ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆ ಸಿಕ್ಕಿದ್ದರೆ ನಮ್ಮ ಮಕ್ಕಳು ಬದುಕುತ್ತಿದ್ದರು...

Last Updated 4 ಆಗಸ್ಟ್ 2012, 8:10 IST
ಅಕ್ಷರ ಗಾತ್ರ

ಕೆಜಿಎಫ್: ಒಂದೇ ವಾರದಲ್ಲಿ ಡೆಂಗೆ ಜ್ವರದಿಂದ ಇಬ್ಬರು ಬಾಲಕರು ಮೃತಪಟ್ಟ ಹಿನ್ನಲೆಯಲ್ಲಿ ಗಾಂಧಿ ನಗರ ಬಡಾವಣೆಯಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.

ಒಂದೇ ಕುಟುಂಬಕ್ಕೆ ಸೇರಿದ, ಒಂದೇ ಶಾಲೆಯಲ್ಲಿ ಓದುತ್ತಿರುವ ಇಬ್ಬರು ಪ್ರಾಥಮಿಕ ಶಾಲೆಯ ಮಕ್ಕಳು ಒಂದು ವಾರದ ಅಂತರದಲ್ಲಿ ಡೆಂಗೆ ಜ್ವರಕ್ಕೆ ಬಲಿಯಾಗಿರುವುದು  ಬಡಾವಣೆಯ ಪೋಷಕರಲ್ಲಿ ಆತಂಕ ಮೂಡಿಸಿದೆ.

ಸಣ್ಣ ಮಕ್ಕಳು ಸ್ವಲ್ಪ ಕೆಮ್ಮಿದರೂ ಸಾಕು, ಮಕ್ಕಳ ಆರೋಗ್ಯದ ಬಗ್ಗೆ ಪೋಷಕರಲ್ಲಿ ಅನುಮಾನ ಮೊಳಕೆಯೊಡೆಯುತ್ತದೆ. ಅನಾವಶ್ಯಕ ಒತ್ತಡಕ್ಕೆ ಪೋಷಕರು ಒಳಗಾಗುತ್ತಿದ್ದಾರೆ. ಕೆಲವು ಸ್ಥಿತಿವಂತರು ಸದ್ಯಕ್ಕೆ ಈ ಬಡಾವಣೆಯ ಸಹವಾಸವೇ ಬೇಡ ಎಂದು ಮಕ್ಕಳನ್ನು ತಮ್ಮ ಹತ್ತಿರದ ಸಂಬಂಧಿಗಳ ಮನೆಗೆ ಬಿಟ್ಟು ಬಂದಿದ್ದಾರೆ.

ಗಾಂಧಿನಗರ ಬಡಾವಣೆಗೆ ತಿಂಗಳಿಗೊಮ್ಮೆಯಾದರೂ ನಗರಸಭೆಯ ಸ್ವಚ್ಛತಾ ಸಿಬ್ಬಂದಿ ಬರುವುದು ಕಷ್ಟ. ಡೆಂಗೆ ಜ್ವರದಿಂದ ಮಕ್ಕಳು ಮೃತಪಟ್ಟ ಮೇಲೆ ಚರಂಡಿಯನ್ನು ಸ್ವಚ್ಛಗೊಳಿಸಿ, ಬ್ಲೀಚಿಂಗ್ ಪುಡಿಯನ್ನು ಚರಂಡಿ ಮೇಲೆ ಸಿಂಪಡಿಸುತ್ತಿದ್ದಾರೆ. ಚರಂಡಿಯಿಂದ ತೆಗೆದ ಗಲೀಜನ್ನು ಪುನಃ ರಸ್ತೆ ಮೇಲೆ ಹಾಕಿ ಹೊಸ ಸಸ್ಯೆ ಸೃಷ್ಟಿಸುತ್ತಿದ್ದಾರೆ ಎಂದು ಬಡಾವಣೆಯ ನಿವಾಸಿಗಳು ದೂರುತ್ತಾರೆ.

ಬಡಾವಣೆಯಲ್ಲಿ ನೂರಾರು ಹಂದಿಗಳು ನಿರಾತಂಕವಾಗಿ ರಸ್ತೆಗಳಲ್ಲಿ ತಿರುಗಾಡುತ್ತವೆ. ಪಟ್ಟಣದ ಕೆಲವರು ಅಕ್ರಮವಾಗಿ ಹಂದಿ ಸಾಕುತ್ತಿದ್ದಾರೆ. ಹಂದಿ ಸಾಕಾಣಿಕೆ ನಗರ ವ್ಯಾಪ್ತಿ ಪ್ರದೇಶದಿಂದ ಕನಿಷ್ಠ ಮೂರು ಕಿ.ಮೀ ದೂರದಲ್ಲಿರಬೇಕೆಂಬ ಸರ್ಕಾರದ ಸೂಚನೆಯನ್ನು ಸಾರಾಸಗಟು ಉಲ್ಲಂಘಿಸಲಾಗಿದೆ.

ಈ ಕುರಿತು ನಗರಸಭೆಗೆ ನೀಡಿದ ದೂರು ನಿರರ್ಥಕವಾಗಿದೆ. ಅಧಿಕಾರಿಗಳು ಮಾಡಿದ ತಪ್ಪಿಗೆ ನಮ್ಮ ಕುಟುಂಬದ ಎರಡು ಮಕ್ಕಳು ಬಲಿಯಾಗಿವೆ ಎಂದು ಬಡಾವಣೆಯ ಮುಖಂಡ ನಾರಾಯಣ ಅಲವತ್ತುಕೊಂಡರು.

ಡೆಂಗೆ ಜ್ವರ ಪಟ್ಟಣದಲ್ಲಿ ವ್ಯಾಪಕವಾಗಿ ಹರಡಿದ್ದರೂ, ಸಾರ್ವಜನಿಕ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರಕುತ್ತಿಲ್ಲ. ಜ್ವರದಿಂದ ಬಳಲುತ್ತಿರುವ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೆ, ಮಕ್ಕಳ ತಜ್ಞರಿಂದ ಚಿಕಿತ್ಸೆ ಕೊಡಿಸುವ ಸೌಜನ್ಯವನ್ನು ಕರ್ತವ್ಯ ನಿರತ ವೈದ್ಯರು ತೋರಲಿಲ್ಲ. ಪ್ರಾರಂಭಿಕ ಹಂತದಲ್ಲಿಯೇ ಮಕ್ಕಳಿಗೆ ಚಿಕಿತ್ಸೆ ನೀಡಿದ್ದರೆ ನಮ್ಮ ಇಬ್ಬರು ಮಕ್ಕಳು ಬದುಕುವ ಸಾಧ್ಯತೆ ಇರುತ್ತಿತ್ತು ಎಂದು ಅವರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT