ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ ರೀಫ್ಸ್ ಇನ್ ಸ್ಪೆಕ್ಟರ್‌ ನಾಪತ್ತೆ

Last Updated 17 ಸೆಪ್ಟೆಂಬರ್ 2013, 8:33 IST
ಅಕ್ಷರ ಗಾತ್ರ

ಕೆಜಿಎಫ್‌: ಮಾರಿಕುಪ್ಪಂ ಮೈಸೂರು ಮೈನ್ಸ್ ಮಿಲ್‌ನಲ್ಲಿ ಕಳೆದ ತಿಂಗಳು ನಡೆದಿದ್ದ ಕಳ್ಳತನ ಯತ್ನದ ಸಂಬಂಧ­ವಾಗಿ ಆರೋಪಿಗಳಿಗೆ ಸಹಕಾರ ನೀಡಿದ ಆರೋಪ ಎದುರಿಸುತ್ತಿರುವ ಚಾಂಪಿ­ಯನ್‌­ರೀಫ್ಸ್‌ ಇನ್  ಸ್ಪೆಕ್ಟರ್‌ ಅಬ್ದುಲ್‌ ಸಲೀಂ ನಾಪತ್ತೆಯಾಗಿದ್ದಾರೆ. ಮತ್ತೊಬ್ಬ ಆರೋಪಿ ಸಬ್‌ ಇನ್ಸ್‌ಪೆಕ್ಟರ್‌ ಕರ್ತವ್ಯಕ್ಕೆ ಗೈರು ಹಾಜರಿಯಾಗಿದ್ದಾರೆ.

ಮೈಸೂರು ಮೈನ್ಸ್‌ ಮಿಲ್‌ನಲ್ಲಿ ಚಿನ್ನದ ನೀರು ಹರಿದಿದ್ದ ಕೊಳವೆಯನ್ನು ಕಳ್ಳತನ ಮಾಡಲು ಕಳೆದ ತಿಂಗಳ ಆಗಸ್ಟ್‌ 17 ರಂದು ಹದಿನಾಲ್ಕು ಕಳ್ಳರ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಅವರು ಗಣಿ ಪ್ರದೇಶದಲ್ಲಿ ಕಳ್ಳತನ ಮಾಡಲು ಬಿಜಿಎಂಎಲ್ ಮುಖ್ಯ ಭದ್ರತಾ ಅಧಿಕಾರಿ ಆನಂದ್‌ ಸಿಂಗ್‌ ರಾವುತ್‌, ವ್ಯವಸ್ಥಾಪಕ ಮೆಷಕ್ ಮತ್ತು ಚಾಂಪಿಯನ್‌ರೀಫ್ಸ್‌ ಇನ್ ಸ್ಪೆಕ್ಟರ್‌  ಅಬ್ದುಲ್ ಸಲೀಂ ಸಹಕರಿಸಿದ್ದರು ಎಂದು ಆರೋಪಿಸಲಾಗಿತ್ತು. ಕಳ್ಳತನ ಯತ್ನದ ಸಂದರ್ಭದಲ್ಲಿ ಮಿಲ್‌ನಲ್ಲಿದ್ದ ಮೂವರು ಭದ್ರತಾ ಸಿಬ್ಬಂದಿಯನ್ನು ಮೊದಲನೇ ಹಂತದಲ್ಲಿಯೇ ಪೊಲೀಸರು ಬಂಧಿಸಿ­ದ್ದರು.

ನಂತರ ಮುಖ್ಯ ಭದ್ರತಾ ಅಧಿ­ಕಾರಿ ಮತ್ತು ಬಿಎಸ್‌ಎಫ್‌ನ ಸೆಕೆಂಡ್‌ ಇನ್‌ ಕಮಾಂಡೆಂಟ್‌ ದರ್ಜೆಯ ಆನಂದ್‌ ಸಿಂಗ್‌ ರಾವುತ್‌ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಹಂತದಲ್ಲಿ ನಡೆಸಿದ ತನಿಖೆಯಲ್ಲಿ ಸರ್ಕಲ್‌ ಇನ್ ಸ್ಪೆಕ್ಟರ್‌  ಅಬ್ದುಲ್‌ ಸಲೀಂ ಕಳ್ಳತನ ಆರೋಪಿ­ಗಳಿಗೆ ಸಹಕರಿಸಿದ್ದರು ಎಂಬುದು ದೃಢಪಟ್ಟಿತ್ತು.

ಆದರೆ, ಪೊಲೀಸ್‌ ಅಧಿಕಾರಿಯನ್ನೇ ಬಂಧಿಸುವುದು ಸ್ಥಳೀಯ ಪೊಲೀಸರಿಗೆ ಮುಜುಗರದ ವಿಷಯವಾಗಿತ್ತು. ಆದ್ದ­ರಿಂದ ಇತರ ಆರೋಪಿಗಳನ್ನು ಬಂಧಿ­ಸುವಲ್ಲಿ ತೋರಿದ ಕಾಠಿಣ್ಯವನ್ನು ಪೊಲೀ­ಸರು ತಮ್ಮದೇ ಇಲಾಖೆ ಅಧಿಕಾರಿಯನ್ನು ಬಂಧಿಸುವಲ್ಲಿ ತೋರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು.
ಪ್ರಸ್ತುತ ಬೆಂಗಳೂರಿನಲ್ಲಿರುವ ಅಬ್ದುಲ್‌ ಸಲೀಂ ಅವರ ಮನೆಗೆ ಈಚೆಗೆ ಸಹಾಯಕ ಸಬ್‌ ಇನ್ ಸ್ಪೆಕ್ಟರ್‌ ಭೇಟಿ ನೀಡಿ, ಅವರ ಇರುವಿಕೆಯನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದರು. ಆದರೆ ಅವರು ಅಜ್ಞಾತ ಸ್ಥಳದಲ್ಲಿ ಇದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪೊಲೀಸರು ಬಂಧಿಸುವುದು ಖಾತರಿ ಎಂದು ತಿಳಿದ ನಂತರ ಇನ್ ಸ್ಪೆಕ್ಟರ್‌ ಕೋಲಾರದ ಸೆಷನ್ಸ್‌ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿ­ದ್ದಾರೆ. ಅದು ಇದೇ 17ರಂದು ವಿಚಾ­ರಣೆಗೆ ಬರುವ ಸಂಭವವಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಇದೇ ಮಿಲ್‌ನಲ್ಲಿ ನಡೆದಿದ್ದ ಮತ್ತೊಂದು ಚಿನ್ನದ ಕೊಳವೆ ಕಳ್ಳತನಕ್ಕೆ ಸಂಬಂಧಿಸಿದಂತೆ ಪೊಲೀಸರು ತಮ್ಮನ್ನು ಬಂಧಿಸಬಹುದೆಂಬ ಭೀತಿಯನ್ನು ಎದು­ರಿಸುತ್ತಿರುವ ಮತ್ತೊಬ್ಬ ಸಬ್‌ ಇನ್ ಸ್ಪೆಕ್ಟರ್‌   ಸಹ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅವರ ಹೆಸರು ಆರೋಪಿಗಳ ಪಟ್ಟಿಯಲ್ಲಿ ಇಲ್ಲದಿದ್ದರೂ ಅರ್ಜಿ ಸಲ್ಲಿಸಿರುವುದನ್ನು ಕಂಡರೆ ಅವರು ಗಣಿ ಕಳ್ಳತನ ಪ್ರಕರಣದಲ್ಲಿ ಭಾಗಿ­ಯಾಗಿರ­ಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಸದರಿ ಸಬ್‌ ಇನ್ ಸ್ಪೆಕ್ಟರ್‌ ಕೆಲಸಕ್ಕೆ ಗೈರು ಹಾಜರಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಗಣಿ ಕಳ್ಳತನಕ್ಕೆ ಸಂಬಂಧಿಸಿದಂತೆ ಇದು­ವರೆಗೂ 19 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅವರೆಲ್ಲರೂ ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಮುಖ ಆರೋಪಿಗಳಾದ ಮುತ್ತು­ಕುಮಾರ್‌, ಸೂಸೈ, ಬಾಬು ನಾಪತ್ತೆ­ಯಾಗಿದ್ದಾರೆ. ಅವರ ಬಂಧನಕ್ಕೆ ಈಗಾ­ಗಲೇ ವಿಶೇಷ ತಂಡಗಳನ್ನು ರಚಿಸ­ಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT