್    ಬಿರಿಯಾನಿ~ಯಂತೆಯೇ ಈ ಪೇಯ ಸಿದ್ಧಪಡಿಸಲಾಗುತ್ತದೆ. ವಿಶಿಷ್ಟ ಬಗೆಯ `ದಮ್ ಕ್ಲೋತ್~ (ಮಸ್ಲಿನ್ ಬಟ್ಟೆ) ಮೂಲಕ ಡಿಕಾಕ್ಷನ್ ಸೋಸುವಾಗ ಚಹದ ಎಲೆಗಳಲ್ಲಿನ ಕಶ್ಮಲಗಳೆಲ್ಲ ಬೇರ್ಪಡುತ್ತವೆ. ಡಿಕಾಕ್ಷನ್ ಕುದಿಯುತ್ತಲೇ ಇರುವಾಗ ಆವಿಯಿಂದ `ಸ್ಟ್ರಾಂಗ್ ಟೀ~ (ದಂ ಚಾಯ್) ಸಿದ್ಧಗೊಳ್ಳುತ್ತದೆ.

 ಬ್ರಾಂಡ್ ಜನಪ್ರಿಯತೆ...
ಪ್ರತಿ ಮಳಿಗೆಗೆ ಪ್ರತಿ ದಿನ 200 ರಿಂದ 300ರವರೆಗೆ ಗ್ರಾಹಕರು ಭೇಟಿ ನೀಡುತ್ತಾರೆ. ಅವರಲ್ಲಿ ಶೇ 60ರಷ್ಟು ಜನರು ಮರಳಿ ಬರುವ ಗ್ರಾಹಕರಾಗಿರುತ್ತಾರೆ.

ಬಿಸಿ ಬಿಸಿ ಚಹಾದ ಜತೆ, `ಐಸ್‌ಟೀ~ ಕೂಡ ಇಲ್ಲಿ ಲಭ್ಯ. ಇತರ ತಂಪು ಪಾನೀಯಗಳಿಗೆ ಹೋಲಿಸಿದರೆ ಈ ಪೇಯ ತುಂಬ ಆರೋಗ್ಯಕರ. ಇದರಲ್ಲಿ ಕೃತಕ ರಾಸಾಯನಿಕಗಳ ಬಳಕೆ ಏನೂ ಇರಲಾರದು. ಈ ಪೇಯ ಜನಪ್ರಿಯಗೊಳಿಸಲು ವಿಪುಲ ಅವಕಾಶಗಳು ಇವೆ. ಇದನ್ನು ಕ್ಯಾನ್, ಟೆಟ್ರಾಪ್ಯಾಕ್‌ನಲ್ಲಿಯೂ ಒದಗಿಸುವ ಆಲೋಚನೆ ಇದೆ ಎಂದೂ ತೇಜಸ್ ಹೇಳುತ್ತಾರೆ.

ಸಂಘಟಿತ ಸ್ವರೂಪ
ಎಲ್ಲೆಡೆ ಚಹಾ ಮಾರಾಟವು ಅಸಂಘಟಿತ ಸ್ವರೂಪದಲ್ಲಿ ಇದೆ. ಚಹಾ ಪುಡಿಗೆ ಬೇರೆ, ಬೇರೆ ಹೆಸರಿನ ನಿರ್ದಿಷ್ಟ ಬ್ರಾಂಡ್‌ಗಳು ಇವೆ. ಆದರೆ, ದಿನದ ಅನೇಕ ಸಂದರ್ಭಗಳಲ್ಲಿ ಸೇವಿಸುವ ಚಹಾಕ್ಕೆ ನಿರ್ದಿಷ್ಟವಾದ ಬ್ರಾಂಡ್ ಇಲ್ಲ. ಆ ಕೊರತೆ ನಿವಾರಿಸುವುದೇ  `ಚಾಯ್ ಪಾಯಿಂಟ್~ನ ಧ್ಯೇಯವಾಗಿದೆ.

ಚಹಾಕ್ಕೊಂದು ಸಂಘಟಿತ ಮಾರುಕಟ್ಟೆ ಕಲ್ಪಿಸುವುದೂ ಸಂಸ್ಥೆಯ ಉದ್ದೇಶವಾಗಿದೆ. ಚಹಾಕ್ಕೊಂದು ಹೊಸ ಮಾನ್ಯತೆ, ಘನತೆ - ಗೌರವ ತಂದುಕೊಡುವ ಪ್ರಯತ್ನ ಇದಾಗಿದೆ. ಒಂದೂವರೆ ವರ್ಷದಲ್ಲಿ  ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ನಿರ್ದಿಷ್ಟ ಬ್ರಾಂಡ್‌ನ ಚಹಾ ಕುಡಿಯುವ ಪ್ರವೃತ್ತಿ ಜನಪ್ರಿಯವಾಗುತ್ತಿದೆ. ಇದಕ್ಕೆ  ಬೆಂಗಳೂರಿನ ಬೊಮ್ಮನಹಳ್ಳಿ, ರಾಜಾಜಿನಗರದ ಶಿವನಳ್ಳಿ, ಬಸವನಗುಡಿ ಮತ್ತು ಇಂದಿರಾನಗರದ ಮಳಿಗೆಗಳಲ್ಲಿ ಗಮನಾರ್ಹ ಪ್ರಮಾಣದ ವಹಿವಾಟು ನಡೆಯುತ್ತಿರುವುದೇ ಸಾಕ್ಷಿಯಾಗಿದೆ ಎಂದು ತೇಜಸ್ ಹೇಳುತ್ತಾರೆ.

10 ಮಳಿಗೆಗಳ ಸಂಖ್ಯೆಯನ್ನು ರಾಜ್ಯದ ಮತ್ತು ದೇಶದ ಇತರ ಕಡೆಗಳಲ್ಲೂ ವಿಸ್ತರಿಸಿ 1000, 10,000 ಮಳಿಗೆಗಳಿಗೆ ಬೆಳೆಸುವ ಮಹತ್ವಾಕಾಂಕ್ಷೆಯನ್ನೂ ಈ ತಂಡ ಹೊಂದಿದೆ.

ವಹಿವಾಟು ವಿಸ್ತರಣೆ ಮತ್ತು ಬ್ರಾಂಡ್ ನಿರ್ಮಾಣ ಹೆಸರಿನಲ್ಲಿ ಯಾವತ್ತೂ ಗುಣಮಟ್ಟದ ಜತೆ ರಾಜಿ ಮಾಡಿಕೊಳ್ಳುವುದಿಲ್ಲ. ಹೀಗಾಗಿ ಪಾಲುದಾರಿಕೆಯಡಿ ಮಳಿಗೆ ಆರಂಭಿಸುವ ಪರಿಕಲ್ಪನೆಯಲ್ಲಿ ಸಂಸ್ಥೆಯ ಸಿಬ್ಬಂದಿಗೇ ಅದರ ಹೊಣೆಗಾರಿಕೆ ಒಪ್ಪಿಸುವ ಆಲೋಚನೆ ಇದೆ ಎನ್ನುತ್ತಾರೆ.

ದೇಶಿ ಚಹದ ಮಾರುಕಟ್ಟೆಯು ಎರಡು ಮೂರು ಬಗೆಯಲ್ಲಿ ವಿಂಗಡಣೆಗೊಂಡಿದೆ. ಚಹದ ತೋಟಗಳು, ಟೀ ಪುಡಿ ತಯಾರಿಕೆ ಮತ್ತು ಪೇಯದ ನೇರ ಮಾರಾಟ. ಒಟ್ಟಾರೆ ದೇಶದ ವಾರ್ಷಿಕ ಚಹ ಪುಡಿ ಮಾರಾಟವು 8.70 ಲಕ್ಷ ಟನ್‌ಗಳಷ್ಟು ಇದೆ. ಮಾರುಕಟ್ಟೆಯ ವಹಿವಾಟು ಅಂದಾಜು ್ಙ 5000 ಕೋಟಿಗಳಷ್ಟಿದೆ.

ಮೌಂಟೇನ್ ಟ್ರೇಲ್ ಫುಡ್ಸ್‌ನ ಸಹ ಬ್ರಾಂಡ್ ಆಗಿರುವ, ಬ್ರೆಡ್ / ಬಿಸ್ಕಿತ್ ತಯಾರಿಕಾ ಸಂಸ್ಥೆ `ಬೀಕೆ~ಯು (Beekay) `ಚಾಯ್ ಪಾಯಿಂಟ್~ನಲ್ಲಿ ಮಾರಾಟವಾಗುವ ಉತ್ತಮ ರುಚಿ, ಗುಣಮಟ್ಟದ ಬಿಸ್ಕಿತ್, ಸಮೋಸಾ ಮತ್ತಿತರ ತಿಂಡಿಗಳನ್ನು ಪೂರೈಸುತ್ತದೆ.

ಚಹಾದ ಸಾಂಸ್ಥಿಕ ಮಾರಾಟಕ್ಕೂ ಚಾಲನೆ ನೀಡಲಾಗಿದೆ. `ಚಾಯ್ ಪಾಯಿಂಟ್~ ಮಳಿಗೆಗಳ ಸುತ್ತಮುತ್ತಲಿನ ಸಣ್ಣ - ಪುಟ್ಟ ಕಚೇರಿಗಳು ಮತ್ತು ಸಾಫ್ಟ್‌ವೇರ್ ಸಂಸ್ಥೆಗಳ ಸಿಬ್ಬಂದಿಗೆ ದಿನದ ನಿರ್ದಿಷ್ಟ ಸಮಯದಲ್ಲಿ ತಾಜಾ, ಬಿಸಿ ಬಿಸಿ ಚಹಾ ಪೂರೈಸಲು ಸಂಸ್ಥೆಯು ಸಗಟು ರೂಪದಲ್ಲಿ (ಲೀಟರ್ ಲೆಕ್ಕದಲ್ಲಿ) ಚಹಾ ಪೂರೈಸಲೂ ಮುಂದಾಗಿದೆ. ಮಾಹಿತಿಗೆ www.chaipoint.com ತಾಣಕ್ಕೂ ಭೇಟಿ ನೀಡಬಹುದು.  

ಅಮುಲೀಕ್ ಸಿಂಗ್ ಬಿರ್ಜಾಲ್ ಅವರು ಈಗ `ಚಾಯ್ ಪಾಯಿಂಟ್~ ಸರಣಿ ಮಳಿಗೆ ನಿರ್ವಹಿಸುತ್ತಿರುವ ಮೌಂಟೇನ್ ಟ್ರೇಲ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಕಾರ್ಯನಿರ್ವಹಿಸುತ್ತಿದ್ದಾರೆ.

ಭಾರತೀಯ ಆಡಳಿತಾತ್ಮಕ ಸಂಸ್ಥೆಯ (ಐಐಆ)  `ಎಂಬಿಎ~ ಪದವೀಧರರಾಗಿರುವ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ತೇಜಸ್ ಚಂದ್ರ ಕೂಡ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ದುಡಿದ ಅನುಭವಹೊಂದಿದ್ದು, ಸದ್ಯಕ್ಕೆ `ಚಾಯ್ ಪಾಯಿಂಟ್~ನ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ.

ಮಾರುಕಟ್ಟೆ ಮತ್ತು ಬ್ರಾಂಡ್ ನಿರ್ಮಾಣದ ಹೊಣೆ ನಿರ್ವಹಿಸುತ್ತಿರುವ ಮೈಸೂರು ಮೂಲದ ಹರಿ ಶೆಣೈ ಕೂಡ `ಎಂಬಿಎ~ ಪದವೀಧರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT