ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಮಿನಾರ್‌ನಲ್ಲಿ ಶಿಕ್ಷಕರ ದಿನ!

Last Updated 20 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಹಾಡುಗಳ ಬಿಡುಗಡೆ ಸಮಾರಂಭವನ್ನು `ಶಿಕ್ಷಕರ ದಿನ'ವನ್ನಾಗಿ ಪರಿವರ್ತಿಸಿದ್ದರು ನಿರ್ದೇಶಕ ಆರ್. ಚಂದ್ರು. ಅವರ ನಿರ್ದೇಶನದ `ಚಾರ್‌ಮಿನಾರ್' ಚಿತ್ರದ ಹಾಡುಗಳ ದನಿಮುದ್ರಿಕೆ ಬಿಡುಗಡೆ ಸಮಾರಂಭವದು. ಚಿತ್ರತಂಡದ ಸದಸ್ಯರಿಗಿಂತ ಹೆಚ್ಚಿದ್ದದ್ದು ಗಣ್ಯರ ಸಂಖ್ಯೆ. ಅಕ್ಷರ ಕಲಿಸಿದ ಮೊದಲ ಗುರುಗಳಿಂದ ಹೈಸ್ಕೂಲಿನವರೆಗೆ ಪಾಠ ಮಾಡಿದ ಶಿಕ್ಷಕರನ್ನೆಲ್ಲಾ ಒಂದುಗೂಡಿಸಿ ಸನ್ಮಾನಿಸುವ ಬಹುದಿನಗಳ ಆಸೆಯನ್ನು ಚಂದ್ರು ಈಡೇರಿಸಿಕೊಂಡರು.

ಚಂದ್ರು ಅವರಿಗೆ `ಚಾರ್‌ಮಿನಾರ್' ಕಥೆಗೆ ಸ್ಫೂರ್ತಿ ನೀಡಿದ್ದು ಶಾಲೆಯಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮ. ಅಲ್ಲಿ ಪಾಠ ಮಾಡಿದ ಮೇಷ್ಟ್ರು ಕೆಳಗೆ ಕುಳಿತು ವೇದಿಕೆಯಲ್ಲಿ ತಮ್ಮನ್ನು ಕೂರಿಸಿದ್ದಾಗಲೇ ಚಂದ್ರು ಮನಸ್ಸಿನಲ್ಲಿ ಅವರಿಗೆ ಸೂಕ್ತ ಗೌರವ ಕೊಡುವ ಕೆಲಸ ತನ್ನಿಂದ ಆಗಬೇಕು ಎಂಬ ಆಲೋಚನೆ ಮೂಡಿತ್ತಂತೆ. ಆ ಆಸೆ ಈಗ ನೆರವೇರಿದೆ ಎಂಬ ಖುಷಿ ಅವರಲ್ಲಿತ್ತು. ನಿರ್ದೇಶಕರಾಗಿದ್ದವರು ಈ ಚಿತ್ರದ ಮೂಲಕ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ ಅವರು. ಶಿಕ್ಷಕರಲ್ಲದೆ ತಮ್ಮಂದಿಗೆ ಆಡಿ ಬೆಳೆದ ಗೆಳೆಯರನ್ನೂ ವೇದಿಕೆಗೆ ಕರೆತಂದು ಪರಿಚಯಿಸಿದರು ಚಂದ್ರು.

ನಿರ್ಮಾಣದ ಜವಾಬ್ದಾರಿ ಇದುವರೆಗಿನ ಅನುಭವಕ್ಕಿಂತ ಎರಡು ಪಟ್ಟು ವಿಭಿನ್ನ ಅನುಭವ ನೀಡಿದೆ ಎಂದ ಚಂದ್ರು, ನಟ ಶಿವರಾಜ್‌ಕುಮಾರ್‌ರಂತೆಯೇ ಹೇಳಿದ ಸಮಯಕ್ಕಿಂತ ಅರ್ಧಗಂಟೆ ಮುಂಚೆಯೇ ಚಿತ್ರೀಕರಣದ ಸ್ಥಳದಲ್ಲಿ ಪ್ರೇಮ್ ಹಾಜರಿರುತ್ತಿದ್ದರು. ಅವರಂತೆಯೇ ಉಳಿದ ಕಲಾವಿದರ ಬದ್ಧತೆ, ಉತ್ಸಾಹ `ಚಾರ್ಮಿನಾರ್' ಕಟ್ಟಲು ನೆರವಾಗಿದೆ ಎಂದರು. ಶಾಲೆಯಲ್ಲಿ ನಡೆದ ತಮ್ಮ ಅನುಭವವನ್ನೇ ಅವರು ಕ್ಲೈಮ್ಯಾಕ್ಸ್‌ನಲ್ಲಿ ಬಳಸಿಕೊಂಡಿದ್ದಾರಂತೆ. ಅದನ್ನು ನೋಡಿದಾಗ ಎಂಥವರ ಕಣ್ಣಲ್ಲೂ ನೀರು ಜಿನುಗುವುದು ಖಚಿತ. ಹಾಗಂತ ಇದು ದುರಂತ ಅಂತ್ಯದ ಸಿನಿಮಾವಲ್ಲ ಎಂದರು.

ಹರಿ ಎಂಬ ಹೊಸ ಸಂಗೀತ ನಿರ್ದೇಶಕ ಈ ಚಿತ್ರದ ಮೂಲಕ ಪರಿಚಯವಾಗುತ್ತಿದ್ದಾರೆ. ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ನಟಿ ಮೇಘನಾ ಗಾಂವ್ಕರ್ ಅವರದು. ಕನ್ನಡದಲ್ಲಿಯೇ ಮಾತನಾಡಬೇಕು ಎಂಬ ಚಂದ್ರು ಅವರ ಕಟ್ಟಪ್ಪಣೆಯನ್ನು ಪಾಲಿಸಿದ ನಟಿ ಕುಮುದಾ ಚಿತ್ರ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರಂತೆ. ಸಮಾರಂಭದಲ್ಲಿ ಹಾಜರಿದ್ದ ನಟ ಪ್ರೇಮ್ ಎರಡೇ ಸಾಲುಗಳಿಗೆ ಮಾತು ಮುಗಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT