ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ಸ್ ಲೀಗ್: ಗೆಲುವಿನ ವಿಶ್ವಾಸದಲ್ಲಿ ಸೂಪರ್ ಕಿಂಗ್ಸ್

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೇಪ್‌ಟೌನ್ (ಪಿಟಿಐ): ಮೊದಲ ಪಂದ್ಯದಲ್ಲಿ ಎದುರಾದ ಸೋಲಿನ ನಿರಾಸೆಯಿಂದ ಹೊರಬರುವ ಪ್ರಯತ್ನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯಲ್ಸ್ ಲೀಗ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ಮಂಗಳವಾರ ಹೈವೆಲ್ಡ್ ಲಯನ್ಸ್ ವಿರುದ್ಧ ಪೈಪೋಟಿ ನಡೆಸಲಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗ 14 ರನ್‌ಗಳಿಂದ ಸಿಡ್ನಿ ಸಿಕ್ಸರ್ಸ್‌ ಎದುರು ಪರಾಭವಗೊಂಡಿತ್ತು. ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಚೆನ್ನೈ ಬೌಲಿಂಗ್‌ನಲ್ಲಿ ವೈಫಲ್ಯ ಅನುಭವಿಸಿತ್ತು. ಈ ಕಾರಣ ಇಂದಿನ ಪಂದ್ಯದಲ್ಲಿ ಬೌಲಿಂಗ್ ವಿಭಾಗದತ್ತ ಹೆಚ್ಚಿನ ಗಮನ ನೀಡುವ ಸಾಧ್ಯತೆಯಿದೆ.

ಬೆನ್ ಹಿಲ್ಫೆನಾಸ್ ಮತ್ತು ಡಗ್ ಬೋಲಿಂಜರ್ ಅವರಂತಹ ಬೌಲರ್‌ಗಳಿದ್ದರೂ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಕಡಿವಾಣ ತೊಡಿಸುವಲ್ಲಿ ವಿಫಲವಾಗಿತ್ತು. ಸ್ಪಿನ್ನರ್‌ಗಳಾದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಮಾತ್ರ ಅಲ್ಪ ಪ್ರಭಾವಿ ಎನಿಸಿದ್ದರು. ಆದರೆ ಕೊನೆಯ ಆರು ಓವರ್‌ಗಳಲ್ಲಿ ಹೆಚ್ಚಿನ ರನ್ ಬಿಟ್ಟುಕೊಟ್ಟದ್ದು ಮುಳುವಾಗಿ ಪರಿಣಮಿಸಿತ್ತು.

ಲಯನ್ಸ್ ವಿರುದ್ಧದ ಪಂದ್ಯದಲ್ಲಿ ದೋನಿ ತಂಡದಲ್ಲಿ ಕೆಲವೊಂದು ಬದಲಾವಣೆಗೆ ಮುಂದಾಗುವುದು ಖಚಿತ. ಮೊದಲ ಪಂದ್ಯದಲ್ಲಿ ವಿಫಲರಾಗಿದ್ದ ಯೋ ಮಹೇಶ್ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯುವುದು ಅನುಮಾನ. ತಮ್ಮ ಮೊದಲ ಓವರ್‌ನಲ್ಲಿ 18 ರನ್ ಬಿಟ್ಟುಕೊಟ್ಟಿದ್ದ ಅವರಿಗೆ ದೋನಿ ಮತ್ತೆ ಚೆಂಡು ನೀಡಿರಲಿಲ್ಲ.

ಮತ್ತೊಂದೆಡೆ ಲಯನ್ಸ್ ತಂಡ ಆತ್ಮವಿಶ್ವಾಸದಲ್ಲಿದೆ. ಏಕೆಂದರೆ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಈ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಆಘಾತ ನೀಡಿತ್ತು. ನೀಲ್ ಮೆಕೆಂಜಿ ಮತ್ತು ಕಿಂಟಾನ್ ಡಿ ಕಾಕ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ತಂಡ ಎಂಟು ವಿಕೆಟ್‌ಗಳ ಜಯ ಸಾಧಿಸಿತ್ತು.

ಅದೇ ರೀತಿ ಡಿರ್ಕ್ ನಾನೆಸ್ ಒಳಗೊಂಡಂತೆ ಲಯನ್ಸ್ ತಂಡದ ಬೌಲರ್‌ಗಳು ಮುಂಬೈ ಎದುರು ಶಿಸ್ತಿನ ದಾಳಿ ನಡೆಸಿದ್ದರು. ಎಡಗೈ ವೇಗಿ ನಾನೆಸ್ ತಮ್ಮ ನಾಲ್ಕು ಓವರ್‌ಗಳಲ್ಲಿ ಕೇವಲ 15 ರನ್ ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದಿದ್ದರು. ಚೆನ್ನೈ ತಂಡದ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕಕ್ಕೆ ನಾನೆಸ್ ಕಡಿವಾಣ ತೊಡಿಸುವರೇ ಎಂಬುದನ್ನು ನೋಡಬೇಕು.

ಚೆನ್ನೈ ತಂಡ ಬ್ಯಾಟಿಂಗ್‌ನಲ್ಲಿ ಸುರೇಶ್ ರೈನಾ ಅವರನ್ನು ನೆಚ್ಚಿಕೊಂಡಿದೆ. ಈ ಎಡಗೈ ಬ್ಯಾಟ್ಸ್‌ಮನ್ ಸಿಡ್ನಿ ಸಿಕ್ಸರ್ಸ್‌ ವಿರುದ್ಧ ಆಕರ್ಷಕ ಆಟವಾಡಿದ್ದರು. ಮುರಳಿ ವಿಜಯ್, ಮೈಕ್ ಹಸ್ಸಿ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ ಅವರಿಂದಲೂ ತಂಡ ಉತ್ತಮ ಪ್ರದರ್ಶನ ನಿರೀಕ್ಷಿಸುತ್ತಿದೆ.

ಇಂದಿನ ಪಂದ್ಯಗಳು
ಸಿಡ್ನಿ ಸಿಕ್ಸರ್ಸ್‌- ಯಾರ್ಕ್‌ಷೈರ್
ಆರಂಭ: ಸಂಜೆ 5.00ಕ್ಕೆ
ಚೆನ್ನೈ ಸೂಪರ್ ಕಿಂಗ್ಸ್- ಲಯನ್ಸ್
ಆರಂಭ: ರಾತ್ರಿ 9.00ಕ್ಕೆ
ಸ್ಥಳ: ಕೇಪ್‌ಟೌನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT