ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆ ನೆಪ: ರೋಗಿಗಳಿಗೆ ಮೋಸ

Last Updated 21 ಮೇ 2012, 5:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಹೆಚ್ಚು ಶಿಕ್ಷಣ ಪಡೆದ ವೈದ್ಯರು ಚಿಕಿತ್ಸೆ ನೀಡುವ ನೆಪದಲ್ಲಿ ರೋಗಿಗಳನ್ನು ಹೆಚ್ಚು ಮೋಸ ಮಾಡುತ್ತಿದ್ದಾರೆ. ಇದರ ಬದಲು ಅರ್ಪಣಾ ಮನೋಭಾವದಿಂದ ದುಡಿಯಬೇಕು~ ಎಂದು ಸಂಸದ ಪ್ರಹ್ಲಾದ ಜೋಶಿ ಕರೆ ನೀಡಿದರು.

ನಗರದ ಕಿಮ್ಸ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ಹುಬ್ಬಳ್ಳಿಯ ಶಾಖೆಯ 43ನೇ ವರ್ಷದ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಕ್ರಮದ ಉದ್ಘಾಟನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

`ನಿರಂತರ ವೈದ್ಯಕೀಯ ಶಿಕ್ಷಣದಿಂದ ವೈದ್ಯರಿಗೇ ಲಾಭ. ವೈದ್ಯಕಿಯ ಕ್ಷೇತದಲ್ಲಿಯ ಆವಿಷ್ಕಾರಗಳನ್ನು ಅರಿಯಲು ಸಾಧ್ಯವಾಗುತ್ತದೆ. ಇವನ್ನೆಲ್ಲ ಅರಿತು ಭೇದಭಾವ ಮಾಡದೆ ಎಲ್ಲ ವರ್ಗದ ರೋಗಿಗಳನ್ನು ಒಂದೇ ರೀತಿ ಕಂಡು  ಚಿಕಿತ್ಸೆ ನೀಡಬೇಕು~ ಎಂದು ಅವರು ಕಿವಿಮಾತು ಹೇಳಿದರು.

`120 ಕೋಟಿಗೂ ಅಧಿಕ ಜನಸಂಖ್ಯೆ ಇರುವ ಈ ದೇಶದಲ್ಲಿ ಬಡತನ ಹೆಚ್ಚು. ಜೊತೆಗೆ ವೈವಿಧ್ಯ ರೋಗಗಳೂ ಹೆಚ್ಚು. ಅವುಗಳನ್ನು ಗುರುತಿಸಿ, ಪರೀಕ್ಷಿಸಿ ಚಿಕಿತ್ಸೆ ನೀಡುವುದು ವೈದ್ಯರಿಗೆ ಸವಾಲು. ಇದಕ್ಕಾಗಿ ನಿರಂತರ ವೈದ್ಯಕೀಯ ಶಿಕ್ಷಣ ಬೇಕು~ ಎಂದು ಅವರು ಹೇಳಿದರು.

ಸಮಾರಂಭವನ್ನು ಉದ್ಘಾಟಿಸಿದ ಮೈಸೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದ ಸ್ವಾಮೀಜಿ ಮಾತನಾಡಿ, ರೋಗಿಗಳಿಗೆ ಗೆಳೆಯನಾಗಿ, ತತ್ವಜ್ಞಾನಿಯಾಗಿ ಹಾಗೂ ಮಾರ್ಗದರ್ಶಿಯಾಗಿ ವೈದ್ಯರು ಚಿಕಿತ್ಸೆ ನೀಡಬೇಕು ಎಂದರು.

`ದೈಹಿಕ ಆರೋಗ್ಯಕ್ಕೂ ಮುನ್ನ ಮಾನಸಿಕ ಆರೋಗ್ಯ ಮುಖ್ಯ. ಸ್ವಾರ್ಥ, ಅಸಹನೆ ಮೊದಲಾದ ಗುಣಗಳನ್ನು ಹೊಡೆದೋಡಿಸಿ ಯೋಗ ಹಾಗೂ ಧ್ಯಾನ ಮೂಲಕ ಮಾನಸಿಕ ಆರೋಗ್ಯ ಗಳಿಸಿಕೊಳ್ಳಲು ಸಾಧ್ಯ. ಇದರಿಂದ ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ~ ಎಂದು ಅವರು ಸಲಹೆ ನೀಡಿದರು.

ಮುಖ್ಯ ಅತಿಥಿಯಾದ ಕಿಮ್ಸ ನಿರ್ದೇಶಕಿ ಡಾ.ವಸಂತಾ ಕಾಮತ್ ಮಾತನಾಡಿ, ವೈದ್ಯಕೀಯದಲ್ಲಿ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ. ಇವುಗಳನ್ನು ಅರಿಯಲು ಹಾಗೂ ಜ್ಞಾನವನ್ನು ಗಳಿಸಿಕೊಳ್ಳಲು ಮತ್ತು ಹೊಸ ದೃಷ್ಟಿಕೋನ ಬೆಳೆಸಿಕೊಳ್ಳಲು ನಿರಂತರ ವೈದ್ಯಕೀಯ ಶಿಕ್ಷಣ ಅಗತ್ಯವಾಗಿದೆ. ಜೊತೆಗೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದರು.

ಕಿಮ್ಸ ನಿರ್ದೇಶಕಿ ಡಾ.ವಸಂತಾ ಕಾಮತ್ ಅವರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು. ಡಾ.ವಿನೋದ ಕುಲಕರ್ಣಿ, ಡಾ.ರವಿ ನೇಮಗೌಡ ವೇದಿಕೆ ಮೇಲಿದ್ದರು.  ಐಎಂಎ ಹುಬ್ಬಳ್ಳಿಯ ಶಾಖೆ ಅಧ್ಯಕ್ಷ ಕೆಎಂಪಿ ಸುರೇಶ ಅಧ್ಯಕ್ಷತೆ ವಹಿಸಿದ್ದರು. ಸಿಎಂಇ ಅಧ್ಯಕ್ಷ ಡಾ.ಕ್ರಾಂತಿಕಿರಣ್ ಸ್ವಾಗತಿಸಿದರು. ಡಾ.ಅಜರ್ ಕಿತ್ತೂರ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT