ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಜರ್ಸ್ ಫ್ರಾಂಚೈಸಿ ರದ್ದು

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ಡೆಕ್ಕನ್ ಚಾರ್ಜರ್ಸ್ ಜೊತೆಗಿನ ಒಪ್ಪಂದವನ್ನು ಅಧಿಕೃತವಾಗಿ ರದ್ದುಗೊಳಿಸಿದೆ.

ಬಾಂಬೆ ಹೈಕೋರ್ಟ್ ಸೂಚಿಸಿದಂತೆ ಫ್ರಾಂಚೈಸಿ ಮಾಲೀಕರಾದ ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್ ಲಿಮಿಟೆಡ್ (ಡಿಸಿಎಚ್‌ಎಲ್) ನೂರು ಕೋಟಿ ರೂಪಾಯಿ ಬ್ಯಾಂಕ್ ಖಾತರಿ ಹಣವನ್ನು ಬಿಸಿಸಿಐಗೆ ನೀಡುವಲ್ಲಿ ವಿಫಲವಾದ ಕಾರಣ ಈ ಒಪ್ಪಂದ ರದ್ದುಗೊಂಡಿದೆ.

ಷರತ್ತು ರಹಿತ ಹಾಗೂ ಹಿಂಪಡೆಯಲಾಗದ ರೀತಿಯಲ್ಲಿ ಬಿಸಿಸಿಐಗೆ ಅಕ್ಟೋಬರ್ 9ರೊಳಗೆ ನೂರು ಕೋಟಿ ರೂ. ಬ್ಯಾಂಕ್ ಖಾತರಿ ನೀಡುವಂತೆ ಡಿಸಿಎಚ್‌ಎಲ್‌ಗೆ ಬಾಂಬೆ ಹೈಕೋರ್ಟ್ ಸೂಚಿಸಿತ್ತು. ಅದನ್ನು ಮತ್ತೆ ಮೂರು ದಿನ ವಿಸ್ತರಿಸಿತ್ತು. ಆದರೂ ಡಿಸಿಎಚ್‌ಎಲ್ ಹಣ ನೀಡಲಿಲ್ಲ.

ಕೋರ್ಟ್ ವಿಧಿಸಿದ್ದ ಶುಕ್ರವಾರ ಸಂಜೆಯ ಗಡುವನ್ನು ಮೀರಿದರು. ಫ್ರಾಂಚೈಸಿ ಮಾಲೀಕರು ಮತ್ತಷ್ಟು ದಿನ ಕಾಲಾವಕಾಶ ಕೋರಿದ್ದರು. ಆದರೆ ಇದನ್ನು ನ್ಯಾಯಮೂರ್ತಿ ಎಸ್.ಜೆ.ಕತಾವಾಲಾ ತಿರಸ್ಕರಿಸಿದರು.

ಚೆನ್ನೈಯಲ್ಲಿ ಸೆಪ್ಟೆಂಬರ್ 14ರಂದು ನಡೆದ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿಯೇ ಡೆಕ್ಕನ್ ಚಾರ್ಜರ್ಸ್ ತಂಡದ ಜೊತೆಗಿನ ಒಪ್ಪಂದ ರದ್ದು ಮಾಡಲಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿ ಈ ತಂಡದ ಫ್ರಾಂಚೈಸಿ ಮಾಲೀಕರು ಕೋರ್ಟ್ ಮೊರೆ ಹೋಗಿದ್ದರು. ಆದರೆ ಈಗ ಅಧಿಕೃತವಾಗಿ ಒಪ್ಪಂದ ರದ್ದುಗೊಳಿಸಲಾಗಿದೆ.

`ಆಟಗಾರರ ವೇತನ ವಿಚಾರ ಹಾಗೂ ಫ್ರಾಂಚೈಸಿ ಕೆಲವೊಂದು ನಿರ್ಧಾರಗಳಿಂದ ಆತಂಕಕ್ಕೆ ಒಳಗಾಗಿ ತ್ವರಿತ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಅದಕ್ಕಾಗಿ ಐಪಿಎಲ್ ಆಡಳಿತ ಮಂಡಳಿಯ ತುರ್ತು ಸಭೆ ನಡೆಸಲಾಗಿತ್ತು~ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಈ ಕಾರಣ ಹೊಸ ಫ್ರಾಂಚೈಸಿಗಾಗಿ ಬಿಸಿಸಿಐ ಟೆಂಡರ್ ಆಹ್ವಾನಿಸುವ ನಿರೀಕ್ಷೆಯಿದೆ. ಆದರೆ ಈ ತಂಡದ ಈಗಿರುವ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ಭವಿಷ್ಯ ಸ್ಪಷ್ಟವಾಗಿಲ್ಲ.  ಇದಕ್ಕೂ ಮುನ್ನ ಚಾರ್ಜರ್ಸ್ ತಂಡವನ್ನು ಮುಂಬೈ ಮೂಲದ ಕಮ್ಲಾ ಲ್ಯಾಂಡ್‌ಮಾರ್ಕ್ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಲಿಮಿಟೆಡ್‌ಗೆ ಮಾರಾಟ ಮಾಡುವುದಾಗಿ ಮುಂಬೈ ಷೇರು ವಿನಿಮಯ ಕೇಂದ್ರಕ್ಕೆ ಡಿಸಿಎಚ್‌ಎಲ್ ಮಾಹಿತಿ ನೀಡಿತ್ತು.

ಎಷ್ಟು ಹಣಕ್ಕೆ ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಬಿಸಿಸಿಐ ಈ ತಂಡದ ಒಪ್ಪಂದವನ್ನು ರದ್ದುಗೊಳಿಸಿದ ಕಾರಣ ಮಾರಾಟದ ಭವಿಷ್ಯ ಈಗ ಡೋಲಾಯಮಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT