ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆ ಸಂಪೂರ್ಣ ಸ್ತಬ್ಧ

Last Updated 7 ಅಕ್ಟೋಬರ್ 2012, 8:25 IST
ಅಕ್ಷರ ಗಾತ್ರ

ಚಾಮರಾಜನಗರ: ತಮಿಳುನಾಡಿಗೆ ಬಿಡುತ್ತಿರುವ ಕಾವೇರಿ ನೀರು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಶನಿವಾರ ಕನ್ನಡ ಒಕ್ಕೂಟ ಕರೆ ನೀಡಿದ್ದ `ಕರ್ನಾಟಕ ಬಂದ್~ ಜಿಲ್ಲೆಯಲ್ಲಿ ಸಂಪೂರ್ಣ ಯಶಸ್ವಿಯಾಯಿತು.

ಬಂದ್ ಬಹುತೇಕ ಶಾಂತಿಯುತವಾಗಿತ್ತು. ಹೋಟೆಲ್, ದಿನಸಿ ಅಂಗಡಿ ಸೇರಿದಂತೆ ಔಷಧಿ ಅಂಗಡಿಗಳನ್ನು ಬಂದ್ ಮಾಡಿ ವ್ಯಾಪಾರಸ್ಥರು ಬಂದ್‌ಗೆ ಅಭೂತಪೂರ್ವ ಬೆಂಬಲ ಸೂಚಿಸಿದರು. ಬಂದ್ ಮುನ್ಸೂಚನೆ ಹಿನ್ನೆಲೆಯಲ್ಲಿ ನಾಗರಿಕರು ಪರದಾಡುವ ಪರಿಸ್ಥಿತಿ ಸೃಷ್ಟಿಯಾಗಲಿಲ್ಲ. ವಿವಿಧ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ಆರಂಭಿಸುವ ಮೊದಲೇ ವ್ಯಾಪಾರಸ್ಥರು ಅಂಗಡಿಗಳಿಗೆ ಬೀಗ ಜಡಿದಿದ್ದರು. ಹೀಗಾಗಿ, ಗಡಿ ಜಿಲ್ಲೆ ಸಂಪೂರ್ಣ ಸ್ತಬ್ಧಗೊಂಡಿತ್ತು.

ಜನ ಸಂಚಾರ ಹೆಚ್ಚಿರುವ ಸ್ಥಳಗಳಾದ ಚಿಕ್ಕಅಂಗಡಿ, ದೊಡ್ಡಅಂಗಡಿ ಬೀದಿ, ಜೋಡಿರಸ್ತೆ, ಡಿವಿಯೇಷನ್ ರಸ್ತೆಯಲ್ಲಿ ಸಂಚಾರ ವಿರಳವಾಗಿತ್ತು. ಮುಂಜಾಗ್ರ ತೆಯಾಗಿ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತದಿಂದ ರಜೆ ಘೋಷಿಸಲಾಗಿತ್ತು. ಬ್ಯಾಂಕ್‌ಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ವಹಿವಾಟು ಸ್ತಬ್ಧಗೊಂಡಿತ್ತು. ಎಟಿಎಂ ಕೇಂದ್ರಗಳ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.

ಸರ್ಕಾರಿ ಕಚೇರಿ, ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದ್ದವು. ಆದರೆ, ಕೆಮಿಸ್ಟ್ ಮತ್ತು ಡ್ರಗಿಸ್ಟ್ ಅಸೋಸಿಯೇಷನ್ ಕೂಡ ಬಂದ್‌ಗೆ ಬೆಂಬಲ ಘೋಷಿಸಿದ್ದ ಹಿನ್ನೆಲೆಯಲ್ಲಿ ಔಷಧಿ ಅಂಗಡಿಗಳು ಕಾರ್ಯ ನಿರ್ವಹಿಸಲಿಲ್ಲ. ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶನ ಇರಲಿಲ್ಲ.

ಪೆಟ್ರೋಲ್ ಬಂಕ್‌ಗಳನ್ನು ಬಂದ್ ಮಾಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಸಂತೇಮರಹಳ್ಳಿ, ಗುಂಡ್ಲುಪೇಟೆ, ಭುವನೇಶ್ವರಿ ವೃತ್ತದಲ್ಲಿ ಪೊಲೀಸ್ ತುಕಡಿ ನಿಯೋಜಿಸಲಾಗಿತ್ತು. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಹಾಗೂ ಆಟೋ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ, ಬಸ್‌ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.

ಟೈರ್ ಸುಟ್ಟು ಆಕ್ರೋಶ
ಜಿಲ್ಲಾ ಕೇಂದ್ರದಲ್ಲಿ ಎಲ್ಲ ಸಂಘಟನೆಗಳು ಒಗ್ಗೂಡಿ ಪ್ರತಿಭಟನಾ ಮೆರವಣಿಗೆ ನಡೆಸಲಿಲ್ಲ. ಬದಲಾಗಿ ತಮ್ಮ ಸಮಯಕ್ಕೆ ಅನುಗುಣವಾಗಿ ಮೆರವಣಿಗೆ ನಡೆಸಿದರು.

ಬೆಳಿಗ್ಗೆಯೇ ಜಿಲ್ಲಾ ಕನ್ನಡ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ, ಭುವನೇಶ್ವರಿ ವೃತ್ತ, ಗುಂಡ್ಲುಪೇಟೆ ವೃತ್ತ ಹಾಗೂ ಸಂತೇಮರಹಳ್ಳಿ ವೃತ್ತದಲ್ಲಿ ಟೈರ್ ಸುಟ್ಟು ನೀರು ಬಿಡುಗಡೆಯನ್ನು ಸ್ಥಗಿತಗೊಳಿಸಬೇಕು ಎಂದು ಆಕ್ರೋಶ ಮೊಳಗಿಸಿದರು.

ಪ್ರಮುಖ ರಸ್ತೆಗಳಲ್ಲಿ ಬೈಕ್ ಮೂಲಕ ರ‌್ಯಾಲಿ ನಡೆಸಿ ಕೇಂದ್ರ, ರಾಜ್ಯ ಸರ್ಕಾರ ಹಾಗೂ ತಮಿಳುನಾಡು ವಿರುದ್ಧ ಘೋಷಣೆ ಕೂಗಿದರು.

ಮೈಸೂರಿನಿಂದ ಜಿಲ್ಲಾ ಕೇಂದ್ರಕ್ಕೆ ಬೆಳಿಗ್ಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ತಡೆದರು. ಬಳಿಕ ಮೈಸೂರಿಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ತಡೆದು ಪ್ರತಿಭಟನೆ ನಡೆಸಿದರು. ಮುಖಂಡರಾದ ಶಾ. ಮುರುಳಿ, ಚಾ.ರಂ. ಶ್ರೀನಿವಾಸಗೌಡ, ಸುರೇಶ್‌ನಾಯಕ, ಚಾ.ಗು. ನಾಗರಾಜು, ರಾಜ್‌ಗೋಪಾಲ್ ಪಾಲ್ಗೊಂಡಿದ್ದರು.

ರೈತ ಸಂಘ ಜಾಥಾ
ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾದ ಜಿಲ್ಲಾ ಘಟಕ, ವರ್ತಕರ ಸಂಘ, ಕೆಮಿಸ್ಟ್ ಮತ್ತು   ಡ್ರಗಿಸ್ಟ್ ಅಸೋಸಿಯೇಷನ್‌ನಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.

ಕೇಂದ್ರ, ರಾಜ್ಯ ಸರ್ಕಾರ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು. ಮುಖಂಡರಾದ ಎ.ಎಂ. ಮಹೇಶ್‌ಪ್ರಭು, ಎ. ಜಯಸಿಂಹ, ಸೈಯದ್ ಆರೀಫ್ ಪ್ರತಿಭಟನೆಯ ನೇತೃತ್ವವಹಿಸಿದ್ದರು.

ರೈತ ಹಿತರಕ್ಷಣಾ ಸಮಿತಿ ಆಕ್ರೋಶ
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಕಾರ್ಯಕರ್ತರು ಭುವನೇಶ್ವರಿ ವೃತ್ತದಲ್ಲಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಆಲೂರು ಮಲ್ಲು, ಮಲ್ಲೇಶ್, ಬಸವನಪುರ ರಾಜಶೇಖರ್, ಕೋಡಿಮೋಳೆ ಗೋವಿಂದಶೆಟ್ಟಿ, ಸಿ.ಆರ್. ಮಹೇಶ್ ಪಾಲ್ಗೊಂಡಿದ್ದರು.

ಜಿಲ್ಲಾ ಮತ್ತು ತಾಲ್ಲೂಕು ಸವಿತಾ ಸಮಾಜ ಸಂಘ, ದಾಸಬಣಜಿಗರ ಸಂಘದ ಸದಸ್ಯರು ಹಾಗೂ ರಾಜಸ್ತಾನ ಸಮಾಜದ ಮುಖಂಡರು ಮೆರವಣಿಗೆ ನಡೆಸಿ ಗಮನ ಸೆಳೆದರು. ಸವಿತಾ ಸಮಾಜದ ಮುಖಂಡರಾದ ಸಿ.ಎನ್. ನಂಜೇದೇವರು, ಕೆ.ಎಲ್. ಮಂಜುನಾಥ್, ವೆಂಕಟರಾಜು, ಎನ್. ಸುಂದರ್ ಪಾಲ್ಗೊಂಡಿದ್ದರು.

ವಹಿವಾಟು ಸ್ಥಗಿತ: ಸಂಘಟನೆಗಳ ಜಾಥಾ

ಗುಂಡ್ಲುಪೇಟೆ: ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿರುವುದನ್ನು ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಶನಿವಾರ ನೀಡಲಾಗಿದ್ದ ಕರ್ನಾಟಕ ಬಂದ್‌ಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಪಟ್ಟಣದ ಅಂಗಡಿ ಮುಂಗಟ್ಟುಗಳು, ಚಿತ್ರಮಂದಿರಗಳು, ಪೆಟ್ರೋಲ್ ಬಂಕ್‌ಗಳು, ಸಾರಿಗೆ ಬಸ್ ಸಂಚಾರ ಸೇರಿದಂತೆ ಎಲ್ಲಾ ವಹಿವಾಟು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ಸೂಚಿಸಿದವು.

ತಾಲ್ಲೂಕಿನ ವಿವಿಧ ಕನ್ನಡ ಪರ ಸಂಘಟನೆಗಳಾದ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಕಾವಲು ಪಡೆ ಹಾಗೂ ಜಯ ಕರ್ನಾಟಕ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುರೇಶ್ ಮಾತನಾಡಿ, ಕಾವೇರಿ ನೀರು ಬಿಟ್ಟಿರುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು. ನೀರು ಬಿಡುವುದನ್ನು ನಿಲ್ಲಿಸದಿದ್ದಲ್ಲಿ ಉಗ್ರ ಹೋರಾಟ ಹಮ್ಮಿ ಕೊಳ್ಳಲಾಗುವುದು. ರಾಜ್ಯದ ರೈತರ ಸ್ಥಿತಿ ಕಷ್ಟದಿಂದ ಕೂಡಿದೆ, ಕರ್ನಾಟಕದಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಇದ್ದರೂ ತಮಿಳುನಾಡಿಗೆ ನೀರು ಬಿಡುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರಿ ಸೌಮ್ಯದ ಕಚೇರಿಗಳಾದ ಅಂಚೆ ಕಚೇರಿ, ದೂರವಾಣಿ ಇಲಾಖೆಯ ಕಚೇರಿಗಳಿಗೆ ವಿಶೇಷ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆಯ ರಮೇಶ್‌ನಾಯಕ್, ಸುರೇಶ್‌ನಾಯಕ್, ಕರ್ನಾಟಕ ಕಾವಲು ಪಡೆಯ ತಾಲ್ಲೂಕು ಘಟಕದ ಅಧ್ಯಕ್ಷ ಗುರು, ಜಯ ಕರ್ನಾಟಕ ಸಂಘಟನೆಯ ಮೋಹನ್ ಹಾಗೂ ಕಾರ್ಯಕರ್ತರು ಹಾಜರಿದ್ದರು.

ಬೃಹತ್ ಪ್ರತಿಭಟನಾ ಮೆರವಣಿಗೆ

ಕೊಳ್ಳೇಗಾಲ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆಯನ್ನು ವಿರೋಧಿಸಿ ತಾಲ್ಲೂಕು ಕಾವೇರಿ-ಕಬಿನಿ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಶನಿವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಏರ್ಪಡಿಸಲಾಗಿತ್ತು.

ಹೊಸ ಬಸ್‌ನಿಲ್ದಾಣದಿಂದ ಪಟ್ಟಣದ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತು ರೈತರನ್ನೊಳಗೊಂಡು ಬೃಹತ್ ಪ್ರತಿಭಟನಾ ಮೆರವಣಿಗೆ ಪ್ರಾರಂಭಗೊಂಡು ಪಟ್ಟಣದ ಮುಖ್ಯ ಬೀದಿಯಲ್ಲಿ ಸಂಚರಿಸಿತು.
ತರಕಾರಿಮಾರುಕಟ್ಟೆ ದೊಡ್ಡ ಮಸೀದಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರೈತ ಮೂಖಂಡರು ಕಾವೇರಿ ನದಿ ನೀರು ಬಿಡುಗಡೆ ಬಗ್ಗೆ ಮಾತನಾಡಿದರು. ನಂತರ ತಾಲ್ಲೂಕು ಕಚೇರಿಗೆ ಮೆರವಣಿಗೆ ತೆರಳಿದರು.

ತಾಲ್ಲೂಕು ಕಚೇರಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಶೂನ್ಯಕೃಷಿ ತಜ್ಞ ಕೈಲಾಸ್‌ಮೂರ್ತಿ, ರೈತ ಮುಖಂಡ ಅಣಗಳ್ಳಿ ಬಸವರಾಜು, ಮತೀನ್, ನಟರಾಜ್‌ಮಾಳಿಗೆ, ನಂಜಪ್ಪ, ನರಸಿಂಹನ್ ಇತರರು ಮಾತನಾಡಿದರು.
ಕರ್ನಾಟಕ ರಾಜ್ಯ ಕಬ್ಬುಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗುರುಸ್ವಾಮಿ, ಚಿನ್ನಸ್ವಾಮಿಮಾಳಿಗೆ, ನಂಜಪ್ಪ, ಪರಮೇಶ್, ರಾಘವನ್, ಶಿವರಾಜ್‌ಕುಮಾರ್ ಸಂಘದ ಪ್ರಭು, ಬೇಂದ್ರ ಕನ್ನಡ ಸಂಘದ ಚಂದ್ರಚೂಡ,

ಡಾ.ರಾಜ್‌ಕುಮಾರ್ ಅಭಿಮಾನಿ ಸಂಘದ ರಂಗಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚಾಮರಾಜು, ಬಸವರಾಜು, ರಾಜಶೇಖರಮೂರ್ತಿ, ಚಂದ್ರು, ಮಹಾದೇವಪ್ಪ, ನಾರಾಯಣ್ ಇತರರು ಪಾಲ್ಗೊಂಡಿದ್ದರು.

ಸಂಪೂರ್ಣ ಬಂದ್: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸಿ ಶನಿವಾರ ನಡೆದ ಬಂದ್ ಯಶಸ್ವಿಯಾಯಿತು. ಬಂದ್ ಪ್ರಯುಕ್ತ ಅಂಗಡಿ         ಮುಂಗಟ್ಟುಗಳು, ಚಲನಚಿತ್ರಮಂದಿರಗಳು, ಪೆಟ್ರೋಲ್‌ಬಂಕ್, ಶಾಲಾ ಕಾಲೇಜುಗಳು, ಖಾಸಗಿ ಮತ್ತು ಸರ್ಕಾರಿ ಬಸ್‌ಗಳು ಸಂಪೂರ್ಣವಾಗಿ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಹನೂರಿನಲ್ಲಿ ಅಂಗಡಿ-ಮುಂಗಟ್ಟು ಬಂದ್
ಕೊಳ್ಳೇಗಾಲ:
ಹನೂರಿನಲ್ಲಿ ಕರ್ನಾಟ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಬಂದ್ ಅಂಗವಾಗಿ ಪಟ್ಟಣದ ಎಲ್ಲಾ ಅಂಗಡಿಮುಂಗಟ್ಟುಗಳು,ಶಾಲಾಕಾಲೇಜುಗಳು, ಪೆಟ್ರೋಲ್‌ಬಂಕ್ ಹೋಟೆಲ್‌ಗಳು ಮುಚ್ಚಿದ್ದವು.

ರಕ್ಷಣಾವೇದಿಕೆ, ವಿಶ್ವಮಾನವ ಒಕ್ಕಲಿಗರ ಸಂಘ, ಅಂಬೇಡ್ಕರ್ ಸಂಘ, ಕರ್ನಾಟಕ ತಮಿಳು ಜನರ ಹಿತರಕ್ಷಣಾ ಸಮಿತಿ, ಮಹಿಳಾ ಸಂಘಗಳು, ಆಟೋ ಮತ್ತು ಕಾರುಚಾಲಕರು ಮತ್ತು ಮಾಲೀಕರ ಸಂಘ ರೋಟರಿ ಸಂಸ್ಥೆ, ಹಾಲು ಉತ್ಪಾದಕರ ಸಂಘ, ಗೌಮ್ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಬಂದ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ತೆರಳಿ ಪ್ರತಿಭಟನಾಕಾರರ ಹೆಚ್ಚುವರಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ರಕ್ಷಣಾ ವೇದಿಕೆ ಅಧ್ಯಕ್ಷ ಮಂಜೇಶ್, ಜಯಪ್ರಕಾಶ್‌ಗುಪ್ತ, ವೆಂಕಟರಮಣ ನಾಯ್ಡು, ಮಾದೇಶ್, ಚಿಕ್ಕತಮ್ಮಯ್ಯ, ಅರಸಪ್ಪನ್, ಕಿರಣ್ ರಮೇಶ್‌ನಾಯ್ಡು, ಪುಟ್ಟಯ್ಯ, ಬಾಲರಾಜ್‌ನಾಯ್ಡು, ನಾಗರಾಜು ಇತರರು ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು. ಅಜ್ಜೀಪುರ, ರಾಮಾಪುರ, ಕೌದಳ್ಳಿ ಗ್ರಾಮ ಗಳಲ್ಲಿಯೂ ಸಹ ಅಂಗಡಿ ಮುಚ್ಚಿ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಕಲಾಪ ಬಹಿಷ್ಕಾರ
ಕೊಳ್ಳೇಗಾಲ:
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕೊಳ್ಳೇಗಾಲ ತಾಲ್ಲೂಕು ವಕೀಲರ ಸಂಘದ ವತಿಯಿಂದ ವಕೀಲರು ಶುಕ್ರವಾರ ಮತ್ತು ಶನಿವಾರ ಕೋರ್ಟ್ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.

ಮಾದಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ವಕೀಲರು ತಮಿಳುನಾಡಿಗೆ ನೀರು ಬೀಡುತ್ತಿರುವ ಕ್ರಮವನ್ನು ವಕೀಲರು ಖಂಡಿಸಿದರು. ಎಸ್.ನಾಗರಾಜು, ಡಿ.ಬಸವರಾಜು, ಶಶಿಬಿಂಬ, ಬಸವಣ್ಣ, ನಿರ್ಮಲ, ಗೌರಮ್ಮಣ್ಣಿ, ಮೋಹನ್, ಮಹೇಶ್, ಅಶೋಕ್, ಮಹಾದೇವಸ್ವಾಮಿ ಇದ್ದರು.

ಯಳಂದೂರು: ವಹಿವಾಟು ಸ್ಥಗಿತ

ಯಳಂದೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ವಿವಿಧ ಸಂಘಟನೆಗಳು ಶನಿವಾರ ನೀಡಿದ್ದ ಕರ್ನಾಟಕ ಬಂದ್ ಯಳಂದೂರು ಪಟ್ಟಣದಲ್ಲಿ ಸಂಪೂರ್ಣ ಯಶಸ್ವಿಯಾಯಿತು.
ಪಟ್ಟಣದಲ್ಲಿ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು. ಪ್ರಮುಖ ರಸ್ತೆಗಳು ವಾಹನ ಹಾಗೂ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.

ಬಹುತೇಕ ಕಚೇರಿಗಳಲ್ಲಿ ಅಧಿಕಾರಿಗಳ ಗೈರುಹಾಜರಾತಿ ಎದ್ದು ಕಾಣುತ್ತಿದ್ದು ವಿವಿಧ ಕನ್ನಡ ಪರ ಸಂಘಟನೆಗಳ ಸದಸ್ಯರು ಬಿಎಸ್ಸೆನ್ನೆಲ್ ಹಾಗೂ ಅಂಚೆ ಕಚೇರಿ ಬಾಗಿಲು ಹಾಕಿ ಪ್ರತಿಭಟಿಸಿದರು.ನಾಡಮೇಗಮ್ಮನವರ ದೇಗುಲದಿಂದ ಕರ್ನಾಟಕ ರಕ್ಷಣಾ ವೇದಿಕೆ, ಡಾ.ರಾಜ್‌ಕುಮಾರ್ ಅಭಿಮಾನಿ ಬಳಗ, ಜಯ ಕರ್ನಾಟಕ ಸಂಘಟನೆ ಹಾಗೂ ರೈತ ಸಂಘ ಮತ್ತು ಹಸಿರು ಸೇನೆ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು ಕೇಂದ್ರ, ರಾಜ್ಯ ಹಾಗೂ ತಮಿಳುನಾಡು ಸರ್ಕಾರಗಳ ವಿರುದ್ಧ ಧಿಕ್ಕಾರಗಳನ್ನು ಕೂಗುತ್ತ ಬಳೇಪೇಟೆಯೂ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಂತರ ತಹಶೀಲ್ದಾರ್ ಶಿವನಾಗಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರೈತ ಮುಖಂಡ ಹೊನ್ನೂರು ಪ್ರಕಾಶ್ ರಾಜ್ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ಧೇಶ್ ಕರವೇಯ ಚಂದ್ರಮೌಳಿ, ಪ್ರಕಾಶ್, ಮುಖಂಡರಾದ ಶಾಂತರಾಜು, ಉಮಾಶಂಕರ್, ಮಹಾದೇವಶೆಟ್ಟಿ, ಸ್ಟೋಡಿಯೋ ರಾಜು, ಜಯ ಕರ್ನಾಟಕ ವೇದಿಕೆಯ ನಟರಾಜು ಸೇರಿದಂತೆ ಪ್ರಮುಖರು ಮಾತನಾಡಿದರು.

ಮುಖಂಡರಾದ ಆರ್. ಗೋಪಾಲಕೃಷ್ಣ, ಸಿದ್ಧಲಿಂಗಸ್ವಾಮಿ, ಶ್ರೀಕಂಠ, ಶಂಕರ್, ಮಂಜು, ಅನಿಲ್, ಗಣೇಶ್, ಕಲೀಂಉಲ್ಲಾ, ಗಿರಿ, ವಿನಯ್, ಶ್ರೀನಿವಾಸ್ ಸೇರಿದಂತೆ ನೂರಾರು ಜನರು ಹಾಜರಿದ್ದರು.

ಚಿಣ್ಣರ ಪ್ರತಿಭಟನೆ: ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ಪಟ್ಟಣದ ವರಹಾರಾವ್ ಬೀದಿಯಲ್ಲಿರುವ ಚಿಣ್ಣರೂ ಕೂಡ ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಧಿಕ್ಕಾರಗಳನ್ನು ಕೂಗಿ ಪ್ರತಿಭಟನೆ ನಡೆಸಿ ಗಮನ ಸೆಳೆದರು. ನಂತರ ತಮ್ಮ ಬೀದಿಯ ಮನೆಗಳ ಮುಂದೆ ಕಾವೇರಿ ನದಿ ನೀರಿನ ಬಗ್ಗೆ ಜಾಗೃತಿ ಮೂಡಿಸಿ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT