ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಕೌಶಲ್ಯ ಕೇಂದ್ರ: ಮೊಯಿಲಿ

Last Updated 15 ಸೆಪ್ಟೆಂಬರ್ 2013, 19:52 IST
ಅಕ್ಷರ ಗಾತ್ರ

ಬೆಂಗಳೂರು: ನಿರುದ್ಯೋಗಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಕೌಶಲ್ಯ ಕೇಂದ್ರ­ವನ್ನು ಅಕ್ಟೋಬರ್‌ 2ರಂದು ಚಿಕ್ಕಬಳ್ಳಾಪುರದಲ್ಲಿ ಆರಂಭಿಸಲಾಗುವುದು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಎಂ. ವೀರಪ್ಪ ಮೊಯಿಲಿ ತಿಳಿಸಿದರು.

ನಗರದ ಭಾರತೀಯ ವಿದ್ಯಾ ಭವನದ ಗಾಂಧಿ ಕಂಪ್ಯೂಟರ್‌ ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ ವತಿಯಿಂದ ಆರ್ಥಿಕವಾಗಿ ಹಿಂದುಳಿದ ನಿರುದ್ಯೋಗಿಗಳಿಗೆ ಆರಂಭಿಸಲಾದ ಉಚಿತ ಕಂಪ್ಯೂಟರ್‌ ಶಿಕ್ಷಣ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಶೇಕಡಾ 25ರಷ್ಟು ಎಂಜಿನಿಯರ್‌ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಇದ­ಕ್ಕಾಗಿಯೇ ವೃತ್ತಿಗೆ ಪೂರಕವಾಗುವಂತೆ ನಿರು­ದ್ಯೋಗಿ­ಗಳಿಗೆ ಕೌಶಲ್ಯ ಕೇಂದ್ರದಲ್ಲಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಚಿಕ್ಕಬಳ್ಳಾಪುರದಲ್ಲಿ ಈ ಹಿಂದೆ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಸುಮಾರು 15 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಲಾಯಿತು. ಆದರೆ, ಹಲವು ಮಂದಿ ಉನ್ನತ ಶಿಕ್ಷಣ ಪಡೆದಿದ್ದರೂ ಉದ್ಯೋಗ ದೊರೆಯಲಿಲ್ಲ. ಕೌಶಲ್ಯ  ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿತ್ತು ಎಂದು ನುಡಿದರು.

ಕೇಂದ್ರ ಸರ್ಕಾರ ಖಾಸಗಿ  ಮತ್ತು ಕಾರ್ಪೋ­ರೇಟ್‌ ವಲಯದ ಕಂಪೆನಿಗಳಿಗೆ ‘ಸಾಮಾಜಿಕ ಜವಾಬ್ದಾರಿ ನಿಧಿ’ಗೆ ನಿವ್ವಳ ಲಾಭದ ಶೇಕಡಾ 2ರಷ್ಟು ಪಾಲು ನೀಡುವಂತೆ ಕಡ್ಡಾಯ­ಗೊಳಿಸಿ­ದಾಗ ಆರಂಭದಲ್ಲಿ ತೀವ್ರ ವಿರೋಧವಾಗಿತ್ತು. ಆದರೆ, ಈಗ ಇದೊಂದು ಪ್ರಗತಿಪರ ಕ್ರಮ ಎಂದು ಎಲ್ಲರೂ ಸ್ವಾಗತಿಸಿದ್ದಾರೆ. ಈ ನಿಧಿಯನ್ನು ಶೈಕ್ಷಣಿಕ ಚಟುವಟಿಕೆಗಳಿಗೂ ಬಳಸಿಕೊಳ್ಳಬಹುದು ಎಂದು ನುಡಿದರು.

ರಾಜ್ಯಸಭಾ ಸದಸ್ಯ ಮತ್ತು ಭಾರತೀಯ ವಿದ್ಯಾ­ಭವನದ ಹಿರಿಯ ಉಪಾಧ್ಯಕ್ಷ ಮುರುಳಿ ದೇಯೋರಾ ಮಾತನಾಡಿ,  ದೇಶದಲ್ಲಿ ಒಟ್ಟು 100 ಉಚಿತ ಕಂಪ್ಯೂಟರ್‌ ಶಿಕ್ಷಣ ಕೇಂದ್ರಗಳನ್ನು ಆರಂಭಿಸಲು ಭಾರತೀಯ ವಿದ್ಯಾಭವನ ಉದ್ದೇಶಿ­ಸಿದೆ. ಇದು 53ನೇ ಕೇಂದ್ರವಾಗಿದೆ ಎಂದರು.

ಆರ್ಥಿಕವಾಗಿ ಹಿಂದುಳಿದ, ಕನಿಷ್ಠ ಪಿಯು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ 18 ರಿಂದ 30 ವರ್ಷಗಳ ಒಳಗಿನವರಿಗೆ ಮಾರುಕಟ್ಟೆ ಅಗತ್ಯ ಮತ್ತು ಅವಶ್ಯಕತೆಗಳನ್ನು ಗಮನಿಸಿ ತರಬೇತಿ ನಿಡಲಾಗುವುದು ಎಂದು ತಿಳಿಸಿದರು.

ಭಾರತೀಯ ವಿದ್ಯಾಭವನ 1996ರಲ್ಲಿ ಕಂಪ್ಯೂಟರ್‌ ಶಿಕ್ಷಣ ಕೇಂದ್ರವನ್ನು ಜಪಾನ್‌ನ ಡಾ. ಹೋಗೆನ್‌ ಫುಕುನಾಗ ಅವರ ಒಂದು ಲಕ್ಷ ಡಾಲರ್‌ ದೇಣಿಗೆಯೊಂದಿಗೆ ಆರಂಭಿಸಿತು. ಬಿಲ್‌­ಗೇಟ್ಸ್‌ ಸೇರಿದಂತೆ ಹಲವರು ದೇಣಿಗೆ ನೀಡಿದ್ದಾರೆ. ಪ್ರತಿ ವರ್ಷ 24 ಸಾವಿರ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದು, ಇದುವರೆಗೆ 2.36 ಲಕ್ಷ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆದಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನ ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್‌. ರಾಮಾನುಜ, ನಿರ್ದೇಶಕ ಎಚ್‌.ಎನ್‌. ಸುರೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT