ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲೆಂಜರ್ಸ್‌ಗೆ ಗೆಲುವಿನ ತವಕ

ಪುಟಿದೆದ್ದು ನಿಲ್ಲುವ ವಿಶ್ವಾಸದಲ್ಲಿ ಪುಣೆ ವಾರಿಯರ್ಸ್ ತಂಡ
Last Updated 22 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯಲ್ಲಿ ರಾಯಲ್   ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೆ ಆಡಿದ ಏಳು ಪಂದ್ಯಗಳಲ್ಲಿ ಐದರಲ್ಲಿ ಜಯ ಪಡೆದಿದೆ. ಈ ಐದೂ ಗೆಲುವು `ತವರು ಅಂಗಳ' ಎನಿಸಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೊರೆತದ್ದು ವಿಶೇಷ.

ಒಟ್ಟಿನಲ್ಲಿ ಉದ್ಯಾನನಗರಿಯ ಈ ಕ್ರೀಡಾಂಗಣ ಆರ್‌ಸಿಬಿಗೆ ಅದೃಷ್ಟದ ತಾಣವಾಗಿ ಪರಿಣಮಿಸಿದೆ. ಇದೇ ಅಂಗಳದಲ್ಲಿ ಇದೀಗ ಮತ್ತೊಂದು ಸವಾಲು ಎದುರಾಗಿದೆ. ಮಂಗಳವಾರ ನಡೆಯುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಚಾಲೆಂಜರ್ಸ್ ತಂಡ ಪುಣೆ ವಾರಿಯರ್ಸ್ ವಿರುದ್ಧ ಪೈಪೋಟಿ ನಡೆಸಲಿದೆ.  

ತವರು ನೆಲದಲ್ಲಿ ಅಜೇಯ ಓಟ ಮುಂದುವರಿಸುವುದು ಆರ್‌ಸಿಬಿ ತಂಡದ ಗುರಿ. ಕೊಹ್ಲಿ ಬಳಗದ ಪ್ರಭುತ್ವಕ್ಕೆ ತಡೆಯೊಡ್ಡುವುದು ಪುಣೆ ವಾರಿಯರ್ಸ್ ಲೆಕ್ಕಾಚಾರ. ಈ ಕಾರಣ ಮತ್ತೊಂದು ರೋಚಕ ಹೋರಾಟದ ನಿರೀಕ್ಷೆಯಲ್ಲಿ ಕ್ರಿಕೆಟ್ ಪ್ರೇಮಿಗಳು ಇದ್ದಾರೆ.

ವಾರಿಯರ್ಸ್ ವಿರುದ್ಧದ ಪಂದ್ಯದ ಬಳಿಕ ಆರ್‌ಸಿಬಿ ತನ್ನ ಮುಂದಿನ ಆರು ಪಂದ್ಯಗಳನ್ನು ಇತರ ನಗರಗಳಲ್ಲಿ ಆಡಲಿದೆ. ಆದ್ದರಿಂದ ಇಂದಿನ ಪಂದ್ಯದಲ್ಲಿ ಜಯ ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಬಲಪಡಿಸಿಕೊಳ್ಳುವ ಉದ್ದೇಶವನ್ನು ಚಾಲೆಂಜರ್ಸ್ ಹೊಂದಿದೆ.

ಉತ್ತಮ ಫಾರ್ಮ್‌ನಲ್ಲಿರುವ ಕ್ರಿಸ್ ಗೇಲ್, ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಎದುರಾಳಿ ಬೌಲರ್‌ಗಳಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಸೌರಭ್ ತಿವಾರಿ ಮತ್ತು ತಿಲಕರತ್ನೆ ದಿಲ್ಶಾನ್ ಕೂಡಾ ಅಬ್ಬರದ ಆಟವಾಡುವ ತಾಕತ್ತು ಹೊಂದಿದ್ದಾರೆ. ಈ ಕಾರಣ ವಾರಿಯರ್ಸ್ ಬೌಲರ್‌ಗಳು ಅಲ್ಪ ನಡುಕದೊಂದಿಗೆಯೇ ಕಣಕ್ಕಿಳಿಯಬೇಕಾಗಿದೆ.

`ಇಲ್ಲಿನ ಪರಿಸ್ಥಿತಿಗೆ ನಾವು ಚೆನ್ನಾಗಿ ಹೊಂದಿಕೊಂಡಿದ್ದೇವೆ. ಆದ್ದರಿಂದ ಗೆಲುವಿನ ಓಟ ಮುಂದುವರಿಸುವುದು ಗುರಿ' ಎಂದು ದಿಲ್ಶಾನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಮೂಲಕ ಮಂಗಳವಾರ ನಡೆಯುವ ಪಂದ್ಯದಲ್ಲಿ ತಂಡದ ಗುರಿ ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಸಂಘಟಿತ ಹೋರಾಟ ನೀಡಲು ವಿಫಲ: ಪುಣೆ ವಾರಿಯರ್ಸ್ ತಂಡ ಆಡಿದ ಏಳು ಪಂದ್ಯಗಳಲ್ಲಿ ಗೆಲುವು ಪಡೆದಿರುವುದು ಎರಡರಲ್ಲಿ ಮಾತ್ರ. ಸಂಘಟಿತ ಪ್ರಯತ್ನ ನೀಡಲು ಆಗದೇ ಇರುವುದು ತಂಡದ ವೈಫಲ್ಯಕ್ಕೆ ಕಾರಣ.

ಆಟಗಾರರು ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿಲ್ಲ. ಏಳು ಪಂದ್ಯಗಳಾಗುಷ್ಟರಲ್ಲೇ ತಂಡ ಮೂವರು ನಾಯಕರುಗಳನ್ನು ಕಂಡಿದೆ. ಏಂಜೆಲೊ ಮ್ಯಾಥ್ಯೂಸ್, ರಾಸ್ ಟೇಲರ್ ಮತ್ತು ಆ್ಯರನ್ ಫಿಂಚ್ ಈಗಾಗಲೇ ತಂಡವನ್ನು ಮುನ್ನಡೆಸಿದ್ದಾರೆ.

ಕಿಂಗ್ಸ್ ಇಲೆವೆನ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದ ಫಿಂಚ್ ಅವರೇ ಆರ್‌ಸಿಬಿ ಎದುರು ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆಯಿದೆ. ಈ ತಂಡದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ಗೆಲುವು ಪಡೆಯಬಲ್ಲ `ಬಲಿಷ್ಠ ಇಲೆವೆನ್'ನ್ನು ಆಯ್ಕೆ ಮಾಡಲು ತಂಡದ ಆಡಳಿತಕ್ಕೆ ಇನ್ನೂ ಸಾಧ್ಯವಾಗದ್ದು ಅಚ್ಚರಿಯೇ ಸರಿ.

ಆಡಿದ ಏಳು ಪಂದ್ಯಗಳಲ್ಲಿ ಪ್ರಯೋಗ ನಡೆಸಿದ್ದೇ ಹೆಚ್ಚು. ಒಟ್ಟಿನಲ್ಲಿ ಅಂತಿಮ ಇಲೆವೆನ್‌ನ ಆಯ್ಕೆಯೇ ತಂಡಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. ವಾರಿಯರ್ಸ್ ಬ್ಯಾಟಿಂಗ್‌ನಲ್ಲಿ ಫಿಂಚ್ ಅವರನ್ನೇ ಅವಲಂಬಿಸಿದೆ. ಈ ಬ್ಯಾಟ್ಸ್‌ಮನ್ ಐದು ಪಂದ್ಯಗಳಿಂದ 211 ರನ್ ಕಲೆಹಾಕಿದ್ದಾರೆ. ಕಿಂಗ್ಸ್ ಇಲೆವೆನ್ ವಿರುದ್ಧ 10 ಎಸೆತಗಳಲ್ಲಿ 34 ರನ್ ಗಳಿಸಿದ್ದ ಲೂಕ್ ರೈಟ್ ಅವರನ್ನೂ ಕಡೆಗಣಿಸುವಂತಿಲ್ಲ. ಆಲ್‌ರೌಂಡ್ ಆಟದ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುವ ಯುವರಾಜ್ ಸಿಂಗ್ ಕೂಡಾ ಇದ್ದಾರೆ. ಆದ್ದರಿಂದ ಎದುರಾಳಿ ತಂಡವನ್ನು ಆರ್‌ಸಿಬಿ ಲಘುವಾಗಿ ಪರಿಗಣಿಸುವಂತಿಲ್ಲ.

ತಾನು ಆಡಿದ ಬೆಳೆದ ಅಂಗಳದಲ್ಲಿ ರಾಬಿನ್ ಉತ್ತಪ್ಪ ಮಿಂಚುವರೇ ಎಂಬ ಕುತೂಹಲ ಕೂಡಾ ಅಭಿಮಾನಿಗಳಿಗೆ ಇದೆ. ರಾಬಿನ್ ಹೆಚ್ಚಿನ ಪಂದ್ಯಗಳಲ್ಲಿ ಉತ್ತಮ ಆರಂಭ ಪಡೆದಿದ್ದರು. ಆದರೆ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ಆಗಿಲ್ಲ. ತಂಡದಲ್ಲಿರುವ ಕರ್ನಾಟಕದ ಇನ್ನೊಬ್ಬ ಆಟಗಾರ ಮನೀಷ್ ಪಾಂಡೆಗೆ ಅಂತಿಮ ಇಲೆವೆನ್‌ನಲ್ಲಿ ಸ್ಥಾನ ಲಭಿಸಲೂಬಹುದು

ಕಿಂಗ್ಸ್ ಇಲೆವೆನ್ ಎದುರಿನ ಸೋಲಿನ ಆಘಾತದಿಂದ ವಾರಿಯರ್ಸ್ ಆಟಗಾರರು ಇನ್ನೂ ಹೊರಬಂದಿಲ್ಲ. ಭಾನುವಾರ ಮೊಹಾಲಿಯಲ್ಲಿ ನಡೆದಿದ್ದ ಪಂದ್ಯದಲ್ಲಿ 185 ರನ್‌ಗಳನ್ನು ಪೇರಿಸಿಯೂ ಗೆಲುವು ಪಡೆಯಲು ಆಗದ್ದು ದುರದೃಷ್ಟ ಎನ್ನಬೇಕು.
ಸೋಮವಾರ ಸಂಜೆಯ ವೇಳೆ ಉದ್ಯಾನನಗರಿಯ ಕೆಲವೆಡೆ ಮಳೆಯಾಗಿತ್ತು.

ಆದರೆ ಮಳೆ ಆಗಮಿಸುವ ಮುನ್ನ ಆರ್‌ಸಿಬಿ ಆಟಗಾರರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾಕಷ್ಟು ಹೊತ್ತು ಅಭ್ಯಾಸ ನಡೆಸಿದ್ದರು. ಮಂಗಳವಾರ ಮಳೆ ದೂರ ನಿಂತರೆ ಮಾತ್ರ ಪಂದ್ಯ ಸುಗಮವಾಗಿ ನಡೆಯಬಹುದು. ಹವಾಮಾನ ಇಲಾಖೆ ಪ್ರಕಾರ ಮುಂದಿನ ಎರಡು ದಿನಗಳಲ್ಲಿ ನಗರದ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ.

ತಂಡಗಳು ಇಂತಿವೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ವಿರಾಟ್ ಕೊಹ್ಲಿ (ನಾಯಕ), ಎಬಿ    ಡಿವಿಲಿಯರ್ಸ್, ಕ್ರಿಸ್ ಗೇಲ್, ತಿಲಕರತ್ನೆ ದಿಲ್ಶಾನ್, ಮಯಂಕ್ ಅಗರ್‌ವಾಲ್, ಮುತ್ತಯ್ಯ ಮುರಳೀಧರನ್, ಆರ್.ಪಿ. ಸಿಂಗ್, ಕೆ.ಎಲ್. ರಾಹುಲ್, ವಿನಯ್ ಕುಮಾರ್, ಚೇತೇಶ್ವರ ಪೂಜಾರ, ಜಯದೇವ್ ಉನದ್ಕತ್, ರವಿ ರಾಂಪಾಲ್, ಅರುಣ್ ಕಾರ್ತಿಕ್, ಡೇನಿಯಲ್ ವೆಟೋರಿ, ಡೇನಿಯಲ್ ಕ್ರಿಸ್ಟಿಯನ್, ಮೋಸೆಸ್ ಹೆನ್ರಿಕ್ಸ್, ಮುರಳಿ ಕಾರ್ತಿಕ್, ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್, ಸಯ್ಯದ್ ಮೊಹಮ್ಮದ್, ಸೌರಭ್ ತಿವಾರಿ

ಪುಣೆ ವಾರಿಯರ್ಸ್: ಏಂಜೆಲೊ ಮ್ಯಾಥ್ಯೂಸ್ (ನಾಯಕ), ಯುವರಾಜ್ ಸಿಂಗ್, ಅಭಿಷೇಕ್ ನಾಯರ್, ಆ್ಯರನ್ ಫಿಂಚ್, ರಾಬಿನ್ ಉತ್ತಪ್ಪ, ರಾಸ್ ಟೇಲರ್, ಅಜಂತಾ ಮೆಂಡಿಸ್, ಮನೀಷ್ ಪಾಂಡೆ, ಮರ್ಲಾನ್ ಸ್ಯಾಮುಯೆಲ್ಸ್, ಮಿಷೆಲ್ ಮಾರ್ಷ್, ಮಿಥುನ್ ಮನ್ಹಾಸ್, ರಾಹುಲ್ ಶರ್ಮ, ಅಶೋಕ್ ದಿಂಡಾ, ಭುವನೇಶ್ವರ್ ಕುಮಾರ್, ಲೂಕ್ ರೈಟ್, ಸ್ಟೀವನ್ ಸ್ಮಿತ್, ಟಿ. ಸುಮನ್, ಪರ್ವೀಜ್ ರಸೂಲ್, ಹರ್‌ಪ್ರೀತ್ ಸಿಂಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT