ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕು ಮಧ್ಯೆ ನುಗ್ಗೆ ಲಾಭದ ಹಿಗ್ಗು

Last Updated 22 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನುಗ್ಗೆ ಗಿಡ ನಾಲ್ಕರಿಂದ ಐದು ವರ್ಷ ಬದುಕಿದರೆ, ಚಿಕ್ಕು  (ಸಪೋಟಾ) ಸರಿಯಾಗಿ ಇಳುವರಿ ನೀಡಿದರೆ ನಲವತ್ತರಿಂದ ಐವತ್ತು ವರ್ಷಗಳ ಕಾಲ ಬದುಕಬಲ್ಲದು. ರಾಜ್ಯದಲ್ಲಿ ಈಗಾಗಲೇ ಏಕ ಬೆಳೆಯಾಗಿ ನುಗ್ಗೆಯನ್ನು ಹಾಗೂ ಚಿಕ್ಕುವನ್ನು ಬೆಳೆಯುವ ಸಾಕಷ್ಟು ರೈತರಿದ್ದಾರೆ. ಆದರೆ ಮಿಶ್ರಬೆಳೆಯಾಗಿ ಚಿಕ್ಕು ಗಿಡಗಳ ಮಧ್ಯೆ ನುಗ್ಗೆ ಬೆಳೆಯುವ ಪ್ರಯತ್ನ ನಡೆದದ್ದು ತೀರಾ ಕಡಿಮೆ. ಅಂತಹ ಒಂದು ಪ್ರಯತ್ನದಲ್ಲಿ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಶೇಖರ ಗೌಡ ಇದೀಗ ಯಶ ಕಂಡಿದ್ದಾರೆ, ಸಾಕಷ್ಟು ಲಾಭ ಗಳಿಸುತ್ತಿದ್ದಾರೆ.

ಚಿಕ್ಕು ಗಿಡಗಳಿಗೆ ಗಿಡದಿಂದ ಗಿಡಕ್ಕೆ 20 ರಿಂದ 25 ಅಡಿ ಅಂತರವಿರಬೇಕಾದುದು ಅಗತ್ಯ. ಮಳೆಗಾಲ ಚಿಕ್ಕು ನಾಟಿಗೆ ಸೂಕ್ತವಾಗಿದ್ದು. ಚಿಕ್ಕು ಗಿಡಗಳ ಮಧ್ಯೆ ಮಳೆಗಾಲದಲ್ಲೇ ನುಗ್ಗೆಯನ್ನು ಎರಡು ಅಡಿ ಸುತ್ತಳತೆಯ ಗುಣಿ ತೆಗೆದು ನೆಡಬಹುದಾಗಿದೆ. ನಾಟಿಗೆ ಬೇಕಾದ ಸಸಿಗಳು ನರ್ಸರಿಗಳಲ್ಲಿ ಲಭ್ಯ. ಎರಡು ಚಿಕ್ಕು ಗಿಡಗಳ ಮಧ್ಯೆ ಎರಡು ನುಗ್ಗೆ ಗಿಡವನ್ನು ನಾಟಿ ಮಾಡಬೇಕು. ನುಗ್ಗೆ ನೆಟ್ಟ ಒಂದೇ ವರ್ಷದಲ್ಲಿ ಎತ್ತರಕ್ಕೆ ಬೆಳೆದು ನಿಲ್ಲುತ್ತದೆ.

ಚಿಕ್ಕು ಗಿಡ ಗೊಂಚಲಾಗಿ ಬೆಳೆಯುವುದರಿಂದ ನುಗ್ಗೆ ಗಿಡದಿಂದ ಯಾವ ತೊಂದರೆ ಇಲ್ಲ. ಚಿಕ್ಕು ಗಿಡಗಳ ನಾಟಿ ಸಂದರ್ಭದಲ್ಲಿ ಹಾಕಿದ ಗೊಬ್ಬರ ನುಗ್ಗೆಗೂ ಸಾಕಾಗುತ್ತದೆ. ಚಿಕ್ಕು ಕೃಷಿಗೆ ಹನಿ ನೀರಾವರಿಯ ಅಗತ್ಯವಿದ್ದು, ನುಗ್ಗೆಗೆ ಪ್ರತ್ಯೇಕವಾಗಿ ನೀರುಣಿಸಬೇಕಾಗಿಲ್ಲ. ನುಗ್ಗೆ ಕಟಾವಿಗೆ ಕೂಡಾ ಸುಲಭ. ಚಿಕ್ಕು ಗಿಡಗಳ ಮಧ್ಯೆ ನುಗ್ಗೆ ಬೆಳೆದರೆ ಚಿಕ್ಕು ಅಧಿಕ ಇಳುವರಿ ನೀಡುತ್ತದೆ. ಗಿಡಗಳಿಗೆ ರೋಗ ಬಾಧಿಸುವುದು ಕಡಿಮೆ ಎಂಬುದು ಬೆಳೆಗಾರ ಶೇಖರಗೌಡರವರ ಮಾತು.

ಚಿಕ್ಕು ವರ್ಷಕ್ಕೆ ಐದರಿಂದ ಆರು ಬಾರಿ ಕಟಾವಿಗೆ ಲಭಿಸುತ್ತಿದ್ದು, ಪ್ರತಿವರ್ಷ ಆರು ಕ್ವಿಂಟಾಲ್ ಇಳುವರಿಯನ್ನು ಪಡೆಯುತ್ತಿದ್ದಾರೆ. ನುಗ್ಗೆ ವರ್ಷಕ್ಕೊಂದು ಬಾರಿ ಕಟಾವಿಗೆ ಬರುತ್ತಿದ್ದು, ಅದರಿಂದ 20 ರಿಂದ 30 ಸಾವಿರ ಆದಾಯ ಪಡೆಯುತ್ತಿದ್ದಾರೆ. ಚಿಕ್ಕುವಿಗೆ ಕ್ವಿಂಟಾಲ್‌ಗೆ 1100 ಮಾರುಕಟ್ಟೆ ಬೆಲೆಯಿದ್ದರೆ, ನುಗ್ಗೆಗೆ ಒಂದು ಕ್ವಿಂಟಾಲ್‌ಗೆ 1800 ರಿಂದ 2000 ದರವಿದೆ.

ಮಾರುಕಟ್ಟೆ ವ್ಯವಸ್ಥೆ
`ನುಗ್ಗೆ ಮತ್ತು ಚಿಕ್ಕುವನ್ನು ಪ್ರತಿವರ್ಷ ವ್ಯಾಪಾರಿಗಳು ಇವರ ತೋಟಕ್ಕೆ ಬಂದು ಒಯ್ಯುತ್ತಾರೆ. ಯಾವುದೇ ಮಾರುಕಟ್ಟೆಯ ಸಮಸ್ಯೆ ಇವರನ್ನು ಕಾಡಿಲ್ಲ. ಪ್ರತಿವರ್ಷ ಚಿಕ್ಕು ಹಣ್ಣಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ನುಗ್ಗೆಗೆ ಸರ್ವ ಋತುಗಳಲ್ಲಿ ಬೇಡಿಕೆಯಿದೆ.

ಪದಾರ್ಥಗಳಲ್ಲಿ ಬಳಸುವ ನುಗ್ಗೆಯ ಎಲೆ, ಹೂವಿಗೆ ಬಹುಬೇಡಿಕೆ ಇದೆ' ಎನ್ನುತ್ತಾರೆ ಶೇಖರ್. ಸಾವಯವ ಚಿಕ್ಕು ಬೆಳೆಗೆ ಸೂಕ್ತವಾಗಿದ್ದು ಇತರ ಬೆಳೆಗಾರರು ಚಿಕ್ಕು ಮಧ್ಯೆ ನುಗ್ಗೆ ನಾಟಿ ಮಾಡುವತ್ತ ಪ್ರಯತ್ನಿಸಬಹುದಾಗಿದೆ. ಸಂಪರ್ಕಕ್ಕೆ- 9008553006.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT