ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ಸ್ ಲೀಗ್; ವಾರಿಯರ್ಸ್‌ಗೆ ಸತತ ಎರಡನೇ ಜಯ

Last Updated 25 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಜಾನ್ ಟ್ರೆವರ್ ಸ್ಮಟ್ಸ್ (88) ತೋರಿದ ಸೊಗಸಾದ ಆಟದ ನೆರವಿನಿಂದ ವಾರಿಯರ್ಸ್ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ತನ್ನದಾಗಿಸಿಕೊಂಡಿತು.

ಇಲ್ಲಿಗೆ ಸಮೀಪದ ಉಪ್ಪಳದಲ್ಲಿರುವ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ `ಬಿ~ ಗುಂಪಿನ ಪಂದ್ಯದಲ್ಲಿ ವಾರಿಯರ್ಸ್ 50 ರನ್‌ಗಳಿಂದ ಸೌತ್ ಆಸ್ಟ್ರೇಲಿಯಾ ರೆಡ್‌ಬ್ಯಾಕ್ಸ್ ತಂಡವನ್ನು ಮಣಿಸಿತು.

ದಕ್ಷಿಣ ಆಫ್ರಿಕದ ವಾರಿಯರ್ಸ್ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವು ಪಡೆದಿತ್ತು. ಸತತ ಎರಡನೇ ಜಯ ಸಾಧಿಸಿರುವ ಕಾರಣ ಈ ತಂಡದ ಸೆಮಿಫೈನಲ್ ಪ್ರವೇಶದ ಸಾಧ್ಯತೆ ಹೆಚ್ಚಿದೆ.

ಕಠಿಣ ಗುರಿ ಬೆನ್ನಟ್ಟಿದ ಸೌತ್ ಆಸ್ಟ್ರೇಲಿಯಾ ಯಾವ ಹಂತದಲ್ಲೂ ಗೆಲುವಿನ ಭರವಸೆ ಮೂಡಿಸಲಿಲ್ಲ. ವಾರಿಯರ್ಸ್ ಬೌಲರ್‌ಗಳ ಶಿಸ್ತಿನ ದಾಳಿ ಇದಕ್ಕೆ ಕಾರಣ. ಲೊನ್ವಾಬೊ ಸೊಸೊಬೆ (30ಕ್ಕೆ 2) ಒಳಗೊಂಡಂತೆ ಎಲ್ಲ ಬೌಲರ್‌ಗಳು ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದರು.

35 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ತಂಡಕ್ಕೆ ಮತ್ತೆ ಚೇತರಿಸಿಕೊಳ್ಳಲು ಆಗಲಿಲ್ಲ. ಮಿಷೆಲ್ ಕ್ಲಿಂಗರ್ (34) ಮತ್ತು ಡೇನಿಯಲ್ ಕ್ರಿಸ್ಟಿಯನ್ (ಔಟಾಗದೆ 28) ಮಾತ್ರ ಅಲ್ಪ ಹೋರಾಟ ನಡೆಸಿದರು. 

ಮಿಂಚಿದ ಸ್ಮಟ್ಸ್: ವಾರಿಯರ್ಸ್ ತಂಡದ ಉತ್ತಮ ಮೊತ್ತಕ್ಕೆ ಕಾರಣ ಆರಂಭಿಕ         ಬ್ಯಾಟ್ಸ್‌ಮನ್ ಟ್ರೆವರ್ ಸ್ಮಟ್ಸ್. ಅವರು 65 ಎಸೆತಗಳಲ್ಲಿ 88 ರನ್ ಗಳಿಸಿದರು. 10 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಇದರಲ್ಲಿ ಒಳಗೊಂಡಿದ್ದವು.

ವಾರಿಯರ್ಸ್‌ನ ಆರಂಭ ಉತ್ತಮವಾಗಿರಲಿಲ್ಲ. ಕಳೆದ ಪಂದ್ಯದ ಹೀರೊ ಆಶ್ವೆಲ್ ಪ್ರಿನ್ಸ್ (3) ಬೇಗನೇ ಔಟಾದರು. ಆಗ ತಂಡದ ಮೊತ್ತ 10. ಈ ಹಂತದಲ್ಲಿ ಸ್ಮಟ್ಸ್ ತಂಡದ ರಕ್ಷಣೆಗೆ ನಿಂತರು. ಅವರಿಗೆ ಕಾಲಿನ್ ಇನ್‌ಗ್ರಾಮ್ ಮತ್ತು ಮಾರ್ಕ್ ಬೌಷರ್‌ರಿಂದ ಉತ್ತಮ ಸಾಥ್ ಲಭಿಸಿತು.

ಎರಡನೇ ವಿಕೆಟ್‌ಗೆ ಸ್ಮಟ್ಸ್ ಹಾಗೂ ಕಾಲಿನ್ ಇನ್‌ಗ್ರಾಮ್ (30, 24 ಎಸೆತ, 3 ಬೌಂ, 1 ಸಿಕ್ಸರ್) 73 ರನ್‌ಗಳನ್ನು ಕಲೆಹಾಕಿದರು. ಇದಕ್ಕೆ ತೆಗೆದುಕೊಂಡದ್ದು 52 ಎಸೆತಗಳನ್ನು ಮಾತ್ರ. 11ನೇ ಓವರ್‌ನಲ್ಲಿ ಇನ್‌ಗ್ರಾಮ್ ಔಟಾದರೂ ವಾರಿಯರ್ಸ್ ತಂಡದ ರನ್ ವೇಗಕ್ಕೆ ಕಡಿವಾಣ ಬೀಳಲಿಲ್ಲ.

ಬಳಿಕ ಬಂದ ಮಾರ್ಕ್ ಬೌಷರ್ (34, 26 ಎಸೆತ, 3 ಬೌಂ, 1 ಸಿಕ್ಸರ್) ಕೂಡಾ ಎದುರಾಳಿ ಬೌಲರ್‌ಗಳ ಮೇಲೆ ದಂಡೆತ್ತಿ ಹೋದರು ಸ್ಮಟ್ಸ್ ಮತ್ತು ಬೌಷರ್ ಮೂರನೇ ವಿಕೆಟ್‌ಗೆ 80 ರನ್‌ಗಳನ್ನು ಕಲೆಹಾಕಿದರು. ಇದರಿಂದ ಸೌತ್ ಆಸ್ಟ್ರೇಲಿಯಾ ತಂಡದ ಬೌಲರ್‌ಗಳ ದಿಕ್ಕುತಪ್ಪಿತು.

ತಮ್ಮ ಮೊದಲ ಓವರ್‌ನಲ್ಲಿ ವಿಕೆಟ್ ಪಡೆದರೂ ಶಾನ್ ಟೇಟ್ ನಾಲ್ಕು ಓವರ್‌ಗಳಲ್ಲಿ 53 ರನ್‌ಗಳನ್ನು ಬಿಟ್ಟುಕೊಟ್ಟರು. ಹ್ಯಾರಿಸ್ (23ಕ್ಕೆ 2) ಅಲ್ಪ ಪ್ರಭಾವಿ ಎನಿಸಿದರು.

ಸಂಕ್ಷಿಪ್ತ ಸ್ಕೋರ್: ವಾರಿಯರ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 171 (ಜಾನ್ ಟ್ರೆವರ್ ಸ್ಮಟ್ಸ್ 88, ಕಾಲಿನ್ ಇನ್‌ಗ್ರಾಮ್ 30, ಮಾರ್ಕ್ ಬೌಷರ್ 34, ಡೇನಿಯಲ್ ಹ್ಯಾರಿಸ್ 23ಕ್ಕೆ 2, ಡೇನಿಯಲ್ ಕ್ರಿಸ್ಟಿಯನ್ 24ಕ್ಕೆ 2). ಸೌತ್ ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 121 (ಮಿಷೆಲ್ ಕ್ಲಿಂಗರ್ 34, ಡೇನಿಯಲ್ ಕ್ರಿಸ್ಟಿಯನ್ ಔಟಾಗದೆ 26, ಕ್ಯಾಮರೂನ್ ಬಾರ್ಗಸ್ 18,  ಲೊನ್ವಾಬೊ ಸೊಸೊಬೆ 30ಕ್ಕೆ 2, ಜಾನ್ ಟ್ರೆವರ್ ಸ್ಮಟ್ಸ್ 16ಕ್ಕೆ1, ರಸ್ಟಿ ಥೆರಾನ್ 21ಕ್ಕೆ 1, ಜಾನ್ ಬೋಥಾ 11ಕ್ಕೆ 1). ಫಲಿತಾಂಶ: ವಾರಿಯರ್ಸ್‌ಗೆ 50 ರನ್ ಜಯ, ಪಂದ್ಯಶ್ರೇಷ್ಠ: ಟ್ರೆವರ್ ಸ್ಮಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT