ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿಯಲ್ಲಿ ಪ್ರತಿ ಹೆಜ್ಜೆ ಕುತೂಹಲ

Last Updated 6 ಏಪ್ರಿಲ್ 2013, 10:06 IST
ಅಕ್ಷರ ಗಾತ್ರ

ಚಿಂತಾಮಣಿ: ಇಲ್ಲಿನ ವಿಧಾನಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಮೂಡಿದ್ದ ಗೊಂದಲ ಸದ್ಯಕ್ಕೆ ತಿಳಿಯಾಗಿದ್ದು, ಶಾಸಕ ಡಾ. ಎಂ.ಸಿ.ಸುಧಾಕರ್-ಸ್ವತಂತ್ರ, ಜೆ.ಕೆ.ಕೃಷ್ಣಾರೆಡ್ಡಿ-ಜೆಡಿಎಸ್, ವಾಣಿ ಕೃಷ್ಣಾರೆಡ್ಡಿ-ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲವಾದ ತ್ರಿಕೋನ ಸ್ಪರ್ಧೆ ನಡೆಯಲಿದೆ.

ಕಳೆದ ಮೂರು ತಲೆಮಾರುಗಳಿಂದ ಸದಾ ಭಿನ್ನಮತದ ಸುಳಿಯಲ್ಲಿ ಸಿಲುಕಿ ಏಟಿಗೆ ಎದಿರೇಟು ಹಾಕಲು ಹವಣಿಸುತ್ತಿದ್ದ  ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಕೊನೆಗೊಳ್ಳುವ ಸಾಧ್ಯತೆಯಿದೆ. ಹಾಲಿ ಶಾಸಕ ಡಾ. ಎಂ.ಸಿ.ಸುಧಾಕರ್ ಕಾಂಗ್ರೆಸ್ ಟಿಕೆಟ್ ಪಡೆಯದೇ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ವಾಣಿ ಕೃಷ್ಣಾರೆಡ್ಡಿಯವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಮಾಜಿ ಸಚಿವ ಕೆ.ಎಂ.ಕೃಷ್ಣಾರೆಡ್ಡಿಯವರ ನಿಧನದ ನಂತರ ಛಿದ್ರಛಿದ್ರವಾಗಿದ್ದ ಜೆ.ಕೆ.ಕೃಷ್ಣಾರೆಡ್ಡಿ ಗುಂಪು, ಟಿ.ಎನ್.ರಾಜಗೋಪಾಲ್ ಗುಂಪು, ಕುರ‌್ಲಾರೆಡ್ಡಿ ಮತ್ತು ಜೆಪಿ.ರೆಡ್ಡಿ ಗುಂಪುಗಳು ಈಗ ಒಂದಾಗಿ ಜೆ.ಕೆ.ಕೃಷ್ಣಾರೆಡ್ಡಿಯವರ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿವೆ. ಭಿನ್ನಮತ ಎಲ್ಲವನ್ನೂ ಬದಿಗಿರಿಸಿ, ಚುನಾವಣೆ ಎದುರಿಸಲು ಗುಂಪುಗಳ ನಾಯಕರು ಸಿದ್ಧತೆ ನಡೆಸಿದ್ದಾರೆ.

ಶಾಸಕ ಡಾ. ಎಂ.ಸಿ.ಸುಧಾಕರ್ ಅವರು ಕಾಂಗ್ರೆಸ್‌ನಲ್ಲಿ ಪ್ರಭಾವಿ ನಾಯಕರೆಂದು ಎನಿಸಿಕೊಂಡರೂ ಪಕ್ಷದಲ್ಲಿ ಗ್ರಾಮಪಂಚಾಯಿತಿಯಿಂದ ಹಿಡಿದು ಎಲ್ಲ ಚುನಾವಣೆಗಳಲ್ಲೂ ಬಿ.ಫಾರಂಗಳನ್ನು ಪಡೆದುಕೊಳ್ಳಲು ಪ್ರಯಾಸ ಪಡಬೇಕಾಗುತ್ತಿತ್ತು. ಪ್ರತಿ ಬಾರಿ ನಿರಾಕರಣೆಯೇ ಕಾಂಗ್ರೆಸ್ ಮುಖಂಡರ ಉತ್ತರವಾಗುತ್ತಿದ್ದ ಕಾರಣ ಅವರು ಬೇಸರಗೊಂಡಿದ್ದರು. ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲೂ ಅನ್ಯಾಯವಾಗಿದೆ ಎಂದು ಅವರು ಆರೋಪಿಸಿದ್ದರು. ಈ ಎಲ್ಲ ಬೆಳವಣಿಗೆಯಿಂದ ಅವರ ಬೆಂಬಲಿಗರು ಪಕ್ಷವನ್ನು ಬಿಡುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಕ್ಷೇತ್ರದಲ್ಲಿ ಎರಡು ಮನೆತನಗಳದ್ದೇ ರಾಜಕೀಯ ಮುಂದುವರಿದಿದೆ. ಈ ಬಾರಿ ಡಾ.ಎಂ.ಸಿ.ಸುಧಾಕರ್ ಅವರು ಗೆಲ್ಲುವ ಮೂಲಕ ಎಂ.ಸಿ.ಆಂಜನೇಯರೆಡ್ಡಿಯವರ ಮನೆತನ ಆಧಿಪತ್ಯ ಸಾಧಿಸುವುದೇ ಅಥವಾ ವಾಣಿ ಕೃಷ್ಣಾರೆಡ್ಡಿಯವರ ಮೂಲಕ ಟಿ.ಕೆ.ಗಂಗಿರೆಡ್ಡಿ ಮನೆತನ ತನ್ನ ಹಿಡಿತ ಸಾಧಿಸುವುದೋ ಕಾದು ನೋಡಬೇಕು.

ಜೆಡಿಎಸ್‌ನಿಂದ ಸ್ಪರ್ಧಿಸಲಿರುವ ಜೆ.ಕೆ.ಕೃಷ್ಣಾರೆಡ್ಡಿ ಬೆಂಗಳೂರಿನವರಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಸಮಾಜಸೇವೆಯ ಹೆಸರಿನಲ್ಲಿ ದಾನ ಧರ್ಮ ಮಾಡುತ್ತಾ ಬಂದಿದ್ದಾರೆ. ಪ್ರಸ್ತುತ ಜೆಡಿಎಸ್ ಪಕ್ಷಕ್ಕೆ ಸೇರಿಕೊಂಡು ಸ್ಪರ್ಧೆಗಿಳಿದಿದ್ದು ಪ್ರಬಲ ಹೋರಾಟ ನಡೆಸುತ್ತಿದ್ದಾರೆ. ಜೆಡಿಎಸ್ ಹೈಕಮಾಂಡ್‌ನ ನಿರ್ಧಾರದಿಂದ ಬೇಸತ್ತಿರುವ ವಾಣಿ ಕೃಷ್ಣಾರೆಡ್ಡಿಯವರು ಕಾಂಗ್ರೆಸ್ ಸೇರ್ಪಡೆಯಾಗಿರುವುದು ಗೆಲುವು ತರುವುದೇ ಅಥವಾ ಸೋಲಿಗೆ ಕಾರಣವಾಗುವುದೇ ಕಾದು ನೋಡಬೇಕು. ಬಿಜೆಪಿಯಿಂದ ಸತ್ಯನಾರಾಯಣ ಮಹೇಶ್, ಕೆಜೆಪಿಯಿಂದ ಕುರ‌್ಲಾರೆಡ್ಡಿ, ಸಿಪಿಎಂನಿಂದ ಸಿ.ಗೋಪಿನಾಥ್ ಸ್ಪರ್ಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT