ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ: 5 ಸೇತುವೆಗಳು ಜಲಾವೃತ

Last Updated 28 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಸುರಿದ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳು ಮೈದುಂಬಿಕೊಂಡು ಹರಿಯುತ್ತಿವೆ, ಕೆಳಮಟ್ಟದ ಐದು ಸೇತುವೆಗಳು ಜಲಾವೃತಗೊಂಡು ವಾಹನ ಸಂಚಾರ ಸ್ಥಗಿತಗೊಂಡಿದೆ.

 ರಾಜ್ಯದಲ್ಲಿ ಶನಿವಾರ ಮಳೆಯ ಅಬ್ಬರ ಕಡಿಮೆ ಆಗಿತ್ತು. ತುಂಗಾ ಹಾಗೂ ಭದ್ರಾ ಜಲಾನಯ ಪ್ರದೇಶದಲ್ಲಿ ಮಳೆ ಆಗಿರುವುದರಿಂದ ಈ ಜಲಾಶಯಗಳಿಗೆ ಒಳ ಹರಿವು ಹೆಚ್ಚಿದೆ. ಆದರೆ ಶರಾವತಿ ಜಲಾನಯನ ಪ್ರದೇಶದಲ್ಲಿ ಮಳೆ ಇಳಿಮುಖ ಆಗಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಒಳ ಹರಿವು ಕಡಿಮೆ ಆಗಿದೆ.

ಚಿಕ್ಕೋಡಿ ವರದಿ:
ಮಹಾರಾಷ್ಟ್ರದಿಂದ ರಾಜಾಪೂರ ಬ್ಯಾರೇಜ್ ಮೂಲಕ ಒಟ್ಟು 55,060 ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ತಾಲ್ಲೂಕಿನ ಕಲ್ಲೋಳ- ಯಡೂರ, ಅಕ್ಕೋಳ- ಸಿದ್ನಾಳ, ಜತ್ರಾಟ- ಭೀವಶಿ, ಮಲಿಕವಾಡ- ದತ್ತವಾಡ ಮತ್ತು ಸದಲಗಾ- ಬೋರಗಾಂವ ಗ್ರಾಮಗಳ ಮಧ್ಯೆ ನಿರ್ಮಿಸಲಾಗಿರುವ ಕೆಳಮಟ್ಟದ ಸೇತುವೆಗಳು ನದಿ ನೀರಿನಲ್ಲಿ ಮುಳುಗಡೆಯಾಗಿವೆ. ಇದರಿಂದ ಸಾರಿಗೆ-ಸಂಚಾರ ಸ್ಥಗಿತಗೊಂಡಿದೆ.

ಮಹಾರಾಷ್ಟ್ರದ ಇಚಲಕರಂಜಿ, ಹುಪರಿ, ಮುಂತಾದ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆಗಳು ಜಲಾವೃತವಾಗಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ಸುತ್ತುಬಳಿಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಕಳೆದ ನಾಲ್ಕಾರು ದಿನಗಳಿಂದ ಬಿಡದೇ ಸುರಿಯುತ್ತಿದ್ದ ಮಳೆರಾಯನ ಆರ್ಭಟ ಶನಿವಾರ ಕೊಂಚ ತಗ್ಗಿದೆ.  ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತು ಅಧಿಕಾರಿಗಳ ಪೂರ್ವಭಾವಿ ಸಭೆ ಸೋಮವಾರ ನಡೆಯಲಿದೆ ಎಂದು ಪ್ರಭಾರ ಉಪ ವಿಭಾಗಾಧಿಕಾರಿ ರಾಜಶೇಖರ ಡಂಬಳ ~ಪ್ರಜಾವಾಣಿ~ಗೆ ತಿಳಿಸಿದರು.

ಮಂಗಳೂರು ವರದಿ: ಸುಬ್ರಹ್ಮಣ್ಯ- ಸಕಲೇಶಪುರದ ನಡುವೆ ಗುಡ್ಡ ಕುಸಿದು ರೈಲ್ವೆ ಹಳಿಗೆ ಬಿದ್ದಿರುವ ಮಣ್ಣು ತೆರವುಗೊಳಿಸುವ ಕಾರ್ಯ ಇನ್ನೂ ಪೂರ್ಣಗೊಳ್ಳದ ಕಾರಣ ಮಂಗಳೂರು-ಯಶವಂತಪುರ ರೈಲು ಯಾನವನ್ನು ಎರಡನೇ ದಿನವೂ ರದ್ದು ಪಡಿಸಲಾಗಿದೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಕಡಿಮೆಯಾದ ಕಾರಣ ಗುಂಡ್ಯ ಹೊಳೆ, ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಪ್ರವಾಹ ತಗ್ಗಿದೆ.

ಶನಿವಾರ ಬೆಳಿಗ್ಗೆವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ 55.40 ಮಿ.ಮೀ, ಪುತ್ತೂರಿನಲ್ಲಿ 26.10 ಮಿ.ಮೀ, ಮೂಡುಬಿದಿರೆಯಲ್ಲಿ 15.80 ಮಿ.ಮೀ, ಕಡಬದಲ್ಲಿ 15.20 ಮಿ.ಮೀ, ಸುಳ್ಯದಲ್ಲಿ 13.60 ಮಿ.ಮೀ, ಬಂಟ್ವಾಳದಲ್ಲಿ 10.60 ಮಿ.ಮೀ, ಮಂಗಳೂರಿನಲ್ಲಿ 4.40 ಮಿ.ಮೀ ಮಳೆಯಾಗಿದೆ.

ಶಿವಮೊಗ್ಗ ವರದಿ: ಜಿಲ್ಲೆಯಲ್ಲಿ ಶನಿವಾರ ಮಳೆಯ ಪ್ರಮಾಣ ತಗ್ಗಿದ್ದರೂ, ತುಂಗಾ ಹಾಗೂ ಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.

ಕಳೆದ 24 ಗಂಟೆಗಳಲ್ಲಿ ಆಗುಂಬೆ ಸುತ್ತಮುತ್ತ 120 ಮಿ.ಮೀ. ಮಳೆಯಾಗಿದೆ. ಇದರಿಂದ ಗಾಜನೂರು ಜಲಾಶಯದ ಒಳಹರಿವು 54,720 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಈಗಾಗಲೇ ಜಲಾಶಯದ ನೀರಿನಮಟ್ಟ ಗರಿಷ್ಠ ಮಟ್ಟ 588.24 ಅಡಿಗೆ ತಲುಪಿರುವುದರಿಂದ, ಹೊರಹರಿವನ್ನು 55 ಸಾವಿರ ಕ್ಯೂಸೆಕ್‌ಗೆ ಏರಿಸಲಾಗಿದೆ.
ಭದ್ರಾ ಜಲಾಶಯದ ಒಳಹರಿವು 25,097 ಕ್ಯೂಸೆಕ್‌ಗೆ ಏರಿಕೆಯಾಗಿದೆ.
 
ಜಲಾಶಯದ ನೀರಿನಮಟ್ಟ 146.3 ಅಡಿ ತಲುಪಿದೆ. ಆದರೆ, ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದು, ಒಳಹರಿವು 27,205 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಹೊರಹರಿವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಜಲಾಶಯದ ನೀರಿನಮಟ್ಟ 1,766.25 ಅಡಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT