ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕ ರಹಿತ ಕಾರು ಸ್ವಲ್ಪ ಹುಷಾರು!

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಚಾಲಕನಿಲ್ಲದೆ ಓಡುತ್ತಿರುವ ಕಾರೊಂದನ್ನು ಊಹಿಸಿಕೊಳ್ಳಿ. ಟ್ರಾಫಿಕ್ ಇರುವ ರಸ್ತೆಗಳಲ್ಲಿ ಸರಾಗವಾಗಿ ಚಲಿಸಿ, ಸಿಗ್ನಲ್ ಬಂದಾಗ ನಿಂತು, ಹಾರ್ನ್ ಮೊಳಗಿಸುತ್ತಾ, ಎಡಕ್ಕೆ-ಬಲಕ್ಕೆ ತಿರುಗುವಾಗ ಇಂಡಿಕೇಟರ್ ಹಾಕುತ್ತಾ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿುವ ಈ ಕಾರಿನ ಕಲ್ಪನೆಯೇ ಅದ್ಭುತವಾಗಿದೆಅಲ್ವಾ?

ಹೌದು! ಹಾಲಿವುಡ್ ಚಿತ್ರಗಳಲ್ಲಿ ಮಾತ್ರ ಕಾಣಿಸುತ್ತಿದ್ದ, ಇಲ್ಲಿಯವರೆಗೆ ಕನಸಾಗಿದ್ದ ಈ ಚಾಲಕ ರಹಿತ ಕಾರಿನ ಕಲ್ಪನೆ ಇನ್ನೇನು ನನಸಾಗಲಿದೆ.

ಅಮೆರಿಕದ ಕಾರು ತಯಾರಿಕಾ ಕಂಪೆನಿ `ಜನರಲ್ ಮೋಟಾರ್ಸ್~ ಈ ಅರೆ -ಸ್ವಯಂಚಾಲಿತ (semi-aut onomous) ಕಾರನ್ನು ಅಭಿವೃದ್ಧಿಪಡಿಸುತ್ತಿದ್ದು, ಅಂತಿಮ ಹಂತದಲ್ಲಿದೆ ಎಂದು ಹೇಳಿದೆ.

ಪಟಪಟನೇ ಗೇರುಗಳನ್ನು ಬದಲಿಸುತ್ತಾ ತನ್ನ ಪಥದಲ್ಲೇ ಚಲಿಸುವ ಈ ಕಾರಿಗೆ `ವೇಗ ಮಿತಿ~ಯ ಸ್ಪಷ್ಟ ಅರಿವಿದೆ. ಅಗತ್ಯ ಬಿದ್ದಾಗ ಬ್ರೇಕ್ ಹಾಕಿ ನಿಲ್ಲಿಸುತ್ತದೆ. ಮುಂದಿರುವ ವಾಹನದ ಜತೆ ಅಂತರ ಕಾಯ್ದುಕೊಳ್ಳುತ್ತದೆ. ಹೀಗಾಗಿ  ವಾಹನ ಅಪಘಾತ ಸಾಧ್ಯತೆ ತುಂಬಾನೆ ಕಡಿಮೆ.

ಕಾರಿನೊಳಗೆ ಕುಳಿತವರು ನೆಮ್ಮದಿಯಿಂದ(ಧೈರ್ಯವಿದ್ದರೆ?) ನಿದ್ರೆ ಮಾಡಬಹುದು. ಪ್ರಯಾಣಿಕರ ಒಂದು ಕೂದಲು ಕೂಡ ಕೊಂಕದಂತೆ ಗಮ್ಯ ಸ್ಥಾನ ತಲುಪಿಸುತ್ತದೆ ಎನ್ನುತ್ತಾರೆ ಜನರಲ್ ಮೋಟಾರ್ಸ್ ಉಪಾಧ್ಯಕ್ಷ ಡಾನ್ ಬಟ್ಲರ್.

ಜೇಮ್ಸ ಬಾಂಡ್ ಚಿತ್ರಗಳಲ್ಲಿ  ಹಾರುವ ಕಾರನ್ನು ನೋಡಿರಬಹುದು. ಅಥವಾ ಅನಿಮೇಷನ್ ಆಧಾರಿತ ಟೆಲಿವಿಷನ್ ಸರಣಿಯಲ್ಲಿ ಕಾಣುವ ಜಾರ್ಜ್ ಜಸ್ಟನ್‌ನ ಚಾಲಕ ರಹಿತ ಕಾರನ್ನು ಕಂಡು ಸೋಜಿಗಗೊಂಡಿರಬಹುದು. ಇದು ಕೂಡ ಅಂತಹುದೇ ಚಿಂತನೆ.

ಆದರೆ, ತಂತ್ರಜ್ಞಾನ ಮಾತ್ರ ಬೇರೆ.  ಈ  ದಶಕದ ಅಂತ್ಯದೊಳಗೆ ಈ ಕನಸು ನನಸಾಗಲಿದೆ ಎನ್ನುತ್ತಾರೆ ಬಟ್ಲರ್. ಚಾಲಕನಿಲ್ಲದ ಈ ಕಾರಿನಲ್ಲಿ ಧೈರ್ಯವಾಗಿ ಕುಳಿತುಕೊಳ್ಳುವ ಗುಂಡಿಗೆ ನಿಮಗಿದ್ದರೆ ಇನ್ನೆರಡು ವರ್ಷದವರೆಗೆ ಕಾಯಬೇಕು. 2015ರ ವೇಳೆಗೆ ಕಾರು ರಸ್ತೆಗಿಳಿಯಲಿದೆ. ಅಚ್ಚರಿ ಎಂದರೆ ಅದಾಗಲೇ ಬುಕ್ಕಿಂಗ್ ಸಹ ಆರಂಭವಾಗಿದೆ.

ಬಹಳ ಆರಾಮದಾಯಕ, ಅಷ್ಟೇ ಭದ್ರತೆ ಮತ್ತು ಸುರಕ್ಷತೆಯನ್ನು ಈ ಕಾರು ಖಾತರಿಗೊಳಿಸುತ್ತದೆ. ಈ ದಶಕದ ಅಂತ್ಯದೊಳಗೆ ಇಂತಹ ಇನ್ನಷ್ಟು ಕಾರುಗಳು ರಸ್ತೆಗಳಿಯುವ ಸಾಧ್ಯತೆ ಇದೆ.  ಸ್ಟೀರಿಂಗ್ ಚಾಲನೆ ಮತ್ತು ವೇಗದ ಏರಿಳಿತವನ್ನು ಕಾರು ಸ್ವಯಂಚಾಲಿತವಾಗಿಯೇ ನಿಯಂತ್ರಿಸುತ್ತದೆ. ಕಾರಿನೊಳಗಿರುವ ವ್ಯಕ್ತಿಗಳು ಬೇಕಾದರೆ, ನಿಧಾನ, ಇನ್ನಷ್ಟು ವೇಗ, ಎಡಕ್ಕೆ ತಿರುಗು, ಬಲಕ್ಕೆ ತಿರುಗು, ಹಾರ್ನ್ ಬಾರಿಸು ಇತ್ಯಾದಿ ಸಲಹೆ-ಸೂಚನೆ ಕೊಡಬಹುದು. ಮಾಲೀಕನ ಸೂಚನೆಯನ್ನು ಶಿರಸಾವಹಿಸಿ ಪಾಲಿಸುವ ಈ ಕಾರು, ಸಿಗ್ನಲ್ ಬಂದಾಗ `ಸಿಗ್ನಲ್ ಜಂಪ್~ ಮಾಡು ಎಂದರೆ ಮಾತ್ರ ಮಾಡುವುದಿಲ್ಲ.

ಇಂಥ ನಿಯಮ ಉಲ್ಲಂಘನೆ ಸೂಚನೆಗಳನ್ನು ನಿರ್ಲಕ್ಷಿಸುವ ತಂತ್ರಜ್ಞಾನವೂ ಇದರಲ್ಲಿ ಅಳವಡಿಸಲಾಗಿದೆ. ಹಾಗಾಗಿ ಸುಮ್ಮನೆ `ದಾರಿ ತಪ್ಪಿಸುವ~ ಕೀಟಲೆಗೆ ಅವಕಾಶವಿಲ್ಲ.
ಅಷ್ಟೇ ಅಲ್ಲ, ಇದರೊಳಗೆ ಬಹಳಷ್ಟು ತಾಂತ್ರಿಕ ವೈಶಿಷ್ಟ್ಯಗಳು ತುಂಬಿವೆ. ರಾಡಾರ್, ಕ್ಯಾಮೆರಾ ಮತ್ತು ಜಿಪಿಎಸ್ ಸೌಲಭ್ಯ ಇದೆ. ಹಿಂದೆ-ಮುಂದೆ ಇರುವ ವಾಹನದ ಜತೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವ, ಘರ್ಷಣೆ ತಪ್ಪಿಸುವ ವ್ಯವಸ್ಥೆಯೂ ಇದೆ.

ಉದಾಹರಣೆಗೆ ಕಾರು 100 ಕಿ.ಮೀ. ವೇಗದಲ್ಲಿ ಓಡುತ್ತಿದೆ ಎಂದಿಟ್ಟುಕೊಳ್ಳಿ. ಥಟ್ಟನೆ ಬ್ರೇಕ್ ಹಾಕಿದಾಗ ಉಳಿದ ವಾಹನಗಳಂತೆ ಮುಂದಕ್ಕೆ ಮುಗ್ಗರಿಸುವುದಿಲ್ಲ. ಎಂಜಿನ್ ಸ್ಥಗಿತಗೊಳ್ಳುವುದೂ ಇಲ್ಲ. ಯಾವುದೇ ಸಮಯದಲ್ಲಿ ಕೂಡ ಚಾಲಕ ವಾಹನದ ಮೇಲೆ ನಿಯಂತ್ರಣ ಸಾಧಿಸಬಹುದಾದ ` ಚಾಲಕ ಸ್ನೇಹಿ~ ಸೌಲಭ್ಯವೂ ಇದರಲ್ಲಿದೆ. ಆದರೂ ಚಾಲಕ ರಹಿತ ಕಾರು- ಸ್ವಲ್ಪ ಹುಷಾರು! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT