ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತನ ಬರಹಗಳ ಚಿತ್ರಲೋಕ

Last Updated 22 ಜನವರಿ 2011, 10:55 IST
ಅಕ್ಷರ ಗಾತ್ರ

ಹಿರಿಯ ಕವಿ ಡಾ. ಸಿ.ಪಿ.ಕೃಷ್ಣಕುಮಾರ್ ಅವರ ‘ಚಿಂತನ ಚಿಂತಾಮಣಿ’ ಕನ್ನಡದ ಮಹತ್ತ್ವದ ಕೃತಿಗಳ ಸಾಲಿನಲ್ಲಿ ನಿಲ್ಲಬಲ್ಲ ‘ಚಿಂತನ ಲೇಖನಗಳ ಸಂಚಯ’. ವಿಭಿನ್ನ ಕಾಲಘಟ್ಟದಲ್ಲಿ ಪ್ರಕಟವಾದ, ಇಪ್ಪತ್ತೆರಡು ವಿವಿಧ ಸಂಕಲನಗಳಲ್ಲಿ ಹಂಚಿಹೋದ ಅವರ 793 ಚಿಂತನ ಲೇಖನಗಳು ಸಾವಿರಕ್ಕೂ ಮಿಕ್ಕ ಪುಟಗಳಲ್ಲಿ ಇಲ್ಲಿ ಏಕೀಭವಿಸಿದೆ.

ಕನ್ನಡ ಭಾಷೆ, ಸಂಸ್ಕೃತಿ, ಕಾವ್ಯ, ಅಧ್ಯಾತ್ಮ, ಪುರಾಣ, ವಿಜ್ಞಾನ ಮುಂತಾದ ವಿಪುಲ ವಿಷಯಗಳಿಂದ ಬುದ್ಧಿಗೆ ಗ್ರಾಸವೀಯುವ ಇಲ್ಲಿನ ಲೇಖನಗಳು ಓದುಗರ ಎದುರು ವರ್ಣಮಯ ಚಿತ್ರಲೋಕವೊಂದನ್ನು ನಿರ್ಮಿಸಿಬಿಡುತ್ತವೆ.

ಪೂರ್ವಸೂರಿಗಳ ಉಲ್ಲೇಖ, ಕಾವ್ಯಾತ್ಮಕ ಶೈಲಿ, ವೈಚಾರಿಕ ನಿಲುವುಗಳಿಂದ ನಮ್ಮ ಮನಸ್ಸನ್ನು ಸೆರೆಹಿಡಿಯುವ ಇಲ್ಲಿಯ ಕಿರು ಲೇಖನಗಳು ಲೇಖಕರ ವಿಸ್ತಾರವಾದ ಅಧ್ಯಯನದ ಫಲ. ಕಾಳಿದಾಸ, ಭಾರವಿ, ಭರ್ತೃಹರಿ ಮುಂತಾದ ಸಂಸ್ಕೃತ ಕವಿಗಳು, ಪಂಪ, ರನ್ನ, ನಾಗಚಂದ್ರ, ಬೇಂದ್ರೆ, ಡಿವಿಜಿ, ಕುವೆಂಪು ಮುಂತಾದ ಕನ್ನಡ ಕವಿಗಳು, ಶೇಕ್ಸ್‌ಪಿಯರ್, ವರ್ಡ್ಸ್‌ವರ್ತ್ ಮುಂತಾದ ಇಂಗ್ಲಿಷ್ ಲೇಖಕರು, ಶಂಕರಾಚಾರ್ಯ, ಬುದ್ಧ, ಗಾಂಧಿ ಮುಂತಾದ ಭಾರತೀಯ ಚಿಂತಕರು- ಹೀಗೆ ಅನೇಕ ಮಹಾನುಭಾವರ ಸಮೃದ್ಧವಾದ ಸೂಕ್ತಿ ಸಿಂಚನಗಳಿಂದ ಈ ಲೇಖನಗಳು ನಮ್ಮ ಮನದಲ್ಲಿ ಮನೆಮಾಡುತ್ತವೆ. ಆಬಾಲವೃದ್ಧರಾದಿಯಾಗಿ ಎಲ್ಲರನ್ನೂ ತಣಿಸಬಲ್ಲ ಈ ಚಿಂತನಗಳು ಆಕಾರದಲ್ಲಿ ಮಾತ್ರ ಕಿರಿದು; ಆಲೋಚನೆಯಲ್ಲಿ ಹಿರಿದು.

‘ಭಾವೈಕ್ಯವೆಂಬುದು ಬಾಯಿಮಾತಿನ ಸ್ವರ್ಗವಲ್ಲ. ಅದು ಪ್ರತಿಯೊಂದು ಹೃದಯದಲ್ಲಿ ಅರಳಬೇಕಾದ ಸಹಸ್ರದಳ ಸೌಗಂಧಿಕ’ ಎಂಬ ಮಾತು ಸಮಗ್ರ ಕೃತಿಯ ಸಾರಭೂತವಾದ ಅಂಶ. ಭಾರತೀಯ ಸಂಸ್ಕೃತಿಯ ಅನುಸಂಧಾನ ಇಲ್ಲಿಯ ಪುಟಪುಟದಲ್ಲೂ ಸುವ್ಯಕ್ತ. ಡಾ. ಸಿಪಿಕೆ ಅವರಿಗಿರುವ ಕನ್ನಡದ ಕಾಳಜಿ, ಸಾಮಾಜಿಕ ದೃಷ್ಟಿ, ಚಿಂತನ ಮೌಲ್ಯಗಳ ಪ್ರೀತಿ ಇಲ್ಲಿಯ ಲೇಖನಗಳ ಒಟ್ಟು ಆಶಯ. ಸಮುದಾಯದ ಸರ್ವೋದಯಕ್ಕೆ ಏನೇನು ಬೇಕಾಗಿದೆಯೋ ಅವೆಲ್ಲವನ್ನು ಹೇಳುವ ಆದರ್ಶ ಶಿಕ್ಷಕನೊಬ್ಬನ ಮನಸ್ಸು ಇಲ್ಲಿ ಕೆಲಸ ಮಾಡಿದೆ. ಸಮಾಜದ ಓರೆಕೋರೆ ತಿದ್ದುವ, ಸಮತೆ ಸಮನ್ವಯಗಳನ್ನು ಸ್ಥಾಪಿಸುವ ಸಮತೋಲನ ಪ್ರಜ್ಞೆಯೊಂದು ಇಲ್ಲಿ ಸ್ಥಾಯಿಯಾಗಿದೆ. ಲೇಖಕರೇ ಹೇಳಿಕೊಂಡಂತೆ- ‘ಜಗತ್ತಿನಲ್ಲಿ ಜ್ಞಾತವೂ ಚಿಂತಿತವೂ ಆದುದರಲ್ಲಿ ಅತ್ಯುತ್ತಮವಾದುದನ್ನು ಓದುಗರಿಗೆ ಒದಗಿಸುವ ಉದ್ದೇಶ’ ಇಲ್ಲಿದೆ.

ಸಿಪಿಕೆ ಅವರು ಸ್ವಭಾವತಃ ಕವಿ. ಆ ಕಾರಣದಿಂದಾಗಿಯೋ ಏನೋ ಕಾವ್ಯಾನುಸಂಧಾನಕ್ಕೆ ಇಲ್ಲಿ ಅಗ್ರಪಟ್ಟ. ಕಾವ್ಯತಾಂಬೂಲ, ಕಾವ್ಯರಹಸ್ಯ, ಕಾವ್ಯಶ್ರವಣ, ಕಾವ್ಯಚಿಕಿತ್ಸೆ ಮುಂತಾದ ಶೀರ್ಷಿಕೆಗಳೊಂದಿಗೆ ‘ಜುಟ್ಟಿಗೆ ಮಲ್ಲಿಗೆಹೂವು’, ‘ಕಪ್ಪುಮೋಡದ ಬೆಳ್ಳಿಯಂಚು’, ‘ಒಳಗೇ ಬೆಳಗುವ ಬೆಳಕು’, ‘ಹಾಡು ಕೇಳಿದರೆ ಹಸಿವಿಲ್ಲ’ ಮುಂತಾದ ಲೇಖನಗಳ ಹೆಸರುಗಳೇ ಕಾವ್ಯಾತ್ಮಕವೆನಿಸುತ್ತವೆ. ಭಗವದ್ಗೀತೆಯ ‘ಪುಷ್ಪಿತಾಂ ವಾಚಂ’, ಕಾಳಿದಾಸನ ‘ವಾಗರ್ಥ ಪ್ರತಿಪತ್ತಯೇ’, ಕುಮಾರವ್ಯಾಸನ ‘ಜಾಹ್ನವೀಧರಜಾರುವನೆ’, ಪುತಿನ ಅವರ ‘ಲಘುವಾಗೆಲೆಮನ’ ಮುಂತಾದ ಸಾಲುಗಳ ವಿಶ್ಲೇಷಣೆ ಈ ಕಾವ್ಯಯೋಗದ ಫಲಗಳೆಂದೇ ಹೇಳಬಹುದು. ಕುವೆಂಪು ಅವರೊಮ್ಮೆ ಹೇಳಿದ ‘ನಾನು ಕಾವ್ಯವನ್ನು ಬದುಕುತ್ತಿದ್ದೇನೆ’ ಎಂಬ ಮಾತಿಗೆ ಪ್ರತಿಯಾಗಿ ‘ನಾನು ಜೀವಂತ ಕಾವ್ಯವಾಗಿದ್ದೇನೆ’ ಎಂಬ ಶ್ಲೇಷಾರ್ಥವಂತೂ ಸ್ವಯಂ ಒಂದು ಹನಿಗವಿತೆಯೇ!

ಶ್ರೀರಾಮಕೃಷ್ಣ ಪರಮಹಂಸರ ಕತೆಗಳು, ಸುಭಾಷಿತಗಳ ಸುಂದರ ಸೂಕ್ತಿಗಳು, ಬುದ್ಧನ ಧಮ್ಮಪದಗಳು, ರಾಮಾಯಣ-ಮಹಾಭಾರತಗಳ ದೃಷ್ಟಾಂತಗಳು ನಮ್ಮ ಭಾರತೀಯ ಸಂಸ್ಕೃತಿಯ ಸಂಕಥನವನ್ನೇ ಬಹು ಮನೋಜ್ಞವಾಗಿ ಕಟ್ಟಿಕೊಡುತ್ತವೆ. ಶರಣರ ವಚನಗಳು, ಹರಿದಾಸರ ಕೀರ್ತನೆಗಳು, ಹಾಗೂ ಜನಪದ ಗೀತೆಗಳ ಉದಾಹರಣೆಗಳಿಂದ ಅವರು ಹರಿಸುವ ಚಿಂತನಲಹರಿ ಸ್ವೋಪಜ್ಞವಾದುದು. ಅಂತಹ ಕಡೆಗಳಲ್ಲಿ ಸಿಪಿಕೆ ಅವರ ಕವಿ ಹೃದಯದ ಸೌಂದರ್ಯಪ್ರಜ್ಞೆ ಗರಿಗೆದರುತ್ತದೆ.

ಸೀತೆ ಮತ್ತು ದ್ರೌಪದಿ, ಕರ್ಣ ಮತ್ತು ವಿಕರ್ಣ, ಮಾರೀಚ ಮತ್ತು ಶಕುನಿ, ವಿಜ್ಞಾನ ಮತ್ತು ಕಾವ್ಯ, ಬಡವ ಮತ್ತು ವಡಬ ಮುಂತಾದ ಚಿಂತನಗಳಲ್ಲಿ ವೈಚಾರಿಕತೆಯ ಸೂಕ್ಷ್ಮ ಒಳನೋಟಗಳಿವೆ: ‘ಆತ್ಮಪ್ರತ್ಯಯ ಮತ್ತು ಅಹಂಕಾರ’ದ ಮನೋವಿಜ್ಞಾನ, ‘ಪ್ರತಿಮಾದೃಷ್ಟಿ’ಯ ಕಾವ್ಯಮೀಮಾಂಸೆ, ‘ಏಕಾಂತ ಮತ್ತು ಲೋಕಾಂತ’ದ ಪ್ರಾರ್ಥನೆ, ‘ಅರ್ಥಶೌಚ’ದ ಆಚರಣೆ, ‘ಪುಸ್ತಕ ಸಂಸ್ಕೃತಿ’ಯ ಕಳಕಳಿ ಮುಂತಾದವುಗಳು ಓದುಗನನ್ನು ಚಿಂತನೆಗೆ ಹಚ್ಚುವ ಕಿಡಿಗಳು. ‘ಸಂಕರ ಸ್ಥಿತಿ ತೊಲಗಿ ಶಂಕರಸ್ಥಿತಿಗೆ ಬರಬೇಕು, ಇರುವಿಕೆಗಿಂತ ಆಗುವಿಕೆ ಮುಖ್ಯ, ಸಂಸಾರವೆನ್ನುವುದು ಕೋಟೆಯಂತೆ- ಅದು ಕೋಟಲೆ ಆಗಬಾರದು ಇತ್ಯಾದಿ ಸಾಲುಗಳು ಸಿಪಿಕೆ ವಿಚಾರವಾಹಿನಿಯ ರಸಸ್ಥಾನಗಳು. ಅಂತಹ ಕಡೆಗಳಲ್ಲಿ ಓದುಗ ಒಂದಷ್ಟು ಹೊತ್ತು ನಿಂತು ಆನಂದವನ್ನು ಅನುಭವಿಸಿ ಮತ್ತೆ ಮುಂದೆ ಹೋಗುವಂತಾಗುತ್ತದೆ.

ಗಂಭೀರ ವಿಷಯಗಳನ್ನು ಲಲಿತವಾಗಿ ನಿರೂಪಿಸುವ ಸಿಪಿಕೆ ಶೈಲಿಯಂತೂ ಈ ಲೇಖನಗಳನ್ನು ರಸಾರ್ದ್ರಗೊಳಿಸಿದೆ. ಶಬ್ದಾರ್ಥ ಚಿಂತನೆಯನ್ನು ಹರಿಸುತ್ತಾ ‘ಭಾಷೆಯೊಂದರಲ್ಲಿ ಎರಡು ಶಬ್ದಗಳು ಸಮಾನಾರ್ಥಕಗಳಲ್ಲ’ ಎಂದು ಹೇಳಿ ‘ಪರಮ ಪತಿವ್ರತೆಗೆ ಗಂಡನೊಬ್ಬ ಕಾಣಿರೋ’ ಎಂಬ ವಚನವನ್ನು ಉದಾಹರಿಸುವ ಅವರ ಶೈಲಿ ಅನನ್ಯವಾದುದು.

ಭಗದ್ಗೀತೆಯ ಸ್ಥಿತಪ್ರಜ್ಞೆ, ಭಾಸನ ಭಾಗ್ಯಪಂಕ್ತಿ, ವಿವೇಕಾನಂದರ ದರಿದ್ರದೇವರು, ಶಂಕರಾಚಾರ್ಯರ ಕಾಲಕ್ರೀಡೆ, ಕುವೆಂಪು ಅವರ ಅನಿಕೇತನತ್ವ, ಅರವಿಂದರ ಚತುರ್ಮುಖ ಸೌಂದರ್ಯ ಮುಂತಾದ ಅನೇಕ ಆಧ್ಯಾತ್ಮಿಕ ಕೀಲಿಕೈಗಳನ್ನು ಕುರಿತು ಇಲ್ಲಿ ವಿವೇಚಿಸಲಾಗಿದೆ. ಬುದ್ಧನು ಹೇಳಿದ ಶೀಲಗಂಧ, ಬೈಬಲ್ ಹೇಳಿದ ಶಬ್ದದ ಬೆಳಕು, ಷೆಲ್ಲಿ ಕವಿಯ ಪ್ರೇಮತತ್ತ್ವ, ಜನ್ನನ ಹಿಂಸಾರಭಸಮತಿ ಇಂತಹ ಹತ್ತಾರು ಪರಿಭಾಷೆಗಳ ಸುತ್ತ ಸುಳಿಯುವ ಚಿಂತನೆಗಳು ನಮ್ಮೊಳಗೆ ಕಾಲ-ದೇಶ-ಪಾತ್ರಗಳ ಹೊಸ ಭಾವಲೋಕವೊಂದನ್ನು ಸೃಷ್ಟಿಗೈದು ವಿಹಾರಸುಖವನ್ನು ನೀಡುತ್ತವೆ.

ಕಾವ್ಯಾನಂದಕ್ಕೆ ಕವಿತೆಯೇ ಬೇಕು, ಕಾದಂಬರಿಯೇ ಬೇಕೆಂಬ ರೂಢಿಗತ ಭಾವನೆ ಹುಸಿಯಾಗಿ ಚಿಂತನಗ್ರಂಥವೂ ಸುಖಪ್ರದವಾಗಬಲ್ಲುದೆಂಬುದಕ್ಕೆ ಈ ಕೃತಿ ಉತ್ತಮ ಉದಾಹರಣೆ.

ಚಿಂತನ ಚಿಂತಾಮಣಿ
ಲೇ: ಸಿಪಿಕೆ
ಪು:1040; ಬೆ: ರೂ. 800
ಪ್ರ: ನಾಗಾರ್ಜುನ ಎಂಟರ್‌ಪ್ರೈಸಸ್, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT