ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತನ ಶಿಬಿರ ಆಯೋಜನೆ: ಕಾಂಗ್ರೆಸ್ ಚಿಂತನೆ

Last Updated 12 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಸಕ್ತ ಸಾಲಿನ ಚಳಿಗಾಲದ ಸಂಸತ್ ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್ ಪಕ್ಷವು ಮಹತ್ವದ `ಚಿಂತನ ಶಿಬಿರ~ ನಡೆಸುವ ಆಲೋಚನೆಯಲ್ಲಿದೆ.ರಾಜಸ್ತಾನದ ರಮ್ಯತಾಣ ಮೌಂಟ್ ಅಬುವಿನಲ್ಲಿ ಉದ್ದೇಶಿತ ಸಮಾವೇಶವನ್ನು ನಡೆಸುವ ಬಗ್ಗೆ ಈಗ ಗಂಭೀರವಾಗಿ ಚಿಂತಿಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಗಾಂಧಿವಾದಿ ಅಣ್ಣಾ ಹಜಾರೆ ಹಾಗೂ ಬಾಬಾ ರಾಮದೇವ್ ಅವರು ಭ್ರಷ್ಟಾಚಾರ ನಿಗ್ರಹ ಮತ್ತು ವಿದೇಶದಲ್ಲಿರುವ ಭಾರತೀಯರ ಕಪ್ಪು ಹಣವನ್ನು ವಾಪಸ್ ತರಬೇಕೆಂದು ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಗಳೇ ಈ ಚಿಂತನ ಶಿಬಿರದ ಆಲೋಚನೆಗೆ ದಾರಿ ಮಾಡಿಕೊಟ್ಟಿದೆ ಎಂದು ಮೂಲಗಳು ವಿವರಿಸಿವೆ.

ನವೆಂಬರ್ ವೇಳೆಗೆ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು ಅದಕ್ಕೂ ಮುನ್ನವೇ ಈ ಶಿಬಿರ ಆಯೋಜಿಸುವ ಇರಾದೆ ಪಕ್ಷದ್ದು. ಇದರಿಂದ ಮುಂದಿನ ವರ್ಷ ಉತ್ತರ ಪ್ರದೇಶವೂ ಸೇರಿದಂತೆ ಇತರೆಡೆ ನಡೆಯುವ ವಿಧಾನಸಭಾ ಚುನಾವಣೆಗಳ ಬಗ್ಗೆಗೂ ಅಲ್ಲಿ ಚಿಂತಿಸಿದರಾಯಿತು ಎಂದು ಪಕ್ಷವು ಭಾವಿಸಿರುವುದಾಗಿ ಮೂಲಗಳು ಹೇಳಿವೆ.

`ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿಷಯಗಳು ಸದ್ಯಕ್ಕೀಗ ಕಾಂಗ್ರೆಸ್ ಪಕ್ಷಕ್ಕೆ ತೀರಾ ಸವಾಲಿನ ಸಂಗತಿಗಳಾಗಿ ಪರಿಣಮಿಸಿವೆ. ಪಕ್ಷದೊಳಗಿನ ಹಿರಿಯ ಮತ್ತು ಕಿರಿಯ ನಾಯಕರು ಇನ್ನಿಲ್ಲದಂತೆ ಪಕ್ಷದ ಇಮೇಜನ್ನು ಉಳಿಸಿಕೊಳ್ಳುವ ಪ್ರಯತ್ನಗಳಲ್ಲಿ ನಿರತರಾಗಿದ್ದಾರೆ.
 
ಇವು ರಾಷ್ಟ್ರೀಯ ವಿಷಯಗಳೂ ಆಗಿರುವುದರಿಂದ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರು ಶಿಬಿರವನ್ನು ಶೀಘ್ರವೇ ನಡೆಸುವುದಕ್ಕೆ ಸೈ ಎಂದಿದ್ದಾರೆ~ ಎಂದು ಮೂಲಗಳು ಹೇಳಿವೆ.

ಇಂತಹ ಶಿಬಿರ ನಡೆಸುವುದರಿಂದ ಪಕ್ಷದಲ್ಲಿರುವ ಭವಿಷ್ಯದ ನಾಯಕರ ಅಂಬೋಣಗಳು ಏನೆಂಬುದನ್ನು ತಿಳಿಯುವ ಕಾತುರ ಸೋನಿಯಾ ಅವರದ್ದು. ಇವರ ಚಿಂತನೆ, ಬೌದ್ಧಿಕ ಕಸುವು ಎಷ್ಟೆಂಬುದೂ ಇಲ್ಲಿ ಒರೆಗೆ ಹತ್ತಲಿದೆ ಎಂದು ಸೋನಿಯಾ ನಿರೀಕ್ಷಿಸುತ್ತಿರುವುದಾಗಿ ಮೂಲಗಳು ವಿವರಿಸಿವೆ.

ಈ ವರ್ಷದ ಆರಂಭದಲ್ಲೇ ಇಂತಹ ಚಿಂತನ ಶಿಬಿರ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆಯಾದ ಕಾರಣ ಅದನ್ನು ಮಾರ್ಚ್ ವೇಳೆಗೆ ಮುಂದೂಡಲಾಗಿತ್ತು. ಆದರೆ ಆಗ ಬಜೆಟ್ ಸಮಯವಾದ್ದರಿಂದ ಶಿಬಿರ ನಡೆಯಲೇ ಇಲ್ಲ. ಹೀಗಾಗಿ ಚಳಿಗಾಲದ ಸಂಸತ್ ಅಧಿವೇಶನಕ್ಕೂ ಮುನ್ನ ಇಂತಹ ಸಮಾವೇಶ ನಡೆಸಲು ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

2004ರಲ್ಲಿ ಯುಪಿಎ-2 ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಡೆಯಲಿರುವ ಇಂತಹ ಸಮಾವೇಶ ಮೊದಲ ಸಮಾವೇಶ ಎನ್ನಿಸಿಕೊಳ್ಳಲಿದೆ. ಹಲವಾರು ಗಂಭೀರ ಹಗರಣಗಳು, ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧದ ದನಿಗಳು ದೇಶದಾದ್ಯಂತ ಗಟ್ಟಿಯಾಗಿರುವ ಸಂದರ್ಭದಲ್ಲಿ ಕಾಂಗ್ರೆಸ್ ಈ ಸಮಾವೇಶದ ಆಯೋಜನೆಯನ್ನು ಪ್ರಮುಖ ಸವಾಲಾಗಿಯೇ ಸ್ವೀಕರಿಸಿದೆ ಎಂದು ಮೂಲಗಳು ಹೇಳಿವೆ.

ಸೋನಿಯಾ ಗಾಂಧಿ ಅವರು 1998ರಲ್ಲಿ ಸೀತಾರಾಂ ಕೇಸರಿ ಅವರಿಂದ ಪಕ್ಷದ ಚುಕ್ಕಾಣಿಯನ್ನು ತಮ್ಮ ಕೈಗೆ ತೆಗೆದುಕೊಂಡಾಗ ಮಧ್ಯಪ್ರದೇಶದ ಪಚಮಡಿಯಲ್ಲಿ ಮೊದಲಿಗೆ ಇಂತಹ ಸಮಾವೇಶ ನಡೆಸಲಾಗಿತ್ತು. ಆಗ ಪಕ್ಷ ಅಧಿಕಾರದಲ್ಲಿ ಇರಲಿಲ್ಲ. ಕಾಂಗ್ರೆಸ್‌ಗೆ ಆಗ ನಿಜಕ್ಕೂ ಅದು ಕೌತುಕದ ಕಾಲಘಟ್ಟವೇ ಆಗಿತ್ತು.

ಎಂಟು ವರ್ಷಗಳ ನಂತರ ಮತ್ತೆ 2003ರಲ್ಲಿ ಇಂತಹುದೇ ಸಮಾವೇಶವನ್ನು ಶಿಮ್ಲಾದಲ್ಲಿ ನಡೆಸಲಾಯಿತು. ಆಗ ಪಕ್ಷವು ದೇಶದಲ್ಲಿನ ಜಾತ್ಯತೀತ ಶಕ್ತಿಸಂಚಯವನ್ನೇ ಮುಖ್ಯ ವಿಷಯವನ್ನಾಗಿಸಿಕೊಂಡಿತ್ತು. ಪರಿಣಾಮ 2004ರಲ್ಲಿ ಮತ್ತೆ ಅಧಿಕಾರಕ್ಕೂ ಏರಿತು.

ಈಗಿನ ಸಮಯವನ್ನು ಸಂದಿಗ್ಧ ಸಮಯವೆಂದೇ ಭಾವಿಸಿರುವ ಕಾಂಗ್ರೆಸ್ ಮತ್ತೆ ಇಂತಹುದೊಂದು ಬೌದ್ಧಿಕ ಕಸರತ್ತಿಗೆ ತಯಾರಾಗಿದೆ. ಪಕ್ಷದ ಹಿರಿಯ ನಾಯಕ ಪ್ರಣವ್ ಮುಖರ್ಜಿ ಅದಕ್ಕಾಗಿ ಎಲ್ಲ ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT