ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮ್ಯಾಗೇರಿ ಕೊಳಗೇರಿ

Last Updated 17 ಜನವರಿ 2013, 9:33 IST
ಅಕ್ಷರ ಗಾತ್ರ

ಯಲಬುರ್ಗಾ: ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಇದ್ದು, ಇತರೆ ಪಂಚಾಯಿತಿಗೆ ಹರಿದು ಬರುವ ರೀತಿಯಲ್ಲಿಯೇ ಈ ಪಂಚಾಯಿತಿಗೆ ಸಾಕಷ್ಟು ಅಭಿವೃದ್ಧಿ ಅನುದಾನ ಹರಿದು ಬರುತ್ತಿದೆ, ಹಾಗೆಯೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಗಳು ಕಾರ್ಯನಿರ್ವಹಿಸುತ್ತಿದ್ದರೂ ಗ್ರಾಮದಲ್ಲಿ ಕನಿಷ್ಟ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವ ಸೌಜನ್ಯ ತೋರದ ಕಾರಣ  ಅಧಿಕಾರಿಗಳು ಇದ್ದು ಇಲ್ಲದಂತಾಗಿದೆ ಎಂದು ತಾಲ್ಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ರಾಮಣ್ಣ ಕುರಿ, ಹುಸೇನ ಗುಡಿಹಿಂದಲ್ ಹಾಗೂ ಇತರರು ದೂರಿದ್ದಾರೆ.

ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆ ಜನರನ್ನು ದಿನಬಳಕೆಯ ಕೊಳಚೆ ನೀರು ಸ್ವಾಗತ್ತಿಸುತ್ತಿವೆ. ಒಳ ರಸ್ತೆ ನಿರ್ಮಾಣಕ್ಕಾಗಿ ವಿವಿಧ ಯೋಜನೆ ಅಡಿಯಲ್ಲಿ ಸಾಕಷ್ಟು ಅನುದಾನ ಹರಿದು ಬಂದರೂ ಸರಿಯಾಗಿ ಅನುಷ್ಠಾನಗೊಳಿಸದೇ ಇರುವ ಕಾರಣ ಬಹುತೇಕ ರಸ್ತೆಯುದ್ದಕ್ಕೂ ಬರೀ ಕೊಳಚೆ ನೀರು ಹರಿಯುತ್ತಿವೆ. ಇದರಿಂದ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುವುದಲ್ಲದೇ ಅಕ್ಕಪಕ್ಕದ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತಂದರೆ ಊರ ಅಂದಮೇಲೆ ಕೊಳಗೇರಿ ಇರೋದೆ, ಅದರಲ್ಲಿಯೇ ಸುಧಾರಿಸಿಕೊಂಡು ಹೋಗಬೇಕು ಎನ್ನುವ ರೀತಿಯಲ್ಲಿ ಮಾತನಾಡುತ್ತಾ ಗ್ರಾಮದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ ಎಂದು ಪಿಡಿಒ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಲಾ ಆವರಣದಲ್ಲಿಯೇ ಹಾದು ಪಶು ಚಿಕಿತ್ಸಾ ಕೇಂದ್ರಕ್ಕೆ ಹೋಗುವ ಜಾನುವಾರುಗಳಿಗೆ ಸೂಕ್ತ ದಾರಿ ಮಾಡಿಕೊಡುವಲ್ಲಿ ನಿರಾಸಕ್ತಿ, ಪಂಚಾಯಿತಿ ಪಕ್ಕದಲ್ಲಿಯೇ ಅಂಗನವಾಡಿ ಕೇಂದ್ರವಿದ್ದು ಅದರ ಸುತ್ತಲೂ ಜಾನುವಾರುಗಳನ್ನು ಕಟ್ಟಿ ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗುತ್ತಿದ್ದರೂ ಅದರ ನಿವಾರಣೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು, ಕುಡಿಯುವ ನೀರುಗಾಗಿ ಪರಿತಪಿಸುತ್ತಿರುವ ಗ್ರಾಮಸ್ಥರ ಬವಣೆ ನೀಗಿಸುವಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು,

ಹೀಗೆ ಗ್ರಾಮದ ಜನರ ಕಲ್ಯಾಣಕ್ಕೆ ಯಾವುದೇ ಅಗತ್ಯ ಕ್ರಮ ಕೈಗೊಳ್ಳದಿರುವ ಪಿಡಿಒ ವಿರುದ್ಧ ಜಿಲ್ಲಾಧಿಕಾರಿಗಳು, ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಕ್ತ ಕೈಗೊಳ್ಳುವುದಲ್ಲದೇ ಚಿಕ್ಕಮ್ಯಾಗೇರಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಾಗಿದೆ, ಮೇಲಧಿಕಾರಿಗಳು ಗ್ರಾಮಕ್ಕೆ ಬಂದು ಗ್ರಾಮ ದರ್ಶನ ಮಾಡಿದಾಗ ಗ್ರಾಮದ ದುರಾವಸ್ಥೆ ಎಷ್ಟರಮಟ್ಟಿಗಿದೆ ಎಂಬುದು ಗೊತ್ತಾಗುತ್ತದೆ ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ: ಸಾಕಷ್ಟು ಭರವಸೆಗಳನ್ನು ಜನರ ಮುಂದಿಟ್ಟು ಆಯ್ಕೆಯಾದ ಜಿಪಂ ಸದಸ್ಯ ರಾಮಣ್ಣ ಸಾಲಭಾವಿ ಅವರು ಆಯ್ಕೆಯಾದ ಮೇಲೆ ಒಮ್ಮೆಯೂ ಇತ್ತ ಕಡೆ ಇಣುಕಿ ನೋಡಿಲ್ಲ, ಗ್ರಾಮಸ್ಥರ ಸಮಸ್ಯೆಗಳ ಕುರಿತು ಒಮ್ಮೆಯೂ ವಿಚಾರಿಸಿಲ್ಲ, ಆಯ್ಕೆಯಾದ ಹೊಸದರಲ್ಲಿ ಸಮಸ್ಯೆಗಳನ್ನು ಹೊತ್ತು ಅವರನ್ನು ವಿಚಾರಿಸಿದಾಗ ಒಂದೆರಡು ವಾರದಲ್ಲಿ ಸಮಸ್ಯೆ ನಿವಾರಿಸುತ್ತೇವೆಂದು ಹೇಳಿ ಹೋಗಿದ್ದನ್ನು ಬಿಟ್ಟರೆ ಬೇರೆ ಏನು ನಡೆಯಲಿಲ್ಲ, ಹೀಗೆ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದಾಗಿ ಗ್ರಾಮ ಕೊಳಗೇರಿಯಂತಾಗಿದ್ದು ಊರೊಳಗೆ ಮೂಗುಮುಚ್ಚಿಕೊಂಡೇ ತಿರುಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ದಾರಿಗೆ ಆಗ್ರಹ: ಶಾಲೆಯ ಆವರಣದಲ್ಲಿಯೇ ಹಾದು ಪಶು ಚಿಕಿತ್ಸಾ ಕೇಂದ್ರಕ್ಕೆ ಹೋಗುವುಕ್ಕೆ ಸೂಕ್ತ ಮಾರ್ಗದ ಅಗತ್ಯವಿದ್ದು, ಪಂಚಾಯಿತಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ. ಚಿಕಿತ್ಸಾ ಕೇಂದ್ರದ ಹಿಂದೆ ಇರುವ ಮುಖ್ಯ ರಸ್ತೆಯಿಂದ ಹೊಸ ಮಾರ್ಗ ಕಲ್ಪಿಸಲು ಅವಕಾಶವಿದ್ದು, ಇದರಿಂದ ಜಾನುವಾರುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

ಸದ್ರಿ ರಸ್ತೆ ಪಕ್ಕದಲ್ಲಿ ಇರುವ ತಗ್ಗನ್ನು ಮುಚ್ಚಿ ರಸ್ತೆನಿರ್ಮಿಸಿದರೆ ಶಾಲೆಯ ಪರಿಸರವನ್ನು ರಕ್ಷಿಸುವುದರ ಜೊತೆಗೆ ರಾತ್ರಿ ಹೊತ್ತಿಯಲ್ಲಿ ಶಾಲೆ ಹಾಗೂ ಪಶುಚಿಕಿತ್ಸಾ ಕೇಂದ್ರ ಸುತ್ತಮುತ್ತ ಸಾರ್ವಜನಿಕರು ಬರ್ಹಿದೆಸೆಗೆ ಹೋಗುವುದನ್ನು ತಪ್ಪಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಮೇಲಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT