ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ ಶೂನ್ಯ ಸಾಧನೆ:ಸಿಇಒ ತರಾಟೆ

Last Updated 3 ಜುಲೈ 2013, 6:25 IST
ಅಕ್ಷರ ಗಾತ್ರ

ಚಿಂಚೋಳಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ 2013ರ ಏಪ್ರಿಲ್1ರಿಂದ ಜೂನ್ ಅಂತ್ಯದವರೆಗಿನ 3 ತಿಂಗಳಲ್ಲಿ ಒಂದು ಪೈಸೆಯೂ ಹಣ ಖರ್ಚು ಮಾಡಿಲ್ಲ. ಪಂಚಾಯಿತಿಗಳ ಸಾಧನೆ ತೃಪ್ತಿಕರವಾಗಿಲ್ಲ. ಹೀಗಾದರೆ ನಿಮಗೆ ಸಂಬಳ ಏಕೆ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಂಗಳವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕಿನ 32 ಗ್ರಾಮ ಪಂಚಾಯಿತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಗ್ರಾಮ ಸಭೆ ನಡಾವಳಿಗಳು ಮತ್ತು ಜಮಾಬಂದಿ ವರದಿ ಹಾಗೂ ಪಂಚಾಯಿತಿಯ ಸ್ಥಾಯಿ ಸಮಿತಿ ರಚನೆಯ ವಿವರ ಪಂಚತಂತ್ರದಲ್ಲಿ ದಾಖಲಿಸಿಲ್ಲ. 2013-14ನೇ ಸಾಲಿನ ಆಯವ್ಯಯ ಮತ್ತು ಯೋಜನೆ ಇನ್ನೂ ಸಲ್ಲಿಸಿಲ್ಲ ಎಂದರು.

ಇದಕ್ಕೆ ಹೊಣೆಗಾರರನ್ನಾಗಿ ಮಾಡಿ ತ್ಲ್ಲಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ವಿಚಾರಣೆಗಾಗಿ ನೋಟಿಸು ಜಾರಿ ಮಾಡಲು ಕಾರ್ಯ ನಿರ್ವಹಕ ಅಧಿಕಾರಿಗಳಿಗೆ ಸೂಚಿಸಿದ ಸಿಇಒ ಪಲ್ಲವಿ ಅಕುರಾತಿ ಅವರು, ಜುಲೈ 20ರೊಳಗೆ 32 ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ 10ಸಾವಿರ ಮಾನವ ದಿನಗಳ ಸೃಷ್ಟಿಸುವ ಗುರಿ ನೀಡಿದರು. ಗುರಿ ಸಾಧಿಸುವಲ್ಲಿ ವಿಫಲವಾದರೆ, ನಿಮ್ಮ ಮೇಲೆ ಕ್ರಮ ಜರುಗಿಸಲು ಸರ್ಕಾರಕ್ಕೆ ವರದಿ ಮಾಡಬೇಕಾಗುತ್ತದೆ ಎಂದು ಕಾರ್ಯ ನಿರ್ವಹಣಾಧಿಕಾರಿ ಎಚ್ಚರಿಕೆ ನೀಡಿದರು.

ಏಪ್ರಿಲ್ ಮೇ ತಿಂಗಳಲ್ಲಿ ಒಂದು ಪೈಸೆ ಖರ್ಚಾಗದಿದ್ದರೆ, ಮಾರ್ಚ್ ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಇದು ಹೇಗೆ ಸಾಧ್ಯ ಎಂದು ನನ್ನನ್ನು ಮೇಲಧಿಕಾರಿಗಳು ಕೇಳಿದರೆ ಏನು ಹೇಳುವುದು ಎಂದು ಸಿಇಒ ಪ್ರಶ್ನಿಸಿದರು. ಉದ್ಯೋಗ ಖಾತರಿ ಯೋಜನೆಯ ಕೂಲಿಕಾರರ ಅಂಚೆ ಕಚೇರಿಯ 24ಸಾವಿರ ಖಾತೆಗಳನ್ನು ರದ್ದು ಪಡಿಸಿ ಬ್ಯಾಂಕುಗಳಲ್ಲಿ ತೆರೆಯಲು  ನಿರ್ಲಕ್ಷ್ಯ ತೋರಿದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಕೃಷ್ಣಾ ಗ್ರಾಮೀಣ ಬ್ಯಾಂಕ್ ಕೊಂಚಾವರಂ ಶಾಖಾ ವ್ಯವಸ್ಥಾಪಕರು ಖಾತೆ ತೆರೆಯಲು ಸಹಕರಿಸುತ್ತಿಲ್ಲ ಸೂಕ್ತ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕರಿಗೆ ಸಿಇಒ ಮೊಬೈಲ್‌ನಲ್ಲಿ ಸೂಚಿಸಿದರು.

ಕಡ್ಡಾಯವಾಗಿ ಪ್ರತಿ 2 ತಿಂಗಳಿಗೊಮ್ಮೆ ಪಂಚಾಯಿತಿ ಸಾಮಾನ್ಯ ಸಭೆ ನಡೆಸಬೇಕು. ಸರ್ಕಾರದ ಸುತ್ತೋಲೆಯಂತೆ ಗ್ರಾಮ ಸಭೆ ನಡೆಸಬೇಕು. ಈ ಸಭೆ ನಡೆಸಲು ನಿರ್ಲಕ್ಷ್ಯ ತೋರಿದರೆ ಅಧ್ಯಕ್ಷರನ್ನು ವಜಾ ಮಾಡಿ, ಪಿಡಿಒ ಅವರನ್ನು ಅಮಾನತುಗೊಳಿಸಲಾಗುವುದು ಎಂದು ಉಪ ಕಾರ್ಯದರ್ಶಿ ವಸಂತ ಕುಲಕರ್ಣಿ ತಿಳಿಸಿದರು.

ಕರ ವಸೂಲಿಯಲ್ಲಿ ತಾಲ್ಲೂಕಿನ ಸಾಧನೆ ಅತ್ಯಂತ ಕಳಪೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಸಿಇಒ ಕರ ವಸೂಲಿ ಪ್ರಗತಿ ಇಲ್ಲದಿದ್ದರೆ ಆ ಪಂಚಾಯಿತಿ ಅಸ್ತಿತ್ವದಲ್ಲಿದ್ದರೂ ಇಲ್ಲದಂತೆ ಎಂದರು.

ಪಡಿತರ ಚೀಟಿ ಕಾರ್ಯದಲ್ಲಿ ಕಂಪ್ಯೂಟರ್ ಆಪರೇಟರ್ ತೊಡಗಿದ್ದರೆ, ತಾತ್ಕಾಲಿಕವಾಗಿ ಬೇರೆ ಕಂಪ್ಯೂಟರ್ ಆಪರೇಟರ್ ನೇಮಿಸಿಕೊಳ್ಳಲು ಈಗಾಗಲೇ ತಾಲ್ಲೂಕು ಪಂಚಾಯಿತಿಗೆ ತಿಳಿಸಲಾಗಿದೆ ಎಂದು ಮುಖ್ಯ ಯೋಜನಾಧಿಕಾರಿ ವಿರೂಪಾಕ್ಷಪ್ಪ ತಿಳಿಸಿದರು. ಯೋಜನಾ ನಿರ್ದೇಶಕ ಕೆಂಚಣ್ಣವರ್ ಹಾಜರಿದ್ದರು. ಜಗದೇವ ಬೈಗೊಂಡ ಸ್ವಾಗತಿಸಿ ವಂದಿಸಿದರು.

ಪಿಡಿಓಗಳ ಮೌನವೇ ಉತ್ತರ
ಜುಲೈನಿಂದ ಮಾರ್ಚ್ ಅಂತ್ಯದವರೆಗೆ ನಿಮಗೆ ನೀಡಿದ ಕರ ವಸೂಲಿ ಗುರಿ ಸಾಧಿಸಲು ನೀವು ಹಾಕಿಕೊಳ್ಳುವ ಯೋಜನೆ ಬಗ್ಗೆ ತಿಳಿಸಿ ಎಂದು ಪಿಡಿಒರನ್ನು ವೇದಿಕೆಗೆ ಕರೆದರೆ ಸಭೆಯಿಂದ ಬಂದ ಉತ್ತರ ಮೌನ. ಆದರೂ ಸುಲೇಪೇಟದ ಪಂಡಿತ ಸಿಂಧೆ ಹಾಗೂ ಕೊಂಚಾವರದ ತುಕ್ಕಪ್ಪ ತಮಗೆ ತೋಚಿದಷ್ಟು ಹೇಳಿ ಮರಳಿದರು. ಇದಕ್ಕೆ ಅಧ್ಯಕ್ಷರಾದ ಚಂದ್ರಶೇಖರ ಚೋಕಾ ಮತ್ತು ತುಳಸಿರಾಮ ಜಾಧವ್ ಧ್ವನಿ ಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT