ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ಸ್ ಲೀಗ್ ಕ್ರಿಕೆಟ್: ಫೈನಲ್‌ಗೆ ರಾಯಲ್ ಚಾಲೆಂಜರ್ಸ್

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅದೃಷ್ಟವಾಗಿ ಬಂದು ಗೆಲುವು ತಂದವನು ಕ್ರಿಸ್ ಗೇಲ್. ವಿಂಡೀಸ್‌ನ ಈ ದೈತ್ಯ ಆಟಗಾರ ಚೆಂಡನ್ನು ದಂಡಿಸಿದರೆ ರಾಯಲ್ ಚಾಲೆಂಜರ್ಸ್‌ಗೆ ಜಯ ಖಂಡಿತ. ಈ ನಂಬಿಕೆ ಮತ್ತೊಮ್ಮೆ ನಿಜವಾಯಿತು. ವಿಜಯ್ ಮಲ್ಯ ಒಡೆತನದ ಕ್ರಿಕೆಟ್ ಪಡೆಯ ಪಾಲಿಗೆ ವಿಜಯವೂ ಒಲಿಯಿತು. ತಮ್ಮ ನೆಚ್ಚಿನ ತಂಡ ಚಾಂಪಿಯನ್ಸ್ ಲೀಗ್ ಫೈನಲ್ ತಲುಪಿತೆಂದು ಉದ್ಯಾನನಗರಿಯ ಪ್ರೇಕ್ಷಕಗಣವೂ ನಲಿಯಿತು.

ಈ ಸಂಭ್ರಮಕ್ಕೆ ಕಾರಣರಾದ ಗೇಲ್ ಜೊತೆ ಜುಗಲ್‌ಬಂದಿ ನಡೆಸಿದ ವಿರಾಟ್ ಕೊಹ್ಲಿ ಅವರೂ ತಂಡದ ಯಶಸ್ಸಿಗೆ ನೀಡಿದ ಪಾಲು ಕೂಡ ಬಹು ದೊಡ್ಡದು. ಇಂಥ ಹುಮ್ಮಸ್ಸಿನ ಬ್ಯಾಟಿಂಗ್ ಹಬ್ಬದ ಧೂಪದಲ್ಲಿಯೇ ಆರು ವಿಕೆಟ್‌ಗಳ ಅಂತರದ ಜಯದ ಫಲವೂ ಪಕ್ವವಾಗಿ ಸಿಹಿ ಸಿಹಿ ಹಣ್ಣು!

ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ನ್ಯೂ ಸೌತ್ ವೇಲ್ಸ್ ಎರಡು ವಿಕೆಟ್ ನಷ್ಟಕ್ಕೆ 203 ರನ್ ಪೇರಿಸಿದರೂ, ಚಾಲೆಂಜರ್ಸ್ ಎದೆಗುಂದಲಿಲ್ಲ. ಕಣ್ಣಿಗೆ ಅಂದವೆನಿಸುವ ಆಟವಾಡಿ ಇನ್ನೂ ಒಂಬತ್ತು ಎಸೆತಗಳು ಬಾಕಿ ಇರುವಂತೆಯೇ ಚೆಂದದ ಗೆಲುವಿನ ಅರಮನೆ ಕಟ್ಟಿದರು. ಅದಕ್ಕಿನ್ನು ಕಳಶ ಇಡುವುದು ಮಾತ್ರ ಬಾಕಿ. ಫೈನಲ್‌ನಲ್ಲಿನ ವಿಜಯವೇ ಆ ಕೀರ್ತಿ ಕಳಶ.

ಸೆಮಿಫೈನಲ್ ಹೋರಾಟವಂತೂ ಇಲ್ಲಿ ಕಷ್ಟದ್ದಾಗಲಿಲ್ಲ. ಗೇಲ್ ಹಾಗೂ ಕೊಹ್ಲಿಯಂಥ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ ತಂಡಕ್ಕೆ 204 ರನ್‌ಗಳ ಜಯದ ಗುರಿ ದೊಡ್ಡದೇನಲ್ಲ! ಎನ್ನುವ ಅಭಿಮಾನಿಗಳ ಆಶಯಕ್ಕೆ ಕುಂದು ತರದ ರೀತಿಯಲ್ಲಿಯೇ ಚಾಲೆಂಜರ್ಸ್ ತಮ್ಮ ಇನಿಂಗ್ಸ್‌ಗೆ ಬುನಾದಿ ಹಾಕಿದರು. ತಿಲಕರತ್ನೆ ದಿಲ್ಶಾನ್ ಒಂದೇ ಬೌಂಡರಿಯೊಂದಿಗೆ ಡ್ರೆಸಿಂಗ್ ಕೋಣೆ ಸೇರಿದರೂ ವಿಂಡೀಸ್ ಬ್ಯಾಟಿಂಗ್ ದೈತ್ಯ ಗೇಲ್ (92; 41 ಎಸೆತ, 8 ಬೌಂಡರಿ, 8 ಸಿಕ್ಸರ್) ಕ್ರೀಸ್‌ನಲ್ಲಿ ಗಟ್ಟಿಯಾದರು. ಅವರೊಂದಿಗೆ ಕೈಜೋಡಿಸಿದ ಕೊಹ್ಲಿ (ಔಟಾಗದೆ 84; 49 ಎ. 10 ಬೌಂಡರಿ, 3 ಸಿಕ್ಸರ್) ಕೂಡ ಎದುರಾಳಿ ಬೌಲರ್‌ಗಳನ್ನು ಕಾಡಿದರು. ಪರಿಣಾಮ ಕೇವಲ 52 ಎಸೆತಗಳಲ್ಲಿಯೇ ಚಾಲೆಂಜರ್ಸ್ ಒಟ್ಟು ಮೊತ್ತ ನೂರು ರನ್.

ಆನಂತರ ಬೇಗ ಬಾಕಿ ಮೊತ್ತ ಗಳಿಸುವತ್ತ ಚಿತ್ತ ಕೇಂದ್ರೀಕರಿಸಿದ ಚಾಲೆಂಜರ್ಸ್ ಉತ್ಸಾಹಕ್ಕೆ ಪ್ರೇಕ್ಷಕರ ಭಾರಿ ಕೇಕೆ ಹಾಗೂ ಚಪ್ಪಾಳೆಯ ಪ್ರೋತ್ಸಾಹ. ಮೋಸೆಸ್ ಹೆನ್ರಿಕ್ಸ್ ಎಸೆತದಲ್ಲಿ ಕ್ರೀಡಾಂಗಣದ ಛಾವಣಿಗೆ ಹಾಗೂ ಪ್ಯಾಟ್ ಕಮಿನ್ಸ್ ದಾಳಿಯಲ್ಲಿ ಕ್ರೀಡಾಂಗಣದ ಆಚೆಗೆ ಚೆಂಡು ಸಿಕ್ಸರ್‌ಗೆ ಎತ್ತಿದ ಗೇಲ್ ತಾವು ಚಾಲೆಂಜರ್ಸ್ ಪಾಲಿಗೆ ಬ್ಯಾಟಿಂಗ್ `ಶಕ್ತಿಕೇಂದ್ರ~ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಆದರೆ ಈ ಪಂದ್ಯದಲ್ಲಿ ಶತಕ ಗಳಿಸುವ ಭಾಗ್ಯ ಮಾತ್ರ ಅರಿಗಿಲ್ಲದಾಯಿತು. ಅನುಮಾನಾಸ್ಪದ ಎಲ್‌ಬಿಡಬ್ಲ್ಯು ತೀರ್ಪು ಅರಿಗೆ ತೊಡರುಗಾಲಾಯಿತು. ಆಗಲೇ ಭಯದ ಬಾವುಲಿಯು ಕ್ರೀಡಾಂಗಣದ ಛಾವಣಿಯ ಮೂಲೆಯಿಂದ ಹಾರಿತ್ತು. ಇಂಥ ಸಂಕಷ್ಟದಲ್ಲಿ ಮತ್ತೆರಡು ವಿಕೆಟ್ ಪತನ. ಆದರೆ ಕೊಹ್ಲಿ ಹಾಗೂ ಮೊಹಮ್ಮದ್ ಕೈಫ್ ಮುರಿಯದ ಐದನೇ ವಿಕೆಟ್‌ನಲ್ಲಿ ಜಯದ ಕನಸು ನನಸಾಗಿಸಿದರು. 18.3 ಓವರುಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಜಯಕ್ಕೆ ಅಗತ್ಯವಿದ್ದ 204 ರನ್‌ಗಳನ್ನು ಚಾಲೆಂಜರ್ಸ್ ತಮ್ಮ ಖಾತೆಯಲ್ಲಿ ಸೇರಿಸಿದರು.

ಕೊನೆಯ ಲೀಗ್ ಪಂದ್ಯದಲ್ಲಿ ಗುರಿಯನ್ನು ಬೆನ್ನಟ್ಟಿ ಕೊನೆಯ ಎಸೆತದಲ್ಲಿ ಸಿಕ್ಸರ್‌ನೊಂದಿಗೆ ರೋಚಕ ಗೆಲುವು ಪಡೆದಿದ್ದ    ಚಾಲೆಂಜರ್ಸ್ `ಟಾಸ್~ ಗೆದ್ದಾಗ ಆಯ್ಕೆ ಮಾಡಿದ್ದು ಕ್ಷೇತ್ರ ರಕ್ಷಣೆ. ಸವಾಲು ಎದುರಿಗಿಟ್ಟುಕೊಂಡು ಹೋರಾಡುವುದು ಹೆಚ್ಚು ಸುಲಭವೆಂದು ನಾಯಕ ವೆಟೋರಿ ಲೆಕ್ಕಾಚಾರ ಮಾಡಿದ್ದರು ಎನ್ನುವುದು ಈ ತೀರ್ಮಾನದಿಂದಲೇ ಸ್ಪಷ್ಟವಾಯಿತು.

ವೇಲ್ಸ್ ಬ್ಯಾಟ್ಸ್‌ಮನ್‌ಗಳಿಗೆ ಬೇಗ ಕಡಿವಾಣ ಹಾಕುವ ಭರವಸೆ ಅಲ್ಪವಾಗಿದ್ದರೂ ವೆಟೋರಿ ತಮ್ಮ ನಿರ್ಧಾರವೇ ಸರಿ ಎನ್ನುವಂತೆ ಪ್ರೇಕ್ಷಕರತ್ತ ಕೈಬೀಸಿದರು. ತಮ್ಮ ಬೌಲಿಂಗ್ ಬತ್ತಳಿಕೆಯ್ಲ್ಲಲಿ ಎಡಗೈ ಸ್ಪಿನ್ನರ್ ಸಯ್ಯದ್ ಮೊಹಮ್ಮದ್ ಇಲ್ಲದಿದ್ದರೂ `ಆರ್‌ಸಿಬಿ~ ಮುಂದಾಳುವಿನ ಮೊಗದಲ್ಲಿನ ವಿಶ್ವಾಸವೂ ಕುಂದಲಿಲ್ಲ. ಗಾಯಗೊಂಡ ಸಯ್ಯದ್ ಬದಲಿಗೆ ಆಡುವ ಹನ್ನೊಂದರ ಪಟ್ಟಿಗೆ ಸೇರಿಸಿಕೊಂಡಿದ್ದು ಬ್ಯಾಟ್ಸ್‌ಮನ್ ಕೈಫ್ ಅವರನ್ನು. ಬೌಲಿಂಗ್ ಬಲಗೊಳಿಸುವ ಪ್ರಯತ್ನದಲ್ಲಿ ನಿರಂತರವಾಗಿ ವಿಫಲವಾಗಿದ್ದರಿಂದ ಬ್ಯಾಟಿಂಗ್ ಶಕ್ತಿಯೊಂದಿಗೆಯೇ ಯಶಸ್ಸು ಪಡೆಯಬೇಕು ಎನ್ನುವುದು ಡೇನಿಯಲ್ ಯೋಚನೆಯಾಗಿತ್ತೆಂದು ವಿವರಿಸಿ ಹೇಳುವ ಅಗತ್ಯವಂತೂ ಇಲ್ಲ! ಅವರ ಈ ಲೆಕ್ಕಾಚಾರ ತಪ್ಪಾಗಲಿಲ್ಲ ಎನ್ನುವುದೇ ಸಮಾಧಾನ.

ವೇಲ್ಸ್ ಬ್ಯಾಟಿಂಗ್ ಅಬ್ಬರವನ್ನು ಕಂಡಾಗ ಅನುಮಾನಗಳ ಹುತ್ತ ಬೆಳೆದಿದ್ದಂತೂ ಸತ್ಯ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಜೇಯ ಶತಕ ಗಳಿಸಿ ಮಿಂಚಿದ್ದ ನ್ಯೂ ಸೌತ್ ವೇಲ್ಸ್ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (ಔಟಾಗದೆ 123; 68 ಎಸೆತ, 6 ಬೌಂಡರಿ, 11 ಸಿಕ್ಸರ್) ಬೆಂಗಳೂರು ವಿರುದ್ಧವೂ ಪ್ರಕಾಶಮಾನವಾಗಿ ಹೊಳೆದರು. ಚೆಂಡು ನುಗ್ಗಿಬರುವ ಗತಿಯನ್ನು ನಿಖರವಾಗಿ ತೂಗಿ ನೋಡಿ ಆಡುವ ಯಂತ್ರದಂತೆ ಕಾಣಿಸಿದ ವಾರ್ನರ್ ಆಟದಿಂದಲೇ ವೇಲ್ಸ್ ಜಯದ ಕಡೆಗೆ ಆಸೆಯಿಂದ ನೋಡಿತ್ತು.

ಬ್ಯಾಟಿಂಗ್ ಶಕ್ತಿಯ ಮೇಲೆ ವಿಶ್ವಾಸ ಹೊಂದಿದ್ದ ವೇಲ್ಸ್ ತಂಡದ ನಾಯಕ ಸೈಮನ್ ಕ್ಯಾಟಿಚ್ `ಟಾಸ್~ ಸೋತರೂ ಕಳೆಗುಂದಿರಲಿಲ್ಲ. ಆತಿಥೇಯ ತಂಡದ ಮುಂದೆ ದೊಡ್ಡ ಮೊತ್ತದ ಗುರಿಯನ್ನು ಇಡುವ ಹುಮ್ಮಸ್ಸು ಅವರಲ್ಲಿತ್ತು. ಆದ್ದರಿಂದಲೇ ಮೊದಲು ಬ್ಯಾಟಿಂಗ್ ಮಾಡಲು ಎದುರಾಳಿ ಪಡೆಯ ಮುಂದಾಳು ಡೇನಿಯಲ್ ವೆಟೋರಿ ನೀಡಿದ ಆಹ್ವಾನವನ್ನು ನಗುಮೊಗದಿಂದಲೇ ಸ್ವೀಕರಿಸಿದರು. ಚುಟುಕು ಕ್ರಿಕೆಟ್‌ನಲ್ಲಿ ರನ್‌ಗಳ ಗೋಪುರ ಕಟ್ಟುವುದು ಹೇಗೆನ್ನುವುದನ್ನು ತೋರಿಸಿಕೊಡುವ ರೀತಿಯಲ್ಲಿಯೇ ವೇಲ್ಸ್‌ನವರು ಆಡಿದರು.

ಹಂಸ ನಡೆಯು ಜಿಂಕೆಯ ಓಟವಾಗುವುದಕ್ಕೆ ವೇಲ್ಸ್ ಕಾಯ್ದಿದ್ದು ಒಂದೇ ಓವರ್. ಎರಡನೇ ಓವರ್ ಹೊತ್ತಿಗಾಗಲೇ ರನ್...ರನ್... ಎನ್ನುವ ನಿನಾದದ ಲಯ ಹಿಡಿದು ಓಡುವ ಅದರ ಉತ್ಸಾಹ ಚಾಲೆಂಜರ್ಸ್‌ಗೆ ಮಾತ್ರ ಆತಂಕಕಾರಿ. ಒತ್ತಡ ಹೆಚ್ಚುವ ಭಯದಲ್ಲಿ ಪ್ರೇಕ್ಷಕರಿಂದಲೂ ಅಸಮಾಧಾನದ ಕೂಗು. ಆ ಧ್ವನಿಗೆ ತಕ್ಕ ಸ್ಪಂದನೆ ಸಿಕ್ಕಿದ್ದು ತಿಲಕರತ್ನೆ ದಿಲ್ಶಾನ್ ಅವರಿಂದ. ಎರಡನೇ ಓವರ್‌ನಲ್ಲಿಯೇ ಸಿಂಹಳೀಯರ ನಾಡಿದ ಕ್ರಿಕೆಟಿಗ ಚೆಂಡನ್ನು ಗತಿ ಬದಲಿಸಿ ನೇರಕ್ಕೆ ಎಸೆದ. ಆಗಲೇ ವೇಲ್ಸ್ ಆರಂಭಿಕ ಆಟಗಾರ ಶೇನ್ ವ್ಯಾಟ್ಸನ್ ಆತುರ ಮಾಡಿದ್ದು. ಮುಗಿಲೆತ್ತರದಲ್ಲಿ ಚೆಂಡು ಗಡಿ ದಾಟುತ್ತದೆ ಎಂದುಕೊಂಡಿದ್ದ ಅವರು ಲಾಂಗ್ ಆನ್‌ನಲ್ಲಿ ಮೊಹಮ್ಮದ್ ಕೈಫ್‌ಗೆ ಕ್ಯಾಚ್ ನೀಡಿದ್ದರು.

ದಿಲ್ಶಾನ್ ಬಿಗುವಿನ ದಾಳಿಯು ಚಾಲೆಂಜರ್ಸ್ ಹುಮ್ಮಸ್ಸು ಹೆಚ್ಚಿಸಿದ್ದು ನಿಜ. ತಮ್ಮ ಪಾಲಿನ ನಾಲ್ಕು ಓವರುಗಳಲ್ಲಿ ಅವರು ನೀಡಿದ್ದು ಕೇವಲ 10 ರನ್. ಆದರೆ ವೇಲ್ಸ್‌ನ ಡೇವಿಡ್ ವಾರ್ನರ್ ಅವರನ್ನೂ ಪೆವಿಲಿಯನ್‌ಗೆ ಅಟ್ಟಬೇಕೆನ್ನುವ ಆಸೆ ಮಾತ್ರ ಈಡೇರಲಿಲ್ಲ. ದಿಲ್ಶಾನ್ ಎದುರು ತಣ್ಣಗಾಗಿದ್ದ ಎಡಗೈ ಬ್ಯಾಟ್ಸ್‌ಮನ್ ವಾರ್ನರ್ ಬಾಕಿ ಎಲ್ಲ ಬೌಲರ್‌ಗಳನ್ನು ದಂಡಿಸುವ ಧೈರ್ಯ ಮಾಡಿದರು. ಎರಡನೇ ವಿಕೆಟ್‌ನಲ್ಲಿ ಅವರಿಗೆ ಉತ್ತಮ ಸಾಥ್ ನೀಡಿದ್ದು ಡೇನಿಯಲ್ ಸ್ಮಿತ್. ವಿಶೇಷವೆಂದರೆ ಇವರಿಬ್ಬರದ್ದೂ ಆಕ್ರಮಣಕಾರಿ ಆಟ. ನಲ್ವತ್ತು ಎಸೆತಗಳಲ್ಲಿಯೇ ವಾರ್ನರ್ ಅರ್ಧ ಶತಕ ಪೂರ್ಣ.

ವಾರ್ನರ್‌ಗೆ ಸ್ಪರ್ಧೆ ನೀಡುವ ರೀತಿಯಲ್ಲಿ ಚೆಂಡನ್ನು ಬೌಂಡರಿಗೆ ಅಟ್ಟುತ್ತಾ ಸಾಗಿದ ಸ್ಮಿತ್‌ಗೆ ಚಾಲೆಂಜರ್ಸ್ ಬೌಲರ್‌ಗಳು ಕಠಿಣ ಸವಾಲು ಎನಿಸಲೇ ಇಲ್ಲ. ಸ್ಪಿನ್ ಇರಲಿ ವೇಗ ವಿರಲಿ, ಚೆಂಡು ಬೌಂಡರಿ ಕಡೆಗೆ ಮಾತ್ರ ಸಾಗಲಿ ಎನ್ನುವಂತೆ ಬ್ಯಾಟ್ ಬೀಸಿದ ಸಿಡ್ನಿಯ ಈ ಬ್ಯಾಟ್ಸ್‌ಮನ್ ಅರ್ಧ ಶತಕ ಪೂರೈಸಿದ್ದು ಕೇವಲ 33 ಎಸೆತಗಳಲ್ಲಿ. ವಾರ್ನರ್ ಮತ್ತು ಸ್ಮಿತ್ ಜೊತೆಯಾಟ ಬೆಳೆಸಿದಾಗ ವಿಜಯ್ ಮಲ್ಯ ಒಡೆತನದ ಚಾಲೆಂಜರ್ಸ್ ಪಡೆಯಲ್ಲಿ ನಡುಕ. ಈ ಜೊತೆಯಾಟ ಮುರಿಯಲು ಬಳಸಿದ ಬೌಲಿಂಗ್ ಅಸ್ತ್ರಗಳೆಲ್ಲ ಸುಸ್ತು! ಅಬ್ಬರದ ಅಲೆಯಾದ ವೇಲ್ಸ್ ಪಡೆಯು 98 ಎಸೆತಗಳಲ್ಲಿಯೇ ನೂರೈವತ್ತರ ಗಡಿಯನ್ನು ದಾಟಿದ್ದು ಆರ್‌ಸಿಬಿ ಪಾಲಿಗಂತೂ ಭಾರಿ ಆಪತ್ತು.
ಕೊನೆಗೂ ಎರಡನೇ ವಿಕೆಟ್ ಜೊತೆಯಾಟದ ಕೊಂಡಿ ಕಳಚಿ ಬೀಳುವ ಹೊತ್ತಿಗೆ ವೇಲ್ಸ್ ಒಟ್ಟು ಮೊತ್ತ 163 ರನ್ ಆಗಿತ್ತು. ಸ್ಮಿತ್ (62; 42 ಎ., 7 ಬೌಂಡರಿ, 3 ಸಿಕ್ಸರ್) ಬೌಲ್ಡ್ ಆಗಿದ್ದು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿರುವ ಕನ್ನಡದ ಹುಡುಗ ಶ್ರೀನಾಥ್ ಅರವಿಂದ್ ಎಸೆತದಲ್ಲಿ.

ಸ್ಮಿತ್ ನಿರ್ಗಮಿಸಿದರೂ ಇನ್ನೊಂದು ಕೊನೆಯಲ್ಲಿದ್ದ ವಾರ್ನರ್ ತಾವೆದುರಿಸಿದ 62ನೇ ಎಸೆತದಲ್ಲಿ ಶತಕ ಪೂರ್ಣಗೊಳಿಸಿಯೇ ಬಿಟ್ಟರು. ಅಷ್ಟೇ ಅಲ್ಲ ಈ ಟೂರ್ನಿಯಲ್ಲಿ ಹನ್ನೊಂದು ಸಿಕ್ಸರ್ ಸಿಡಿಸಿದ ದಾಖಲೆ ಶ್ರೇಯವನ್ನೂ ಪಡೆದ ಅವರು ಚಾಂಪಿಯನ್ಸ್ ಲೀಗ್‌ನಲ್ಲಿ ಒಂದರ ಹಿಂದೊಂದು ಶತಕ ಗಳಿಸಿದ ಹಿರಿಮೆಯ ಗರಿಯನ್ನೂ ಕಿರೀಟಕ್ಕೆ ಸಿಕ್ಕಿಸಿಕೊಂಡರು.

ಸ್ಕೋರ್ ವಿವರ:

ನ್ಯೂ ಸೌತ್ ವೇಲ್ಸ್: 20 ಓವರುಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 203
ಶೇನ್ ವ್ಯಾಟ್ಸನ್ ಸಿ ಕೈಫ್ ಬಿ ತಿಲಕರತ್ನೆ ದಿಲ್ಶಾನ್  03
ಡೇವಿಡ್ ವಾರ್ನರ್ ಔಟಾಗದೆ  123
ಡೇನಿಯಲ್ ಸ್ಮಿತ್ ಬಿ ಶ್ರೀನಾಥ್ ಅರವಿಂದ್  62
ಬೆನ್ ರೊಹ್ರೆರ್ ಔಟಾಗದೆ  07
ಇತರೆ: (ಬೈ-1, ಲೆಗ್‌ಬೈ-2, ವೈಡ್-5)  08
ವಿಕೆಟ್ ಪತನ: 1-17 (ಶೇನ್ ವ್ಯಾಟ್ಸನ್; 2.4), 2-163 (ಡೇನಿಯಲ್ ಸ್ಮಿತ್; 17.1).
ಬೌಲಿಂಗ್: ತಿಲಕರತ್ನೆ ದಿಲ್ಶಾನ್ 4-0-10-1, ಡರ್ಕ್ ನಾನೆಸ್ 4-0-51-0 (ವೈಡ್-4), ಡೇನಿಯಲ್ ವೆಟೋರಿ 3-0-29-0, ಕ್ರಿಸ್ ಗೇಲ್ 1-0-14-0, ಶ್ರೀನಾಥ್ ಅರವಿಂದ್ 4-0-55-1 (ವೈಡ್-1), ರಾಜು ಭಟ್ಕಳ್ 4-0-41-0   
ರಾಯಲ್ ಚಾಲೆಂಜರ್ಸ್ ಬೆಂಗಳೂರು: 18.3 ಓವರುಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 204
ಕ್ರಿಸ್ ಗೇಲ್ ಎಲ್‌ಬಿಡಬ್ಲ್ಯು ಪ್ಯಾಟ್ ಕಮಿನ್ಸ್  92
ದಿಲ್ಶಾನ್ ಸಿ ಮೋಸೆಸ್ ಹೆನ್ರಿಕ್ಸ್ ಬಿ ಪ್ಯಾಟ್ ಕಮಿನ್ಸ್  04
ವಿರಾಟ್ ಕೊಹ್ಲಿ ಔಟಾಗದೆ  84
ಸೌರಭ್ ತಿವಾರಿ ಬಿ ಪ್ಯಾಟ್ ಕಮಿನ್ಸ್  00
ಮಯಾಂಕ್ ಸಿ ಡೇನಿಯಲ್ ಸ್ಮಿತ್ ಬಿ ಪ್ಯಾಟ್ ಕಮಿನ್ಸ್ 07
ಮೊಹಮ್ಮದ್ ಕೈಫ್ ಔಟಾಗದೆ  13
ಇತರೆ: (ವೈಡ್-3, ನೋಬಾಲ್-1)  04
ವಿಕೆಟ್ ಪತನ: 1-21 (ತಿಲಕರತ್ನೆ ದಿಲ್ಶಾನ್; 2.5), 2-162 (ಕ್ರಿಸ್ ಗೇಲ್; 13.5), 3-162 (ಸೌರಭ್ ತಿವಾರಿ; 13.6), 4-172 (ಮಯಾಂಕ್ ಅಗರ್ವಾಲ್; 15.2).
ಬೌಲಿಂಗ್: ಸ್ಟುವರ್ಟ್ ಕ್ಲಾರ್ಕ್ 4-0-31-0, ಮೈಕಲ್ ಸ್ಟಾರ್ಕ್ 3-0-41-0, ಪ್ಯಾಟ್ ಕಮಿನ್ಸ್ 4-0-45-4 (ನೋಬಾಲ್-1, ವೈಡ್-2), ಸ್ಟೀವ್ ಓಕೀಫ್ 2-0-26-0 (ವೈಡ್-1), ಮೋಸೆಸ್ ಹೆನ್ರಿಕ್ಸ್ 2-0-24-0, ಸ್ಟೀವನ್ ಸ್ಮಿತ್ 2.3-0-24-0, ಡೇವಿಡ್ ವಾರ್ನರ್ 1-0-13-0
ಫಲಿತಾಂಶ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 6 ವಿಕೆಟ್‌ಗಳ ಗೆಲುವು.
ಪಂದ್ಯ ಶ್ರೇಷ್ಠ: ವಿರಾಟ್ ಕೊಹ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT