ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರ ಚಿತ್ರವರ್ಷ

Last Updated 3 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಬೆಂಗಳೂರಿನ ‘ಚಿಲ್ಡ್ರನ್ಸ್ ಇಂಡಿಯಾ ಸಂಸ್ಥೆ’ ರಾಜ್ಯದ ಮಕ್ಕಳಿಗೆ ಜಗತ್ತಿನ ಅತ್ಯುತ್ತಮ ಮಕ್ಕಳ ಚಲನಚಿತ್ರಗಳನ್ನು ‘ಮನೆ ಮುಂದೆ ಮಕ್ಕಳ ಸಿನಿಮಾ’ ಪರಿಕಲ್ಪನೆಯಡಿ ತೋರಿಸಲಿದೆ. ಇದೇ 5ರಿಂದ ಡಿಸೆಂಬರ್ 25ರವರೆಗೆ ಹಮ್ಮಿಕೊಂಡಿರುವ ಈ ಚಿತ್ರೋತ್ಸವದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರದಂದು ಸಿನಿಮಾಗಳನ್ನು ತೋರಿಸಲಾಗುತ್ತದೆ.

ಆರಂಭಿಕ ಹಂತದಲ್ಲಿ ಬೆಂಗಳೂರಿನ ವಿವಿಧ ಬಡಾವಣೆಗಳ ಬಯಲು ರಂಗಮಂದಿರ/ಆಟದ ಮೈದಾನಗಳಲ್ಲಿ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ನಂತರ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿಯೂ ನಾಲ್ಕು ಭಾನುವಾರಗಳ ಸಂಜೆ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಸಾಂಸ್ಕೃತಿಕ, ನೈತಿಕ, ಸಾಮಾಜಿಕ ಮೌಲ್ಯಗಳು ಹಾಗೂ ಜಾಗತೀಕರಣದ ಬಗ್ಗೆ ಅರಿವು ಮೂಡಿಸುವುದು ಈ ಚಿತ್ರೋತ್ಸವದ ಉದ್ದೇಶವಾಗಿದೆ.

‘ಎಲ್ಲಾ ವರ್ಗದ ಮಕ್ಕಳಿಗೂ ಸಿನಿಮಾ ಮಂದಿರಗಳಿಗೆ ಹೋಗಿ ಚಿತ್ರ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಹೊಸ ಪ್ರಯೋಗ ಹುಟ್ಟುಹಾಕಲಾಗಿದೆ. ಜಗತ್ತಿನ ವಿವಿಧ ಭಾಷೆಯ ಚಿತ್ರಗಳೊಂದಿಗೆ ಪ್ರಾದೇಶಿಕ ಚಿತ್ರಗಳನ್ನೂ ತೋರಿಸಲಾಗುತ್ತದೆ. ಪ್ರಾದೇಶಿಕ ಚಿತ್ರಗಳ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಆಯಾ ಬಡಾವಣೆಯ ಪಾಲಿಕೆ ಸದಸ್ಯರು, ಸಂಘ ಸಂಸ್ಥೆಗಳ ಸಲಹೆ ಮೇರೆಗೆ ಮುಂದುವರಿಯಲಾಗುತ್ತದೆ’ ಎನ್ನುವುದು ಚಿತ್ರವರ್ಷದ ಬಗ್ಗೆ ಸಂಸ್ಥೆಯ ಅಧ್ಯಕ್ಷ ಎನ್.ಆರ್. ನಂಜುಂಡೇಗೌಡರ ವಿವರಣೆ.

ಮಕ್ಕಳ ಸಿನಿಮಾ ಪ್ರದರ್ಶನ ಚಿತ್ರವರ್ಷದ ಬಗ್ಗೆ ಉತ್ಸಾಹದಿಂದ ಮಾತನಾಡುತ್ತಿದ್ದ ನಂಜುಂಡೇಗೌಡರು ಪತ್ರಕರ್ತರ ಪ್ರಶ್ನೆಗಳ ವರ್ಷವನ್ನೂ ಎದುರಿಸಬೇಕಾಯಿತು.

‘ಈಗ ಬಳ್ಳಾರಿಯಲ್ಲಿ, ಬೆಂಗಳೂರಿನಲ್ಲಿ ಮರಾಠಿ ಚಿತ್ರ ತೋರಿಸೋದಕ್ಕೆ ಆಗತ್ತಾ? ಮಕ್ಕಳಿಗೆ ಭಾಷೆ ಅರ್ಥವಾಗದಿದ್ದರೆ ಚಿತ್ರ ಹೇಗೆ ನೋಡುತ್ತಾರೆ? ಬೆಂಗಳೂರಿನ ಯಾವ ಬಡಾವಣೆಯಲ್ಲಿ ಯಾವ ಭಾಷೆಯ ಮಕ್ಕಳ ಸಂಖ್ಯೆ ಎಷ್ಟಿದೆ ಎನ್ನುವುದನ್ನು ತಿಳಿದುಕೊಂಡು ಆಯಾ ಭಾಷೆಯ ಚಿತ್ರಗಳನ್ನು ತೋರಿಸಬೇಕಾಗುತ್ತದೆ. ಒಟ್ಟಿನಲ್ಲಿ ಇದೊಂದು ಮಕ್ಕಳ ಚಿತ್ರಗಳ ಚಳವಳಿಯಾಗುವ ಮಾದರಿಯಲ್ಲಿ ಈ ಕಾರ್ಯಕ್ರಮ ರೂಪುಗೊಂಡಿದೆ’- ಹೀಗೆ, ನಂಜುಂಡೇಗೌಡರು ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದರು.

ಅಂದಹಾಗೆ, ‘ಚಿಣ್ಣರ ಚಿತ್ರವರ್ಷ’ ಶೀರ್ಷಿಕೆಯಡಿ ಸದ್ಯಕ್ಕೆ ಬೆಂಗಳೂರಿನಲ್ಲಿ ತೋರಿಸಲಾಗುವ ಸಿನಿಮಾಗಳ ಪಟ್ಟಿ ತಯಾರಾಗಿದೆ. ಹನ್ನೊಂದು ಕನ್ನಡ ಚಿತ್ರಗಳು. ‘ಅಪಾಲಜಿ’ ಎಂಬ ಚೀನಿ ಚಿತ್ರವೂ ಪಟ್ಟಿಯಲ್ಲಿದೆ. ಗೋಷ್ಠಿಯಲ್ಲಿ ನಿರ್ದೇಶಕ ಭಗವಾನ್, ಪತ್ರಕರ್ತ ಸೀತಾರಾಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT