ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಲ್ಲೂರಿನಲ್ಲಿ ಪ್ರಾಣಿ ಬಲಿ ತಡೆಗೆ ಒತ್ತಾಯ

Last Updated 11 ಜನವರಿ 2012, 8:10 IST
ಅಕ್ಷರ ಗಾತ್ರ

ಚಾಮರಾಜನಗರ: `ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕು~ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಒತ್ತಾಯಿಸಿದರು.

`ಯಾರೊಬ್ಬರ ಆಹಾರದ ಹಕ್ಕು ಕಸಿಯುವ ಉದ್ದೇಶ ತಮಗಿಲ್ಲ. ಆದರೆ, ಹಕ್ಕಿನ ಹೆಸರಿನಡಿ ಮೂಢನಂಬಿಕೆಯ ಪಾಲನೆಯೊಂದಿಗೆ ಮುಗ್ಧ ಪ್ರಾಣಿಗಳ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯಲ್ಲಿ ಸಾವಿರಾರು ಪ್ರಾಣಿಗಳ ಬಲಿ ನಡೆಯಲಿದೆ. ಇದರ ತಡೆಗೆ ಭಕ್ತರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ~ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಲಕ್ಷಾಂತರ ಮಂದಿ ಭಕ್ತರು ಜಾತ್ರೆಗೆ ಬರುತ್ತಾರೆ. ಹರಕೆ ಹೆಸರಿನಡಿ ಪ್ರಾಣಿಗಳ ಮಾರಣಹೋಮ ನಡೆಯಲಿದೆ. ಕರ್ನಾಟಕ ಪ್ರಾಣಿಬಲಿಗಳ ಪ್ರತಿಬಂಧಕ ಅಧಿನಿಯಮ-1959ರ ಅನ್ವಯ ಸಂಪೂರ್ಣವಾಗಿ ಪ್ರಾಣಿ ಬಲಿ ನಿಷೇಧಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯ ಹೈಕೋರ್ಟ್ ಕೂಡ ಪ್ರಾಣಿ ಬಲಿ ನಿಷೇಧ ಸಂಬಂಧ ಸ್ಪಷ್ಟ ಆದೇಶ ನೀಡಿದೆ. ಚಿಕ್ಕಲ್ಲೂರಿಗೆ ಭೇಟಿ ನೀಡಿ ಅಲ್ಲಿನ ಮುಖಂಡರೊಂದಿಗೆ ಚರ್ಚಿಸುತ್ತೇವೆ. ಸಾತ್ವಿಕ ಪೂಜೆ ಸಲ್ಲಿಸುವ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಆದರೆ, ಈ ಪ್ರಯತ್ನಗಳು ಫಲಕಾರಿ ಯಾಗದಿದ್ದರೆ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.

ಈಗಾಗಲೇ, ಜಾತ್ರಾ ಮಹೋತ್ಸವ ಆರಂಭಗೊಂಡಿದೆ. ಮುಂಜಾಗ್ರತೆಯಾಗಿ ಜ.12 ರಂದು ನಡೆಯುವ ಪ್ರಾಣಿ ಬಲಿ ತಡೆಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಕರಪತ್ರ, ಬ್ಯಾನರ್ ಅಂಟಿಸುವ ಮೂಲಕ ಜಾಗೃತಿ ಮೂಡಿಸಬೇಕು. ನಿಗದಿತ ಸ್ಥಳಗಳಲ್ಲಿ ಚೆಕ್‌ಪೋಸ್ಟ್ ತೆರೆದು ಪ್ರಾಣಿಗಳು, ಆಯುಧಗಳನ್ನು ತರದಂತೆ ಹಾಗೂ ಮದ್ಯಮಾರಾಟ ಮಾಡದಂತೆ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಸಾಮೂಹಿಕವಾಗಿ ನಡೆಯುವ ರಕ್ತದೋಕುಳಿಯಿಂದ ದೇವಾಲಯದ ವಾತಾವರಣ ಕಲುಷಿತಗೊಳ್ಳುತ್ತದೆ. ದೇಗುಲಗಳು ವಧಾಲಯಗಳಾಗಬಾರದು. ಶಾಂತಿ ಸಾರುವ ನೆಮ್ಮದಿಯ ತಾಣಗಳಾಗಬೇಕು ಎಂದ ಅವರು, ಈಗಾಗಲೇ ಮೈಸೂರು ಜಿಲ್ಲೆಯ ತಲಕಾಡು, ಕಪ್ಪಡಿ ಮುಂತಾದ ಪ್ರದೇಶದಲ್ಲಿ ಪ್ರಾಣಿ ಬಲಿ ತಡೆಯುವಲ್ಲಿ ಸರ್ಕಾರ ಬಹುತೇಕ ಯಶಸ್ವಿಯಾಗಿದೆ.

ಅದೇ ಮಾದರಿಯಲ್ಲಿ ಚಿಕ್ಕಲ್ಲೂರಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT