ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕನಾಯಕನಹಳ್ಳಿ: ಮುಂದುವರಿದ ಬರ ಪರ್ವ

Last Updated 9 ಡಿಸೆಂಬರ್ 2013, 10:31 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ತಾಲ್ಲೂಕು ಸತತ ಮೂರನೇ ವರ್ಷವೂ ಬರದ ದವಡೆಗೆ ಸಿಲು­ಕಿದೆ. ಈ ಬಾರಿಯೂ ಶೇ 80ರಷ್ಟು ಬೆಳೆ ಹಾನಿ­ಯಾಗಿದೆ ಎಂದು ಕೃಷಿ ಇಲಾಖೆ ವರದಿ ತಿಳಿಸಿದೆ.

ವಾರ್ಷಿಕ ಸರಾಸರಿ ಮಳೆಯ ಪ್ರಮಾಣದಲ್ಲಿ ಅಂತಹ ವ್ಯತ್ಯಾಸ ಗೋಚರಿಸದಿದ್ದರೂ; ಅಕಾಲಿಕ ಮಳೆ, ಮಳೆ ದಿನಗಳ ಇಳಿಕೆ, ಮಳೆ ಹಂಚಿಕೆಯ ಏರುಪೇರಿನ ಕಾರಣ ಬಹುತೇಕ ಬೆಳೆಗಳು ನಿರೀಕ್ಷಿತ ಮಟ್ಟದಲ್ಲಿ ಇಳುವರಿ ನೀಡಿಲ್ಲ. ಈ ಬಾರಿ ಆನೆ, ಕಾಡು ಹಂದಿ, ನವಿಲಿನ ಹಾವಳಿಯೂ ಇಳುವರಿ ಕುಂಠಿತಗೊಳ್ಳಲು ತನ್ನದೇ ಆದ ಕೊಡುಗೆ ನೀಡಿದೆ.

ತಾಲ್ಲೂಕಿನ ಸರಾಸರಿ ವಾಡಿಕೆ ಮಳೆ 50 ಸೆಂ.ಮೀ. ಆದರೆ ಕಳೆದ ಮೂರು ವರ್ಷಗಳಿಂದ ಈ ಪ್ರಮಾಣ ಇಳಿಮುಖವಾಗಿದೆ. 2011ರಲ್ಲಿ 43.19 ಸೆಂ.ಮೀ, 2012ರಲ್ಲಿ 39.73 ಸೆಂ.ಮೀ, ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೆ ಕೇವಲ 37.77 ಸೆಂ.ಮೀ ಮಳೆ ಬಿದ್ದಿದೆ.

ಮಳೆ ಆಶ್ರಿತ ರಾಗಿ, ಜೋಳ, ತೊಗರಿ, ಅವರೆ, ಸಾವೆ, ನವಣೆ, ಸಜ್ಜೆ, ಎಳ್ಳು, ಹುಚ್ಚೆಳ್ಳು, ಹರಳು ಇತ್ಯಾದಿ ಬೆಳೆಗಳಿಗೆ ಸರಾಸರಿ ಮಳೆಯ ಪ್ರಮಾಣದಷ್ಟೇ ಮಳೆ ಬೀಳುವ ಅಂತರ ಹಾಗೂ ಮಳೆ ದಿನಗಳೂ ಮುಖ್ಯ.

ಈ ಬಾರಿ ನಾಲ್ಕೈದು ದಿನಗಳ ಅಂತರದಲ್ಲಿ ಹುಬ್ಬೆ ಮಳೆ ಬಲವಾಗಿ ಸುರಿದದ್ದು ಬಿಟ್ಟರೆ ಬೇರೆ ಯಾವ ಮಳೆಯೂ ಸಕಾಲಕ್ಕೆ ಬೀಳಲಿಲ್ಲ. ಮಳೆ ದಿನಗಳ ವ್ಯತ್ಯಯ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಕೃಷಿ ಅಧಿಕಾರಿ ನೂರುಲ್ಲಾ ಹೇಳುತ್ತಾರೆ.

ತಾಲ್ಲೂಕಿನ ಸರಾಸರಿ ಮಳೆ ದಿನಗಳ ಸಂಖ್ಯೆ 28. ಆದರೆ ಈ ವರ್ಷ ಕೇವಲ 19 ದಿನ ಮಾತ್ರ ಮಳೆಯಾಗಿದೆ.ರೈತರ ಪಾರಂಪರಿಕ ಜ್ಞಾನ ಹೇಳುವಂತೆ ಅಶ್ವಿನಿ, ಭರಣಿ, ರೋಹಿಣಿ ನಡೆಸಿದರೆ ಮುಂಗಾರು ಕೈಸೇರುತ್ತದೆ. ಉತ್ತರೆ, ಹಸ್ತೆ, ಚಿತ್ತೆ, ಸ್ವಾತಿ ನಡೆಸಿದರೆ ಹಿಂಗಾರು ಕೈಸೇರು­ತ್ತಿತ್ತು.

ಅಂಕಿ ಅಂಶಗಳ ಪ್ರಕಾರ ಈ ಬಾರಿ ವರ್ಷಾರಂಭದಲ್ಲಿ ಮುಖ ತೋರಿಸಿ ಹೋದ ಮಳೆ ಮತ್ತೆ ಕಾಣಿಸಿಕೊಂಡಿದ್ದು ಮೇ ತಿಂಗಳಲ್ಲಿ. ಹೀಗಾಗಿ ಪೂರ್ವ ಮುಂಗಾರಿನ ಪ್ರಧಾನ ಬೆಳೆ ಹೆಸರು ರೈತರ ಕೈ ಕಚ್ಚಿತು. ₨12 ಕೋಟಿ ವಹಿವಾಟಿನ ನಿರೀಕ್ಷೆ ಮಣ್ಣು ಪಾಲಾಯಿತು.

ಹುಬ್ಬೆ ಮಳೆ ಹೊರತುಪಡಿಸಿ ಮುಂಗಾರಿನ ಉಳಿದೆಲ್ಲ ಮಳೆಗಳು ಕೈಕೊಟ್ಟವು. ರಾಗಿ ಬೆಳೆ ನೆಲ ಕಚ್ಚಿದ ಕಾರಣ ₨ 40 ಕೋಟಿ ಮೌಲ್ಯದ ಬೆಳೆ ನಷ್ಟವಾಯಿತು. ಗಾಯದ ಮೇಲೆ ಬರೆ ಎಳೆದಂತೆ ತಾಲ್ಲೂಕಿ­ನಲ್ಲಿ ಈ ಬಾರಿ ಆನೆ ಕಾಟವೂ ಕಾಣಿಸಿ­ಕೊಂಡಿತು.

ಕಂದಿಕೆರೆ ಹೋಬ­ಳಿಯ ತಿಮ್ಮನ­ಹಳ್ಳಿ, ಮದನಮಡು, ಹನುಮಂತ­ನ­­ಹಳ್ಳಿ, ಅಜ್ಜೀಗುಡ್ಡೆ, ಗಂಟೇನಹಳ್ಳಿ ಭಾಗದಲ್ಲಿ ಸತತ 3 ದಿನ ದಾಂಧಲೆ ನಡೆಸಿದ ಆನೆ ಹಿಂಡು ಅಪಾರ ಪ್ರಮಾಣದ ಬೆಳೆಹಾನಿ ಉಂಟು ಮಾಡಿತು.

ಶೆಟ್ಟಿಕೆರೆ ಹೋಬಳಿಯ ಸಾಸಲು, ಗೋಪಾಲನಹಳ್ಳಿ, ಮಾಕಳ್ಳಿ, ವಡೇರಹಳ್ಳಿ, ಸಿದ್ದರಾಮನಗರ, ವಡೇರಹಳ್ಳಿ, ಹಂದನಕೆರೆ ಹೋಬಳಿಯ ಕುಪ್ಪೂರು, ಬೆನಕನಕಟ್ಟೆ, ದಗ್ಗೇನಹಳ್ಳಿ, ಕಮಲಾಪುರ, ಹೊಸಹಳ್ಳಿ, ಮಲ್ಲೀಗೆರೆ, ಮತಿಘಟ್ಟ, ನಿರುವಗಲ್, ಬೆಳಗುಲಿ ಭಾಗದಲ್ಲಿ, ಹುಳಿಯಾರು ಹೋಬಳಿಯ ದಸೂಡಿ, ದಬ್ಬಗುಂಟೆ, ಹೊಯ್ಸಳಕಟ್ಟೆ, ಬರಕನ­ಹಾಳ್, ಮೇಲನಹಳ್ಳಿ, ಗುರುವಾಪುರ ಭಾಗ­ದಲ್ಲಿ ಕಾಡು ಹಂದಿ, ನವಿಲು ಹಾವಳಿಗೆ ಲಕ್ಷಾಂ­ತರ ರೂಪಾಯಿ ಬೆಳೆಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT