ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಬಹುಪಯುಕ್ತ ಬೃಹತ್ ನಿಲ್ದಾಣ

Last Updated 21 ಜನವರಿ 2011, 9:25 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮುಂದಿನ ವರ್ಷಗಳಲ್ಲಿ ಆಗುವ ಬದಲಾವಣೆಗಳನ್ನು ದೂರದೃಷ್ಟಿಯಲ್ಲಿರಿಸಿ ಕೊಂಡು ಚಿಕ್ಕಬಳ್ಳಾಪುರ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು.ಪ್ರತ್ಯೇಕ ಸ್ಥಳದಲ್ಲಿ ಬೃಹತ್ ನಿಲ್ದಾಣವನ್ನು ನಿರ್ಮಿಸಿ ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಪೂರೈಸಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚೆನ್ನೈ, ಪುಟಪರ್ತಿ ಮುಂತಾದ ಊರುಗಳಿಗೆ ಸಂಪರ್ಕ ಕಲ್ಪಿಸುವ ಹಾಗೆ ರೈಲು ಮಾರ್ಗದ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ರೈಲು ನಿಲ್ದಾಣವನ್ನು ಸಮಗ್ರ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು’ ಎಂದರು.

ರೈಲ್ವೆ ಇಲಾಖೆಯು ಕಾಮಗಾರಿಯಲ್ಲಿ ಯಾವುದೇ ಕಾರಣಕ್ಕೂ ವಿಳಂಬ ತೋರಿಸುತ್ತಿಲ್ಲ. ನೂತನ ನಿಲ್ದಾಣ ನಿರ್ಮಾಣಕ್ಕೆ ಸ್ಥಳೀಯ ಶಾಸಕರು ಮತ್ತು ಜಿಲ್ಲಾಡಳಿತ ಸ್ಥಳ ತೋರಿಸಿಕೊಟ್ಟಲ್ಲಿ, ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ಕೈಗೊಳ್ಳುತ್ತೇವೆ. ಸ್ಥಳವನ್ನು ಹುಡುಕಿಕೊಡುವುದು ಮತ್ತು ಕಾಮಗಾರಿಗೆ ವ್ಯವಸ್ಥೆ ಮಾಡಿಕೊಡುವುದು ಜಿಲ್ಲಾಡಳಿತ ಮತ್ತು ಶಾಸಕರ ಜವಾಬ್ದಾರಿ. ಅವರು ಕಾರ್ಯದಿಂದ ನುಣುಚಿಕೊಳ್ಳಬಾರದು. ಸದ್ಯಕ್ಕಿರುವ ರೈಲು ನಿಲ್ದಾಣವನ್ನು ಸ್ಥಳಾಂತರ ಮಾಡಬೇಕೆ ಅಥವಾ ಬೇಡವೇ ಎಂಬುದರ ಕುರಿತು 15 ದಿನಗಳಲ್ಲಿ ವರದಿ ನೀಡುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಬೇರೆ ರಾಜ್ಯಗಳಲ್ಲಿ ಇರುವ ಮಾದರಿಯಲ್ಲೇ ಪರ್ಯಾಯ ರೈಲು ಮಾರ್ಗವನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಉದ್ದೇಶವಿದೆ. ಇದಕ್ಕೆಂದೇ ಸರ್ವೆ ಕಾರ್ಯ ಸಹ ಪೂರ್ಣಗೊಂಡಿದೆ. ಯೋಜನೆಗೆ ಅನುಸಾರವಾಗಿ ಕಾಮಗಾರಿ ನಡೆದಲ್ಲಿ, ಪ್ರಯಾಣಿಕರಿಗೆ ಚೆನ್ನೈ, ಪುಟಪರ್ತಿ, ಮದನಪಲ್ಲಿ, ಹಿಂದೂಪುರ, ಬಂಗಾರಪೇಟೆ ಮುಂತಾದ ಊರುಗಳಿಗೆ ಪ್ರಯಾಣಿಸಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.

‘ಮುಂದಿನ ದಿನಗಳಲ್ಲಿ ಹೆಚ್ಚುವ ಜನಸಂಖ್ಯೆ, ಕಾರ್ಯವ್ಯಾಪ್ತಿ, ವಾಹನಗಳ ಸಂಚಾರ ಎಲ್ಲವನ್ನೂ ಗಮನದಲ್ಲಿರಿಸಿಕೊಂಡು ಪ್ರತ್ಯೇಕ ಸ್ಥಳದಲ್ಲಿ ನೂತನ ನಿಲ್ದಾಣವನ್ನು ನಿರ್ಮಿಸುವ ಪ್ರಸ್ತಾವವಿದೆ ಹೊರತು ಬೇರೆ ಉದ್ದೇಶವಿಲ್ಲ. ಮನೆಯ ಮುಂದೆಯೇ ರೈಲು ನಿಲ್ದಾಣ ಇರಬೇಕು, ಮನೆಯ ಮುಂದೆಯೇ ರೈಲು ಸಂಚರಿಸಬೇಕು ಎಂದು ಬಯಸುವವರಿಗೆ ಏನನ್ನೂ ಹೇಳಲಾಗುವುದಿಲ್ಲ. ಅವರು ಬಯಸಿದಂತೆ ಅವರ ಮನೆಯ ಮುಂದೆ ರೈಲು ಸಂಚಾರ ಕಲ್ಪಿಸಲು ಆಗುವುದಿಲ್ಲ’ ಎಂದು ವ್ಯಂಗ್ಯವಾಡಿದರು.

ನೂತನ ರೈಲು ನಿಲ್ದಾಣ, ಜಮೀನು ಸ್ವಾದೀನಪಡಿಸುವಿಕೆ, ಮೂಲಸೌಕರ್ಯ ಪೂರೈಕೆ ಮುಂತಾದವುಗಳಿಗೆ ಸುಮಾರು 66 ಕೋಟಿ ರೂಪಾಯಿ ವೆಚ್ಚವಾಗಲಿದೆ.ಗೂಡ್‌ಶೆಡ್, ನೀರು ನಿರ್ವಹಣಾ ಕೇಂದ್ರ, ರೈಲು ಹಳಿಗಳ ಅಳವಡಿಕೆ ಮುಂತಾದವುಗಳಿಗೆ ಹೆಚ್ಚಿನ ವೆಚ್ಚವಾಗಲಿದೆ. ಈ ಎಲ್ಲ ಕಾಮಗಾರಿಗಳು ಹಂತಹಂತವಾಗಿ ನೆರವೇರಲಿದ್ದು, ನೂರು ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ‘ನೂತನ ನಿಲ್ದಾಣದ ಕಾಮಗಾರಿ ಕೈಗೊಳ್ಳಲು ಇನ್ನೂ ದೀರ್ಘ ಸಮಯ ಬೇಕಾಗುತ್ತದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ತಗುಲುತ್ತದೆ. ಆದರೆ ಈಗಿರುವ ರೈಲು ನಿಲ್ದಾಣಕ್ಕೆ ಮೂಲಸೌಕರ್ಯ ಕಲ್ಪಿಸಲು ರೈಲ್ವೆ ಸಚಿವರು ಆಸಕ್ತಿ ತೋರಬೇಕು. ನಿಲ್ದಾಣದಲ್ಲಿ ನೀರು ಮತ್ತು ಶೌಚಾಲಯದ ವ್ಯವಸ್ಥೆ ಮಾಡಲಾಗಿಲ್ಲ. ಪ್ರಯಾಣಿಕರಿಗೆ ಮತ್ತು ರೈಲು ನಿಲ್ದಾಣದ ಸಿಬ್ಬಂದಿ ಕನಿಷ್ಠ ಸೌಕರ್ಯಗಳು ಕೂಡ ಇಲ್ಲ. ಇದರ ಬಗ್ಗೆ ಗಮನಹರಿಸಿ ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುನಿಯಪ್ಪ ಅವರು, ‘ಸೌಕರ್ಯಗಳಿಗೆ ಸಂಬಂಧಿಸಿದಂತೆ ಲಿಖಿತ ಮನವಿ ನೀಡಿ, ಮುಂದಿನ 15 ದಿನಗಳಲ್ಲಿ ಎಲ್ಲ ಸೌಕರ್ಯಗಳನ್ನು ಪೂರೈಸಲಾಗುವುದು’ ಎಂದರು. ಜಿಲ್ಲಾಧಿಕಾರಿ ಡಾ.ಎನ್.ಮಂಜುಳಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ.ಪವಾರ್ ಮತ್ತಿತರರು ಉಪಸ್ಥಿತರಿದ್ದರು.

ಶಾಸಕ ಮುನಿಯಪ್ಪ ಪ್ರತ್ಯಕ್ಷ
ಚಿಕ್ಕಬಳ್ಳಾಪುರ ಬಹುತೇಕ ಸಭೆ- ಸಮಾರಂಭಗಳ ಆಹ್ವಾನ ಪತ್ರಿಕೆಗಳಲ್ಲಿ ಹೆಸರಿದ್ದರೂ ಬಾರದ ಶಿಡ್ಲಘಟ್ಟದ ಶಾಸಕ ವಿ. ಮುನಿಯಪ್ಪ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರ ಜೊತೆ ಪ್ರತ್ಯಕ್ಷಗೊಂಡು ಅಚ್ಚರಿ ಮೂಡಿಸಿದರು.

ಜಿಲ್ಲಾಡಳಿತದ ಸಭೆಗಳು ಅಲ್ಲದೇ ಕಾಂಗ್ರೆಸ್‌ನ ಪ್ರಮುಖ ಸಭೆ-ಸಮಾರಂಭಗಳಲ್ಲೂ ಕಾಣಿಸಿಕೊಳ್ಳದ ಮುನಿಯಪ್ಪ ಅವರು ಗುರುವಾರ ಸಚಿವರೊಂದಿಗೆ ಕಾಣಿಸಿಕೊಂಡಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಟ್ಟಿತು. ಜಿಲ್ಲೆಯಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆಗೆ ಕಾರಣವಾಗಲಿದ್ದಾರೆ ಎಂಬ ಸಂಶಯ ರಾಜಕೀಯ ವಲಯದಲ್ಲಿ ಮೂಡಿತು.

ಕಾಂಗ್ರೆಸ್‌ನಿಂದ ಉಚ್ಛಾನೆಯಿಂದ ಮಾಜಿ ಶಾಸಕರಾದ ಶಿವಾನಂದ, ಎಸ್.ಎಂ. ಮುನಿಯಪ್ಪ ಮತ್ತು ಕಾಂಗ್ರೆಸ್‌ನ ಕೆಲ ಅತೃಪ್ತ ಮುಖಂಡರು, ಕಾರ್ಯಕರ್ತರು ಸಚಿವರೊಂದಿಗೆ ಗುರುವಾರ ಕಂಡು ಬಂದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಸಂಚಲನವಾಗಲಿದೆಯೇ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT