ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕ ಗಾಯ ಪ್ರಾಣಕ್ಕೆ ಅಪಾಯ!

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸಣ್ಣಪುಟ್ಟ ಗಾಯಗಳಾದಾಗ ನಾವು ವೈದ್ಯರ ಬಳಿ ಹೋಗಿ ಮುಂಜಾಗರೂಕತೆಯಾಗಿ ಇಂಜೆಕ್ಷನ್ ಅಥವಾ ಯಾವುದಾದರೂ ಔಷಧೋಪಚಾರ ಮಾಡುತ್ತೇವೆ. ಆದರೆ ಅದೇ ರೀತಿಯ ಗಾಯ, ತೊಂದರೆ ಸಾಕಿರುವ ದನಕರು, ಕುರಿಗಳಲ್ಲಾದರೆ ಉಪೇಕ್ಷಿಸುವುದೇ ಹೆಚ್ಚು.

ಆದರೆ ರೈತರೇ ಜಾಗ್ರತೆ. ನಿಮ್ಮ ಈ ರೀತಿಯ ಉಪೇಕ್ಷೆಯಿಂದ ನಿಮ್ಮ ಜಾನುವಾರುಗಳು ಜೀವ ಕಳೆದುಕೊಂಡು ನೀವು ಭಾರಿ ಬೆಲೆ ತೆರಬೇಕಾಗುವುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಈ ಗಾಯದ ಮೂಲಕ `ಕ್ಲಾಸ್ಟ್ರೀಡಿಯಂ ಟೆಟಾನಿ' ಎಂಬ ಬ್ಯಾಕ್ಟೀರಿಯಾ ಜಾನುವಾರಗಳ ಶರೀರ ಹೊಕ್ಕಿ ಅವುಗಳ ಪ್ರಾಣಕ್ಕೆ ಕಂಟಕ ತಂದೊಡ್ಡುವ ಸಾಧ್ಯತೆ ಇವೆ. ಪ್ರಾಣಿಗಳಲ್ಲಿ ಸೆಳೆತ, ಸೆಟೆಬೇನೆಯನ್ನುಂಟುಮಾಡಿ ಅವುಗಳು ಧನುರ್ವಾತ ಅಥವಾ ಟೆಟನಸ್ ರೋಗಕ್ಕೆ ಈಡಾಗಬಹುದು.

ಮೊಳೆಗಳು ತಾಗಿ ಆಗುವ ಆಳವಾದ ಗಾಯ, ಕುರಿಗಳಲ್ಲಿ ಉಣ್ಣೆ ತೆಗೆಯುವಾಗ ಕತ್ತರಿಯಿಂದಾಗುವ ತರಚು ಗಾಯ, ಬೀಜಕಸಿ, ಶಸ್ತ್ರಚಿಕಿತ್ಸೆ ಹಾಗೂ ಕರು ಹಾಕುವ ಸಂದರ್ಭದಲ್ಲಿ ಜನನಾಂಗದಲ್ಲಿ ರಾಸುಗಳಿಗೆ ಉಂಟಾಗುವ ಗಾಯಗಳ ಮುಖಾಂತರ ಈ ರೋಗಾಣುಗಳು ಶರೀರವನ್ನು ಪ್ರವೇಶಿಸುತ್ತವೆ. ಸಾಕಷ್ಟು ವಿಭಜನೆಗೊಂಡು ಅಭಿವೃದ್ಧಿಗೊಳ್ಳುವ ರೋಗಾಣುಗಳು ನರಮಂಡಲವನ್ನು ಬಾಧಿಸುವ ಟೆಟನೊಸ್ಪಾಸ್ಮಿನ್, ಕೆಂಪು ರಕ್ತಕಣಗಳನ್ನು ಒಡೆಯುವ ಟೆಟನೊಲೈಸಿನ್ ಮತ್ತು ಅಂಗಾಂಶಗಳ ಮೇಲೆ ಪ್ರಭಾವ ಬೀರುವ ಫೈಬ್ರಿನೊಲೈಸಿನ್ ಎಂಬ ವಿಷವನ್ನು ಉತ್ಪಾದಿಸುತ್ತವೆ.

ಇವುಗಳಲ್ಲಿ ಅತ್ಯಂತ ಮಾರಕವಾದ ಟೆಟನೊಸ್ಪಾಸ್ಮಿನ್ ಉಸಿರಾಟದ ಸ್ನಾಯುಗಳನ್ನು ಸ್ಥಿರೀಕರಿಸಿ, ಉಸಿರುಗಟ್ಟಿ ಪ್ರಾಣಿಗಳು ಸಾಯುವಂತೆ ಮಾಡುತ್ತದೆ. ವಿವಿಧ ಪ್ರಾಣಿ ಪ್ರಭೇದಗಳಲ್ಲಿ ರೋಗದ ತೀವ್ರತೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ನಾಯಿ, ಬೆಕ್ಕು ಮತ್ತು ಕೋಳಿಗಳಲ್ಲಿ ಈ ರೋಗಕ್ಕೆ ಪ್ರತಿರೋಧತೆ ಹೆಚ್ಚಿರುತ್ತದೆ. ಕುದುರೆಗಳಲ್ಲಿ ಅತಿ ಹೆಚ್ಚು ತೀವ್ರತೆ ಕಂಡುಬಂದರೆ, ದನ ಕರು ಮತ್ತು ಎಮ್ಮೆಗಳಲ್ಲಿ ಇದು ಮಧ್ಯಮ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ.

ಕೊಳೆತ ಪದಾರ್ಥಗಳು, ತುಕ್ಕು ಹಿಡಿದ ಕಬ್ಬಿಣ ಹಾಗೂ ಮಣ್ಣಿನ ಜೊತೆಗೆ ಪ್ರಾಣಿಗಳ ಸಂಪರ್ಕದಿಂದ, ಟೆಟನಸ್ ರೋಗಕಾರಕಗಳು ಗಾಯಗಳ ಮೂಲಕ ದೇಹವನ್ನು ಸೇರಿ ರೋಗವನ್ನುಂಟುಮಾಡುತ್ತವೆ. ಶುಚಿಯಾಗಿಲ್ಲದ ಸೂಜಿ, ಮೊಲೆತೊಟ್ಟುಗಳಿಗೆ ಹಾಕುವ ನಳಿಕೆ ಹಾಗೂ ಶಸ್ತ್ರಚಿಕಿತ್ಸಾ ಸಮಯದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳದೆ ಇದ್ದಲ್ಲಿ ಕೂಡ ರೋಗಕಾರಕಗಳು ಜಾನುವಾರುಗಳ ದೇಹವನ್ನು ಪ್ರವೇಶಿಸಬಲ್ಲವು.

ರೋಗ ಚಿಹ್ನೆ, ಚಿಕಿತ್ಸೆ
ಹಿಂಗಾಲುಗಳ ಬಿಗಿತ, ಹೊಟ್ಟೆ ಉಬ್ಬುವಿಕೆ, ಜೊಲ್ಲು ಸುರಿಸುವುದು, ಚಾಲನೆಯಿಲ್ಲದೆ ಸೆಟೆಯುವ ದವಡೆಗಳು, ಶರೀರದಿಂದ ದೂರ ಬೋರ್‌ವೆಲ್ ಹ್ಯಾಂಡಲ್‌ನಂತೆ ಚಾಚುವ ಬಾಲ ಮತ್ತು ಮಲ-ಮೂತ್ರ ವಿಸರ್ಜನೆಯಲ್ಲಿ ತೊಂದರೆ ಕಂಡುಬರುವುದು ಸಾಮಾನ್ಯ. ರೋಗ ಉಲ್ಬಣಗೊಂಡಂತೆ, ಬೆಳಕು ಮತ್ತು ಯಾವುದಾದರೂ ಶಬ್ದಕ್ಕೆ ಜಾನುವಾರು ಬೆಚ್ಚಿ ಬೀಳುವುದು, ಕಣ್ಣ ರೆಪ್ಪೆ ಹೊರ ಬೀಳುವುದು, ಶರೀರದ ಒಟ್ಟಾರೆ ಸ್ನಾಯುಗಳ ಸೆಳೆತ ಮತ್ತು ಸೆಟೆತ, ಅತಿಯಾದ ಜ್ವರ ಗೋಚರಿಸಬಹುದು. ಚಿಕಿತ್ಸೆ ಫಲಿಸದಿದ್ದರೆ ನಾಲ್ಕರಿಂದ ಹತ್ತು ದಿನಗಳವರೆಗೆ ಬಳಲಿ ನಿತ್ರಾಣಗೊಳ್ಳುವ ಅವು ಉಸಿರಾಟ ನಿಲ್ಲುವಿಕೆಯಿಂದ ಕೊನೆಗೆ ಸಾವನ್ನಪ್ಪುತ್ತವೆ.

ರೋಗ ಕಾಣಿಸಿಕೊಂಡ ತಕ್ಷಣ ಸೂಕ್ತ ಸಮಯದಲ್ಲಿ ಪಶುವೈದ್ಯರಿಂದ ಪ್ರತಿ ಜೈವಿಕಗಳು ಮತ್ತು ಪ್ರತಿ ವಿಷದ ಚಿಕಿತ್ಸೆ ಕೊಡಿಸಿದರೆ ದನಗಳು ಬದುಕುಳಿಯುವ ಸಾಧ್ಯತೆ ಇದೆ. ಆದರೆ ರೋಗ ಉಲ್ಬಣಿಸಿದ ಪ್ರಾಣಿಗಳನ್ನುಳಿಸಲು ವೈದ್ಯರು ಹರಸಾಹಸವನ್ನೇ ಪಡಬೇಕಾಗುತ್ತದೆ. ಹೀಗಾದರೆ ಚಿಕಿತ್ಸೆ ಫಲಕಾರಿಯಾಗದೆ ಜಾನುವಾರಗಳು ಮರಣ ಹೊಂದಬಹುದು. ಸಣ್ಣಪುಟ್ಟ ಗಾಯಗಳನ್ನು ಉಪೇಕ್ಷಿಸದೆ, ಟೆಟನಸ್ ಟಾಕ್ಸಾಯ್ಡ (ಟಿ.ಟಿ) ಚುಚ್ಚುಮದ್ದನ್ನು ಶೀಘ್ರವಾಗಿ ಕೊಡಿಸುವುದು ಮತ್ತು ಆಂಟಿಸೆಪ್ಟಿಕ್‌ಗಳನ್ನು ಬಳಸಿ ಸರಿಯಾದ ಕ್ರಮದಲ್ಲಿ ನೀಡಬೇಕು.

ಚುಚ್ಚುಮದ್ದಿನ ಪರಿಣಾಮ 6 ತಿಂಗಳಿಂದ 1 ವರ್ಷದವರೆಗೆ ಇದ್ದರೂ ಈ ಅವಧಿಯ ಒಳಗೆ ಅವಶ್ಯಕವಿದ್ದಲ್ಲಿ ಮತ್ತೆ ಕೊಡಿಸುವುದು ಉತ್ತಮ. ಶಸ್ತ್ರಚಿಕಿತ್ಸೆ ನಂತರ ನಿರ್ಜೀವೀಕರಿಸಿದ ಮ್ಯಾಟ್‌ಗಳನ್ನು ಪ್ರಾಣಿಗಳು ಮಲಗಲು ನೀಡಬೇಕು ಮತ್ತು ಗಾಯದ ಹೊರಭಾಗವನ್ನು ವೈದ್ಯರ ಸಲಹೆಯಂತೆ ಶುದ್ಧ ಬಟ್ಟೆಯಿಂದ ಕಟ್ಟಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ದನದ ಕೊಟ್ಟಿಗೆಯಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಸೋಂಕು ನಿವಾರಕಗಳನ್ನು ಆಗಿಂದಾಗ್ಗೆ ಸಿಂಪಡಿಸಬೇಕು.

ಈ ರೀತಿಯಾಗಿ ಸರಿಯಾದ ವಿಧಾನಗಳನ್ನು ರೈತರು ಪಶುಪಾಲನೆಯಲ್ಲಿ ಅಳವಡಿಸಿಕೊಳ್ಳುವುದರಿಂದ ಅತ್ಯಂತ ಭೀಕರವಾಗಿ ಕಂಡರೂ, ಈ ರೋಗವನ್ನು ತಡೆಗಟ್ಟುವುದು ಸುಲಭ ಎಂದೇ ಹೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT