ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚನಸೂರ ಕಾರ್ಖಾನೆ, ಮನೆ ಮೇಲೆ ಲೋಕಾಯುಕ್ತ ದಾಳಿ

Last Updated 4 ಜನವರಿ 2013, 19:59 IST
ಅಕ್ಷರ ಗಾತ್ರ

ಹುಮನಾಬಾದ್: ಅಕ್ರಮ ಆಸ್ತಿ ಆರೋಪದಡಿ ಕಾಂಗ್ರೆಸ್ ಶಾಸಕ ಬಾಬುರಾವ ಚಿಂಚನಸೂರ ಅವರಿಗೆ ಸೇರಿದ ಇಲ್ಲಿನ ಗುಲ್ಬರ್ಗ ರಸ್ತೆಯ  ಕಾರ್ಖಾನೆ ಮೇಲೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ದಾಳಿ ನಡೆಸಿದರು. ಖಾಸಗಿ ದೂರಿನ ಮೇರೆಗೆ ಬೆಂಗಳೂರಿನಲ್ಲಿ ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ ಲೋಕಾಯುಕ್ತ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ದಾಳಿ ನಡೆಸಲಾಯಿತು.

ದಾಳಿ ವೇಳೆ ಅಮರ್ ವೈನರೀಸ್‌ನಲ್ಲಿ ರೂ 9 ಲಕ್ಷಕ್ಕೂ ಅಧಿಕ ನಗದು ಸಿಕ್ಕಿದೆ. ಶಕ್ತಿ ದಾಲ್ ಮಿಲ್‌ನಲ್ಲಿರೂ 5 ಲಕ್ಷಕ್ಕೂ ಅಧಿಕ ಮೊತ್ತದ ಕಟ್ಟಡ ನಿರ್ಮಾಣ ಸ್ಟೀಲ್, ಒಂದು ಟ್ರ್ಯಾಕ್ಟರ್ ಇರುವುದು ಗಮನಕ್ಕೆ ಬಂದಿದೆ. ಈ ಎಲ್ಲದರ ಜೊತೆಗೆ ಸ್ಥಳೀಯ ಎ.ಪಿ.ಎಂ.ಸಿ ಯಾರ್ಡ್‌ನಲ್ಲಿರೂ 90 ಸಾವಿರ ಬೆಲೆ ಬಾಳುವ ನಿವೇಶನಕ್ಕೆ ಸಂಬಂಧಪಟ್ಟ ದಾಖಲೆಯ ನಕಲು ಪ್ರತಿ ಪರಿಶೀಲನೆ ವೇಳೆ ದೊರೆತಿರುವುದಾಗಿ ತಿಳಿದುಬಂದಿದೆ. ಈ ವಿಚಾರವನ್ನು ಡಿ.ವೈ.ಎಸ್ಪಿ ಆರ್.ಎಸ್.ಜಹಾಗೀರ್ದಾರ್, ಇನ್‌ಸ್ಪೆಕ್ಟರ್ ಬಸು ಚವಾಣ ಅವರು ಸ್ಥಳಕ್ಕೆ ಭೇಟಿ ನೀಡಿದ ಸುದ್ದಿಗಾರರಿಗೆ ದೃಢಪಡಿಸಿದರು. ಪರಿಶೀಲನೆ ಸಂದರ್ಭದಲ್ಲಿ ಲಭ್ಯವಾದ ದಾಖಲೆ ಆಧರಿಸಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ವಿವರಿಸಿದರು. 

ಮನೆ ಮೇಲೂ ದಾಳಿ (ಗುಲ್ಬರ್ಗ ವರದಿ): ಲೋಕಾಯುಕ್ತ ಬೆಂಗಳೂರು ಕಚೇರಿಯಲ್ಲಿ ದಾಖಲಿಸಿದ್ದ ದೂರು ಆಧರಿಸಿ ಶಾಸಕ ಬಾಬುರಾವ್ ಚಿಂಚನಸೂರ ಅವರ ಗುಲ್ಬರ್ಗ ಮನೆ ಹಾಗೂ ಚಿತ್ತಾಪುರದಲ್ಲಿರುವ ಶಿಕ್ಷಣ ಸಂಸ್ಥೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ದಿಢೀರ್ ದಾಳಿ ನಡೆಸಿದರು.
ಬೆಂಗಳೂರು ಲೋಕಾಯುಕ್ತ ಕಚೇರಿ ಅಧಿಕಾರಿಗಳಷ್ಟೆ ದಾಳಿಯಲ್ಲಿ ಪಾಲ್ಗೊಂಡಿದ್ದು, ಬೆಳಿಗ್ಗೆಯಿಂದ ತಡರಾತ್ರಿವರೆಗೂ ವಿವಿಧ ದಾಖಲೆಗಳ ಪರಿಶೀಲನೆ ಕಾರ್ಯದಲ್ಲಿ ತೊಡಗಿದ್ದರು.

ಚಿತ್ತಾಪುರ ಪಟ್ಟಣದಲ್ಲಿರುವ ಶಾಸಕ ಬಾಬುರಾವ್ ಅವರ ಒಡೆತನದ ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆಯ ಬಿ.ಇಡಿ ಕಾಲೇಜಿನ ಮೇಲೆಯೂ ದಾಳಿ ಮಾಡಿದ ಲೋಕಾಯುಕ್ತ ಡಿ.ಎಸ್.ಪಿ ರವಿಕುಮಾರ ಪಾಟೀಲ್, ಪೊಲೀಸ್ ಇನ್ಸ್‌ಪೆಕ್ಟರ್ ಜೇಮ್ಸ  ಕಾಲೇಜಿನ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದರು.

ರೂ1.92 ಕೋಟಿ  ಮೌಲ್ಯದ ಆಸ್ತಿ-ಪತ್ತೆ (ಬೆಂಗಳೂರು ವರದಿ):  ಗುರು ಮಿಠಕಲ್ ಕಾಂಗ್ರೆಸ್ ಶಾಸಕ ಬಾಬುರಾವ್ ಚಿಂಚನಸೂರ್ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸೇರಿದ ಒಟ್ಟು ಎಂಟು ಸ್ಥಳಗಳ ಮೇಲೆ ಶುಕ್ರವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಅಂದಾಜುರೂ 1.92 ಕೋಟಿ  ಮೌಲ್ಯದ ಆಸ್ತಿ-ಪಾಸ್ತಿ ಕುರಿತ ದಾಖಲೆಗಳನ್ನು ಪತ್ತೆ ಮಾಡಿದ್ದಾರೆ.

ಬಾಬುರಾವ್ ಅವರು ಘೋಷಿತ ಆದಾಯಕ್ಕಿಂತರೂ 12.92 ಕೋಟಿ ಹೆಚ್ಚಿನ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಯಾದಗಿರಿಯ ಖಾನಾಳಿ ಗ್ರಾಮದ ಶಾಂತಪ್ಪ ಎಂಬುವವರು ಸಲ್ಲಿಸಿದ ಖಾಸಗಿ ದೂರು ಕುರಿತ ತನಿಖೆಯ ಅಂಗವಾಗಿ ಈ ದಾಳಿ ನಡೆದಿದೆ. ಬಾಬುರಾವ್ ಹಾಗೂ ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ಪತ್ತೆಯಾಗಿರುವ ಹಲವು ಆಸ್ತಿಗಳ ಮೌಲ್ಯಮಾಪನ ನಡೆಯುತ್ತಿದೆ ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.

ಬಾಬುರಾವ್ ಅವರ ಪತ್ನಿ ಅಮರೇಶ್ವರಿ ಅವರ ಹೆಸರಿನಲ್ಲಿ ಬೀದರ್ ಜಿಲ್ಲೆಯ ಹುಮ್ನಾಬಾದ್‌ನಲ್ಲಿ ನಾಲ್ಕು ಕೈಗಾರಿಕೆಗಳಿವೆ. ಬಾಬುರಾವ್ ಮತ್ತು ಅವರ ಕುಟುಂಬದ ಹೆಸರಿನಲ್ಲಿ ಗುಲ್ಬರ್ಗ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ವಿವಿಧ ಕಡೆ ಒಟ್ಟು 13 ಕೃಷಿ ಜಮೀನು ಇರುವುದು ಪತ್ತೆಯಾಗಿದೆ. ಬಾಬುರಾವ್ ಅವರ ಕುಟುಂಬ ಎರಡು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT