ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬೇರ‌್ಗಿ : ಇಲ್ಲಿ ರಸ್ತೆಯೇ ಚರಂಡಿ

Last Updated 7 ಜನವರಿ 2013, 8:30 IST
ಅಕ್ಷರ ಗಾತ್ರ

ಸಿಂಧನೂರು: ತಾಲ್ಲೂಕಿನ ತುರ್ವಿಹಾಳ ಹೋಬಳಿಗೆ ಒಳಪಡುವ ಕಲ್ಮಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಬೇರ‌್ಗಿ ಗ್ರಾಮದಲ್ಲಿ ರಸ್ತೆಗಳು ಚರಂಡಿಗಳಾಗಿ ಮಾರ್ಪಟ್ಟಿವೆ. ಇದರಿಂದ ಪಾದಾಚಾರಿಗಳ ಸಂಚಾರವೂ ದುಸ್ತರವಾಗಿದೆ. 550 ಮನೆಗಳಿಂದ ಕೂಡಿದ, 3ಸಾವಿರ ಜನಸಂಖ್ಯೆ ಇರುವ ಗ್ರಾಮ 1250 ಮತದಾರರನ್ನು ಹೊಂದಿದೆ.

ಸರ್ಕಾರದ ಮೂಲಸೌಕರ್ಯಗಳು ಮಾತ್ರ ಗಗನಕುಸುಮವಾಗಿವೆ. ಇದೇ ಗ್ರಾಮದ ಶರಣಪ್ಪ ಹೂವಿನಬಾವಿ ಈ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಕಲ್ಮಂಗಿ ಗ್ರಾಮ ಪಂಚಾಯಿತಿಯಲ್ಲಿ ಚಿಕ್ಕಬೇರ‌್ಗಿಯ ಐದು ಜನ ಸದಸ್ಯರು ಇದ್ದಾಗ್ಯೂ ಸೌಲಭ್ಯಗಳು ಮಾತ್ರ ಮರೀಚಿಕೆಯಾಗಿವೆ.

ಉದ್ಯೋಗ ಖಾತ್ರಿ ಯೋಜನೆ, ಸುವರ್ಣ ಗ್ರಾಮ ಯೋಜನೆ ಸೇರಿದಂತೆ ಗ್ರಾಮ ಸುಧಾರಣೆ ಕಾರ್ಯಕ್ರಮಗಳ ಸುಳಿವು ಈ ಗ್ರಾಮದಲ್ಲಿ ಗೋಚರಿಸುವುದಿಲ್ಲ. ಕುಡಿಯುವ ನೀರಿಗೆ ಕೊಳವೆ ಬಾವಿಗಳಿವೆ.

ಕ್ಷೇತ್ರಕ್ಕೆ 32 ಸುವರ್ಣ ಗ್ರಾಮ ಯೋಜನೆಯನ್ನು ಮಂಜೂರು ಮಾಡಿಸಿರುವ ಶಾಸಕ ಪ್ರತಾಪಗೌಡರು ತಮ್ಮ ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಯಡಿ ಅಳವಡಿಸದಿರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಶುದ್ಧ ನೀರನ್ನು ಕುಡಿದ ಗ್ರಾಮಸ್ಥರು ಮೊಣಕಾಲು ಬೇನೆ, ಟೊಂಕಬೇನೆ ಮತ್ತಿತರ ಕೀಲು ನೋವಿನಿಂದ ಬಳಲುತ್ತಿದ್ದಾರೆ.

ಸರ್ಕಾರವು ಗುಡಿಸಲು ರಹಿತ ಗ್ರಾಮಗಳನ್ನು ನಿರ್ಮಿಸುತ್ತೇವೆಂದು ಜಾರಿಗೆ ತಂದ ಮಹಾತ್ವಾಕಾಂಕ್ಷೆಯ ಬಸವ, ಅಂಬೇಡ್ಕರ್ ಯೋಜನೆಯಿಂದ ಕಲ್ಪಿಸಲ್ಪಡುವ ಮನೆಗಳು ಅರ್ಧಕ್ಕೆ ನಿಂತಿವೆ. 2009-10ರಲ್ಲಿ 26 ಮನೆಗಳು ಚಿಕ್ಕಬೇರ‌್ಗಿ ಗ್ರಾಮಕ್ಕೆ ಮಂಜೂರಾಗಿದ್ದು, ಮೊದಲು ಕಂತು 12ಸಾವಿರ ಮಾತ್ರ ಬಿಡುಗಡೆ ಮಾಡಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂತರದ ಕಂತನ್ನು ವರ್ಷ ಕಳೆದರೂ ಬಿಡುಗಡೆ ಮಾಡುತ್ತಿಲ್ಲ.

ಗ್ರಾಮ ಪಂಚಾಯಿತಿಗೆ ದಿನವೂ ಅಲೆದು ಅಲೆದು ಸಾಕಾಗಿದೆ. ಮನೆ ಪೂರ್ಣಗೊಂಡಿದ್ದರೂ ಸರ್ಕಾರ ಒದಗಿಸುವ ಪೂರ್ಣ ಪ್ರಮಾಣದ 60ಸಾವಿರ ಹಣವನ್ನು ಇಲ್ಲಿಯವರೆಗೆ ಕೊಡದಿರುವುದರಿಂದ ತಮ್ಮ ಮನೆಗಳು ಅರ್ಧಕ್ಕೆ ನಿಂತಿವೆ. ಅಭಿವೃದ್ಧಿ ಅಧಿಕಾರಿ ಹಣ ಬಿಡುಗಡೆ ಮಾಡುತ್ತಿಲ್ಲವೆಂದು ಗ್ರಾಮದ ಕರಿಯಪ್ಪ ಹರಿಜನ ಸೋಮಶೇಖರಗೌಡ, ಬಸವರಾಜ ಜವಳಗೇರಾ ಮತ್ತಿತರರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯ ವಿಳಂಬ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

26 ಮನೆಗಳು ಮಂಜೂರಾಗಿವೆ ಎಂದು ಮೊದಲ ಕಂತಿನ ಹಣ ಬಿಡುಗಡೆ ಮಾಡಿರುವ ಗ್ರಾಮ ಪಂಚಾಯಿತಿ ಈಗ ಕೆಲವರ ಮನೆಗಳು ರದ್ದಾಗಿವೆ ಎಂದು ಹೇಳುತ್ತಿರುವುದರಿಂದ ಫಲಾನುಭವಿಗಳು ಆತಂಕಕ್ಕೊಳಗಾಗಿದ್ದಾರೆ. ಶಾಸಕ ಪ್ರತಾಪಗೌಡ, ಜಿಲ್ಲಾ ಪಂಚಾಯಿತಿ ಸದಸ್ಯೆ ಬಸಮ್ಮ ಕುಂಟೋಜಿ ಮತ್ತಿತರ ಜನಪ್ರತಿನಿಧಿಗಳಿಗೆ ಹೇಳಿದಾಗ್ಯೂ ಯಾವ ಪ್ರಯೋಜನವಾಗಿಲ್ಲವೆಂದು ಬೇಸರ ವ್ಯಕ್ತಪಡಿಸುತ್ತಾರೆ.

ಗ್ರಾಮ ಸೇವಕ, ಗ್ರಾಮಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು ತಮ್ಮ ಗ್ರಾಮವನ್ನೇ ನೋಡಿಲ್ಲ. ಒಂದು ಸಾರಿಯೂ ಗ್ರಾಮಕ್ಕೆ ಭೇಟಿ ಕೊಟ್ಟಿಲ್ಲ. ಆದಾಯ, ಜಾತಿ, ವಾಸಸ್ಥಳ ಮತ್ತಿತರ ಪ್ರಮಾಣಪತ್ರಗಳನ್ನು ಪಡೆಯಬೇಕಾದರೆ, ಹತ್ತಾರು ಬಾರಿ ತುರ್ವಿಹಾಳ, ಸಿಂಧನೂರಿಗೆ ಅಲೆದಾಡಬೇಕಾಗಿದೆ ಎಂದು ಗ್ರಾಮಸ್ಥರು ನೋವಿನಿಂದ ಹೇಳುತ್ತಾರೆ.

ಕುಡಿಯುವ ನೀರಿನ ಸಮಸ್ಯೆ ಕುರಿತು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಬಿ.ಆರ್.ಗೌಡೂರ್ ಅವರನ್ನು `ಪ್ರಜಾವಾಣಿ' ಸಂಪರ್ಕಿಸಿದಾಗ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯಲ್ಲಿ ಚಿಕ್ಕಬೇರ‌್ಗಿ, ಹಿರೇಬೇರ‌್ಗಿ, ಕರಡಚಿಲುಮಿ ಗ್ರಾಮಗಳು ಸೇರ್ಪಡೆ ಆಗಿರಲಿಲ್ಲ. ಈಗ ಈ ಗ್ರಾಮಗಳನ್ನು ಸೇರ್ಪಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ಇದರಿಂದ ಶುದ್ಧ ನೀರಿನ ಸೌಲಭ್ಯ ಎಲ್ಲ ಗ್ರಾಮಗಳಿಗೆ ಲಭ್ಯವಾಗುತ್ತದೆ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT