ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲುಕ್ಯ ಉತ್ಸವ ವರ್ಸಸ್‌ ಬಾದಾಮಿ ಉತ್ಸವ

ಕುತೂಹಲ ಕೆರಳಿಸಿದ ಕೆಟಲೆಟಿಕ್‌ ಕಾರ್ಯವೈಖರಿ
Last Updated 18 ಡಿಸೆಂಬರ್ 2013, 4:11 IST
ಅಕ್ಷರ ಗಾತ್ರ

ಬಾಗಲಕೋಟೆ: ಬಾದಾಮಿಯ ಅಗಸ್ತ್ಯ ತೀರ್ಥ ಬಳಿ ಫೆಬ್ರುವರಿ 28ರಿಂದ ಮೂರು ದಿನಗಳ ಕಾಲ ಬೆಂಗಳೂರು ಮೂಲದ ‘ಥಿಂಕ್‌ ಟ್ಯಾಂಕ್‌ ಕೆಟಲೆಟಿಕ್‌’ ಎಂಬ ಖಾಸಗಿ ಸಂಸ್ಥೆಯು ‘ಬಾದಾಮಿ ಉತ್ಸವ’ ಹಮ್ಮಿಕೊಂಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಜಿಲ್ಲಾಡಳಿತವು ಫೆಬ್ರವರಿ 7 ರಿಂದ ಮೂರು ದಿನಗಳ ಕಾಲ ನಡೆಸಲು ಉದ್ದೇಶಿಸಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವಾದ ‘ಚಾಲುಕ್ಯ ಉತ್ಸವ’ಕ್ಕೆ ಪರ್ಯಾಯವಾಗಿ ಕೆಟಲೆಟಿಕ್‌ ಸಂಸ್ಥೆಯ ‘ಬಾದಾಮಿ ಉತ್ಸವ’ ಆಯೋಜಿಸಲು ಮುಂದಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಜಿಲ್ಲಾಡಳಿತ ಮತ್ತು ಸರ್ಕಾರದೊಂದಿಗೆ ಕೈಜೋಡಿಸುವುದಾಗಿ ಹೇಳಿ ಬಣ್ಣದ ಕನಸುಗಳನ್ನು ಜಿಲ್ಲೆಯ ಜನತೆಯ ಮುಂದೆ ಬಿಚ್ಚಿಟ್ಟಿದ್ದ ಕೆಟಲೆಟಿಕ್‌ ಸಂಸ್ಥೆ ಇದೀಗ ಏಕಾಏಕಿ ಪ್ರತ್ಯೇಕವಾಗಿ ‘ಬಾದಾಮಿ ಉತ್ಸವ’ ಏರ್ಪಡಿಸಲು ಮುಂದಾಗಿರುವುದು ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.

ಕೆಟಲೆಟಿಕ್‌ ಸಂಸ್ಥೆ ನಡೆಸಲು ಉದ್ದೇಶಿ ಸಿರುವ ಬಾದಾಮಿ ಉತ್ಸವ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿಲ್ಲ, ನಿಗದಿತ ಶುಲ್ಕ ತೆರಬೇಕು, ಆಹ್ವಾನಿತರಿಗೆ ಮಾತ್ರ ಉತ್ಸವಕ್ಕೆ ಪ್ರವೇಶ ನೀಡುವ ಮೂಲಕ ಸಂಪೂರ್ಣ ಖಾಸಗಿ ಯಾಗಿ ನಡೆಯುವ ಈ ಉತ್ಸವದಲ್ಲಿ ಸ್ಥಳೀಯ ಜನರನ್ನು, ಕಲಾವಿದರನ್ನು ದೂರ ವಿಡುವ ಹಾಗೂ ಕೇವಲ ಪ್ರೇಕ್ಷಕ ರನ್ನಾಗಿಸುವ ವ್ಯವಹಾರಿಕ ಧೋರಣೆ ಒಳಗೊಂಡಿದೆ ಎಂಬ ವಿರೋಧದ ಕೂಗು ಕೇಳಿಬರುತ್ತಿದೆ.

ಇದೇ 18ರಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌.ಪಾಟೀಲ ಅಧ್ಯಕ್ಷತೆಯಲ್ಲಿ ನಡೆಯಲಿರುವ ಚಾಲುಕ್ಯ ಉತ್ಸವದ ಪೂರ್ವಭಾವಿ ಸಭೆಯಲ್ಲಿ, ಕೆಟಲೆಟಿಕ್‌ ಸಂಸ್ಥೆ ನಡೆಸಲು ಉದ್ದೇಶಿಸಿ ರುವ ‘ಬಾದಾಮಿ ಉತ್ಸವ’ಕ್ಕೆ ಜಿಲ್ಲಾ ಆಡಳಿತ ಮತ್ತು ಜಿಲ್ಲೆಯ ಜನಪ್ರತಿನಿಧಿ ಗಳು ಸಹಕಾರ ಕೊಡುತ್ತಾರೆಯೇ, ಇಲ್ಲವೇ ಎಂಬುದನ್ನು ಕಾದುನೋಡ ಬೇಕಿದೆ.

ಉತ್ಸವದ ಸ್ವರೂಪ: ಬಾದಾಮಿ ಉತ್ಸವ ಕುರಿತು ‘ಪ್ರಜಾವಾಣಿ’ಗೆ ಮಂಗಳವಾರ ಮಾಹಿತಿ ನೀಡಿದ ಕೆಟಲೆಟಿಕ್‌ ಸಂಸ್ಥೆಯ ಸಹ ಸಂಸ್ಥಾಪಕ ಎಸ್‌.ಜಿ.ಪ್ರಶಾಂತ್‌, ಪ್ರವಾಸಿತಾಣಗಳಾದ ಬಾದಾಮಿ, ಪಟ್ಟದಕಲ್ಲು, ಐಹೊಳೆಗೆ ದೇಶ, ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಬಾದಾಮಿ ಉತ್ಸವ ಆಯೋಜಿಸಲಾಗಿದೆ, ಉತ್ಸವದ ಬಗ್ಗೆ ಅನ್ಯಥಾ ಭಾವಿಸುವ ಅಗತ್ಯವಿಲ್ಲ ಎಂದರು.

ಜಿಲ್ಲೆಯವರೇ ಆದ ಕೆಟಲೆಟಿಕ್‌ ಸಂಸ್ಥಾಪಕ ಭಾರತೀಯ ಭೂಸೇನೆಯ ನಿವೃತ್ತ ಉಪ ಮಹಾ ದಂಡನಾಯಕ ರಮೇಶ್‌ ಹಲಗಲಿ, ಪರಿಸರವಾದಿ ಸುರೇಶ್‌ ಹೆಬ್ಳಿಕರ್‌ ಅವರ ನೇತೃತ್ವದಲ್ಲಿ ಬಾದಾಮಿ ಉತ್ಸವ ಆಯೋಜಿಸಲು ಭರದ ಸಿದ್ಧತೆ ನಡೆದಿದ್ದು, ಉತ್ಸವ ನಡೆಸಲು ಅವಕಾಶ ನೀಡುವಂತೆ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತವನ್ನು ಶೀಘ್ರದಲ್ಲೇ ಕೋರಲಾಗುವುದು ಎಂದು ತಿಳಿಸಿದರು.

ಪಾಲೇಕರ್‌ ರಾಯಭಾರಿ: ಫೆಬ್ರುವರಿ 28, ಮಾರ್ಚ್‌ 1 ಮತ್ತು 2 ರಂದು ನಡೆಯುವ ಬಾದಾಮಿ ಉತ್ಸವದ ಪ್ರಚಾರ ರಾಯಭಾರಿಯಾಗಿ ಹಿಂದಿಯ ಪ್ರಸಿದ್ಧ ನಟ ಅಮೋಲ್‌ ಪಾಲೇಕರ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಸೂಫಿ ಸಂಗೀತ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ರಾಕ್‌ ಕ್ಲೈಂಬಿಂಗ್‌, ಏರೋ ಕ್ರೀಡೆ, ಆಹಾರ ಉತ್ಸವ, ಶ್ವಾನ ಪ್ರದರ್ಶನ, ಸಾಕ್ಷ್ಯ ಚಿತ್ರಗಳ ಪ್ರದರ್ಶನ, ಫ್ಯಾಶನ್ ಶೋ, ಖ್ಯಾತ ಕಲಾವಿದರಿಂದ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ಖ್ಯಾತ ರೂಪದರ್ಶಿ ಸುಜಾತಾ ಸೇನ್‌ ನೇತೃತ್ವದಲ್ಲಿ ರೂಪದರ್ಶಿಯರು ಇಳಕಲ್‌ ಸೀರೆ ತೊಟ್ಟು ಕ್ಯಾಟ್‌ವಾಕ್‌ ಮಾಡಲಿದ್ದಾರೆ ಎಂದರು.

ರಾಕ್‌ ಕ್ಲೈಂಬಿಂಗ್‌ನಲ್ಲಿ 15 ದೇಶಗಳ ಮತ್ತು ಭಾರತದ 200 ಪರ್ವತಾ ರೋಹಿಗಳು ಭಾಗವಹಿಸುವ ನಿರೀಕ್ಷೆ ಇದೆ. ನಿವೃತ್ತ ಲೆಫ್ಟಿನೆಂಟ್‌ ಕರ್ನಲ್‌ ಸತ್ಯೇಂದ್ರ ವರ್ಮಾ ನೇತೃತ್ವದಲ್ಲಿ ಪ್ಯಾರಾ ಗ್ಲೈಡಿಂಗ್‌ ಪ್ರದರ್ಶನ, ಬಿಸಿಗಾಳಿ ಬಲೂನಿಂಗ್‌ ಸಾಹಸ ಪ್ರದರ್ಶನ ಆಯೋಜಿಸಲಾಗಿದೆ ಎಂದು ಹೇಳಿದರು.

ವಿಜಾಪುರ, ಬಾಗಲಕೋಟೆಯಲ್ಲಿ ತಯಾರಾಗುವ ದ್ರಾಕ್ಷಿ ವೈನ್‌ ಜನಪ್ರಿಯ ಗೊಳಿಸಲು ವಿವಿಧ ನಗರಗಳಿಂದ ಬಾದಾಮಿ ಉತ್ಸವಕ್ಕೆ ಆಗಮಿಸುವವರಿಗೆ ‘ವೈನ್‌ ಪ್ರವಾಸ’ ಕೂಡ ಏರ್ಪಡಿಸ ಲಾಗುತ್ತಿದೆ ಎಂದರು.

ಬೆಟ್ಟದಲ್ಲಿ ವಾಸ
ಹೈದರಾಬಾದ್‌, ಪುಣೆ, ಮುಂಬೈ, ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಒಂದರಿಂದ ಎರಡು ಸಾವಿರ ನೋಂದಾ ಯಿತ ಪ್ರವಾಸಿಗರು ಆಗಮಿಸಲಿದ್ದು, ಅವರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು, ಗ್ರಾಫಿಕಾ ಬೆಂಗಳೂರು ಸಂಸ್ಥೆಯು ಉತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ಬಾದಾಮಿ ಬೆಟ್ಟದಲ್ಲಿ ಪ್ಲಾಜಾ ರೀತಿಯಲ್ಲಿ ಹೈಟೆಕ್‌ ಟೆಂಟ್‌ಗಳ ವ್ಯವಸ್ಥೆ ಮಾಡಲಿದೆ ಎಂದರು.

ಉತ್ಸವಕ್ಕೆ ಶುಲ್ಕ: ವಿವಿಧ ನಗರ, ಪಟ್ಟಣಗಳಿಂದ ಆಗಮಿಸುವರು (₨ 2000) ಹಾಗೂ ಉತ್ಸವದಲ್ಲಿ ಪಾಲ್ಗೊಳ್ಳುವ ಸ್ಥಳೀಯ ಪ್ರವಾಸಿಗರು (₨800) ಮತ್ತು ವಿದ್ಯಾರ್ಥಿಗಳು (₨500) ವಸತಿ, ಊಟದ ವ್ಯವಸ್ಥೆಗಾಗಿ ಶುಲ್ಕ ನೀಡಬೇಕಾಗುತ್ತದೆ ಎಂದು ತಿಳಿಸಿದರು.

ಫೇಸ್‌ಬುಕ್‌ನಲ್ಲಿ ಅಪ್‌ ಲೋಡ್‌: ‘ಬಾದಾಮಿ ಉತ್ಸವ’ದ ಸಂಪೂರ್ಣ ಮಾಹಿತಿಯನ್ನು www.facebook.com/badamifestival.ಗೆ ಅಪ್‌ಲೋಡ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT