ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಗುರೊಡೆದ ಜಯದ ಆಸೆ

ರಣಜಿ: ಮೇಲುಗೈ ಸಾಧಿಸಿದ ಕರ್ನಾಟಕ, ಮಿಂಚಿದ ಬಿನ್ನಿ, ಅಪ್ಪಣ್ಣ
Last Updated 14 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪಿಚ್‌ನ ಒಲುಮೆ ಗಳಿಸಲು ಬೌಲರ್‌ ಮತ್ತು ಬ್ಯಾಟ್ಸ್‌ಮನ್‌ ಇಬ್ಬರೂ ಶ್ರಮಿಸಿದರು. ಮೊದಲು ಇಬ್ಬರ ಕಡೆಗೂ ಕಡೆಗಣ್ಣು ಬೀರಿದ ಪಿಚ್‌ ನಂತರ ಬೌಲರ್‌ಗಳನ್ನೇ ಬೆಂಬಲಿಸಲು ಮುಂದಾಯಿತು. ಇದರ ಸಂಪೂರ್ಣ ಲಾಭ ಪಡೆದ ಆತಿಥೇಯರು ಮೇಲುಗೈ ಸಾಧಿಸಿದರು. ಇದರೊಂದಿಗೆ ವಿನಯ್‌ ಬಳಗದ ಜಯದ ಆಸೆಯ ಹಕ್ಕಿಗೆ ಮೊದಲ ದಿನವೇ ಗರಿಗಳು ಮೂಡಿವೆ.

ರಾಜನಗರದ ಕೆಎಸ್‌ಸಿಎ ಮೈದಾನ ದಲ್ಲಿ ಶನಿವಾರ ಪಂಜಾಬ್‌ ವಿರುದ್ಧ ಆರಂಭಗೊಂಡ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಎದು ರಾಳಿಗಳನ್ನು ಕೇವಲ 174 ರನ್‌ಗಳಿಗೆ ಕಟ್ಟಿ ಹಾಕಿತು. ದಿನದಾಟದ ಅಂತ್ಯಕ್ಕೆ ಆತಿಥೇಯರು 27 ಓವರ್‌ ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 59 ರನ್‌ ಗಳಿಸಿದ್ದಾರೆ.

ಒಂಭತ್ತು ದಿನಗಳಿಂದ ನಿತ್ಯ ಬೆಳಿಗ್ಗೆ ಬೀಸುತ್ತಿದ್ದ ಮೂಡುಗಾಳಿ ಶನಿವಾರ ಮಾಯವಾಗಿತ್ತು. ಟಾಸ್‌ ಗೆದ್ದ ವಿನಯ್‌ ಕುಮಾರ್‌ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡರು.

ಆದರೆ ತಂಡಕ್ಕೆ ಮೊದಲ ವಿಕೆಟ್‌ ಲಭಿಸಿದ್ದು ರನೌಟ್‌ ರೂಪದಲ್ಲಿ. ಈ ರಣಜಿ ಋತುವಿನಲ್ಲಿ ಪಂಜಾಬ್‌ ಪರ ಅತ್ಯಧಿಕ ವೈಯಕ್ತಿಕ ಮೊತ್ತ (5 ಪಂದ್ಯ, 432 ರನ್‌) ಕಲೆ ಹಾಕಿರುವ ಜೀವನ್‌ ಜ್ಯೋತ್ ಸಿಂಗ್‌ ಥರ್ಡ್‌ಮ್ಯಾನ್‌ ಕ್ಷೇತ್ರದಲ್ಲಿದ್ದ ಕೆ.ಎಲ್.ರಾಹುಲ್‌ ಅವರ ಚುರುಕಿನ ಫೀಲ್ಡಿಂಗ್‌ಗೆ ಬಲಿಯಾದರು.

ಬೇಗನೆ ವಿಕೆಟ್‌ ಕಳೆದುಕೊಂಡರೂ ಪಂಜಾಬ್‌ ಧೃತಿಗೆಡಲಿಲ್ಲ. ಮನನ್‌ ವೊಹ್ರಾ ಮತ್ತು ವಿಕೆಟ್‌ ಕೀಪರ್‌ ಉದಯ್‌ ಕೌಲ್‌ ಎರಡನೇ ವಿಕೆಟ್‌ ಜೊತೆಯಾಟದಲ್ಲಿ 93 ರನ್‌ ಕಲೆ ಹಾಕಿ ಆಸರೆಯಾದರು. 

ವೇಗಿ ಬಿನ್ನಿ ಎಸೆದ 13ನೇ ಓವರ್‌ನ ಕೊನೆಯ ಎಸೆತವನ್ನು ಕವರ್‌ ಕ್ಷೇತ್ರಕ್ಕೆ ಲಾಫ್ಟ್‌ ಮಾಡಿ ವೊಹ್ರಾ ಪಂದ್ಯದ ಮೊದಲ ಬೌಂಡರಿ ಗಳಿಸಿದರು. ಮುಂದಿನ ಓವರ್‌ನ ಮೂರನೇ ಎಸೆತದಲ್ಲಿ ಕೌಲ್‌ ಕೂಡ ಬೌಂಡರಿಯ ಖಾತೆ ತೆರೆದರು.

ಡ್ರೈವ್‌, ಕಟ್‌ ಮತ್ತು ಪಂಚ್‌ಗಳ ಮೂಲಕ ವೊಹ್ರಾ  ಬೌಂಡರಿ ಬಾರಿಸಿ ನಿಧಾನವಾಗಿ ತಂಡದ ಮೊತ್ತ ಹೆಚ್ಚಿ ಸುತ್ತಾ ಹೋದರು. 76 ಎಸೆತಗಳಲ್ಲಿ ಏಳು ಬೌಂಡರಿಗಳೊಂದಿಗೆ ಅರ್ಧಶತಕ ಪೂರೈಸಿದರು. ಇನ್ನೊಂದು ತುದಿಯ ಲ್ಲಿದ್ದ ಕೌಲ್‌ ಥರ್ಡ್‌ಮ್ಯಾನ್‌ ಬಳಿ ಹೆಚ್ಚು ರನ್‌ ಕಲೆ ಹಾಕಿದರು.

28ನೇ ಓವರ್‌ನಲ್ಲಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದ ಈ ಜೋಡಿ ಕರ್ನಾಟಕದ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿತು.

ಆದರೆ ಭೋಜನ ವಿರಾಮಕ್ಕೆ ಐದು ಓವರ್ ಮೊದಲು ಚಮತ್ಕಾರ ತೋರಿ ಸಲು ಆರಂಭಿಸಿದ ಆತಿಥೇಯ ಬೌಲರ್‌ ಗಳು ಚಹಾ ವಿರಾಮಕ್ಕೆ ಮುನ್ನವೇ ಪಂಜಾಬ್‌ ಪಡೆಯನ್ನು ಕಟ್ಟಿಹಾಕಿತು. 28ನೇ ಓವರ್‌ನ ಕೊನೆಯ ಎಸೆತದಲ್ಲಿ ವೊಹ್ರಾ (69, 94 ಎಸೆತ, 10 ಬೌಂಡರಿ) ಬಿನ್ನಿಗೆ ಬಲಿಯಾದರು. ಆಗ ಪಂಜಾಬ್‌ನ ಪರೇಡ್‌ ಶುರುವಾಯಿತು.

ವೊಹ್ರಾ ನೀಡಿದ ಕ್ಯಾಚ್‌ ಅನ್ನು ಸ್ಲಿಪ್‌ ನಲ್ಲಿ ಸುಂದರವಾಗಿ ಪಡೆದ ರಾಹುಲ್‌ ಕೈಗೆ ಉದಯ್‌ ಕೌಲ್‌ ಕ್ಯಾಚ್ ಕೂಡ ಬಂದಿತ್ತು. ಆದರೆ ಅವರ ಮುಷ್ಠಿಯಿಂದ ಚಿಮ್ಮಿದ ಚೆಂಡನ್ನು ಮಯಂಕ್‌ ಅಗರ ವಾಲ್‌ ಭದ್ರವಾಗಿ ಹಿಡಿದುಕೊಂಡು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು.

28.2 ಓವರ್‌ಗಳಲ್ಲಿ 3 ವಿಕೆಟ್‌ ಕಳೆ ದುಕೊಂಡಿದ್ದ ಪಂಜಾಬ್‌ ನಂತರದ 26.3 ಓವರ್‌ಗಳಲ್ಲಿ ದಿಢೀರ್‌ ಕುಸಿತ ಕಂಡು ಉಳಿದ 7 ವಿಕೆಟ್‌ ಕಳೆದು ಕೊಂಡಿತು. ಮಿಥುನ್‌ ಎಸೆದ 36ನೇ ಓವರ್‌ನಲ್ಲಿ ಕೊಹ್ಲಿ ಬ್ಯಾಟಿನ ಅಂಚಿಗೆ ತಾಗಿ ಗಲ್ಲಿ ಕ್ಷೇತ್ರಕ್ಕೆ ಚಿಮ್ಮಿದ ಚೆಂಡನ್ನು ಅಗರವಾಲ್‌ ಹಿಡಿತಕ್ಕೆ ಪಡೆದುಕೊಂಡರೆ ಶರತ್‌ ಎಸೆದ 43ನೇ ಓವರ್‌ನಲ್ಲಿ ಗುರ್‌ಕೀರತ್‌ ಸಿಂಗ್ ನೀಡಿದ ಕ್ಯಾಚ್‌ ಕರುಣ್‌ ನಾಯರ್‌ ಹಿಡಿತಕ್ಕೆ ತೆಗೆದುಕೊಂಡರು. ಕೆಳ ಹಂತ ದಲ್ಲಿ ನುಗ್ಗಿ ಬಂದ ಬಿನ್ನಿ ಎಸೆತ ಖೇರಾ ಬ್ಯಾಟಿನ ಅಂಚಿಗೆ ತಾಗಿ ಗಲ್ಲಿ ಕಡೆಗೆ ಚಿಮ್ಮಿತು. ಇದನ್ನು ರಾಹುಲ್‌ ಮುಂದಕ್ಕೆ ಜಿಗಿದು ಹಿಡಿದುಕೊಂಡ ಪರಿ ಆಕರ್ಷಕವಾಗಿತ್ತು.

ನಂತರ ಮಿಂಚಿದ್ದು ಕೆ.ಪಿ.ಅಪ್ಪಣ್ಣ. ಈ ಎಡಗೈ ಸ್ಪಿನ್ನರ್‌ ಎಸೆದ 53ನೇ ಓವರ್‌ನ ಕಡೆಯ ಎಸೆತಕ್ಕೆ ಮನ್‌ಪ್ರೀತ್‌ ಗೋನಿ ಬಲಿಯಾದರು. ಗಾಳಿಯಲ್ಲಿ ತೇಲಿ ಬಂದ ಚೆಂಡನ್ನು ಮಿಡ್‌ಆಫ್‌ ಮೇಲಿಂದ ಮೈದಾನದ ಹೊರಗೆ ಅಟ್ಟಲು ಶ್ರಮಿಸಿದ ಗೋನಿ ಬೌಂಡರಿ ಗೆರೆಯ ಬಳಿ ಕಾಯುತ್ತಿದ್ದ ರಾಹುಲ್ ಮುಷ್ಠಿಯೊಳಗೆ ಬಂದಿಯಾದರು.

55ನೇ ಓವರ್‌ನ ಐದನೇ ಎಸೆತಕ್ಕೆ ಸಿದ್ಧವಾದ ಅಪ್ಪಣ್ಣ ಏಕಾಏಕಿ ‘ಆ್ಯಂಗಲ್‌’ ಬದಲಿಸಿ ವಿಕೆಟ್‌ ಬಳಸಿಕೊಂಡು ಬೌಲಿಂಗ್‌ ಮಾಡಲು ನಿರ್ಧರಿಸಿದರು. ತಿರುವು ಪಡೆದ ಚೆಂಡು ಎಡಗೈ ಬ್ಯಾಟ್ಸ್‌ಮನ್‌ ವಿನಯ್‌ ಚೌಧರಿ ಬ್ಯಾಟಿಗೆ ಮುತ್ತಿಕ್ಕಿ ಕರುಣ್‌ ನಾಯರ್‌ ಕೈ ಸೇರಿತು. ಎಲ್ಲ ಆಟಗಾರರೂ ಅಪ್ಪಣ್ಣನನ್ನು ಎತ್ತಿ ಸಂಭ್ರಮಿಸಿದರು.  ಎದುರಾಳಿಗಳನ್ನು ಆಲ್‌ ಔಟ್‌ ಮಾಡಿದ ಖುಷಿಯೊಂದಿಗೆ ರಣಜಿ ಕ್ರಿಕೆಟ್‌ನಲ್ಲಿ ನೂರು ವಿಕೆಟ್ ಕಬಳಿಸಿದ ಸಂತಸವೂ ಅಪ್ಪಣ್ಣ ಮುಖದಲ್ಲಿ ನಲಿದಾಡಿತು.

ನಿಧಾನ ಆರಂಭ: ಅಲ್ಪ ಮೊತ್ತಕ್ಕೆ ಎದು ರಾಳಿಗಳನ್ನು ಔಟ್‌ ಮಾಡಿದರೂ ಆ ತಂಡದಲ್ಲಿರುವ ಬೌಲರ್‌ಗಳ ಶಕ್ತಿ ಯನ್ನು ಚೆನ್ನಾಗಿ ಬಲ್ಲ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ನಿಧಾನಗತಿಯಲ್ಲೇ ಇನಿಂಗ್ಸ್‌ ಆರಂಭಿಸಿದರು.

ಐದನೇ ಓವರ್‌ನಲ್ಲಿ ರನ್‌ಔಟ್‌ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಮಯಂಕ್‌ ಅಗರ್‌ವಾಲ್‌ ಏಳನೇ ಓವರ್‌ನಲ್ಲಿ ಸಂದೀಪ್‌ ಶರ್ಮ ಎಸೆತವನ್ನು ಹುಕ್ ಮಾಡಿ ಫೈನ್‌ಲೆಗ್‌ ನಲ್ಲಿ ಬೌಂಡರಿ ಗಳಿಸಿದರು. ಬ್ಯಾಟ್ಸ್‌ ಮನ್‌ಗಳು ಆಕ್ರಮಣಕಾ ರಿಯಾಗುತ್ತಿ ದ್ದಂತೆ ಬತ್ತಳಿಕೆಯ ಬ್ರಹ್ಮಾಸ್ತ್ರವನ್ನು ಹೊರತೆಗೆದ ಪಂಜಾಬ್‌ ನಾಯಕ ಸಂದೀಪ್‌ ಸಿಂಗ್‌ ಯಶಸ್ಸು ಕಂಡರು. ಶರ್ಮ ಬದಲಿಗೆ ದಾಳಿಗೆ ಇಳಿದ ಗೋನಿ ಮೋಹಕ ಹೊಡೆತಗಳ ಆಟಗಾರ ಅಗರವಾಲ್‌ ಮತ್ತು ಗಣೇಶ ಸತೀಶ್‌ ವಿಕೆಟ್‌ ಪಡೆದು ಆರಂಭಿಕ ಮೇಲುಗೈ ಸಾಧಿಸಿದರು.

ಆದರೆ ತಲಾ ಎರಡು ಬೌಂಡರಿಗಳನ್ನು ಬಾರಿಸಿದ ರಾಹುಲ್ ಮತ್ತು ಮನೀಶ್‌ ಪಾಂಡೆ ಎಚ್ಚರಿಕೆಯ ಆಟವಾಡಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಕರುಣ್‌ ನಾಯರ್‌ (ಕರ್ನಾಟಕ)  ಈ ಪಂದ್ಯದ ಮೂಲಕ ರಣಜಿಗೆ ಪದಾರ್ಪಣೆ ಮಾಡಿದರು.

ಸ್ಕೋರ್ ವಿವರ:
ಪಂಜಾಬ್‌ ಮೊದಲ ಇನಿಂಗ್ಸ್‌ 54.5 ಓವರ್‌ಗಳಲ್ಲಿ 174

ಮನನ್‌ ವೊಹ್ರಾ ಸಿ. ಕೆ.ಎಲ್‌.ರಾಹುಲ್‌ ಬಿ.  ಬಿನ್ನಿ  69
ಜೀವನ್‌ಜ್ಯೋತ್‌ ಸಿಂಗ್‌ ರನೌಟ್‌ (ಕೆ.ಎಲ್‌.ರಾಹುಲ್‌)  05
ಕೌಲ್‌ ಸಿ. ಮಯಂಕ್‌  ಬಿ. ವಿನಯ್‌್ ಕುಮಾರ್‌  29
ಮನ್‌ದೀಪ್‌ ಸಿಂಗ್‌ ನಾಟೌಟ್‌  32
ತರುವಾರ್‌ ಕೊಹ್ಲಿ ಸಿ. ಮಯಂಕ್‌ ಬಿ. ಅಭಿಮನ್ಯು ಮಿಥುನ್‌  06
ಗುರ್‌ಕೀರತ್ ಸಿಂಗ್‌ ಮಾನ್‌ ಸಿ. ಕರುಣ್‌ ಬಿ. ಎಚ್‌.ಎಸ್‌.ಶರತ್‌  05
ಜಿ.ಎಚ್‌. ಖೇರ ಸಿ. ಕೆ.ಎಲ್‌.ರಾಹುಲ್‌ ಬಿ.  ಬಿನ್ನಿ  03
ಸಂದೀಪ್‌ ಶರ್ಮ ಬಿ. ಸ್ಟುವರ್ಟ್‌ ಬಿನ್ನಿ  06
ಮನ್‌ಪ್ರೀತ್‌ ಗೋನಿ ಸಿ. ಕೆ.ಎಲ್.ರಾಹುಲ್‌ ಬಿ. ಕೆ.ಪಿ. ಅಪ್ಪಣ್ಣ  05
ವಿಕ್ರಮ್‌ ಸಿಂಗ್‌ ಸ್ಟಂಪ್ಡ್‌ ಸಿ.ಎಂ.ಗೌತಮ್‌ ಬಿ. ಅಪ್ಪಣ್ಣ  07
ವಿನಯ್‌ ಚೌಧರಿ ಸಿ.ಕರುಣ್‌ ನಾಯರ್‌ ಬಿ. ಕೆ.ಪಿ.ಅಪ್ಪಣ್ಣ  00

ಇತರೆ: (ಲೆಗ್‌ ಬೈ –3, ನೋ ಬಾಲ್‌ –2, ವೈಡ್‌–2) 07
ವಿಕೆಟ್‌ ಪತನ: 1–13 (ಜೀವನ್‌ ಜ್ಯೋತ್‌; 5.2), 2–106 (ವೊಹ್ರಾ; 27.6), 3–106 (ಉದಯ್‌; 28.2), 4–119 (ಕೊಹ್ಲಿ; 35.1), 5–141 (ಗುರ್‌ ಕೀರತ್‌; 42.4), 6–151(ಖೇರಾ; 49.6), 7–157 (ಸಂದೀಪ್‌; 51.5), 8–166 (ಮನ್‌ಪ್ರೀತ್‌ ಗೋನಿ; 52.6), 9–174 (ವಿ.ಆರ್.ವಿ. ಸಿಂಗ್‌; 54.2), 10–174 (ಚೌಧರಿ; 54.5).
ಬೌಲಿಂಗ್‌: ಆರ್‌.ವಿನಯ್‌ ಕುಮಾರ್‌ 11–4–20–1, ಅಭಿಮನ್ಯು ಮಿಥುನ್‌ 10–1–30–1 (ನೋಬಾಲ್‌–1 ), ಸ್ಟುವರ್ಟ್‌ ಬಿನ್ನಿ 14–3–62–3 (ನೋಬಾಲ್‌–1 ), ಎಚ್‌.ಎಸ್‌.ಶರತ್‌ 11–3–30–1 (ವೈಡ್‌–2 ), ಕೆ.ಪಿ.ಅಪ್ಪಣ್ಣ 8.5–1–29–3.

ಕರ್ನಾಟಕ ಮೊದಲ ಇನಿಂಗ್ಸ್‌ 27 ಓವರ್‌ಗಳಲ್ಲಿ 2 ವಿಕೆಟ್‌ಗೆ 59
ಮಯಂಕ್‌ ಅಗರವಾಲ್‌ ಸಿ. ಖೇರಾ ಬಿ. ಗೋನಿ  17
ಕೆ.ಎಲ್‌.ರಾಹುಲ್‌ ಬ್ಯಾಟಿಂಗ್‌  22
ಗಣೇಶ್‌್ ಸತೀಶ್‌  ಬಿ ಎಲ್‌ಬಿಡಬ್ಲ್ಯು ಮನ್‌ಪ್ರೀತ್‌ ಗೋನಿ  05
ಮನೀಶ್‌ ಪಾಂಡೆ ಬ್ಯಾಟಿಂಗ್‌  13

ಇತರೆ:  (ನೋಬಾಲ್‌ –2)  02
ವಿಕೆಟ್‌ ಪತನ: 1–34 (ಮಯಂಕ್‌; 18.4), 2–40 (ಗಣೇಶ; 20.4).
ಬೌಲಿಂಗ್‌: ಸಂದೀಪ್‌ ಶರ್ಮಾ 10–2–21–0 (ನೋಬಾಲ್‌–1), ವಿಕ್ರಮ್‌ ಸಿಂಗ್‌ 6–0–12–0, ತರುವಾರ್‌ ಕೊಹ್ಲಿ 4–2–6–0, ಮನ್‌ಪ್ರೀತ್‌ ಗೋನಿ 7–2–20–2 (ನೋಬಾಲ್‌–1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT