ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು?

ಆಂಜನಪ್ಪ, ಸುಧಾಕರ್, ರಮೇಶ್: ಮೂವರಲ್ಲಿ ಯಾರಿಗೆ ಸಿಗುತ್ತೆ ಟಿಕೆಟ್
Last Updated 9 ಏಪ್ರಿಲ್ 2013, 9:22 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಯಾರು ಸ್ಪರ್ಧಿಸುತ್ತಾರೆ ಎಂಬುದು ಬಹುತೇಕ ಖಚಿತವಾಗಿದೆ. ಚಿಂತಾಮಣಿಯಲ್ಲಿ ವಾಣಿ ಕೃಷ್ಣಾರೆಡ್ಡಿ, ಗೌರಿಬಿದನೂರಿನಲ್ಲಿ ಎನ್.ಎಚ್.ಶಿವಶಂಕರ ರೆಡ್ಡಿ, ಬಾಗೇಪಲ್ಲಿಯಲ್ಲಿ ಎನ್.ಸಂಪಂಗಿ ಮತ್ತು ಶಿಡ್ಲಘಟ್ಟದಲ್ಲಿ ವಿ.ಮುನಿಯಪ್ಪ ಸ್ಪರ್ಧಿಸುವುದು ಬಹುತೇಕ ಖಾತ್ರಿಯಾಗಿದೆ.

ಆದರೆ, ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯನ್ನು ಈವರೆಗೆ ಮಾಡಿಲ್ಲ. ಅಭ್ಯರ್ಥಿಯಾಗಿ ಸ್ಪರ್ಧಿಸಲು ಮೂವರು ಆಕಾಂಕ್ಷಿಗಳು ತೀವ್ರ ಪೈಪೋಟಿ ನಡೆಸಿದ್ದು, ಪಕ್ಷದ ಹೈಕಮಾಂಡ್ ಯಾರ ಪರ ಒಲವು ತೋರುವುದೋ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಪಕ್ಷದ ವರಿಷ್ಠರು ಮೂವರಿಗೂ ಭರವಸೆ ನೀಡಿದ್ದಾರೆ ಹೊರತು ಖಾತ್ರಿ ನೀಡಿಲ್ಲ.

ಪೈಪೋಟಿಯು ಮೂವರೇ ಅಭ್ಯರ್ಥಿಗಳಿಗೆ ಸೀಮಿತವಾಗಿದ್ದರೆ ಹೆಚ್ಚಿನ ಸಮಸ್ಯೆ ಕಾಡುತ್ತಿರಲಿಲ್ಲ. ಆದರೆ ಟಿಕೆಟ್ ಯಾರಿಗೆ ನೀಡಬೇಕು ಎಂಬುದು ಇಬ್ಬರು ಕೇಂದ್ರ ಸಚಿವರ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಕೇಂದ್ರ ಇಂಧನ ಸಚಿವ ವೀರಪ್ಪ ಮೊಯಿಲಿ ಮತ್ತು ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ನಡುವಿನ ಶೀತಲಸಮರಕ್ಕೂ ಈ ಪೈಪೋಟಿ ಕಾರಣವಾಗಿದ್ದು, ಯಾರನ್ನು ಸಮಾಧಾನಪಡಿಸಬೇಕು ಎಂಬುದು ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ.

ಮೂವರು ಆಕಾಂಕ್ಷಿಗಳಾದ ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆಂಜನಪ್ಪ, ಕೆಪಿಸಿಸಿ ಸದಸ್ಯರಾದ ಡಾ.ಕೆ.ಸುಧಾಕರ್ ಮತ್ತು ಯಲುವಹಳ್ಳಿ ಎನ್.ರಮೇಶ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ಈಗಾಗಲೇ ದೆಹಲಿಗೆ ಮೂರು ಬಾರಿ ಸುತ್ತು ಹಾಕಿ ಹಿಂದಿರುಗಿದ್ದಾರೆ. `ನಮಗೆ ಟಿಕೆಟ್ ಸಿಗೋದು ಖಚಿತ' ಎಂದು ಊರೆಲ್ಲ ಸುದ್ದಿ ಹಬ್ಬಿಸಿ, ಸಿಹಿ ಹಂಚಿ ಮತ್ತು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಪ್ರತಿನಿಧಿಸುವ ವೀರಪ್ಪ ಮೊಯಿಲಿಯವರು ಎಂ.ಆಂಜನಪ್ಪ ಪರ ವಾದಿಸಿದರೆ, ಕೇಂದ್ರ ಮಾಜಿ ಸಚಿವ ಎಸ್.ಎಂ.ಕೃಷ್ಣ ಅವರು ಡಾ.ಕೆ.ಸುಧಾಕರ್ ಪರ ಹೈಕಮಾಂಡ್‌ನಲ್ಲಿ ಲಾಬಿ ಮಾಡುತ್ತಿದ್ದಾರೆ. ಇವರಿಬ್ಬರಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

ಮೂವರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಇಬ್ಬರ  ಆಕಾಂಕ್ಷಿಗಳ ಕೋಪ-ತಾಪಗಳಿಗೆ ಗುರಿಯಾಗಬೇಕಾಗುತ್ತದೆ ಎಂಬುದನ್ನು ಅರಿತಿರುವ ಪಕ್ಷದ ವರಿಷ್ಠರು ಸಾವಧಾನವಾಗಿ ಒಂದೊಂದೇ ಹೆಜ್ಜೆಯಿಡುತ್ತಿದ್ದಾರೆ. ಮೂವರನ್ನು ಏಕಕಾಲಕ್ಕೆ ಸಮಾಧಾನಪಡಿಸಲು ಆಗದಿದ್ದರೂ ಯಾವುದಾದರೂ ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದು ಪ್ರಯತ್ನ ನಡೆಸಿದ್ದಾರೆ.

`ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ವೀರಪ್ಪ ಮೊಯಿಲಿ ಮತ್ತು ಎಸ್.ಎಂ.ಕೃಷ್ಣ ನಡುವೆ  ಪ್ರತಿಷ್ಠೆಯಾಗಿ ಕಾಡುತ್ತಿರುವುದೇ ಇಷ್ಟೆಲ್ಲ ಗೊಂದಲಕ್ಕೆ ಕಾರಣವಾಗಿದೆ. ಹೈಕಮಾಂಡ್ ಬಳಿ ಇಬ್ಬರೂ ನಾಯಕರು ತಮ್ಮ ಅಭ್ಯರ್ಥಿಗಳ ಪರ ವಕಾಲತ್ತು ವಹಿಸುತ್ತಿದ್ದಾರೆ.

ಒಂದು ವೇಳೆ ಆಂಜನಪ್ಪಗೆ ಟಿಕೆಟ್ ದೊರೆತಲ್ಲಿ, ಎಸ್.ಎಂ.ಕೃಷ್ಣ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಡಾ.ಕೆ.ಸುಧಾಕರ್‌ಗೆ ಟಿಕೆಟ್ ದೊರೆತಲ್ಲಿ, ವೀರಪ್ಪ ಮೊಯಿಲಿ ಮುಖಭಂಗ ಅನುಭವಿಸಬೇಕಾಗುತ್ತದೆ. ಕ್ಷೇತ್ರ ಸಂಸದರಾಗಿದ್ದರೂ ತಮ್ಮ ಆಪ್ತರಾದ ಎಂ.ಆಂಜನಪ್ಪ ಅಥವಾ ಯಲುವಹಳ್ಳಿ ಎನ್.ರಮೇಶ್‌ಗೆ ಟಿಕೆಟ್ ಕೊಡಿಸಲು ಸಾಧ್ಯವಾಗಲಿಲ್ಲ ಎಂಬ ಅಸಹಾಯಕ ಸ್ಥಿತಿಗೆ ವೀರಪ್ಪ ಮೊಯಿಲಿ ಒಳಗಾಗಬೇಕಾಗುತ್ತದೆ. ಈ ಕಾರಣದಿಂದಲೆ ಚಿಕ್ಕಬಳಾಪುರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಜಟಿಲವಾಗಿ ಪರಿಣಮಿಸಿದೆ' ಎಂದು ಮೂಲಗಳು ತಿಳಿಸಿವೆ.

ಆಕಾಂಕ್ಷಿಗಳ ಹಿನ್ನೆಲೆ?
ಚಿಕ್ಕಬಳ್ಳಾಪುರ: ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮೂವರು ಆಕಾಂಕ್ಷಿಗಳು ತುದಿಗಾಲಲಿದ್ದು, ಅವರ ಕಿರುಪರಿಚಯ ಇಲ್ಲಿದೆ. ಮೂವರ ಹಿನ್ನೆಲೆ ಇಲ್ಲಿ ನೀಡಲಾಗಿದೆ.

ಎಂ.ಆಂಜನಪ್ಪ: ಬೆಂಗಳೂರಿನವರಾದ ಎಂ.ಆಂಜನಪ್ಪ ಹಲವು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಇದ್ದಾರೆ. ಪಕ್ಷದ ವಿದ್ಯಾರ್ಥಿ ಘಟಕವಾಗಿರುವ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಸಂಘಟನೆಯ ಪದಾಧಿಕಾರಿಯಾಗಿದ್ದ ಅವರು ನಂತರದ ವರ್ಷಗಳಲ್ಲಿ ಯುವ ಕಾಂಗ್ರೆಸ್ ಮತ್ತು ಕಾಂಗ್ರೆಸ್‌ನಲ್ಲಿ ಬಡ್ತಿ ಪಡೆದರು. ಕಾಂಗ್ರೆಸ್ ಜಿಲ್ಲಾ ಘಟಕದ ಹಾಲಿ ಅಧ್ಯಕ್ಷರಾಗಿರುವ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅವರು ಹೆಚ್ಚಾಗಿ ಬೆಂಗಳೂರಿನಲ್ಲಿ ವಾಸವಿದ್ದರೂ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮವು ತಾಯಿಯ ಊರು ಎಂದು ಹೇಳಿಕೊಳ್ಳುತ್ತಾರೆ. ಈ ಕಾರಣಕ್ಕೆಂದೇ ಇತ್ತೀಚೆಗೆ ಅವರು `ನಂದಿ ಆಂಜನಪ್ಪ' ಎಂದು ಕರೆಸಿಕೊಳ್ಳಲು ಬಯಸುತ್ತಿದ್ದಾರೆ.

ಡಾ. ಕೆ.ಸುಧಾಕರ್: ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರದ ಡಾ. ಕೆ.ಸುಧಾಕರ್ ಅವರ ತಂದೆ ಪಿ.ಎನ್.ಕೇಶವರೆಡ್ಡಿ ಶಿಕ್ಷಕರು. ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಬೇರೆಯೊಂದು ಪಕ್ಷದಲ್ಲಿದ್ದ ತಂದೆ ಕೇಶವರೆಡ್ಡಿ ಜೊತೆ ಡಾ.ಕೆ.ಸುಧಾಕರ್ ಕಾಂಗ್ರೆಸ್‌ಗೆ ಕೆಲ ವರ್ಷಗಳ ಹಿಂದೆ ಸೇರ್ಪಡೆಯಾದರು. ಶ್ರೀಲಂಕಾ ವಾಣಿಜ್ಯ ಪ್ರತಿನಿಧಿ ಮತ್ತು ರಾಜ್ಯ ಕಾನೂನು ಸೇವಾ ಸಮಿತಿ ಸದಸ್ಯ ಎಂದು ಗುರುತಿಸಿಕೊಂಡಿರುವ ಡಾ.ಕೆ.ಸುಧಾಕರ್ ರಂಗೋಲಿ ಸ್ಪರ್ಧೆ, ನೋಟ್‌ಪುಸ್ತಕ ವಿತರಣೆ, ಪ್ರೆಷರ್ ಕುಕ್ಕರ್ ವಿತರಣೆ ಮುಂತಾದವುಗಳ ಮೂಲಕ ಕ್ಷೇತ್ರದ ಜನರ ಮನ ಗೆಲ್ಲಲು ಹಲವು ಪ್ರಯತ್ನ ನಡೆಸಿದ್ದಾರೆ.

ಯಲುವಹಳ್ಳಿ ಎನ್.ರಮೇಶ್: ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಕ್ರಾಸ್ ಬಳಿಯಿರುವ ಯಲುವಹಳ್ಳಿ ಗ್ರಾಮದವರಾದ ಎನ್.ರಮೇಶ್ ಹಲವಾರು ವರ್ಷಗಳಿಂದ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದಾರೆ. ವೀರಪ್ಪ ಮೊಯಿಲಿಯವರಿಗೆ ಆಪ್ತರೆಂದೇ ಗುರುತಿಸಿಕೊಳ್ಳುವ ಅವರು, ರೈತ ಮುಖಂಡರಾಗಿಯೂ ಹಲವು ಪ್ರತಿಭಟನೆ ಮತ್ತು ಹೋರಾಟಗಳಲ್ಲಿ ಪಾಲ್ಗೊಂಡಿದ್ದಾರೆ. ವಿದ್ಯುತ್ ಸಮಸ್ಯೆ ತಲೆದೋರಿದಾಗಲೆಲ್ಲ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಜಮೀನು ಕಳೆದುಕೊಂಡು ಪರಿಹಾರ ಧನ ಸಿಗದೆ ಸಂಕಷ್ಟದಲ್ಲಿರುವವರ ಪರವಾಗಿ ಹೋರಾಟ ನಡೆಸಿದ್ದಾರೆ.

ಇಕ್ಕಟ್ಟಿನ ಸ್ಥಿತಿ?

ಚಿಕ್ಕಬಳ್ಳಾಪುರ: ಜಿಲ್ಲೆಯು ಕಾಂಗ್ರೆಸ್‌ನ ಭದ್ರಕೋಟೆ ಎಂದು ಗುರುತಿಸಿಕೊಂಡಿದ್ದರೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಇಕ್ಕಟ್ಟಿನ ಸ್ಥಿತಿ ಎದುರಿಸುತ್ತಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಾವುದೇ ನಿರ್ಣಯ ತೆಗೆದುಕೊಂಡರೂ ಪಕ್ಷದಲ್ಲಿ ಒಂದಿಲ್ಲೊಂದು ಸಮಸ್ಯೆ ತಲೆದೋರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಎಂ.ಆಂಜನಪ್ಪ ಅವರಿಗೆ ಟಿಕೆಟ್ ದೊರೆತಲ್ಲಿ, ಕ್ಷೇತ್ರದ ನಗರ ಮತ್ತು ಕೆಲ ಗ್ರಾಮೀಣ ಪ್ರದೇಶದಲ್ಲಿ ಮತದಾರರನ್ನು ಒಲಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಡಾ.ಕೆ.ಸುಧಾಕರ್ ದೊರೆತಲ್ಲಿ, ಪೆರೇಸಂದ್ರ, ಮಂಡಿಕಲ್, ದಿಬ್ಬೂರು ಮುಂತಾದ ಪ್ರದೇಶವನ್ನು ಹೊರತುಪಡಿಸಿ ನಗರ ಮತ್ತು ಗ್ರಾಮಿಣ ಪ್ರದೇಶದಲ್ಲಿ ಮತದಾರರನ್ನು ಒಲೈಸಿಕೊಳ್ಳುವುದು ಕಷ್ಟ ಎನ್ನಲಾಗುತ್ತಿದೆ. ಯಲುವನಹಳ್ಳಿ ಎನ್.ರಮೇಶ್‌ಗೆ  ಟಿಕೆಟ್ ದೊರೆತಲ್ಲಿ, ನಗರ- ಗ್ರಾಮೀಣ ಪ್ರದೇಶದ ಕೆಲವು ಭಾಗಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಗಬಹುದು ಎಂದು ಹೇಳಲಾಗುತ್ತಿದೆ.

ಈ ಮೂವರಲ್ಲಿ ಯಾರೇ ಒಬ್ಬರಿಗೆ ಟಿಕೆಟ್ ಸಿಕ್ಕರೂ ಇನ್ನಿಬ್ಬರು ಕಾಂಗ್ರೆಸ್ ಅಭ್ಯರ್ಥಿಗೆ ಚುನಾವಣೆಯಲ್ಲಿ ಸಂಕಷ್ಟ ಸ್ಥಿತಿ ಒಡ್ಡಬಹುದು. ಕಾಂಗ್ರೆಸ್‌ನಲ್ಲಿ ಇದ್ದುಕೊಂಡೇ ಬೇರೆ ಪಕ್ಷದವರಿಗೆ ಬೆಂಬಲಿಸಿ, ಪಕ್ಷದೊಳಗಿನ ಪ್ರತಿಸ್ಪರ್ಧಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರ ರೂಪಿಸಬಹುದು ಎಂದು ಮೂಲಗಳು ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT