ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ಸ್ ಲೀಗ್: ಅಬ್ಬರಿಸಿದ ಕ್ರಿಸ್ ಗೇಲ್

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಸ್ ಗೇಲ್ ಅಬ್ಬರಿಸಿ ನಿಂತರೆ ಅವರನ್ನು ತಡೆಯಲು ಯಾವ ಬೌಲರ್‌ಗೂ ಸಾಧ್ಯವಿಲ್ಲ. ಈ ಮಾತು ನಿಜ ಎಂಬುದು ಮತ್ತೆ ಸಾಬೀತಾಯಿತು. ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಸಾಮರ್ಸೆಟ್ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ಈ ಬ್ಯಾಟ್ಸ್‌ಮನ್ ರಟ್ಟೆಯರಳಿಸಿ ನಿಂತರು. ಭರ್ಜರಿ 86 ರನ್‌ಗಳ ಮೂಲಕ ತಂಡದ ನೆರವಿಗೆ ಬಂದರು.

ಈ ಕಾರಣ `ಮಾಡು ಇ್ಲ್ಲಲವೇ ಮಡಿ~ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಮರ್ಸೆಟ್ ಗೆಲುವಿಗೆ 207 ರನ್‌ಗಳ ಕಠಿಣ ಗುರಿಯನ್ನೇ ನೀಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆರ್‌ಸಿಬಿ 20 ಓವರ್‌ಗಳಲ್ಲಿ ಆರು ವಿಕೆಟ್‌ಗೆ 206 ರನ್ ಪೇರಿಸಿತು. ಅತಿಮಹತ್ವದ ಪಂದ್ಯದಲ್ಲಿ ಗೇಲ್ ಒಳಗೊಂಡಂತೆ ಆರ್‌ಸಿಬಿಯ ಪ್ರಮುಖ ಬ್ಯಾಟ್ಸ್‌ಮನ್‌ಗಳೆಲ್ಲೂ ಉತ್ತಮ ಪ್ರದರ್ಶನ ನೀಡಿದರು. 

ಆರ್‌ಸಿಬಿ ತಂಡದಲ್ಲಿದ್ದ ಗೇಲ್ ಎಂಬ ಪಟಾಕಿ ಪ್ರಸಕ್ತ ಟೂರ್ನಿಯಲ್ಲಿ ಇದುವರೆಗೆ ಸಿಡಿದಿರಲಿಲ್ಲ. ಆದರೆ ಸೋಮವಾರ ಮೊದಲ ಬಾರಿಗೆ ಸಿಡಿದು ನಿಂತರು. ಒಂದರ ಮೇಲೊಂದರಂತೆ ಎಂಟು ಸಿಕ್ಸರ್‌ಗಳನ್ನು ಸಿಡಿಸಿದರು. ಜೊತೆಗೆ ನಾಲ್ಕು ಬೌಂಡರಿಗಳು ಬೇರೆ. ಕೇವಲ 46 ಎಸೆತಗಳಲ್ಲಿ ಅವರ ಈ ಅಬ್ಬರದ ಇನಿಂಗ್ಸ್ ಮೂಡಿಬಂತು.

ಗೇಲ್‌ಗೆ ಎರಡು ಜೀವದಾನ ನೀಡಿದ ಸಾಮರ್ಸೆಟ್ ತಂಡ ಅದಕ್ಕೆ ಭಾರಿ ಬೆಲೆಯನ್ನೇ ತೆತ್ತಿತು. ನಾಲ್ಕು ಹಾಗೂ ಎಂಟು ರನ್ ಗಳಿಸಿದ್ದ ಸಂದರ್ಭ ವಿಂಡೀಸ್ ಬ್ಯಾಟ್ಸ್‌ಮನ್‌ಗೆ ಜೀವದಾನ ಲಭಿಸಿತ್ತು. ಮೊದಲು ಬಟ್ಲರ್ ಕ್ಯಾಚ್ ಕೈಚೆಲ್ಲಿದರೆ, ಬಳಿಕ ರನೌಟ್ ಅಪಾಯದಿಂದ ಪಾರಾಗಿದ್ದರು. ಟೂರ್ನಿಯ ಸೆಮಿಫೈನಲ್ ಕನಸು ಜೀವಂತವಾಗಿರಿಸಿಕೊಳ್ಳಲು ಆರ್‌ಸಿಬಿಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ.

ಗೇಲ್ ಹಾಗೂ ತಿಲಕರತ್ನೆ ದಿಲ್ಶಾನ್ (23, 16 ಎಸೆತ, 4 ಬೌಂ, 1 ಸಿಕ್ಸರ್) ಮೊದಲ ವಿಕೆಟ್‌ಗೆ 38 ರನ್ ಸೇರಿಸಿ ಆರ್‌ಸಿಬಿ ತಂಡಕ್ಕೆ ಭರವಸೆಯ ಆರಂಭ ನೀಡಿದರು.

ಆದರೆ ದಿಲ್ಶಾನ್ ಹೆಚ್ಚುಹೊತ್ತು ನಿಲ್ಲಲಿಲ್ಲ. ವಿರಾಟ್ ಕೊಹ್ಲಿ (33, 22 ಎಸೆತ, 4 ಬೌಂ, 1 ಸಿಕ್ಸರ್) ಗೇಲ್‌ಗೆ ಉತ್ತಮ ಸಾಥ್ ನೀಡಿದರು. ಇದರಿಂದ ಎರಡನೇ ವಿಕೆಟ್‌ಗೆ 40 ಎಸೆತಗಳಲ್ಲಿ 70 ರನ್‌ಗಳು ಬಂದವು. ಗೇಲ್ ಆ ಬಳಿಕ ಮೂರನೇ ವಿಕೆಟ್‌ಗೆ ಸೌರಭ್ ತಿವಾರಿ ಜೊತೆ 49 ರನ್ (26 ಎಸೆತ) ಕಲೆಹಾಕಿದರು. ಈ ಕಾರಣ ರಾಯಲ್ ಚಾಲೆಂಜರ್ಸ್ ಮೊತ್ತ 200ರ ಗಡಿ ದಾಟಿತು. ಮೊದಲ 10 ಓರ್‌ಗಳಲ್ಲಿ 87 ರನ್ ಗಳಿಸಿದ ಆರ್‌ಸಿಬಿ ಕೊನೆಯ 10 ಓವರ್‌ಗಳಲ್ಲಿ 119 ರನ್‌ಗಳಿಸಿತು.

ಸ್ಕೋರ್ ವಿವರ:

ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 206
ಕ್ರಿಸ್ ಗೇಲ್ ಸಿ ಡಾಕ್‌ರೆಲ್ ಬಿ ಅಲ್ಫೋನ್ಸೊ ಥಾಮಸ್  86
ತಿಲಕರತ್ನೆ ದಿಲ್ಶಾನ್ ಬಿ ರೆಲೋಫ್ ವಾನ್ ಡೆರ್‌ಮೆರ್ವ್  23
ವಿರಾಟ್ ಕೊಹ್ಲಿ ಬಿ ಸ್ಟೀವನ್ ಕರ್ಬಿ  33
ಸೌರಭ್ ತಿವಾರಿ ಸಿ ಸುಪ್ಪಯ್ಯ ಬಿ ಸ್ಟೀವನ್ ಕಿರ್ಬಿ  18
ಮಯಾಂಕ್ ಅಗರ್‌ವಾಲ್ ಸಿ ಸುಪ್ಪಯ್ಯ ಬಿ ಅಲ್ಫೋನ್ಸೊ ಥಾಮಸ್  19
ಡೇನಿಯಲ್ ವೆಟೋರಿ ರನೌಟ್  01
ರಾಜು ಭಟ್ಕಳ್ ಔಟಾಗದೆ  04
ಅರುಣ್ ಕಾರ್ತಿಕ್ ಔಟಾಗದೆ  13
ಇತರೆ: (ಲೆಗ್‌ಬೈ-2, ವೈಡ್-7)  09
ವಿಕೆಟ್ ಪತನ: 1-38 (ದಿಲ್ಶಾನ್; 4.3), 2-108 (ಕೊಹ್ಲಿ; 11.1), 3-157 (ತಿವಾರಿ; 15.3), 4-188 (ಮಯಾಂಕ್; 17.4), 5-188 (ಗೇಲ್; 17.5), 6-191 (ವೆಟೋರಿ; 18.3).
ಬೌಲಿಂಗ್: ಅಲ್ಫೋನ್ಸೊ ಥಾಮಸ್ 4-0-33-2, ಸ್ಟೀವನ್ ಕರ್ಬಿ 4-0-23-2, ಪೀಟರ್ ಟ್ರೆಗೊ 3-0-50-0, ರೆಲೋಫ್ ವಾನ್ ಡೆರ್‌ಮೆರ್ವ್ 4-0-36-1, ಮುರಳಿ ಕಾರ್ತಿಕ್ 3-0-34-0, ಜಾರ್ಜ್ ಡಾಕ್‌ರೆಲ್ 2-0-28-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT