ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟ್ಟಾಣಿ ಚಿಟ್ಟಾಣಿ ಚಿಟ್ಟಾಣಿ

Last Updated 3 ಮೇ 2012, 19:30 IST
ಅಕ್ಷರ ಗಾತ್ರ

ಬಡಗು ತಿಟ್ಟಿನ ಯಕ್ಷಗಾನಕ್ಕೆ ವಾಣಿಜ್ಯಕ ಮೌಲ್ಯವನ್ನು ತಂದಿತ್ತ ಕಲಾವಿದರಲ್ಲಿ ಅಗ್ರಗಣ್ಯರೆನಿಸಿರುವ ಚಿಟ್ಟಾಣಿ ರಾಮಚಂದ್ರ ಹೆಗಡೆಯವರನ್ನು ಪ್ರೀತಿಯಿಂದ ಆದರಿಸಿ, ವಿನಯದಿಂದ ಗೌರವಿಸಿ, ಸಡಗರದಿಂದ ಸನ್ಮಾನಿಸುವ ಕಾರ್ಯಕ್ರಮವೊಂದು ಇಂದು ಶುಕ್ರವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಆಶ್ರಯದಲ್ಲಿ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ನಡೆಯಲು ಅವರಿಗೆ ಪದ್ಮಶ್ರಿ ಪುರಸ್ಕಾರ ಸಂದುದು ಒಂದು ನೆಪ. 

ನೆರೆಯ ಕೇರಳದ ಕಥಕ್ಕಳಿಯಂತೆಯೇ ಯಕ್ಷಗಾನವೂ ಜನಪ್ರಿಯ ಪ್ರದರ್ಶಕ ಕಲೆ. ಆದರೆ ಕಥಕ್ಕಳಿಗೆ ಸಂದಷ್ಟು ರಾಷ್ಟ್ರೀಯ ಗೌರವ, ಅಂತರರಾಷ್ಟ್ರೀಯ ಮನ್ನಣೆ ಯಕ್ಷಗಾನಕ್ಕೆ ಸಂದಿಲ್ಲ. ಕಾರಣ ಏನೇ ಇದ್ದರೂ ಈ ಕಲೆ ಅವಜ್ಞೆಗೆ ಈಡಾಗಿದೆ ಎಂಬ ಮಾತು ಸುಳ್ಳಲ್ಲ. ಕೇಂದ್ರ ಸರ್ಕಾರ ಕೊಡುವ ಪದ್ಮ ಪ್ರಶಸ್ತಿಗೆ ಆರೇಳು ನೂರು ವರ್ಷಗಳ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಯಕ್ಷಗಾನವನ್ನೂ ಪರಿಗಣಿಸಬೇಕೆಂಬ ದಶಕಗಳ ಬೇಡಿಕೆ ಈಡೇರಿದ್ದು ಚಿಟ್ಟಾಣಿಯವರ ಮೂಲಕ. ಯಕ್ಷಗಾನಕ್ಕೆ, ಕರ್ನಾಟಕದ್ದೇ ಆಗಿರುವ ಈ ವಿಶಿಷ್ಟ ಕಲೆಗೆ ಈ ಗೌರವವನ್ನು ದೊರಕಿಸಿಕೊಟ್ಟಿರುವ ಚಿಟ್ಟಾಣಿಯವರಿಂದಾಗಿ ಪದ್ಮಶ್ರಿ ಪ್ರಶಸ್ತಿಗೂ ಗೌರವ ಸಂದಂತಾಗಿದೆ ಎನ್ನುವುದು ಉತ್ಪ್ರೇಕ್ಷೆಯ ಮಾತಲ್ಲ.

ಚಿಟ್ಟಣಿಯವರು ಈಗ 80ರ ಆಜೂಬಾಜಿನಲ್ಲಿರುವ ಅಜ್ಜ. ಗದಾಯುದ್ಧದ ಕೌರವ, ಸುಧನ್ವ, ಅರ್ಜುನ, ದುಷ್ಟಬುದ್ಧಿ, ಕೀಚಕ, ಜರಾಸಂಧ, ಮಾಗಧ, ಕಂಸ, ಉಗ್ರಸೇನ, ಭಸ್ಮಾಸುರ, ಕಲಾಧರ ಮುಂತಾದ ನೂರಾರು ಪಾತ್ರಗಳಿಗೆ ಜೀವ ತುಂಬಿದ ಖ್ಯಾತಿ ಅವರದು. ಸಾಮಾಜಿಕ ಪ್ರಸಂಗಗಳಿಗಿಂತ ಪೌರಾಣಿಕ ಪಾತ್ರಗಳನ್ನೇ ಹೆಚ್ಚು ರಂಜಿಸುವ ಚಿಟ್ಟಾಣಿಯವರಿಗೆ ಈವರೆಗೆ ಸಂದ ಪುರಸ್ಕಾರ ರಾಜ್ಯೋತ್ಸವ, ಯಕ್ಷಗಾನ ಅಕಾಡೆಮಿ, ಜಾನಪದ ಶ್ರಿ ಹೀಗೆ ಹಲವಾರು. ಅವರ ಕಲಾ ಜೀವನ ಕುರಿತಂತೆ ಇಬ್ಬರು ಪ್ರಬಂಧ ರಚಿಸಿ ಡಾಕ್ಟರೆಟ್ ಪಡೆದಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನೂ ಪೂರೈಸದ ಈ ಕಲಾವಿದ ಈಗ ಯಕ್ಷಗಾನ ಕುರಿತಂತೆ ತಾವೇ ಒಂದು ವಿಶ್ವವಿದ್ಯಾಲಯವಾಗಿದ್ದಾರೆ. ಈಗ ಅವರ ಕಿರೀಟಕ್ಕೆ ಪದ್ಮಶ್ರಿ ಪುರಸ್ಕಾರದ ಗರಿ.

ಕಾರ್ಯಕ್ರಮದ ವಿವರ: ಶುಕ್ರವಾರ ಮಧ್ಯಾಹ್ನ 3ಕ್ಕೆ ತೆಂಕು ಹಾಗೂ ಬಡಗು ತಿಟ್ಟಿನ ಕಲಾವಿದರು ಪ್ರಸ್ತುತಪಡಿಸುವ `ಸುಧನ್ವಾರ್ಜುನ~ ಪ್ರಸಂಗದೊಂದಿಗೆ ಸಂಭ್ರಮ ಆರಂಭ. ಬಳಿಕ 5.30ಕ್ಕೆ ಚಿಟ್ಟಾಣಿ ಅವರಿಗೆ ಗೌರವ ಸಮರ್ಪಣೆ. ಜ್ಞಾನಪೀಠ ಪುರಸ್ಕೃತ ಬರಹಗಾರ ಡಾ.ಚಂದ್ರಶೇಖರ ಕಂಬಾರರಿಂದ ಶುಭಾಶಂಸನೆ. ಅಧ್ಯಕ್ಷತೆ: ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಗೋವಿಂದ ಎಂ. ಕಾರಜೋಳ. ಅತಿಥಿಗಳು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜು ಮತ್ತು ಅದೇ ಇಲಾಖೆಯ ಆಯುಕ್ತ ಮನು ಬಳಿಗಾರ.

ಅಭಿನಂದನಾ ನುಡಿ: ಜಿ.ಎಸ್. ಭಟ್ ಹಾಗೂ ಮಂಟಪ ಪ್ರಭಾಕರ ಉಪಾಧ್ಯ.

ಕೊನೆಯದಾಗಿ 6.30ರಿಂದ ಚಿಟ್ಟಾಣಿಯವರು ವೇಷ ಹಾಕಲಿರುವ `ಕಂಸವಧೆ~ ಬಡಗು ತಿಟ್ಟಿನ ಯಕ್ಷಗಾನ ಪ್ರಸಂಗ. ಚಿಟ್ಟಾಣಿಯವರ ಮಗ ಮತ್ತು ಮೊಮ್ಮಗ ಕೂಡ ಅಭಿನಯಿಸಲಿದ್ದಾರೆ. ಕೊಂಡದಕುಳಿ ರಾಮಚಂದ್ರ ಹೆಗಡೆ, ಮಧೂರು ರಾಧಾಕೃಷ್ಣ ನಾವಡ, ಮಂಟಪ ಪ್ರಭಾಕರ ಉಪಾಧ್ಯ, ಶ್ರಿಧರ ಭಟ್ ಕಾಸರಕೋಡು,ಲಕ್ಷ್ಮಣ ಕುಮಾರ್ ಮರಕಡ, ಮೋಹನ ಹೆಗಡೆ ಮುಂತಾದವರು ಪಾತ್ರ ನಿರ್ವಹಿಸಲಿದ್ದಾರೆ. ಹಿಮ್ಮೇಳದಲ್ಲಿ: ದಿನೇಶ ಅಮ್ಮಣ್ಣಾಯ, ಕೊಳಗಿ ಕೇಶವ ಹೆಗಡೆ,ಎ.ಪಿ. ಪಾಠಕ್, ದೇಲಂತ ಮಜಲು ಸುಬ್ರಹ್ಮಣ್ಯ ಭಟ್, ವಿಘ್ನೇಶ್ವರ ಕೆಸರುಕೊಪ್ಪ, ಕಡಬ ವಿನಯ ಆಚಾರ್ ಮೊದಲಾದವರು. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಯಕ್ಷಗಾನ ಪ್ರಿಯರೆಲ್ಲರೂ ಪಾಲ್ಗೊಳ್ಳಬೇಕೆಂದು ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ, ಯಕ್ಷಗಾನ ಕಲಾವಿದ ಪ್ರೊ.ಎಂ.ಎಲ್. ಸಾಮಗ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT