ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ಸ್ ಲೀಗ್: ಮುಂಬೈ ಇಂಡಿಯನ್ಸ್ ಚಾಂಪಿಯನ್

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಚೆನ್ನೈ: ಫೈನಲ್‌ನಲ್ಲಿ ಕ್ರಿಸ್ ಗೇಲ್ ಆಟ ನಡೆಯಲಿಲ್ಲ. ಹಾಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲಲಿಲ್ಲ! ಚಾಂಪಿಯನ್ ಆಗುವ ಭರವಸೆಯೊಂದಿಗೆ ಕಣಕ್ಕಿಳಿದಿದ್ದ ವಿಜಯ್ ಮಲ್ಯ ಮಾಲೀಕತ್ವದ ಆರ್‌ಸಿಬಿ ಫೈನಲ್‌ನಲ್ಲಿ ಠುಸ್ ಆಯಿತು.

ಆದರೆ ಫೈನಲ್‌ನಲ್ಲಿ ಅದೃಷ್ಟ ಒಲಿದಿದ್ದು ಮುಂಬೈ ಇಂಡಿಯನ್ಸ್‌ಗೆ. ಹಾಗಾಗಿ ಮುಖೇಶ್ ಅಂಬಾನಿ ಒಡೆತನದ ಈ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ನೂತನ ಚಾಂಪಿಯನ್. ಗಾಯದ ಕಾರಣ ಆಡದಿದ್ದರೂ ತಂಡದೊಂದಿಗಿದ್ದ ಸಚಿನ್ ತೆಂಡೂಲ್ಕರ್ ಅವರ ಮಾರ್ಗದರ್ಶನ ಹಾಗೂ ಹರಭಜನ್ ಸಿಂಗ್ ಅವರ ಚಾಣಾಕ್ಷತನದ ನಾಯಕತ್ವ ಮುಂಬೈ ಇಂಡಿಯನ್ಸ್‌ಗೆ ವರದಾನವಾಗಿ ಪರಿಣಮಿಸಿತು.

ಈ ಟೂರ್ನಿಯ ಫೈನಲ್‌ನಲ್ಲಿ 31 ರನ್‌ಗಳಿಂದ ಆರ್‌ಸಿಬಿ ತಂಡವನ್ನು ಬಗ್ಗುಬಡಿದ ಮುಂಬೈ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಟ್ರೋಫಿ ಎತ್ತಿ ಹಿಡಿಯಿತು.

ಭಜ್ಜಿ ಪಡೆ ಪೇರಿಸಿದ್ದ 139 ರನ್‌ಗಳ ಮೊತ್ತ ಬೆಂಗಳೂರಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿತು. ಸೆಮಿಫೈನಲ್ ಹಾಗೂ ಅದಕ್ಕೂ ಮೊದಲಿನ ಲೀಗ್ ಪಂದ್ಯದಲ್ಲಿ 200ಕ್ಕೂ ಅಧಿಕ ಮೊತ್ತವನ್ನು ಬೆನ್ನಟ್ಟಿ ಗೆಲುವು ಸಾಧಿಸಿದ್ದ ಆರ್‌ಸಿಬಿ ಫೈನಲ್‌ನಲ್ಲಿ ಅಲ್ಪ ಗುರಿ ಎದುರು ಎಡವಿತು.

ಈ ಗುರಿಯನ್ನು ಆದಷ್ಟು ಬೇಗನೆ ಮುಟ್ಟಬೇಕು ಎನ್ನುವ ಅವಸರದಲ್ಲಿ ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ ಅವರ ವಿಕೆಟ್‌ಅನ್ನು ಬೇಗನೇ ಕಳೆದುಕೊಂಡಿತು. ಇವರಿಬ್ಬರ ವಿಕೆಟ್ ಪತನ ಈ ತಂಡವನ್ನು ಸೋಲಿನ ಹಾದಿ ಹಿಡಿಸಿತು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್‌ಗೆ ಮುಂದಾದ ಮುಂಬೈ ಕೂಡ ವೇಗವಾಗಿ ರನ್ ಗಳಿಸುವ ಆತುರದಲ್ಲಿ ವಿಕೆಟ್ ಒಪ್ಪಿಸಿದ್ದೇ  ಹೆಚ್ಚು. ಈ ಪರಿಣಾಮ ಮುಂಬೈ 20 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಗಳಿಸಿದ್ದು 139 ರನ್ ಮಾತ್ರ.

ಈ ಟೂರ್ನಿಯಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಡೇನಿಯಲ್ ವೆಟೋರಿ ಪಡೆಯ ಬೌಲಿಂಗ್ ಅಷ್ಟೊಂದು ಪರಿಣಾಮಕಾರಿ ಎನಿಸಿರಲಿಲ್ಲ. ಆದರೆ ಫೈನಲ್ ಪಂದ್ಯದಲ್ಲಿ ಹಾಗಾಗಲಿಲ್ಲ. ಆರ್‌ಸಿಬಿ ಬೌಲರ್‌ಗಳು ಆರಂಭದಿಂದಲೇ ಬಿಗುವಿನ ದಾಳಿ ನಡೆಸಿದರು.

ಮೂರನೇ ವಿಕೆಟ್‌ಗೆ ಅಂಬಟಿ ರಾಯಡು (22, 21ಎಸೆತ, 1ಬೌಂ, 1ಸಿಕ್ಸರ್) ಹಾಗೂ ಜೇಮ್ಸ ಫ್ರಾಂಕ್ಲಿನ್ 41 ರನ್‌ಗಳ ಜೊತೆಯಾಟವಾಡಿ ತಂಡವನ್ನು ಆಪತ್ತಿನಿಂದ ಪಾರು ಮಾಡಿದರು. ಸೊಗಸಾದ ಬ್ಯಾಟಿಂಗ್ ಮಾಡಿದ ಫ್ರಾಂಕ್ಲಿನ್ ಕೇವಲ 29 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದಂತೆ  41 ರನ್ ಗಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT