ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರಿತ್ರಿಕ ವಿಕ್ರಮ

ಗಣಿತಜ್ಞನ ಇತಿಹಾಸದ ಹಾದಿ
Last Updated 20 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಗೌಹಾರ್ ಜಾನ್ ಎಂಬ ಇತಿಹಾಸದ ಪುಟದೊಳಗೆ ದಾಖಲಾಗದ ಐತಿಹಾಸಿಕ ಪ್ರತಿಭೆಯ ಜಾಡು ಹಿಡಿದ ಬೆಂಗಳೂರಿನ ಈ ಯುವಕನಿಗೆ ನೂರಾರು ಅಚ್ಚರಿಗಳು ಎದುರಾದವು. ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ಗ್ರಾಮಾಫೋನ್‌ಗೆ ಹಾಡಿದ ಗಾಯಕಿ ಗೌಹಾರ್ ಜಾನ್. ಬರವಣಿಗೆಗೆ ಪೂರಕವಾಗಲೆಂದು ಆ ಗಾಯಕಿಯ ಗ್ರಾಮಾಫೋನ್ ತಟ್ಟೆಗಳನ್ನು ಕಲೆಹಾಕತೊಡಗಿದ ಅವರೀಗ ಅಂಥ ನೂರಾರು ಕಲಾವಿದರ ಅಪರೂಪದ, ಅಮೂಲ್ಯ ಹಾಡುಗಳ ದನಿಮುದ್ರಿಕೆಗಳನ್ನು ಒಟ್ಟುಗೂಡಿಸಿದ್ದಾರೆ.

ಗ್ರಾಮಾಫೋನ್‌ನಲ್ಲಿ ಓಡುತ್ತಾ ಹಾಡುತ್ತಿದ್ದ ತಟ್ಟೆಗಳಿಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿ ಡಿಜಿಟೈಸ್ ರೂಪ ನೀಡಿದ್ದಾರೆ. www.archiveofindianmusic.org ಎಂಬ ವೆಬ್‌ಸೈಟ್ ಪ್ರವೇಶಿಸಿದರೆ ಅದ್ಭುತ ಸಂಗೀತ ಭಂಡಾರವೇ ತೆರೆದುಕೊಳ್ಳುತ್ತದೆ. ಬೆಂಗಳೂರು ನಾಗರತ್ನಮ್ಮ, ಕೊಡುಮುಡಿ ಬಾಲಾಂಬ ಸುಂದರಾಂಬಾಳ್, ಟಿ. ಚೌಡಯ್ಯ, ಉಸ್ತಾದ್ ಇಮ್ದಾದ್ ಖಾನ್, ಉಸ್ತಾದ್ ಅಬ್ದುಲ್ ಕರೀಮ್ ಖಾನ್, ಬಿಡಾರಂ ಕೃಷ್ಣಪ್ಪ ಹೀಗೆ ಇತಿಹಾಸದ ಪುಟಕ್ಕೆ ಸೇರಿಹೋದ ಖ್ಯಾತನಾಮರ ಹಾಡುಗಳ ಖಜಾನೆ ಈ ವೆಬ್‌ಸೈಟ್. ಇದಕ್ಕೆ ಸ್ಫೂರ್ತಿಯಾಗಿದ್ದು ಗೌಹಾರ್ ಜಾನ್.

ಯಾರು ಈ ಗೌಹಾರ್ ಜಾನ್? ಆಕೆಯ ಬದುಕನ್ನು ಅಕ್ಷರ ರೂಪದಲ್ಲಿ ಚಿತ್ರಿಸಲು ಊಟ ನಿದ್ದೆ ಬಿಟ್ಟು ಈ ಯುವಕ ಊರಿಂದೂರಿಗೆ ನಿರಂತರ ಅಲೆದಾಡಿದ ಕಾರಣವೇನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವಾಗಿರುವುದು ವಿಕ್ರಮ್ ಸಂಪತ್ ಎಂಬ ಮತ್ತೊಂದು ಪ್ರತಿಭೆ. ದೂರದರ್ಶನದಲ್ಲಿ ಆಗ `ಸೋರ್ಡ್ ಆಫ್ ಟಿಪ್ಪು ಸುಲ್ತಾನ್' ಧಾರಾವಾಹಿ ಪ್ರಸಾರವಾಗುತ್ತಿತ್ತು.

ನಾವು ಓದಿದ, ಕೇಳಿದ ಮೈಸೂರು ರಾಜಮನೆತನದ ಇತಿಹಾಸ ಒಂದು ಬಗೆಯಾದರೆ ಧಾರಾವಾಹಿಯಲ್ಲಿ ತೋರಿಸುತ್ತಿದ್ದ ಒಡೆಯರ್ ಆಡಳಿತ ಚಿತ್ರಣವೇ ಬೇರೆ. ಅವರನ್ನು ಅವಹೇಳನಕಾರಿಯಾಗಿ ಬಿಂಬಿಸುವ ಧಾರಾವಾಹಿ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆದವು. ಅದನ್ನೆಲ್ಲಾ ನೋಡಿದ ಏಳನೇ ತರಗತಿಯಲ್ಲಿದ್ದ ಹುಡುಗನಲ್ಲಿ ಕುತೂಹಲ ಜೀವ ತಳೆಯಿತು.

ಆಗ ಆತನ ಮನದಲ್ಲಿದ್ದದ್ದು ಧಾರಾವಾಹಿಯಲ್ಲಿ ಲೇವಡಿಗೆ ತುತ್ತಾದ ಮಹಾರಾಜ ಇಮ್ಮಡಿ ಕೃಷ್ಣರಾಜ ಒಡೆಯರ್ ಮತ್ತು ರಾಣಿ ಲಕ್ಷ್ಮಿ ಅಮ್ಮಣ್ಣಿ ಅವರ ಕಾಲಘಟ್ಟ. ಮೈಸೂರಿನ ಒಡೆಯರ್ ವಂಶದ ಇತಿಹಾಸದ ಹಲವಾರು ಹೊತ್ತಿಗೆಗಳ ಪುಟ ತಿರುವಿದರೂ ಎಲ್ಲವೂ ಅಪೂರ್ಣ ಎನಿಸತೊಡಗಿತು. ಆ ಸೆಳೆತಕ್ಕೆ ಕಾರಣವೇನೋ ಗೊತ್ತಿಲ್ಲ. ಶನಿವಾರ, ಭಾನುವಾರ ಅಥವಾ ಯಾವುದಾದರೂ ರಜೆ ಬಂತೆಂದರೆ ಮೈಸೂರಿಗೆ ಪಯಣ. ಅಲ್ಲಿನ ಅರಮನೆ, ಗ್ರಂಥಾಲಯ, ಸಂಗ್ರಹಾಲಯಗಳಲ್ಲಿ ಸಿಕ್ಕಿದ್ದೆಲ್ಲವನ್ನೂ ಓದತೊಡಗಿದರು.

ಮೈಸೂರು ರಾಜ ವಂಶಸ್ಥರ ಬಗ್ಗೆ ಇದುವರೆಗೆ ಓದಿರುವ ಪುಸ್ತಕಗಳಲ್ಲಿಲ್ಲದ ಅನೇಕ ಸಂಗತಿಗಳು ಕತ್ತಲಲ್ಲೇ ಉಳಿದಿವೆ ಎಂಬ ಸತ್ಯ ಅರಿವಾಯಿತು. ಒಬ್ಬ ಮಹಾರಾಜರ ಕುರಿತು ಹೊತ್ತಿಕೊಂಡ ಆಸಕ್ತಿ ಇಡೀ ರಾಜಮನೆತನದತ್ತ ವ್ಯಾಪಿಸಿತು. ಒಂದೆರಡಲ್ಲ, ಹತ್ತಾರು ವರ್ಷ ಅಧ್ಯಯನ ಸಾಗಿತು. ಒಡೆಯರ್ ರಾಜಮನೆತನದ ಸಾಂಸ್ಕೃತಿಕ ಕೊಡುಗೆಗಳನ್ನು ಹೊತ್ತ ಕೃತಿಯೂ ರಚನೆಯಾಯಿತು. `ಸ್ಪ್ಲೆಂಡರ್ಸ್ ಆಫ್ ರಾಯಲ್ ಮೈಸೂರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಒಡೆಯರ್ಸ್' ಮೈಸೂರು ಒಡೆಯರ್ ರಾಜಮನೆತನದ ಕಲೆ, ಸಾಹಿತ್ಯ, ಸಂಸ್ಕೃತಿ, ಆಡಳಿತ ಕೊಡುಗೆಗಳ ಕುರಿತ ಅನುಕ್ತ ವಿಚಾರಗಳನ್ನು ತೆರೆದಿಟ್ಟಿತು.

ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಎರಡಕ್ಕೂ ಅಜಗಜಾಂತರ. ಅತ್ತ ಉದ್ಯೋಗದ ಒತ್ತಡ, ಇತ್ತ ಆಸಕ್ತಿ ಎರಡನ್ನೂ ಸಂಭಾಳಿಸಿಕೊಂಡು ಸಾಗುತ್ತಿರುವ ವಿಕ್ರಮ್ ಸಂಪತ್‌ರ ಯಶೋಗಾಥೆ ಅಚ್ಚರಿ ಮೂಡಿಸುತ್ತದೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಅವರು ಶ್ರೀ ಅರಬಿಂದೋ ಶಾಲೆ ಮತ್ತು ಬಿಷಪ್ ಕಾಟನ್ ಬಾಯ್ಸ ಸ್ಕೂಲ್‌ಗಳಲ್ಲಿ ಶಿಕ್ಷಣ ಪಡೆದರು. ಕೇಂದ್ರೀಯ ಶಾಲೆಯಲ್ಲಿ ಅಧ್ಯಯನ ಮಾಡಿದ ವಿಕ್ರಮ್ 12ನೇ ತರಗತಿಯಲ್ಲಿದ್ದಾಗ ಹಿಂದಿ ಭಾಷೆಯಲ್ಲಿ ದೇಶಕ್ಕೇ ಪ್ರಥಮ ಸ್ಥಾನ ಪಡೆದುಕೊಂಡಿದ್ದರು.

ಬಳಿಕ ರಾಜಸ್ತಾನದ ಪಿಲಾನಿಯಲ್ಲಿನ ಪ್ರಸಿದ್ಧ ಬಿಐಟಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಮತ್ತು ಗಣಿತದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಓದಿನ ದಾಹ ತೀರಲಿಲ್ಲ. ಮುಂಬೈನಲ್ಲಿ ಫೈನಾನ್ಸ್ ವಿಷಯದಲ್ಲಿ ಎಂಬಿಎ ಪದವಿ ಗಳಿಸಿದರು. ದೆಹಲಿಯಲ್ಲಿ ಜಿಇ ಮನಿ ಕಂಪೆನಿಯಲ್ಲಿ ಔದ್ಯೋಗಿಕ ಬದುಕು ಪ್ರಾರಂಭ. ನಂತರ ಸಿಟಿ ಬ್ಯಾಂಕ್‌ನಲ್ಲಿ ಕೆಲ ಕಾಲ ಕೆಲಸ ಮಾಡಿದ ಅವರೀಗ ಎಚ್‌ಪಿ ಇಂಡಿಯಾ ಕಂಪೆನಿಯ ಉದ್ಯೋಗಿ. ಮಾಹಿತಿ ತಂತ್ರಜ್ಞಾನದ ಉದ್ಯೋಗ ಹಾಗೂ ಸಂಗೀತ, ಸಂಸ್ಕೃತಿಯ ಹಿಂದೆ ಬೀಳುವ ತಮ್ಮ ಹವ್ಯಾಸ ಎರಡೂ ಒಂದಕ್ಕೊಂದು ಬೆನ್ನುಮಾಡಿರುವಂಥವು.

ತಮ್ಮ ಸಹೋದ್ಯೋಗಿಗಳೆಲ್ಲಾ ವಾರಾಂತ್ಯವನ್ನು ವಿರಾಮ ಮೋಜು ಮಸ್ತಿ ಎಂದು ಕಳೆದರೆ, ವಿಕ್ರಮ್ ಕಳೆದುಹೋದ ಪುಟಗಳನ್ನರಸುತ್ತಾ ಊರೂರು ಅಲೆದಾಡುತ್ತಾರೆ. ಅವರ ಅಲೆದಾಟದ ಪರಿಣಾಮವೇ ಅವರ ಲೇಖನಿಯಲ್ಲಿ ಮೂಡಿದ ಮೂರು ಅಪರೂಪದ ಕೃತಿಗಳು. ಭಾರತದ ಪ್ರಪ್ರಥಮ ಗ್ರಾಮಾಫೋನ್ ಗಾಯಕಿ ಗೌಹಾರ್ ಜಾನ್ ಜೀವನ ಚರಿತ್ರೆಯ ಸಂಪತ್ತನ್ನು ಸವಾಲು, ಹತಾಶೆಗಳ ನಡುವೆಯೂ ತ್ರಿವಿಕ್ರಮನಂತೆ ಛಲ ಬಿಡದೆ ಹುಡುಕಿ ತೆಗೆದ ಅವರ ಸಾಹಸದ ಫಲವೇ `ಮೈ ನೇಮ್ ಈಸ್ ಗೌಹಾರ್ ಜಾನ್!: ದಿ ಲೈಫ್ ಆ್ಯಂಡ್ ಟೈಮ್ಸ ಆಫ್ ಎ ಮ್ಯುಸಿಷಿಯನ್'. ವಿವಾದಿತ ವ್ಯಕ್ತಿಗಳ ಜೀವನದ ಒಳಹೊಕ್ಕು ಅಧ್ಯಯನ ನಡೆಸುವ ಕುತೂಹಲದ ಮೊದಲ ಪ್ರಯತ್ನವೂ ಯಶ ಕಂಡಿತು. ವಿವಾದಗಳಿಂದಾಗಿಯೇ ಹೆಸರಾಗಿದ್ದ ತಮಿಳುನಾಡಿನ ವೀಣಾ ವಿದ್ವಾಂಸ ಎಸ್. ಬಾಲಚಂದರ್ ಕುರಿತ `ವಾಯ್ಸ ಆಫ್ ವೀಣಾ: ಎಸ್. ಬಾಲಚಂದರ್, ಎ ಬಯಾಗ್ರಫಿ' ಪುಸ್ತಕ ವಿಕ್ರಮ್‌ರ ತುಡಿತಕ್ಕೆ ಮತ್ತೊಂದು ನಿದರ್ಶನ.

ವಿಕ್ರಮ್‌ರ ಆಸಕ್ತಿ ಅನುಭವಗಳು ಮೂರು ಪುಸ್ತಕಗಳಿಗೆ ಸೀಮಿತವಲ್ಲ. ಮೂವತ್ತಮೂರರ ಹರೆಯದಲ್ಲಿಯೇ ಅವರ ಹೆಜ್ಜೆಗಳು ಸಾಗಿದ ಹಾದಿ ಬೆರುಗು ಹುಟ್ಟಿಸುವಂಥದ್ದು. ಮನೆಯಲ್ಲಿ ವಿದ್ವಾಂಸರಿಲ್ಲದಿದ್ದರೂ ಸಂಗೀತದ ವಾತಾವರಣ. ಅಜ್ಜಿ, ಅಪ್ಪ, ಅಮ್ಮ ಎಲ್ಲರಿಗೂ ಸಂಗೀತ ಪ್ರೀತಿ. ಸಹಜವಾಗಿಯೇ ವಿಕ್ರಮ್ ಅವರನ್ನೂ ಆವರಿಸಿದ ಈ ಸೆಳೆತ ಕಲಿಕೆಗೂ ಆಹ್ವಾನಿಸಿತು. ಮಗನ ಆಸಕ್ತಿ ತಿಳಿದೊಡನೆ ತಂದೆ ತಾಯಿ ವಿಜಯ ಸಂಗೀತ ಶಾಲೆಗೆ ಅವರನ್ನು ಸೇರಿಸಿದರು.

ತಮ್ಮ ಒತ್ತಡದ ಕೆಲಸದ ನಡುವೆ, ಆಸಕ್ತಿಯನ್ನೂ ಕಾದುಕೊಳ್ಳಲು ಸಂಗೀತವೇ ಕಾರಣ ಎಂಬ ನಂಬುಗೆ ಅವರದು. ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನದಲ್ಲಿ ಅವರಿಗೆ ಡಿ.ವಿ. ನಾಗರಾಜ್ ಮೊದಲ ಗುರು. ಬಾಂಬೆ ಜಯಶ್ರೀ ಅವರ ಶಿಷ್ಯತ್ವದಲ್ಲಿ ಕಲಿಕೆ ಮುಂದುವರೆಸಿದ ವಿಕ್ರಮ್ ಅಭ್ಯಾಸ ಈಗ ಡಾ. ಜಯಂತಿ ಕುಮರೇಶ್ ಅವರ ಬಳಿ ಸಾಗಿದೆ. ಐದಾರು ವರ್ಷ ಸಂಗೀತ ಕಾರ್ಯಕ್ರಮಗಳನ್ನೂ ಅವರು ನೀಡಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರೂ ಹೌದು. ಡಿ.ವಿ. ನಾಗರಾಜ್ ಮೊದಲ ಗುರು, ಬಾಂಬೆ ಜಯಶ್ರೀ, ಈಗ ಡಾ. ಜಯಶ್ರೀ ಕಮರೇಶ್ ಸಂಗೀತದ ಗುರುಗಳು. ಸಂಗೀತದ ವ್ಯಸನ ಬಿಟ್ಟನೆಂದರೂ ಬಿಡದು. ಅಂಥದ್ದರಲ್ಲಿ ತಾವಾಗಿಯೇ ಆಯ್ದುಕೊಂಡ ಕ್ಷೇತ್ರವೇ ತಮ್ಮ ಸಾಧನೆಗಳಿಗೆ ಹಾದಿಗಳನ್ನು ತೋರಿಸಿಕೊಟ್ಟಿತು ಎನ್ನುತ್ತಾರೆ ಅವರು. ಪಿಲಾನಿಯಲ್ಲಿದ್ದಾಗ ನಾಲ್ಕೈದು ವರ್ಷ ಹಿಂದೂಸ್ತಾನಿ ಸಂಗೀತವನ್ನೂ ಕಲಿತರು.

ಆಂಗ್ಲ ಮಾಧ್ಯಮದಲ್ಲಿಯೇ ಓದಿರುವ ವಿಕ್ರಮ್ ಕನ್ನಡದಲ್ಲಿ ಅಸ್ಖಲಿತವಾಗಿ ಮಾತನಾಡಬಲ್ಲವರಾದರೂ ತಾವು ಇಂಗ್ಲಿಷ್‌ನಲ್ಲಿ ಬರೆದದ್ದನ್ನು ಕನ್ನಡೀಕರಿಸುವುದು ಅವರಿಗೆ ಸಾಧ್ಯವಾಗಿಲ್ಲ. ಸ್ವತಃ ಅವರೇ ಕನ್ನಡದ ಅನೇಕ ಪ್ರಕಾಶಕರನ್ನು ಅನುವಾದಕ್ಕಾಗಿ ಸಂಪರ್ಕಿಸಿದರೂ ಅವರಿಗೆ ಎದುರಾದದ್ದು ನಿರಾಶಾದಾಯಕ ಪ್ರತಿಕ್ರಿಯೆ. ಅಂದಹಾಗೆ, ವಿಕ್ರಮ್ ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ಬೆಂಗಾಳಿ, ಮರಾಠಿ ಮತ್ತು ಜರ್ಮನ್ ಭಾಷೆಗಳನ್ನು ಮಾತನಾಡಬಲ್ಲರು.

ಮೈಸೂರಿನ ಗ್ರಂಥಾಲಯದಲ್ಲಿ ಮಾಹಿತಿಗಳ ಹುಡುಕಾಟದಲ್ಲಿದ್ದಾಗ ಕಣ್ಣಿಗೆ ಬಿದ್ದದ್ದು ಗೌಹಾರ್ ಜಾನ್ ಎಂಬ ದುರಂತ ವ್ಯಕ್ತಿತ್ವದ ಕುರಿತ ಪುಟ್ಟ ಬರಹ. ಭಾರತದಲ್ಲಿ ಮೊದಲ ಬಾರಿಗೆ ಗ್ರಾಮಾಫೋನ್‌ಗೆ ಹಾಡಿದ ಗಾಯಕಿ, ಮೈಸೂರಿನಲ್ಲಿ ದುರಂತ ಅಂತ್ಯ ಕಂಡರು ಎಂಬ ಸಂಗತಿ ವಿಕ್ರಮ್‌ರನ್ನು ಕಾಡಿಸಿತು.

ಗೌಹಾರ್ ಜಾನ್ ಹೆಜ್ಜೆ ಹುಡುಕುತ್ತಾ...
ಅಲ್ಲಿಂದ ಶುರುವಾಗಿದ್ದು ಮತ್ತೊಂದು ಅಲೆದಾಟ. ಗೌಹಾರ್ ಜಾನ್ ಹುಟ್ಟಿದ್ದು ಉತ್ತರ ಪ್ರದೇಶದ ಅಸಲ್‌ಘಾಟ್‌ನಲ್ಲಿ. ಮೂಲತಃ ಹಿಂದೂಸ್ತಾನಿ ಗಾಯಕಿಯಾದ ಗೌಹಾರ್ ನವಾಬರ ಆಸ್ಥಾನದಲ್ಲಿ ಹಾಡುತ್ತಿದ್ದರು. ಈ ನಂಟು ಹುಡುಕಿಕೊಂಡು ಅಲ್ಲಿಗೆ ತೆರಳಿದ ವಿಕ್ರಮ್ ಅಲ್ಲಿನ ರಾಜಮನೆತನಕ್ಕೆ ಸೇರಿದ ಗ್ರಂಥಾಲಯಗಳಲ್ಲಿ ವಾರಗಟ್ಟಲೆ ಹುಡುಕಿದರೂ ಬೇಕಾದ ಮಾಹಿತಿ ಸಿಗಲಿಲ್ಲ. ಆಗ ಅಲ್ಲಿ ಚುನಾವಣೆಯ ಕಾವು ಬೇರೆ. ಸುಡುಬಿಸಿಲಿನಲ್ಲಿ ಗೌಹಾರ್ ಓಡಾಡಿದ ಜಾಗವನ್ನೆಲ್ಲಾ ಸುತ್ತಿದರು. ಗೌಹಾರ್ ಜೊತೆಯಲ್ಲಿದ್ದ ಕಲಾವಿದೆಯೊಬ್ಬರು ಇನ್ನೂ ಬದುಕಿದ್ದಾರೆ ಎಂಬ ಸಂಗತಿ ಕಿವಿಗೆ ಬಿದ್ದೊಡನೆ ಅವರಲ್ಲಿ ರೋಮಾಂಚನ.

110 ವರ್ಷದ ಅಜ್ಜಿಯ ಬಳಿ ಮಾಹಿತಿ ಕಲೆಹಾಕುವುದು ಸುಲಭದ ಮಾತಾಗಿರಲಿಲ್ಲ. ವಾರಗಟ್ಟಲೆ ಕಾಡಿ ಬೇಡಿದ ಬಳಿಕವಷ್ಟೇ ಅವರು ಗೌಹಾರ್ ಬಗ್ಗೆ ಒಂದಷ್ಟು ವಿವರ ನೀಡಲು ಒಪ್ಪಿಕೊಂಡದ್ದು. ಗೌಹಾರ್ ಮತ್ತು ನವಾಬನ ನಡುವೆ ಮನಸ್ತಾಪ ಉಂಟಾಗಿದ್ದರಿಂದ ಗೌಹಾರ್ ಊರನ್ನು ತೊರೆದರೆಂದೂ, ನವಾಬ ಅವರ ಕುರಿತು ಇದ್ದ ದಾಖಲಾತಿಗಳನ್ನೆಲ್ಲಾ ನಾಶ ಪಡಿಸಿದನೆಂದೂ ಅಜ್ಜಿಯಿಂದ ತಿಳಿದಾಗ ನಿರಾಸೆ ಉಂಟಾದರೂ ಉತ್ಸಾಹ ಕುಂದಲಿಲ್ಲ. ಗೌಹಾರ್‌ರ ಜಾಡು ಹಿಡಿದು ಉತ್ತರ ಭಾರತವನ್ನು ಸುತ್ತಿದರು. ಬಂಗಾಳ, ಅಲಹಾಬಾದ್, ಮುಂಬೈ, ದೆಹಲಿ ಹೀಗೆ ಅವರ ಹೆಜ್ಜೆಗಳನ್ನು ಹಿಂಬಾಲಿಸಿದರು. ಅಲ್ಲಿನ ಭಾಷಿಗರ ಸಹಾಯದಿಂದ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ಓದಿಸಿ ಬರೆದುಕೊಂಡರು.

ಅಮೆರಿಕದವರಾದ ಗೌಹಾರ್ ಜಾನ್‌ರ ಮೂಲ ಹೆಸರು ಈಲೀನ್ ಏಂಜಲೀನಾ ಯೂವಾರ್ಡ್. ಭಾರತಕ್ಕೆ ಬಂದ ಆಕೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ಆಕೆಯ ತಾಯಿ ಉರ್ದು ಕವಯತ್ರಿ. 1902ರಲ್ಲಿ ಜರ್ಮನ್ ಗ್ರಾಮಾಫೋನ್ ಕಂಪೆನಿಯೊಂದು ಭಾರತದಲ್ಲಿ ಗ್ರಾಮಾಫೋನ್‌ಗೆ ಸಂಗೀತವನ್ನು ಮುದ್ರಿಸಿಕೊಳ್ಳಲು ಆಗಮಿಸಿತು. ಆಗ ಮೊದಲ ಬಾರಿಗೆ ಗ್ರಾಮಾಫೋನ್ ದನಿ ನೀಡಿದ್ದು ಗೌಹಾರ್ ಜಾನ್. ಆಕೆಯ ಜನಪ್ರಿಯತೆ ಎಷ್ಟಿತ್ತೆಂದರೆ ಆಸ್ಟ್ರಿಯಾದಲ್ಲಿ ಅವರ ಚಿತ್ರ ಹೊತ್ತ ಬೆಂಕಿಪೊಟ್ಟಣಗಳೂ ತಯಾರಾಗಿದ್ದವು. ತುಮ್ರಿ, ದಾದ್ರಾ, ಘಜಲ್ ಪ್ರಾಕಾರಗಳನ್ನು ಜನಪ್ರಿಯಗೊಳಿಸಿದ ಪ್ರಮುಖರಲ್ಲಿ ಗೌಹಾರ್ ಕೂಡ ಒಬ್ಬರು.

ಗೌಹಾರ್ ಕುರಿತ ಮಾಹಿತಿ ಕಲೆ ಹಾಕಲು ವಿಕ್ರಮ್ ಲಂಡನ್, ಜರ್ಮನಿಗಳಿಗೂ ತೆರಳಿದರು. ಭಾರತಕ್ಕಿಂತಲೂ ಅವರಿಗೆ ಮಹತ್ವದ ವಿಷಯಗಳು ಸಿಕ್ಕಿದ್ದು ವಿದೇಶಿ ನೆಲದಲ್ಲಿ. ಗೌಹಾರ್ ಹಾಡಿದ ಗ್ರಾಮಾಫೋನ್ ತಟ್ಟೆಗಳನ್ನು ಅರಸುವ ಕಾಯಕವನ್ನೂ ಜೊತೆಯಲ್ಲಿಯೇ ನಡೆಸಿದರು. ಹಳೆಕಾಲದ ಮನೆಗಳಲ್ಲಿ, ರದ್ದಿ ಅಂಗಡಿ, ಬಜಾರುಗಳಲ್ಲಿ ಹೀಗೆ ಗಲ್ಲಿ ಗಲ್ಲಿ ಅಲೆದ ವಿಕ್ರಮ್ ಶತಮಾನಗಳ ಹಿಂದಿನ ಗ್ರಾಮಾಫೋನ್ ಮುದ್ರಿಕೆಗಳನ್ನು ಸಂಪಾದಿಸುವಲ್ಲಿ ಯಶಸ್ವಿಯೂ ಆದರು. ಆ ಕಾಲದಲ್ಲಿಯೇ ಒಂದು ಹಾಡಿಗೆ ಮೂರು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಗೌಹಾರ್ ಮೈಸೂರಿಗೆ ಬಂದು ಯಾತನಾಮಯ ಅಂತ್ಯ ಕಂಡದ್ದು ಯಾಕೆನ್ನುವುದು ನಿಗೂಢವಾಗಿಯೇ ಉಳಿಯಿತು.

ಪ್ರತಿ ಹಾಡಿನ ಕೊನೆಯಲ್ಲಿಯೂ ಅವರು `ಮೈ ನೇಮ್ ಈಸ್ ಗೌಹಾರ್ ಜಾನ್' ಎಂದು ಪ್ರಕಟಿಸುತ್ತಿದ್ದರು. ಹೀಗಾಗಿ ವಿಕ್ರಮ್ ಅದನ್ನೇ ಪುಸ್ತಕದ ಶೀರ್ಷಿಕೆಗೆ ಬಳಸಿದರು. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಕೃತಿ ಬಿಡುಗಡೆ ಮಾಡಿದರು. ಪುಸ್ತಕ ಓದಿದ್ದ ಸೋನಿಯಾಗಾಂಧಿ ವಿಕ್ರಮ್‌ರನ್ನು ಕರೆ ಮಾಡಿ ಕರೆಯಿಸಿಕೊಂಡು ಭೇಟಿ ಮಾಡಿದ್ದಲ್ಲದೆ ಆ ಕೃತಿಯ ಬಗ್ಗೆ ಆಳವಾಗಿ ಚರ್ಚಿಸಿದ್ದರು. ಸಂಗೀತದ ಕುರಿತ ಸೋನಿಯಾ ಗಾಂಧಿ ಜ್ಞಾನ ವಿಕ್ರಮ್‌ರನ್ನು ಕ್ಷಣಕಾಲ ಚಕಿತಗೊಳಿಸಿತ್ತಂತೆ. ಶ್ಯಾಮ್ ಬೆನಗಲ್, ರಾಜಶ್ರೀ ಬಿರ್ಲಾ, ಪಂಡಿತ್ ಜಸ್‌ರಾಜ್, ಪಂಡಿತ್ ಉಸ್ತಾದ್ ಅಮ್ಜದ್ ಅಲಿಖಾನ್‌ರಂಥ ಗಣ್ಯರಿಂದ ವಿಕ್ರಮ್ ಬರಹಕ್ಕೆ ಪ್ರಶಂಸೆ ಸಿಕ್ಕಿತು.

ಈ ಪುಸ್ತಕ ವಿಕ್ರಮ್ ಅವರಿಗೆ ಸಂಗೀತ ಕ್ಷೇತ್ರದ ಇತಿಹಾಸದ ಮಹತ್ವದ ಸಂಶೋಧನೆಗಾಗಿ 2011ರಲ್ಲಿ ನ್ಯೂಯಾರ್ಕ್‌ನ ಎಆರ್‌ಎಸ್‌ಸಿ ಅಂತರರಾಷ್ಟ್ರೀಯ ಪ್ರಶಸ್ತಿ ಗರಿ ತಂದುಕೊಟ್ಟರೆ, 2012ರಲ್ಲಿ ಸಾಹಿತ್ಯ ಅಕಾಡೆಮಿಯ ಮೊದಲ ಯುವ ಪುರಸ್ಕಾರ್ ಪ್ರಶಸ್ತಿ ಒಲಿದು ಬಂತು. ಭಾರತದಲ್ಲಿನ ಗ್ರಾಮಾಫೋನ್ ಧ್ವನಿಮುದ್ರಿಕೆಯ ಪ್ರಾರಂಭದ ದಿನಗಳ ಬಗ್ಗೆ ಅಧ್ಯಯನ ನಡೆಸಿದ ಬರ್ಲಿನ್‌ನಲ್ಲಿಯೇ ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್‌ನ ಫೆಲೋಶಿಪ್‌ಗೆ ಆಹ್ವಾನ ಪಡೆದರು. ವಿಕ್ರಮ್ ಭಾರತೀಯ ಸಂಗೀತ ಮತ್ತು ಇತಿಹಾಸದ ಕುರಿತು ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರೂ ಹೌದು.

ವೀಣಾ ವಿದ್ವಾಂಸ ಎಸ್. ಬಾಲಚಂದರ್ ಅವರ ಜೀವನ ಚರಿತೆಯನ್ನು ಬರೆಯುವ ಸಾಹಸ ಈ ಮೊದಲಿನ ಎರಡು ಕೃತಿಗಳಷ್ಟು ಸವಾಲಿನದ್ದಾಗಿರಲಿಲ್ಲ. ಆದರೆ ಎಸ್. ಬಾಲಚಂದರ್ ವಿವಾದಗಳಿಂದ ಸಂಗೀತ ಕ್ಷೇತ್ರದಲ್ಲಿ ಗಳಿಸಿದ ಖ್ಯಾತಿಯನ್ನು ಕಳೆದುಕೊಂಡವರು. ಮುಂದೆ ಜನ ಅವರ ಸಾಧನೆಯನ್ನು ಜನ ಮರೆತರು. ವೀಣಾ ವಾದನದಲ್ಲಿ ಅದ್ಭುತ ಸಾಧನೆ ಅವರದು. ಅದನ್ನು ಅಕ್ಷರ ರೂಪದಲ್ಲಿ ದಾಖಲಿಸಿದ ವಿಕ್ರಮ್ `ವಾಯ್ಸ ಆಫ್ ದಿ ವೀಣಾ: ಎಸ್. ಬಾಲಚಂದರ್, ಎ ಬಯಾಗ್ರಫಿ' ಹೊರ ತಂದರು.

ಚೆನ್ನೈನಲ್ಲಿ ಅವರ ಕುರಿತು ಪ್ರತಿಭಟನೆಯೂ ನಡೆಯಿತು. ಇತಿಹಾಸ ರಾಜಕೀಯ ವ್ಯವಸ್ಥೆಯ ಕಾರಣದಿಂದ ತಿರುಚಿಕೊಂಡಿದೆ. ಕೆಲವು ಸತ್ಯಗಳನ್ನು ಬರೆಯಲು ಸಾಧ್ಯವಾಗದ ಪರಿಸ್ಥಿತಿ ಈಗಿನದು. ಸಂಗೀತ ಕ್ಷೇತ್ರದ ಇತಿಹಾಸವೂ ಇದರಿಂದ ಹೊರತಲ್ಲ. ಅಧ್ಯಯನದಲ್ಲಿ ತಿಳಿದುಕೊಂಡ ಸತ್ಯವನ್ನು ಯಾವ ಮುಲಾಜಿಗೂ ಒಳಗಾಗದೆ ನೇರವಾಗಿ ಬರೆಯುತ್ತೇನೆ. ವಿರೋಧಗಳನ್ನು ಲೆಕ್ಕಿಸುವುದಿಲ್ಲ. ಏಕೆಂದರೆ ಇವು ನಮ್ಮ ಅಮೂಲ್ಯ ರಾಷ್ಟ್ರೀಯ ಸಂಪತ್ತು ಎನ್ನುತ್ತಾರೆ ವಿಕ್ರಮ್ ಸಂಪತ್.

ಹಳೆ ಹಾಡುಗಳಿಗೆ ಹೊಸ ಜೀವ
ಗೌಹಾರ್ ಜಾನ್‌ರ ಗ್ರಾಮಾಫೋನ್ ಹಾಡುಗಳ ತಟ್ಟೆಗಳನ್ನು ಸಂಗ್ರಹಿಸತೊಡಗಿದ ವಿಕ್ರಮ್‌ರಲ್ಲಿ ಮಹತ್ವದ ಯೋಜನೆಯೊಂದು ಹುಟ್ಟಿಕೊಂಡಿತು. ನಮ್ಮ ಸಂಗೀತ ಸಮೃದ್ಧಿಯ ಕುರುಹುಗಳನ್ನು ಕಲೆಹಾಕಿ ಸಂರಕ್ಷಿಸಿದರಷ್ಟೆ ಸಾಲದು, ಅದನ್ನು ಜನರಿಗೂ ದಾಟಿಸಬೇಕು ಎಂಬ ಹಂಬಲ ಚಿಗುರಿತು. ಅದಕ್ಕೆ ನೀರೆರೆದವರು ಉದ್ಯಮಿ ಮೋಹನ್ ದಾಸ್ ಪೈ. ಅವರ ನೆರವಿನಿಂದ `ಆರ್ಖೈವ್ ಆಫ್ ಇಂಡಿಯನ್ ಮ್ಯೂಸಿಕ್' ಎಂಬ ಲಾಭಾಪೇಕ್ಷೆ ಇಲ್ಲದ ಟ್ರಸ್ಟ್ ಸಾಕಾರಗೊಂಡಿತು. ಅನೇಕ ಸ್ನೇಹಿತರು, ಸಾಹಿತ್ಯ, ಸಂಗೀತ ವಲಯದ ಆಸಕ್ತರೂ ಕೈಜೋಡಿಸಿದ್ದಾರೆ. ಹಳೆಯ ಗ್ರಾಮಾಫೋನ್‌ಗಳನ್ನು ಸಂಗ್ರಹಿಸಿ ಅವುಗಳನ್ನು ಡಿಜಿಟೈಸ್ ಮಾಡುವ ಕಾರ್ಯದಲ್ಲಿ ವಿಕ್ರಮ್ ತೊಡಗಿದ್ದಾರೆ. www.archiveofindianmusic.org  ವೆಬ್‌ಸೈಟ್‌ನಲ್ಲಿ ಉಚಿತವಾಗಿ ಅಪರೂಪದ ಹಾಡುಗಳನ್ನು ಕೇಳಬಹುದು.

ಬೆಂಗಳೂರು ಸಾಹಿತ್ಯ ಹಬ್ಬದ ಜನಕ ಅವರು. 2012ರಲ್ಲಿ ದೇಶವಿದೇಶದ ಖ್ಯಾತ ಸಾಹಿತಿಗಳನ್ನು ಒಂದೇ ಸೂರಿನಡಿ ಸೇರಿಸುವ ಅವರ ಮೊದಲ ಪ್ರಯತ್ನ ಅದ್ಭುತ ಯಶಸ್ಸು ಕಂಡಿತ್ತು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಸಾಹಿತ್ಯ ಹಬ್ಬ ಆಯೋಜಿಸಲು ಉದ್ದೇಶಿಸಿರುವ ವಿಕ್ರಮ್ ದಕ್ಷಿಣ ಭಾರತದ ಸಾಹಿತ್ಯ ಮತ್ತು ಇಂಗ್ಲಿಷ್ ಸಾಹಿತ್ಯದ ಮುಖಾಮುಖಿ ಸಂವಾದಕ್ಕೆ ವೇದಿಕೆ ಕಲ್ಪಿಸುವ ಉತ್ಸಾಹದಲ್ಲಿದ್ದಾರೆ.

ಭಾರತೀಯ ಇತಿಹಾಸದ ಬಗ್ಗೆ ನಮ್ಮವರಿಗೇ ಆಸಕ್ತಿ ಇಲ್ಲ. ಭಾರತದ ಇತಿಹಾಸದ ಕುರಿತು ವಿದೇಶಗಳಲ್ಲಿಯೇ ಹೆಚ್ಚು ಮಾಹಿತಿ ಸಿಗುತ್ತದೆ ಎನ್ನುವ ವಿಕ್ರಮ್‌ಗೆ ಭಾರತದಲ್ಲಿ ಎಷ್ಟು ಹುಡುಕಿದರೂ ಸಿಗದ ಇಲ್ಲಿನ ಚರಿತ್ರೆಯ ಕೃತಿಗಳು ಜರ್ಮನಿಯಲ್ಲಿ ದೊರೆತವಂತೆ. ಲಂಡನ್‌ನಲ್ಲಿ ಮೊಘಲರ ಆಡಳಿತ ಕುರಿತ ವಿಶೇಷ ಪ್ರದರ್ಶನ ಏರ್ಪಡಿಸಿದ್ದು ಅವರನ್ನು ಅಚ್ಚರಿಗೊಳಿಸಿತ್ತು.

ಸಾಹಿತ್ಯ ನೆಚ್ಚಿನ ಅವರ ಪ್ರಕಾರವಾದರೂ ಜನಪ್ರಿಯ ಬರಹಗಳತ್ತ ಒಲವಿಲ್ಲ. ಹೆಸರು, ಹಣ ತಂದುಕೊಡುವ ಆ ಬಗೆಯ ಬರವಣಿಗೆಗಳಿಗಿಂತ ದೇಶದ ಸಾಂಸ್ಕೃತಿಕ ಚರಿತೆಯ ಆಳ ಕೆದಕುತ್ತಾ ಬರೆಯುವ ಬರಹಗಳು ಆತ್ಮತೃಪ್ತಿ ನೀಡುತ್ತವೆ. ಜೊತೆಗೆ ದೇಶ ತಾನು ಕಳೆದುಕೊಂಡ ಅಮೂಲ್ಯ ಸಂಪತ್ತುಗಳನ್ನು ನೆನಪಿಸುವ ಕಾಯಕವೇ ಇಷ್ಟ. ಯಾರೂ ಬರೆಯದ, ಸವಾಲು ಎಂದುಕೊಳ್ಳುವ, ವಿವಾದವೆನಿಸಿದರೂ ಸತ್ಯ ಇತಿಹಾಸವನ್ನು ದಾಖಲಿಸುವ ಕಾಯಕವನ್ನು ಮುಂದುವರಿಸುತ್ತೇನೆ ಎನ್ನುತ್ತಾರೆ ಅವರು.

ಐತಿಹಾಸಿಕ ದಾಖಲೆಗಳಾಗುವ ಗ್ರಾಮಾಫೋನ್ ಸಂಗೀತವನ್ನು ಜೀವಂತವಾಗಿ ಉಳಿಸುವ ತಮ್ಮ ಪ್ರಯತ್ನಕ್ಕೆ ಜನರ ಬೆಂಬಲವೂ ಬೇಕು ಎನ್ನುವುದು ವಿಕ್ರಮ್ ಅಪೇಕ್ಷೆ. ಹಳೆಯ ಗ್ರಾಮಾಫೋನ್ ಮುದ್ರಿಕೆಗಳನ್ನು ಉಳ್ಳವರು ವಿಕ್ರಮ್ ಅವರನ್ನು ಜಿಝ್ಟೇಞಙಞಠಿ79ಃಟಟ.್ಚಟ.ಜ್ಞಿ ಇ-ಮೇಲ್ ವಿಳಾಸದಲ್ಲಿ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT