ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರಿತ್ರ್ಯಕ್ಕೆ ಮಸಿ ಬಳಿಯುವ ಯತ್ನ: ಆಪಾದನೆ

ಕಾನೂನು ತರಬೇತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಸಿಜೆಐಗೆ ನ್ಯಾ.ಗಂಗೂಲಿ ಪತ್ರ
Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಕಾನೂನು ತರಬೇತಿ ವಿದ್ಯಾರ್ಥಿ­ನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿ­ಯಾಗಿರುವ ನಿವೃತ್ತ ನ್ಯಾಯಮೂರ್ತಿ ಎ.ಕೆ. ಗಂಗೂಲಿ, ತಮ್ಮ  ಚಾರಿತ್ರ್ಯಕ್ಕೆ ಮಸಿ ಬಳಿಯುವ ಪ್ರಯತ್ನಗಳು ನಡೆ­ಯು­ತ್ತಿವೆ ಎಂದು ಆಪಾದಿಸಿದ್ದಾರೆ. ಜೊತೆಗೆ, ಸುಪ್ರೀಂ ಕೋರ್ಟ್‌ನ ವಿಚಾರಣಾ ಸಮಿತಿ ರಚನೆಯ ಔಚಿತ್ಯವನ್ನೂ ಪ್ರಶ್ನಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಪಿ.ಸದಾಶಿವಂ ಅವರಿಗೆ 36 ಅಂಶಗಳನ್ನು ಉಲ್ಲೇ­ಖಿಸಿ ಎಂಟು ಪುಟಗಳ ಪತ್ರ ಬರೆದಿರುವ ಗಂಗೂಲಿ, ‘ನಾನು ಯಾವುದೇ ಕಾನೂನು ತರಬೇತಿ ವಿದ್ಯಾರ್ಥಿನಿಗೂ ಕಿರುಕುಳ ನೀಡಿಲ್ಲ ಮತ್ತು ಅನುಚಿತ­ವಾಗಿ ವರ್ತಿಸಿಲ್ಲ. ಈ ಆರೋಪ ಮತ್ತು ಇದರಿಂದ ಉದ್ಭವಿಸಿ­ರುವ ಬೆಳವಣಿಗೆಗಳಿಂದ ತೀವ್ರವಾಗಿ ನೊಂದಿ­ದ್ದೇನೆ. ನಿಮ್ಮ (ಸಿಜೆಐ ಸದಾಶಿವಂ) ನೇತೃತ್ವದಲ್ಲಿ ಕಾರ್ಯ­ನಿರ್ವಹಿಸುತ್ತಿರುವ ಸುಪ್ರೀಂ ಕೋರ್ಟ್‌ ಕೂಡ ನನ್ನನ್ನು ಗೌರವದಿಂದ ನಡೆಸಿಕೊಂಡಿಲ್ಲ’ ಎಂದಿದ್ದಾರೆ.

‘ಕೆಲವು ಪ್ರಕರಣಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳಿಗೆ ವ್ಯತಿರಿಕ್ತವಾದ ತೀರ್ಪು ನೀಡಿದ್ದರಿಂದ ನನ್ನ ಚಾರಿತ್ರ್ಯಕ್ಕೆ ಮಸಿ ಬಳಿಯುವ ವ್ಯವಸ್ಥಿತ ಪ್ರಯತ್ನ ನಡೆಯು­ತ್ತವೆ. ನನ್ನನ್ನು ಅವಹೇಳನ ಮಾಡುವುದೇ ಈ ಹಿತಾಸಕ್ತಿ­ಗಳ ಉದ್ದೇಶ ಎಂಬುದು ಸ್ಪಷ್ಟ’ ಎಂದು  ಆಪಾದಿಸಿದ್ದಾರೆ.

‘ನನ್ನ ಮೇಲೆ ಆಪಾದನೆ ಮಾಡಿರುವ ವಿದ್ಯಾರ್ಥಿ­ನಿಯು ಸುಪ್ರೀಂ ಕೋರ್ಟ್‌ನಲ್ಲಿ ವಕೀಲ ವೃತ್ತಿ ಮಾಡಲು ನೋಂದಾಯಿ­ಸಿ­­ಕೊಂಡವರಲ್ಲ ಮತ್ತು ನಾನು ಸೇವೆಯಿಂದ ನಿವೃತ್ತಿಯಾಗಿದ್ದ ಕಾರಣ ಈ ಆರೋಪದ ಬಗ್ಗೆ ವಿಚಾ­­ರಣೆ ನಡೆಸಲು ಸುಪ್ರೀಂ ಕೋರ್ಟ್‌ ಮೂವರು ನ್ಯಾಯಮೂರ್ತಿಗಳ ಸಮಿತಿ ರಚಿಸುವ ಅಗತ್ಯವಿರಲಿಲ್ಲ’ ಎಂದು ಹೇಳಿದ್ದಾರೆ.

‘ಈ ಸಮಿತಿ ರಚನೆಗೆ ಪೂರ್ವದಲ್ಲಿ ಲೈಂಗಿಕ ಕಿರು­ಕು­ಳದ ಬಗ್ಗೆ ನನ್ನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಯಾವ ದೂರೂ ಸಲ್ಲಿಕೆ ಆಗಿರಲಿಲ್ಲ. ಬಹುಶಃ ವಿಚಾರಣಾ ಸಮಿತಿ ಸೂಚನೆಯ ಮೇರೆಗೆ  ವಿದ್ಯಾರ್ಥಿನಿ ಹೇಳಿಕೆ ನೀಡಿರ­ಬಹುದು’ ಎಂದಿದ್ದಾರೆ.

‘ಡಿ.12ರಂದು ವೃತ್ತಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ (ಲೈಂಗಿಕ ಕಿರುಕುಳದ ಆರೋಪ) ಸತ್ಯಾಸತ್ಯತೆ­ ಪರಿಶೀಲಿ­ಸದೆ ಈ ಸಮಿತಿ ರಚಿಸಲಾಯಿತು. ಅಟಾರ್ನಿ ಜನರಲ್‌ ಅವರು ಈ ವಿಷಯವನ್ನು ಮುಖ್ಯ ನ್ಯಾಯ­ಮೂರ್ತಿ ಅವರ ಗಮನಕ್ಕೆ ತಂದರು ಎಂಬ ಕಾರಣಕ್ಕೆ ಈ ಸಮಿತಿ ರಚಿಸಲಿಲ್ಲ. ಅದೂ ಅಲ್ಲದೆ ಈ ಆರೋಪವು ಮೊದಲಿಗೆ ಅಂತರ್ಜಾಲದ ಬ್ಲಾಗ್‌ ತಾಣದಲ್ಲಿ ಕೇಳಿಬಂತು. ಅದರಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯ­ಮೂರ್ತಿ ಎಂದು ಸ್ಪಷ್ಟವಾಗಿ ಹೇಳಲಾ­ಗಿತ್ತು.

ಆದರೂ ಆರೋಪಿತರು ಹಾಲಿ ನ್ಯಾಯ­ಮೂರ್ತಿಯೇ ಎಂಬು­ದನ್ನು ತಿಳಿಯುವುದಕ್ಕಾಗಿ ಈ ಸಮಿತಿ ರಚಿಸಲಾಗಿದೆ ಎಂದು ಸಮಿತಿ ರಚನೆಯ ಸಂದ­ರ್ಭ­ದಲ್ಲಿ ಹೇಳಲಾಗಿದೆ’ ಎಂದು ಗಂಗೂಲಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನ ಅಧಿಕಾರಿಗಳ ವರ್ತನೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಗಂಗೂಲಿ, ‘ನಾನು ಬಂಧಿತ ವ್ಯಕ್ತಿ ಎನ್ನುವಂತೆ ಅಧಿಕಾರಿ ವರ್ಗ­ದವರೂ ನನ್ನ ಸುತ್ತ ಸುತ್ತುವರೆದಿದ್ದರು. ಇಂತಹ ವರ್ತನೆ ದೇಶದ ಅತ್ಯುನ್ನತ ನ್ಯಾಯಾಲಯಕ್ಕೆ ಭೂಷಣವೇ’ ಎಂದು ಪ್ರಶ್ನಿಸಿದ್ದಾರೆ.

ಈ ಆರೋಪದ ಬಗ್ಗೆ ಮಾಧ್ಯಮಗಳಲ್ಲಿ ಬಹುವಾಗಿ ಚರ್ಚೆ ನಡೆಯುತ್ತಿರುವ ಕಾರಣ ತಾವು ಮೌನ ಮುರಿದು ಪ್ರತಿಕ್ರಿಯಿಸಬೇಕಾಯಿತು ಎಂದು ಪಶ್ಚಿಮ ಬಂಗಾಳದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರೂ ಆಗಿರುವ ಗಂಗೂಲಿ ತಿಳಿಸಿದ್ದಾರೆ. ಜೊತೆಗೆ, ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರದ ಪ್ರತಿಯನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೂ ಕಳುಹಿಸಿರುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT