ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕ- ನಿರ್ವಾಹಕರಿಗೆ ಪಿಂಚಣಿ, ಇಎಸ್‌ಐ

ಖಾಸಗಿ ಬಸ್ ಮಾಲೀಕರಿಗೆ ಸೂಚನೆ
Last Updated 18 ಜುಲೈ 2013, 10:00 IST
ಅಕ್ಷರ ಗಾತ್ರ

ಮಂಗಳೂರು: ಬಸ್ ಮಾಲಕರು ಎಲ್ಲಾ ಬಸ್ ಚಾಲಕ-ನಿರ್ವಾಹಕರಿಗೆ ಪಿಎಫ್ ಮತ್ತು ಇಎಸ್‌ಐ ಸೌಲಭ್ಯವನ್ನು ಕಡ್ಡಾಯವಾಗಿ ಒದಗಿಸುವಂತೆ ಎಲ್ಲಾ ಖಾಸಗಿ ಬಸ್ ಮಾಲೀಕರಿಗೆ ಸೂಚಿಸಲಾಗಿದೆ.

ಮಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಬುಧವಾರ ಡಿಸಿಪಿ ಧರ್ಮಯ್ಯ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನ ನೇತೃತ್ವದಲ್ಲಿ ನಡೆದ ಬಸ್ ಮಾಲೀಕರು ಹಾಗೂ ಸಿಬ್ಬಂದಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಅಸಂಘಟಿತ ಕಾರ್ಮಿಕರಿಗಾಗಿ ಇರುವ ಹೊಸ ಪಿಂಚಣಿ ಯೋಜನೆಯ ಪ್ರಯೋಜನವನ್ನು ಬಸ್ ಚಾಲಕ, ನಿರ್ವಾಹಕರೂ ಪಡೆಯಬಹುದು.
ಕಾರ್ಮಿಕರು ವರ್ಷಕ್ಕೆ ರೂ 1200 ಪಾವತಿಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವರ್ಷಕ್ಕೆ ತಲಾ 1200 ರೂಪಾಯಿ ಭರಿಸಲಿವೆ. ಎಲ್ಲಾ ಮೊತ್ತವನ್ನು ಒಮ್ಮೆಲೇ, ಆರು ತಿಂಗಳಿಗೊಮ್ಮೆ , ಅಥವಾ ಮಾಸಿಕ ಕಂತಿನಲ್ಲಿ ಪಾವತಿಸಲು ಅವಕಾಶವಿದೆ. ನಿವೃತ್ತರಾದ ಬಳಿಕ ಕಾರ್ಮಿಕರಿಗೆ ಪಿಂಚಣಿ ಸಿಗಲಿದೆ' ಎಂದು ಕಾರ್ಮಿಕ ಇಲಾಖೆ ಉಪಾಯುಕ್ತ ನಾಗೇಶ್ ತಿಳಿಸಿದರು.

ಗುರುತು ಪತ್ರ:`ಬಸ್ ಮಾಲೀಕರು ಪ್ರತಿಯೊಬ್ಬ ಸಿಬ್ಬಂದಿಗೂ ಭಾವಚಿತ್ರವನ್ನೊಳಗೊಂಡ ಗುರುತುಪತ್ರ ನೀಡಬೇಕು. ಸಿಬ್ಬಂದಿ ಸಮವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸುವುದು ಕಡ್ಡಾಯ. ಮಾಲೀಕರೇ ವರ್ಷಕ್ಕೆ ಎರಡು ಜತೆ ಸಮವಸ್ತ್ರವನ್ನು ಸಿಬ್ಬಂದಿಗೆ ನೀಡಬೇಕು. ಚಾಲಕರು ಚಾಲನಾ ಪರವಾನಗಿ ಹೊಂದಿರಲೇಬೇಕು. ಪ್ರಯಾಣಿಕರಿಗೆ ಇ-ಟಿಕೆಟ್ ನೀಡಬೇಕು' ಎಂದು ಮಲ್ಲಿಕಾರ್ಜುನ ಸೂಚಿಸಿದರು.

ಬಸ್ ಚಾಲಕ-ನಿರ್ವಾಹಕರ ಪರವಾಗಿ ಮಾತನಾಡಿದ ಐವನ್ ಡಿಸೋಜ, `10ನೇ ತರಗತಿ ಉತ್ತರ್ಣರಾದವರಿಗಷ್ಟೇ ಚಾಲನಾ ಪರವಾನಗಿ ನೀಡಲಾಗುತ್ತಿದೆ. ನಿಯಮ ಸಡಿಲಿಸಿ 7ನೇ ತರಗತಿ ಕಲಿತವರಿಗೂ ಪರವಾನಗಿ ನೀಡಬೇಕು' ಎಂದು ಒತ್ತಾಯಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಮಲ್ಲಿಕಾರ್ಜುನ ತಿಳಿಸಿದರು.

ಬಸ್ ಪರವಾನಗಿಯನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಕೆಲವರು ಐದಾರು ಬಸ್‌ಗಳನ್ನು ಓಡಿಸುತ್ತ್ದ್ದಿದು, ಇದರಿಂದ ಸಮಸ್ಯೆ ಎದುರಾಗಿದೆ' ಎಂದು ಕೆಲವು ಚಾಲಕರು ದೂರಿದರು. ಇದಕ್ಕೆ ಅವಕಾಶವಿಲ್ಲ. ಅಂತಹ ಪ್ರಕರಣ ಪತ್ತೆಯಾದರೆ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಮಲ್ಲಿಕಾರ್ಜುನ ಎಚ್ಚರಿಸಿದರು.

ಚಾಲಕ ನಿರ್ವಾಹಕರೂ ಸೇವೆಗೆ ಬದ್ಧರಾಗಿರಬೇಕು. ಕೆಲವರು ರಾತ್ರಿ ವೇಳೆ ಕುಡಿದು ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸಿ, ಅದರ ಹೊರೆ ನಮ್ಮ ಮೇಲೆ ಬೀಳುತ್ತಿದೆ' ಎಂದು ಬಸ್ ಮಾಲೀಕರ  ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್ ಗಮನ ಸೆಳೆದರು. ಉಡುಪಿಯಲ್ಲಿ ಸಂಜೆ 6.30ರಿಂದ 8.30ರವರೆಗಿನ ಅವಧಿಯಲ್ಲಿ ಶೇ. 90 ಮಂದಿ ಚಾಲಕರು ಕುಡಿದು ಬಸ್ ಚಲಾಯಿಸಿರುವುದು ಪೊಲೀಸರ ತಪಾಸಣೆ ವೇಳೆ ಪತ್ತೆಯಾಗಿದೆ ಎಂದು ಬಸ್ ಮಾಲೀಕರೊಬ್ಬರು ಪರಿಸ್ಥಿತಿಯನ್ನು ವಿವರಿಸಿದರು.

`ಈ ಬಗ್ಗೆ ಚಾಲಕರಿಗೆ ಮನವರಿಕೆ ಮಾಡಲಾಗುವುದು. ಪಾನಮತ್ತರಾಗಿ ವಾಹನ ಚಲಾಯಿಸಿದ್ದು ಕಂಡು ಬಂದರೆ ಚಾಲಕರ ಪರವಾನಗಿ ರದ್ದುಪಡಿಸಬೇಕು' ಎಂದು ಐವನ್ ಡಿಸೋಜ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT