ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ಸ್ ಲೀಗ್: ಗೆಲುವಿನ ಹೊಸ್ತಿಲಲ್ಲಿ ಎಡವಿದ ಆರ್‌ಸಿಬಿ

Last Updated 23 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೊನೆಯ ಎಸೆತದವರೆಗೂ ಗೆಲುವು ಯಾರಿಗೆ ಎನ್ನುವ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಆರ್‌ಸಿಬಿ ನಿರಾಸೆ ಅನುಭವಿಸಬೇಕಾಯಿತು. ಅಶ್ವೆಲ್ ಪ್ರಿನ್ಸ್ ಹಾಗೂ ಜಾನ್ ಬೋಥಾ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾದ ವಾರಿಯರ್ಸ್ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮೂರು ವಿಕೆಟ್ ಗೆಲುವು ಸಾಧಿಸಿತು.

ಆರ್‌ಸಿಬಿ ನೀಡಿದ್ದ 173 ರನ್‌ಗಳ ಮೊತ್ತ ವಾರಿಯರ್ಸ್ ತಂಡಕ್ಕೆ ಸವಾಲು ಎನ್ನಿಸಿದ್ದು ನಿಜ. ಇದಕ್ಕೆ ಅಭಿಮನ್ಯು ಮಿಥುನ್ ಕೊನೆಯಲ್ಲಿ ಮಾಡಿದ ಪರಿಣಾಮಕಾರಿ ಬೌಲಿಂಗ್ ಕಾರಣವಾಯಿತು. ಆದರೆ ಕೊನೆಯ ಎಸೆತದಲ್ಲಿ ಅಗತ್ಯವಿದ್ದ ಎರಡು ರನ್ ಪೇರಿಸಿದ ವೇಯ್ನ ಪಾರ್ನೆಲ್ ಆರ್‌ಸಿಬಿ ಗೆಲುವಿನ ಆಸೆಯನ್ನು ನುಚ್ಚು ನೂರು ಮಾಡಿದರು. ವಾರಿಯರ್ಸ್ ತಂಡದ `ಹೀರೋ~ ಎನಿಸಿಕೊಂಡರು.

39 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಪ್ರಿನ್ಸ್ ಆರ್‌ಸಿಬಿ ಬೌಲರ್‌ಗಳನ್ನು ಚಚ್ಚಿದರು. ಸೊಗಸಾದ ಬ್ಯಾಟಿಂಗ್ ಮಾಡಿ ಆರು ಬೌಂಡರಿ, ಮೂರು ಸಿಕ್ಸರ್ ಸೇರಿದಂತೆ ಒಟ್ಟು 74 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರಿಗೆ ಬೋಥಾ (42, 24ಎಸೆತ, 2 ಬೌಂ, 3 ಸಿಕ್ಸರ್) ಉತ್ತಮ ಸಾಥ್ ನೀಡಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಜಾನುಬಾಹು ಆಟಗಾರ ಕ್ರೀಸ್ ಗೇಲ್ ಕಿಕ್ಕಿರಿದು ತುಂಬಿದ್ದ ಕ್ರೀಡಾಭಿಮಾನಿಗಳ ನಡುವೆ ಕೇಂದ್ರ ಬಿಂದುವಾಗಿದ್ದರು. ಗೇಲ್ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ ನಿಜ. ಆದರೆ ಕ್ರೀಸ್‌ನಲ್ಲಿ ಇದ್ದಷ್ಟು ಹೊತ್ತು ಕ್ರಿಕೆಟ್ ಪ್ರೇಮಿಗಳನ್ನು ಖುಷಿಯಾಗಿರಿಸಿದರು. ಇದಕ್ಕೆ ವಿರಾಟ್ ಕೊಹ್ಲಿ  ಸಾಥ್ ನೀಡಿದರು. ಈ ಪರಿಣಾಮವಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 172 ರನ್ ಗಳಿಸಿತು.

ಕೊನೆಯಲ್ಲಿ ರನ್ ಗಳಿಸಲು ಪರದಾಡಿದ ಆರ್‌ಸಿಬಿ ಕೊನೆಯ 14 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಈ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು ರಸ್ಟಿ ಥೆರಾನ್. ಮೂರು ಓವರ್‌ಗಳಲ್ಲಿ 29 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿ ಆರ್‌ಸಿಬಿ ತಂಡಕ್ಕೆ ಪೆಟ್ಟು ನೀಡಿದರು. ಗೇಲ್ ಔಟಾದ ನಂತರ ಕೊಹ್ಲಿ ತಂಡಕ್ಕೆ ಆಸರೆಯಾದರು. ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಕೊಹ್ಲಿ 4 ಬೌಂಡರಿ ಸೇರಿದಂತೆ 34 ರನ್ ಗಳಿಸಿದರು.

ಮೊದಲ 50 ರನ್ ಗಳಿಸಲು ತಗೆದುಕೊಂಡಿದ್ದು ಕೇವಲ 31 ಎಸೆತ. ನಂತರ ಚುರುಕಿನ ಬೌಲಿಂಗ್ ಮಾಡಿದ ವಾರಿಯರ್ಸ್ ಆರ್‌ಸಿಬಿ ತಂಡದ ರನ್ ಗಳಿಕೆಗೆ ನಿಧಾನವಾಗಿ ಕಡಿವಾಣ ಹಾಕಿತು. ಆರ್‌ಸಿಬಿಯ ಒಟ್ಟು ಮೊತ್ತ 100 ಆಗಿದ್ದಾಗ 72 ಎಸೆತಗಳಾಗಿದ್ದವು.

ಈ ಸಲದ ಚಾಂಪಿಯನ್ಸ್ ಲೀಗ್‌ನಲ್ಲಿ ಅತ್ಯಧಿಕ ರನ್ ಪೇರಿಸಿದ ಗೌರವ ವಾರಿಯರ್ಸ್ ತಂಡದ್ದಾಯಿತು. ಹೈದಾರಾಬಾದ್‌ನಲ್ಲಿ ನಡೆದ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ 168 ರನ್ ಗರಿಷ್ಠ ಮೊತ್ತವಾಗಿತ್ತು.
ರಂಗೇರಿದ ಕ್ರೀಡಾಂಗಣ: ಚಾಂಪಿಯನ್ಸ್ ಲೀಗ್‌ನ ಚೊಚ್ಚಲ ಪಂದ್ಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ರಂಗೇರಿತ್ತು. ಚಿಯರ್ ಬೆಡಗಿಯರ ನೃತ್ಯಕ್ಕೆ ಹೆಜ್ಜೆ ಹಾಕಿದ ಅಭಿಮಾನಿಗಳು ನಿಂತಲ್ಲೆ ಕುಣಿದು ಸಂಭ್ರಮಿಸಿದರು. ಎಲ್ಲಿ ನೋಡಿದರಲ್ಲೂ ಆರ್‌ಸಿಬಿ ತಂಡದ ಧ್ವಜಗಳು ರಾರಾಜಿಸಿದವು.

ಚೆಂಡು ಬೌಂಡರಿ ಗೆರೆ ದಾಟಿದಾಗ ಬಾಣ ಬಿರುಸುಗಳು ಆಗಸದತ್ತ ಮುಖ ಮಾಡಿದವು. ಆಗ ಅವರ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿತ್ತು. ಇದಕ್ಕೆ ಚಿಯರ್ ಬೆಡಗಿಯರು ನೃತ್ಯದ ಮೂಲಕ ರಂಗು ತುಂಬಿದರು. ಗುರುವಾರ ನಿಧನರಾದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರಿ ಒಂದು ನಿಮಿಷ ಉಭಯ  ತಂಡಗಳ ಆಟಗಾರರು ಶ್ರದ್ದಾಂಜಲಿ ಸಲ್ಲಿಸಿದರು.


ಸ್ಕೋರ್ ವಿವರ :

ರಾಯಲ್ ಚಾಲೆಂಜರ್ಸ್ 20 ಓವರ್‌ಗಳಲ್ಲಿ  8 ವಿಕೆಟ್‌ಗೆ 172
ಕ್ರಿಸ್ ಗೇಲ್ ಸಿ ಜಾನ್ ಬೋಥಾ ಬಿ ವೇಯ್ನ ಪಾರ್ನೆಲ್  23
ಮಯಂಕ್ ಅಗರವಾಲ್ ಸಿ ಇಂಗ್ರಾಮ್ ಬಿ ಸೊಸೊಬೆ  00
ವಿರಾಟ್ ಕೊಹ್ಲಿ  ಸಿ ಪಾರ್ನೆಲ್ ಬಿ ರಸ್ಟಿ ಥೆರಾನ್  34
ಎ.ಬಿ. ಡಿವಿಲಿಯರ್ಸ್ ಸಿ ಲೊನ್ವಾಬೊ ಬಿ. ಜಾನ್ ಬೋಥಾ  31
ಸೌರಭ್ ತಿವಾರಿ  ಸಿ ಜಸ್ಟಿನ್ ಕ್ರೂಶ್ ಬಿ ನಿಕಿ ಬೋಯೆ  28
ಮೊಹಮ್ಮದ್ ಕೈಫ್ ಸಿ ವೇಯ್ನೆ ಪಾರ್ನೆಲ್ ಬಿ ರಸ್ಟಿ ಥೆರಾನ್ 26
ಡೇನಿಯಲ್ ವೆಟೋರಿ ಸಿ ಪ್ರಿನ್ಸ್ ಬಿ ರಸ್ಟಿ ಥೆರಾನ್  08
ಅಭಿಮನ್ಯು ಮಿಥುನ್ ಸಿ ಸೊಸೊಬೆ ಬಿ ರಸ್ಟಿ ಥೆರಾನ್  04
ಸಯ್ಯದ್ ಮೊಹಮ್ಮದ್ ಔಟಾಗದೇ  06
ಎಸ್. ಅರವಿಂದ್ ಔಟಾಗದೇ  01
ಇತರೆ: ಬೈ-1, ಲೆಗ್ ಬೈ-2, ವೈಡ್-8  11 
ವಿಕೆಟ್ ಪತನ: 1-1 (ಮಯಂಕ್; 0.3), 2-34 (ಗೇಲ್ 3.4), 3-86(ಕೊಹ್ಲಿ 10.3), 4-113 (ಡಿವಿಲಿಯರ್ಸ್; 13.2), 5-130 (ತಿವಾರಿ 15.5), 6-158 (ವೆಟೋರಿ 18.1), 7-160 (ಕೈಫ್ 18.4), 8-164 (ಮಿಥುನ್ 18.6)
ಬೌಲಿಂಗ್: ಲೊನ್ವಾಬೊ ಸೊಸೊಬೆ 3-0-31-1, ರಸ್ಟಿ ಥೆರಾನ್ 3-0-29-4, ವೇಯ್ನ ಪಾರ್ನೆಲ್ 4-0-32-1, ಜಾನ್ ಬೋಥಾ 4-0-36-1, ನಿಕಿ ಬೋಯೆ 4-0-25-1, ಜಾನ್ ಸ್ಮಟ್ಸ್ 2-0-16-0
ವಾರಿಯರ್ಸ್ 20 ಓವರ್‌ಗಳಲ್ಲಿ  7 ವಿಕೆಟ್ 173
ಜಾನ್ ಸ್ಮಟ್ಸ್ ಸಿ ವಿರಾಟ್ ಕೊಹ್ಲಿ ಬಿ ಎಸ್.ಅರವಿಂದ್  12
ಅಶ್ವೆಲ್ ಪ್ರಿನ್ಸ್  ಸಿ ಡಿರ್ಕ್ ನಾನೆಸ್ ಬಿ ಅಭಿಮನ್ಯು ಮಿಥುನ್  74
ಕಾಲಿನ್ ಇಂಗ್ರಾಮ್ ಸಿ ಮಿಥುನ್ ಬಿ ಡೇನಿಯಲ್ ವೆಟೋರಿ  15
ಮಾರ್ಕ್ ಬೌಷರ್ ಎಲ್‌ಬಿಡಬ್ಲ್ಯು ಸಯ್ಯದ್ ಮೊಹಮ್ಮದ್  01
ಜಸ್ಟಿನ್ ಕ್ರೂಶ್ ಸಿ. ಎಸ್. ಅರವಿಂದ್ ಬಿ ಡೇನಿಯಲ್ ವೆಟೋರಿ 06
ಜಾನ್ ಬೋಥಾ  ಸಿ ವಿರಾಟ್ ಕೊಹ್ಲಿ ಬಿ ಎಸ್. ಅರವಿಂದ್  42
ಕ್ರೆಗ್ ತಯ್ಸೆನ್  ಸಿ. ಡಿವಿಲಿಯರ್ಸ್ ಬಿ. ಅಭಿಮನ್ಯು ಮಿಥುನ್  04
ನಿಕಿ ಬೊಯೆ ಔಟಾಗದೇ  07
ವೇಯ್ನೆ ಪಾರ್ನೆಲ್ ಔಟಾಗದೇ  06
ಇತರೆ: (ಲೆಗ್ ಬೈ-1, ವೈಡ್5)  06
ವಿಕೆಟ್ ಪತನ: 1-38 (ಸ್ಮಟ್ಸ್ 5.1), 2-57 (ಇಂಗ್ರಾಮ್ 7.3), 3-59 (ಬೌಷರ್; 8.4), 4-82 (ಕ್ರೂಶ್ 11.5), 5-155 (ಪ್ರಿನ್ಸ್ 18.2), 6-160 (ತಯ್ಸೆನ್ 18.5), 7-166 (ಬೋಥಾ 19.3)
ಬೌಲಿಂಗ್: ಕ್ರಿಸ್ ಗೇಲ್ 4-0-43-0, ಎಸ್.ಅರವಿಂದ್ 4-0-32-2, ಡಿರ್ಕ್ ನಾನೆಸ್ 4-0-31-0, ಡೇನಿಯಲ್ ವೆಟೋರಿ 4-0-26-2, ಜಮಾಲ್ದ್ದುದೀನ್ ಸಯ್ಯದ್ ಮೊಹಮ್ಮದ್ 2-0-15-1, ಅಭಿಮನ್ಯು ಮಿಥುನ್ 2-0-25-2.
ಫಲಿತಾಂಶ: ವಾರಿಯರ್ಸ್‌ಗೆ 3 ವಿಕೆಟ್ ಜಯ; ಪಂದ್ಯ ಶ್ರೇಷ್ಠ: ಪ್ರಿನ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT