ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಕರ ಚಾವಡಿಗೆ ರತನ್‌ ಟಾಟಾ

ವಿದೇಶಿ ಸಂಕ್ಷಿಪ್ತ ಸುದ್ದಿಗಳು
Last Updated 19 ನವೆಂಬರ್ 2013, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಉದ್ಯಮಿ ರತನ್‌ ಟಾಟಾ ಅವರು ಹವಾಯಿ ದ್ವೀಪದ ಹೊನಲುಲುನಲ್ಲಿ ಇರುವ  ಅಮೆರಿಕದ ಹೆಸರಾಂತ ಚಿಂತಕರ ಚಾವಡಿ ಈಸ್ಟ್‌ ವೆಸ್ಟ್‌ ಕೇಂದ್ರದ ಆಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

75 ವರ್ಷದ ಟಾಟಾ ಅವರು ಈ ಹಿಂದೆ 1993 ಮತ್ತು 2004ರಲ್ಲಿ  ಈ  ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದರು.

ಟಾಟಾ ಅವರು 1991ರಿಂದ 2012ರ ವರೆಗೆ ಟಾಟಾ ಸಮೂಹದ ಅಧ್ಯಕ್ಷರಾಗಿದ್ದರು. 2012ರ ಡಿಸೆಂಬರ್‌ 28ರಂದು ಅಧ್ಯಕ್ಷ ಹುದ್ದೆ ತ್ಯಜಿಸಿದ್ದರು. ಸದ್ಯ ಟಾಟಾ ಸಮೂಹದ ಗೌರವ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.

ಈಸ್ಟ್‌ ವೆಸ್ಟ್‌ ಕೇಂದ್ರ, ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಾಗಿದೆ. 1960ರಲ್ಲಿ ಅಮೆರಿಕ ಕಾಂಗ್ರೆಸ್‌ ಇದನ್ನು ಸ್ಥಾಪಿಸಿತ್ತು. ಏಷ್ಯಾ, ಪೆಸಿಫಿಕ್‌ ಮತ್ತು ಅಮೆರಿಕದ ಮಧ್ಯೆ ಬಾಂಧವ್ಯ ವೃದ್ಧಿ ಮತ್ತು ಪರಸ್ಪರ ತಿಳಿವಳಿಕೆ ಉದ್ದೇಶದಿಂದ ಈ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ.

ನಿರುಪಮಾ: ಬ್ರೌನ್‌್ ವಿವಿ ಗೌರವ ಸದಸ್ಯೆ
ವಾಷಿಂಗ್ಟನ್‌್ (ಐಎಎನ್‌್ಎಸ್‌್):
ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದ ನಿರುಪಮಾ ರಾವ್‌್ ಅವರು ಬ್ರೌನ್‌್ ವಿಶ್ವವಿದ್ಯಾಲಯದ ವ್ಯಾಟ್ಸನ್‌್ ಅಂತರರಾಷ್ಟ್ರೀಯ ಅಧ್ಯಯನ ಸಂಸ್ಥೆಯಲ್ಲಿ ಒಂದು ವರ್ಷ  ಗೌರವ ಸದಸ್ಯರಾಗಿ ಸೇವೆ ಸಲ್ಲಿಸಲಿದ್ದಾರೆ. ನೀತಿಗೆ ಸಂಬಂಧಿಸಿದ ವಿಷಯಗಳಿಗೆ ವಿವಿಧ ದೇಶಗಳ ಪ್ರತಿಕ್ರಿಯೆ ಬದಲಾಯಿಸುವಲ್ಲಿ  ಹೊಸ ಮಾಧ್ಯಮ ತಂತ್ರಜ್ಞಾನಗಳ ಪಾತ್ರ ಏನು ಎನ್ನುವುದರ ಕುರಿತು  ರಾವ್‌್ ಅವರು ಈ ಅವಧಿಯಲ್ಲಿ ಪುಸ್ತಕ ಬರೆಯಲಿದ್ದಾರೆ.

‘ಭಾರತದ ಜಾಗತಿಕ ದೃಷ್ಟಿಕೋನ ಹಾಗೂ ಅದರ ವಿದೇಶಾಂಗ  ನೀತಿ, ಆದ್ಯತೆಗಳು ಮತ್ತು  ಸವಾಲುಗಳ ಬಗ್ಗೆ  ಪುಸ್ತಕ ಬರೆಯುವುದಕ್ಕೆ ತುಂಬ ಖುಷಿಯಾಗುತ್ತದೆ’ ಎಂದು ರಾವ್‌್ ಹೇಳಿದ್ದಾರೆ.

ಮಂಗಳನಲ್ಲಿ ಗ್ರಾನೈಟ್‌ ಶಿಲೆ
ವಾಷಿಂಗ್ಟನ್‌ (ಪಿಟಿಐ):
ಮಂಗಳ ಗ್ರಹದಲ್ಲಿ ವಿಜ್ಞಾನಿ ಗಳು ಗ್ರಾನೈಟ್‌ ಪತ್ತೆ ಹಚ್ಚಿದ್ದು, ಭೂಮಿ ಮೇಲೆ ಹೇರಳ ವಾಗಿ ಲಭ್ಯವಿರುವ ಬಂಡೆಗಲ್ಲು ಅಂಗಾರಕನ ಮೇಲೆ ಹೇಗೆ ರೂಪುಗೊಂಡಿತ್ತು ಎನ್ನುವುದನ್ನು ಪತ್ತೆ ಹಚ್ಚಲು ಹೊಸ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದ್ದಾರೆ.

ಕೆಂಪು ಗ್ರಹದ ಒಳಭಾಗ ಈವರೆಗೆ ಭಾವಿಸಿರು ವುದ ಕ್ಕಿಂತಲೂ ಹೆಚ್ಚು ಸೂಕ್ಷ್ಮವಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಸಾವಿರಾರು ವರ್ಷಗಳ ಹಿಂದೆ ಮಂಗಳನಲ್ಲಿ  ಜ್ವಾಲಾಮುಖಿಯಿಂದ  ರೂಪು ಪಡೆದಿರುವ ಕಲ್ಲುಗಳಲ್ಲಿ ಮಾತ್ರ ಫೆಲ್ಡ್‌ಸ್ಪಾರ್‌, ಕಬ್ಬಿಣ ಮತ್ತು ಮ್ಯಾಗ್ನೇಷಿಯಂ ಅಪಾರ ಪ್ರಮಾಣದಲ್ಲಿವೆ. ಗ್ರಾನೈಟ್‌ ಶಿಲೆಗಳಲ್ಲೂ ಇದೇ ಖನಿಜಗಳು ಇರುತ್ತವೆ.

ಫೆಲ್ಡ್‌ಸ್ಪಾರ್‌ ಖನಿಜದಿಂದ ಮಂಗಳನ ಮೇಲೆ ಕಲ್ಲುಗಳು ಹೇಗೆ ರೂಪ ಪಡೆದವು ಎನ್ನುವುದನ್ನು ಪತ್ತೆ ಹಚ್ಚಬಹುದು. ಭೂಮಿಯ ಮೇಲೆ ಭೂಕಂಪ ಮತ್ತು ಜ್ವಾಲಾಮುಖಿ ಸಂಭವಿಸುವ ಸ್ಥಳಗಳಲ್ಲಿ ಮಾತ್ರ ಫೆಲ್ಡ್‌ಸ್ಪಾರ್‌ ಪತ್ತೆಯಾಗಿದೆ ಎಂದು ಈ ಕುರಿತು ಅಧ್ಯಯನ ನಡೆಸುತ್ತಿರುವ ತಂಡದ ಮುಖ್ಯಸ್ಥ ಜೇಮ್ಸ್‌ ರೇ ಹೇಳಿದ್ದಾರೆ.

ನಿಲ್ಲದ ಕೌಟುಂಬಿಕ ದೌರ್ಜನ್ಯ: ಅಧ್ಯಯನ
ಲಂಡನ್‌್ (ಪಿಟಿಐ):
ಆಧುನಿಕ ಕಾಲಘಟ್ಟದಲ್ಲಿಯೂ ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯಗಳಿಗೆ ಕಡಿವಾಣ ಬಿದ್ದಿಲ್ಲ  ಎಂದು ಹೊಸ ಅಧ್ಯಯನವೊಂದು ಹೇಳಿದೆ.

  ‘ಭಾರತದಲ್ಲಿ ಹಲವಾರು ವರ್ಷಗಳಿಂದ ಮಹಿಳಾಪರ ಹೋರಾಟ ನಡೆಯುತ್ತಿದ್ದರೂ ಅಲ್ಲಿ ವರದಕ್ಷಿಣೆ ಪಿಡುಗು ನಿವಾರಣೆಯಾಗಿಲ್ಲ’  ಎಂದು ಪೋರ್ಟ್ಸ್‌ ಮೌತ್‌್ ವಿಶ್ವವಿದ್ಯಾಲಯದ ಭಾಷಾ ಹಾಗೂ ಪ್ರದೇಶ ಅಧ್ಯಯನ ವಿಭಾಗ ನಡೆಸಿದ ಅಧ್ಯಯನದಲ್ಲಿ ತಿಳಿಸಲಾಗಿದೆ.

ವಿಶ್ವಸಂಸ್ಥೆ: ಮತ ಹಾಕಿದ ಪ್ಯಾಲೆಸ್ಟೈನ್‌
ವಿಶ್ವಸಂಸ್ಥೆ (ಎಎಫ್‌ಪಿ):
ಸೋಮವಾರ ನಡೆದ ವಿಶ್ವಸಂಸ್ಥೆಯ ಮಹಾಅಧಿವೇಶನ ಸಂದರ್ಭದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನು ಆಯ್ಕೆ ಮಾಡಲು ಪ್ಯಾಲೆಸ್ಟೈನ್‌  ಇದೇ ಮೊದಲ ಬಾರಿಗೆ ಮತ ಹಾಕುವ ಮೂಲಕ ತನ್ನ ಹಕ್ಕನ್ನು ಚಲಾಯಿಸಿತು.

ಯುಗೋಸ್ಲೋವಿಯಾದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಅಪರಾಧ ವಿಚಾರಣಾ ನ್ಯಾಯಮಂಡಳಿಯ ನ್ಯಾಯಾಧೀಶರ ಆಯ್ಕೆಗಾಗಿ ಸೋಮವಾರ ನಡೆದ ಆಯ್ಕೆ ಪ್ರಕ್ರಿಯಲ್ಲಿ ಪ್ಯಾಲೆಸ್ಟೈನ್‌ ಕೂಡ ಭಾಗವಹಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT