ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆಗಾಗಿ ಗರ್ಭಿಣಿಯರ ಪರದಾಟ

ಚಿಟಗುಪ್ಪಿ ಆಸ್ಪತ್ರೆ ಎದುರು ಗಂಟೆಗಟ್ಟಲೇ ನಿಲ್ಲುವ ಶಿಕ್ಷೆ
Last Updated 21 ಡಿಸೆಂಬರ್ 2013, 5:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಚಿಟಗುಪ್ಪಿ ಆಸ್ಪತ್ರೆಯ ಆವರಣ­ದಲ್ಲಿರುವ ಸಂಸದ ಪ್ರಹ್ಲಾದ ಜೋಶಿ ಅವರ ಜನ­ಸಂಪರ್ಕ ಕಚೇರಿ ಎದುರು ಗುರುವಾರ ಮುಂಜಾನೆ ನೂರಾರು ಸಂಖ್ಯೆಯಲ್ಲಿ ಮಹಿಳೆ­ಯರು ಸಾಲುಗಟ್ಟಿ ನಿಂತಿದ್ದರು. ವಿಶೇಷವೆಂದರೆ ಸಾಲಿ­ನಲ್ಲಿದ್ದವರು ಯಾರೂ ಸಂಸದ ಜೋಶಿ ಅವರ ಬಳಿಗೆ ಅಹವಾಲು ಹೇಳಿಕೊಳ್ಳಲು ಬಂದಿರಲಿಲ್ಲ!

ಬದಲಿಗೆ ಅವರೆಲ್ಲಾ ಸಂಸದರ ಕಚೇರಿಗೆ ತಾಗಿ­ಕೊಂಡೇ ಇರುವ ಚಿಟಗುಪ್ಪಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಬಳಿ ತಪಾಸಣೆಗೆ ಬಂದಿದ್ದ ಗರ್ಭಿಣಿಯರಾಗಿದ್ದರು. ಮಂಗಳವಾರ ಮತ್ತು ಶುಕ್ರವಾರ ಮಧ್ಯಾಹ್ನದವರೆಗೆ ಮಾತ್ರ ಸಿಗುವ ವೈದ್ಯರನ್ನು ಕಾಣುವ ಧಾವಂತ ಅವ­ರಲ್ಲಿತ್ತು. ಚುಮು ಚುಮು ಚಳಿಯಲ್ಲಿಯೇ ಮುಂಜಾನೆ ಬಂದು ಪಾಳಿಯಲ್ಲಿ ನಿಂತಿದ್ದ ಅವ­ರೆಲ್ಲಾ ಮಧ್ಯಾಹ್ನ ಬಿಸಿಲು ಏರುತ್ತಲೇ ಬಸವಳಿ­ದಿದ್ದರು. ಗದ್ದಲ, ವಾಗ್ವಾದ, ನೂಕುನುಗ್ಗಲು ಸಾಮಾನ್ಯವಾಗಿತ್ತು. ನಾಲ್ಕಾರು ಗಂಟೆ ಕಾಲ ನಿಂತಿದ್ದರೂ ವಿಶ್ರಾಂತಿಗೆ, ಶೌಚಾಲಯಕ್ಕೆ ಅಲ್ಲಿ ಯಾವುದೇ ವ್ಯವಸ್ಥೆ ಇರಲಿಲ್ಲ. ಕುಡಿಯಲು ಹನಿ ನೀರಿಗೂ ಹಾಹಾ­ಕಾರವಿತ್ತು.

ಬಿಸಿಲು ಏರುತ್ತಲೇ ಮಗಳನ್ನು ತಪಾಸಣೆಗೆ ಕರೆ­ತಂದಿದ್ದ ಮಂಟೂರು ರಸ್ತೆಯ ನಿವಾಸಿ­ಯೊಬ್ಬರು ತಾಪಕ್ಕೆ ಸುಸ್ತಾಗಿ ಕುಸಿದು ಬಿದ್ದರು. ಕೊನೆಗೆ ಅಕ್ಕಪಕ್ಕದಲ್ಲಿದ್ದವರು ಸಂಸದರ ಕಚೇರಿ­ಯಿಂದ ನೀರು ತಂದುಕೊಟ್ಟು ಅವರನ್ನು ಉಪಚರಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರಾರು ರೂಪಾಯಿ ಶುಲ್ಕ ನೀಡಿ ವೈದ್ಯಕೀಯ ಸೌಲಭ್ಯ ಪಡೆಯ­ಲಾಗದ ಬಹುತೇಕ ಬಡವರ ಮನೆಯ ಹೆಣ್ಣು ಮಕ್ಕಳು ಅಲ್ಲಿ ಚಿಕಿತ್ಸೆಗಾಗಿ ಬಂದಿದ್ದರು. ಅವರಲ್ಲಿ ಮೂರು ತಿಂಗಳಿನಿಂದ ಮೊದಲುಗೊಂಡು, ದಿನ ತುಂಬಿದ ಗರ್ಭಿಣಿಯರು ಇದ್ದರು.
ವೈದ್ಯರ ಕೊರತೆ: ಚಿಟಗುಪ್ಪಿ ಆಸ್ಪತ್ರೆಯಲ್ಲಿ ಕೇವಲ ಪಾಲಿಕೆ ವ್ಯಾಪ್ತಿಯ ನಿವಾಸಿಗಳ ಚಿಕಿತ್ಸೆಗೆ ಮಾತ್ರ ಅವಕಾಶವಿದೆ. ಆದರೆ ಇಡೀ ಜಿಲ್ಲೆಯ ಹೆಣ್ಣು ಮಕ್ಕಳು ಇಲ್ಲಿ ತಪಾಸಣೆಗೆಂದು ಬರು­ತ್ತಾರೆ. ಇದರಿಂದ ಚಿಕಿತ್ಸೆಗೆ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚಿದರೂ, ವೈದ್ಯರು ಮಾತ್ರ ಅಷ್ಟೇ ಇದ್ದಾರೆ’ ಎಂದು ಆಸ್ಪತ್ರೆಯ ಮುಖ್ಯವೈದ್ಯಾಧಿ­ಕಾರಿ ಡಾ.ಪ್ರಭು ಬಿರಾದಾರ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ಪ್ರಸೂತಿ ಹಾಗೂ ಸ್ತ್ರೀರೋಗ ಚಿಕಿತ್ಸಾ ವಿಭಾಗ­ದಲ್ಲಿ ಡಾ. ದಾಕ್ಷಾಯಿಣಿ ರಜೆಯಲ್ಲಿದ್ದ ಕಾರಣ ಶುಕ್ರ­ವಾರ ಡಾ.ರೀಟಾ ವಿಜಯಚಂದ್ರ ಮಾತ್ರ ಚಿಕಿತ್ಸೆ ನೀಡಿದರು. ಇದರಿಂದ ನೂಕುನುಗ್ಗಲು ಸಹ­ಜವಾಗಿಯೇ ಹೆಚ್ಚಿತ್ತು ಎನ್ನುವ ಡಾ.ಬಿರಾ­ದಾರ, ಉಳಿದ ದಿನಗಳಲ್ಲಿ ಶಸ್ತ್ರಚಿಕಿತ್ಸೆಗಳು ಸೇರಿ­ದಂತೆ ಬೇರೆ ಬೇರೆ ಕಾರ್ಯಗಳ ನಿರತವಾಗುವ ಕಾರಣ ಸರ್ಕಾರದಿಂದಲೇ ವಾರದಲ್ಲಿ ಎರಡು ದಿನವನ್ನು ತಪಾಸಣೆಗೆ ನಿಗದಿ ಮಾಡಲಾಗಿದೆ. ತಜ್ಞ ವೈದ್ಯರ ನೇಮಕಕ್ಕೆ ಮಹಾನಗರ ಪಾಲಿಕೆ ಸಿದ್ಧವಿದೆ ಆದರೆ ಯಾರೂ ಸಿಗುತ್ತಿಲ್ಲ. ಶೀಘ್ರ ಈ ಸಮಸ್ಯೆ ಪರಿಹರಿಸುವುದಾಗಿ’ ಹೇಳುತ್ತಾರೆ.

ಹೆರಿಗೆ ನೋವಿಗಿಂತ ದುಪ್ಪಟ್ಟು ಕಷ್ಟ...
‘ಹೆರಿಗೆ ನೋವಿನ ದುಪ್ಪಟ್ಟು ಕಷ್ಟವನ್ನು ನಮ್ಮ ಮಕ್ಕಳು ಆಸ್ಪತ್ರೆಗೆ ಅಡ್ಡಾಡುವುದರಲ್ಲಿಯೇ ಅನುಭವಿಸುತ್ತಾರೆ. ವಾರವಿಡೀ ಚಿಕಿತ್ಸೆ ನೀಡಲು ಇವರಿಗೆ ಸಮಸ್ಯೆ ಏನು ಎಂದುಪ್ರಶ್ನಿಸುತ್ತಾರೆ’ ಹಳೇಹುಬ್ಬಳ್ಳಿಯಿಂದ ಮಗಳನ್ನು ಪರೀಕ್ಷೆಗೆ ಕರೆತಂದಿದ್ದ ಸಾವಿತ್ರಿಬಾಯಿ ನೀಲಗುಂದ.

‘ಕೂಲಿ ಕಾರ್ಮಿಕರು, ಉದ್ಯೋಗಿಗಳು ಚಿಕಿತ್ಸೆಗೆ ಬರಬೇಕಾದರೆ ಒಂದು ದಿನ ರಜೆ ಹಾಕಿಯೇ ಬರಬೇಕಿದೆ. ಸ್ಥಳೀಯ ಶಾಸಕರು, ಸಂಸದರ ಮನೆಯ ಸದಸ್ಯರನ್ನು ಚಿಕಿತ್ಸೆಗೆ ಇಲ್ಲಿಗೆ ಕರೆತಂದಿದ್ದರೆ ನಾವು ಪಡುವ ಸಂಕಷ್ಟ ಅವರಿಗೂ ಅರ್ಥವಾಗುತ್ತಿತ್ತು’ ಎಂದು ಸಾವಿತ್ರಿಬಾಯಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT