ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟಿಪತಿ ಅಭ್ಯರ್ಥಿಗಳು

Last Updated 20 ಏಪ್ರಿಲ್ 2013, 12:57 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಇಲ್ಲಿನ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಘೋಷಿಸಿಕೊಂಡಿರುವ ಆಸ್ತಿ-ಪಾಸ್ತಿಯ ವಿವರ ಹೀಗಿದೆ.

ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ಅವರು 3.06 ಕೋಟಿ ರೂಪಾಯಿ ಮೊತ್ತದ ಸ್ಥಿರಾಸ್ತಿ ಮತ್ತು ಅವರ ಪತ್ನಿ ಪಲ್ಲವಿ ರವಿ ಹೆಸರಿನಲ್ಲಿ 2.12 ಕೋಟಿ ರೂಪಾಯಿ ಸ್ಥಿರಾಸ್ತಿ ಹೊಂದಿದ್ದಾರೆ.

ರವಿ ಅವರ ಬಳಿ 37,850 ರೂ. ಮತ್ತು ಅವರ ಪತ್ನಿ ಬಳಿ 24,868 ರೂ. ನಗದು ಇದೆ. ವೈಯಕ್ತಿಕ ಮತ್ತು ಅವಿಭಕ್ತ ಕುಟುಂಬದ ಮೊತ್ತ ಸೇರಿ ವಿವಿಧ ಬ್ಯಾಂಕ್‌ನಲ್ಲಿ 59.85 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದಾರೆ. ಪತ್ನಿ ಹೆಸರಿನಲ್ಲಿ 18.35 ಲಕ್ಷ ರೂಪಾಯಿ ಠೇವಣಿ ಇದೆ.

ಕಂಪನಿಗಳು, ಮ್ಯೂಚುಯಲ್ ಫಂಡ್ ಮತ್ತು ಷೇರುಗಳು ಸೇರಿದಂತೆ ಸಚಿವರು 11,05,000 ರೂಪಾಯಿ, ಪತ್ನಿ ಹೆಸರಿನಲ್ಲಿ ಜೀವ ವಿಮೆ ಸೇರಿದಂತೆ 1.50 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. ಜೀವವಿಮೆಯಲ್ಲಿ ರವಿ 1 ಲಕ್ಷ ರೂಪಾಯಿ ತೊಡಗಿಸಿದ್ದು, ವಿವಿಧ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ನೀಡಿರುವ ಹಣದ ಮೊತ್ತ 23.47 ಲಕ್ಷ ರೂಪಾಯಿ. ಅವರ ಪತ್ನಿ 2.45 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ.

ಅರೆನೂರು ಗ್ರಾಮದ ಸರ್ವೇ ನಂ.101ರಲ್ಲಿ 7 ಎಕರೆ ಬಗರ್ ಹುಕುಂ ಜಮೀನು, ಚಿಕ್ಕಮಗಳೂರು ನಗರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 1997-98ರಲ್ಲಿ 91,740 ರೂಪಾಯಿ ನೀಡಿ ಖರೀದಿಸಿರುವ ನಿವೇಶನ, ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ 63.98 ಲಕ್ಷ ರೂಪಾಯಿ ಮೌಲ್ಯದ 170*86 ಅಡಿ ವಿಸ್ತೀರ್ಣದ ನಿವೇಶನ, ಬೆಂಗಳೂರು ಎಚ್.ಬಿ.ಆರ್. ಬಡಾವಣೆಯಲ್ಲಿ ಶಾಸಕರಿಗೆ ನೀಡಿರುವ 9.02 ಲಕ್ಷ ರೂಪಾಯಿ ಮೌಲ್ಯದ ಬಿಡಿಎ ನಿವೇಶನ, ರಾಮನಹಳ್ಳಿಯಲ್ಲಿ 13.14 ಲಕ್ಷ ರೂಪಾಯಿ ಮೌಲ್ಯದ 1 ಎಕರೆ 32 ಗುಂಟೆ ಜಾಗ ಹೊಂದಿದ್ದಾರೆ.

ಬ್ಯಾಂಕ್, ಹಣಕಾಸು ಸಂಸ್ಥೆಗಗಳು ಹಾಗೂ ಖಾಸಗಿ ವ್ಯಕ್ತಿಗಳಿಗೆ ರವಿ 96.80 ಲಕ್ಷ ರೂಪಾಯಿ ಸಾಲ ನೀಡಬೇಕಿದೆ. ಪತ್ನಿ ನೀಡಬೇಕಿರುವ ಸಾಲದ ಮೊತ್ತ 27.09 ಲಕ್ಷ ರೂಪಾಯಿ.

ರವಿ ಬಳಿ 9.55 ಲಕ್ಷ ರೂಪಾಯಿ ಬೆಲೆಯ ಒಂದು ಸ್ಕಾರ್ಪಿಯೊ  ವಾಹನವಿದೆ. 400 ಗ್ರಾಂ ಚಿನ್ನ ಮತ್ತು 2 ಕೆ.ಜಿ 100 ಗ್ರಾಂ ಬೆಳ್ಳಿ ಆಭರಣ ಇದೆ. ಪತ್ನಿ ಬಳಿ 810 ಗ್ರಾಂ ಚಿನ್ನ ಮತ್ತು 6 ಸಾವಿರ ಗ್ರಾಂ ಬೆಳ್ಳಿ ವಸ್ತು ಇದೆ.

ರವಿ ಅವರ ಮೇಲೆ ಮೂರು ಪ್ರಕರಣಗಳು ಇದ್ದು, ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇವೆ. ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ, ಭ್ರಷ್ಟಾಚಾರ ನಿರ್ಮೂಲನ ಕಾಯಿದೆ ಅಡಿ ಒಂದು ಖಾಸಗಿ ಮೊಕದ್ದಮೆ ವಿಚಾರಣೆಗೆ ಬಾಕಿ ಉಳಿದಿದೆ. ಈ ಪ್ರಕರಣ ವಿಚಾರಣೆಗೆ ಹೈಕೋರ್ಟ್ 2012ರಲ್ಲಿ ತಡೆಯಾಜ್ಞೆ ನೀಡಿದೆ. ಮತ್ತೊಂದು ಪ್ರಕರಣ ನಗರದ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಹಾಗೂ ಇನ್ನೊಂದು ಓಪನ್ ಪ್ಲೇಸ್ ಡಿಸ್‌ಫಿಗರ‌್ಮೆಂಟ್ ಕಾಯಿದೆ ಅಡಿ ದಾಖಲಾಗಿರುವ ಮೊಕದ್ದಮೆ ವಿಚಾರಣೆಗೆ ಬಾಕಿ ಉಳಿದಿದೆ.

ಕಾಂಗ್ರೆಸ್ ಅಭ್ಯರ್ಥಿ ಆಸ್ತಿಯೂ ಕೋಟಿ  ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆ.ಎಸ್.ಶಾಂತೇಗೌಡ ಅವರು ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ನೀಡಿರುವ ಮಾಹಿತಿ ಯಂತೆ ತಾವು ಮತ್ತು ಪತ್ನಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡರ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಠೇವಣಿ 2.83 ಕೋಟಿ ರೂಪಾಯಿ. 15.65 ಲಕ್ಷ ರೂಪಾಯಿ ಹಣವನ್ನು ಷೇರುಗಳಲ್ಲಿ ತೊಡಗಿಸಿದ್ದಾರೆ. ಗಾಯತ್ರಿ ಜೀವ ವಿಮೆ ಸೇರಿದಂತೆ ವಿವಿಧ ಮೂಲಗಳಲ್ಲಿ 29.44 ಲಕ್ಷ ರೂಪಾಯಿ ತೊಡಗಿಸಿದ್ದಾರೆ.

ಶಾಂತೇಗೌಡರು ವ್ಯಕ್ತಿ, ಸಂಸ್ಥೆಗಳಿಗೆ ನೀಡಿರುವ ಹಣದ ಮೊತ್ತ 2.95 ಕೋಟಿ ರೂಪಾಯಿ. ಪ್ರಸಕ್ತ ಮಾರುಕಟ್ಟೆಯಲ್ಲಿ 22.70 ಲಕ್ಷ ಬೆಲೆ ಇರುವ 15.09 ಎಕರೆ ಜಮೀನು, ಪತ್ನಿ ಹೆಸರಿನಲ್ಲಿ 76.50 ಲಕ್ಷ ಮೌಲ್ಯದ 10.16 ಎಕರೆ ಜಮೀನು, 2.31 ಕೋಟಿ ಮೌಲ್ಯದ ನಿವೇಶನ ಮತ್ತು ವಸತಿ ಕಟ್ಟಡ ಹೊಂದಿದ್ದಾರೆ. 1 ಇನ್ನೋವಾ, 1 ಸ್ಯಾಂಟ್ರೊ, 1 ಟಾಟಾ ಇಟಾಚಿ ಹಾಗೂ 1 ದ್ವಿಚಕ್ರ ವಾಹನ, ಪತ್ನಿ ಬಳಿ 15.60 ಲಕ್ಷ ಮೌಲ್ಯದ ವಾಹನ ಇದೆ. 15 ಲಕ್ಷ ಮೌಲ್ಯದ 650 ಗ್ರಾಂ ಚಿನ್ನ, ಬೆಳ್ಳಿ ಆಭರಣ, ಪತ್ನಿ ಬಳಿ 25 ಲಕ್ಷ ಮೌಲ್ಯದ 1050 ಗ್ರಾಂ ಚಿನ್ನ, 2.50 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಇದೆ.

ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಗೆ ನೀಡಬೇಕಿರುವ ಸಾಲ 96.91 ಲಕ್ಷ ರೂಪಾಯಿ. ಅವರ ಪತ್ನಿ ನೀಡಬೇಕಿರುವ ಸಾಲ 36.50 ಲಕ್ಷ ರೂಪಾಯಿ. ಶಾಂತೇಗೌಡ ವಿರುದ್ಧ ಯಾವುದೇ ಮೊಕದ್ದಮೆ ದಾಖಲಾಗಿಲ್ಲ.

ಧರ್ಮೇಗೌಡ ಐಷಾರಾಮಿ ಕಾರಿನ ಒಡೆಯ: ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಧರ್ಮೇಗೌಡ ಘೋಷಿಸಿಕೊಂಡಿರುವಂತೆ ಅವರ ಬಳಿ 1.25 ಲಕ್ಷ ರೂಪಾಯಿ ನಗದು, ಪತ್ನಿ ಮಮತಾ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ 58.75 ಲಕ್ಷ ನಗದು ಇದೆ.

53 ಲಕ್ಷ ರೂಪಾಯಿ ಮೌಲ್ಯದ ಬಿಎಂಡಬ್ಲ್ಯು ಕಾರು ಸೇರಿದಂತೆ 7 ವಾಹನಗಳು ಇವೆ.

ಈ ಎಲ್ಲ ವಾಹನಗಳ ಒಟ್ಟು ಮೌಲ್ಯ 1.04 ಕೋಟಿ ರೂಪಾಯಿ. 24 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ 2 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ, ಪತ್ನಿ ಬಳಿ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನವಿದೆ. 1.41 ಕೋಟಿ ಮೌಲ್ಯದ ಜಮೀನು, 3.63 ಕೋಟಿ ಮೌಲ್ಯದ ವಸತಿ ಕಟ್ಟಡ, ಪತ್ನಿ ಹೆಸರಿನಲ್ಲಿ 10 ಲಕ್ಷ ಮೌಲ್ಯದ ಕಟ್ಟಡ ಇದೆ. ಧರ್ಮೇಗೌಡರ ಹೆಸರಿನಲ್ಲಿ 26 ಲಕ್ಷ ಮತ್ತು ಪತ್ನಿ ಹೆಸರಿನಲ್ಲಿ 97 ಸಾವಿರ ರೂಪಾಯಿ ಸಾಲವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT