ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟ್‌ಫಂಡ್ ಅವ್ಯವಹಾರ ತನಿಖೆಗೆ ಆದೇಶ

Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೋಲ್ಕತ್ತ ಮೂಲದ ಶಾರದಾ ಸಮೂಹ ಸಂಸ್ಥೆ ನಡೆಸುತ್ತಿರುವ ಚಿಟ್‌ಫಂಡ್ ಮತ್ತಿತರ ಹಣಕಾಸು ವ್ಯವಹಾರದಲ್ಲಿ ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕರ ಹಣ ದುರ್ಬಳಕೆಯಾಗಿರುವ ಕುರಿತು ಬಂದಿರುವ ದೂರಿನ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸಲು ಕೇಂದ್ರ ಸರ್ಕಾರ ಆದೇಶಿಸಿದೆ.

ಇಂತಹ ಚಿಟ್‌ಫಂಡ್ ಸಂಸ್ಥೆಗಳ ವಿರುದ್ಧ `ಗಂಭೀರ ಅವ್ಯವಹಾರ ತನಿಖಾ ಕಚೇರಿ' (ಎಸ್‌ಎಫ್‌ಐಒ) ಆರಂಭಿಸಿ ವಿಶೇಷ ಕಾರ್ಯಪಡೆ ರಚಿಸಲಾಗುವುದು ಎಂದು ಕಂಪೆನಿ ವ್ಯವಹಾರಗಳ ಸಚಿವಾಲಯ ಗುರುವಾರ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇಂತಹ ಸಂಸ್ಥೆಗಳಲ್ಲಿ ಹಣ ಹೂಡಿದ ಸಾರ್ವಜನಿಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಇಂತಹ ಕಂಪೆನಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರವರ್ತಕರು ಅವುಗಳನ್ನು ದಿವಾಳಿಯಂಚಿಗೆ ತಂದು ನಿಲ್ಲಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಪಶ್ಚಿಮ ಬಂಗಾಳದಲ್ಲಿ ಚಿಟ್‌ಫಂಡ್ ಮತ್ತಿತರ ಹಣಕಾಸು ವ್ಯವಹಾರ ನಡೆಸುತ್ತಿರುವ ಶಾರದಾ ಸಮೂಹ ಸಂಸ್ಥೆ ಲಕ್ಷಾಂತರ ಹೂಡಿಕೆದಾರರನ್ನು ವಂಚಿಸಿದೆ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಆದೇಶ ನೀಡಿದೆ. ನಿರಂತರ ಪ್ರತಿಭಟನೆಯ ನಂತರ ಶಾರದಾ ಸಮೂಹದ ಮುಖ್ಯಸ್ಥ ಸುದಿಪ್ತ ಸೇನ್ ಅವರನ್ನು ಎರಡು ದಿನಗಳ ಹಿಂದೆ ಕಾಶ್ಮೆರ ಕಣಿವೆಯಲ್ಲಿ ಬಂಧಿಸಲಾಗಿದ್ದು ಕೊಲ್ಕತ್ತಗೆ ಕರೆತರಲಾಗಿದೆ

. ಶಾರದಾ ಸಮೂಹ ಸಂಸ್ಥೆಯ ಶಾರದಾ ರಿಯಲ್ಟಿ ಇಂಡಿಯ ವಿರುದ್ಧ ಈಗಾಗಲೇ ಆದೇಶ ಹೊರಡಿಸಿರುವ ಹೂಡಿಕೆ ಮಾರುಕಟ್ಟೆ ನಿಯಂತ್ರಕ ಸಂಸ್ಥೆ `ಸೆಬಿ'  ಜನರಿಂದ ಸಂಗ್ರಹಿಸಿರುವ ಹಣವನ್ನು ವಾಪಸ್ ಮಾಡಬೇಕು ಎಂದಿದೆ. ಇದಲ್ಲದೆ `ಸೆಬಿ' ಅನುಮತಿ ಇಲ್ಲದೆಯೇ ಶಾರದಾ ಸಂಸ್ಥೆ ತನ್ನ ಇನ್ನೂ ಕನಿಷ್ಠ ಹತ್ತು ಸಂಸ್ಥೆಗಳಿಗೆ ನಿಧಿ ಸಂಗ್ರಹಿಸುತ್ತಿರುವುದನ್ನು ತನಿಖೆ ಮಾಡಲಾಗುತ್ತಿದೆ.

ಸಿಬಿಐ ತನಿಖೆಗೆ ಕಾಂಗ್ರೆಸ್ ಒತ್ತಾಯ

ಶಾರದಾ ಚಿಟ್‌ಫಂಡ್ ಅಕ್ರಮಗಳ ಕುರಿತು ಸಿಬಿಐ ತನಿಖೆ ನಡೆಸಲು ಕಾಂಗ್ರೆಸ್ ಒತ್ತಾಯಿಸಿದೆ.  `ಸಿಬಿಐ ತನಿಖೆ ನಡೆದಲ್ಲಿ ಸತ್ಯ ಹೊರಬೀಳುತ್ತದೆ' ಎಂದು ಸಂಸದೆ ದೀಪಾ ದಾಸ್‌ಮುನ್ಶಿ ಹೇಳಿದರು. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರ ಬಡವರ ಹಣ ಈ ರೀತಿ ಲೂಟಿಯಾದರೂ ತಲೆಕೆಡಿಸಿಕೊಳ್ಳುತ್ತಿಲ್ಲ, ಶಾರದಾ ಸಂಸ್ಥೆಯ ಹಲವು ಕಾರ್ಯಕ್ರಮಗಳಲ್ಲಿ ತೃಣಮೂಲ ನಾಯಕರು ಪಾಲ್ಗೊಂಡಿದ್ದಾರೆ ಎಂದು ದೀಪಾ ದೂರಿದರು.

ಈ ನಡುವೆ ಕೊಲ್ಕತ್ತದ ಶಾರದಾ ಸಂಸ್ಥೆಯ ಕಚೇರಿ ಎದುರು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರದರ್ಶನ ನಡೆಸಿ, ಸದರಿ ಸಂಸ್ಥೆಯ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT