ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರ ನಡಿಗೆ ಶಾಲೆಯ ಕಡೆಗೆ

ಸಡಗರದ ಪ್ರಾರಂಭೋತ್ಸವ, ಹಬ್ಬದ ವಾತಾವರಣ
Last Updated 1 ಜೂನ್ 2013, 6:14 IST
ಅಕ್ಷರ ಗಾತ್ರ

ದಾವಣಗೆರೆ: ನಗರ ಸೇರಿದಂತೆ ಜಿಲ್ಲೆಯಲ್ಲಿ ಶಾಲಾ ಆರಂಭೋತ್ಸವ ಸಡಗರದಿಂದ ಶುಕ್ರವಾರ ನಡೆಯಿತು.
ಗುರುವಾರವೇ ಶಿಕ್ಷಕರು, ವಿದ್ಯಾರ್ಥಿಗಳು ಶಾಲೆ ಸ್ವಚ್ಛಗೊಳಿಸಿ, ಅಲಂಕರಿಸಿ ಆರಂಭೋತ್ಸವಕ್ಕೆ ಅಣಿಗೊಳಿಸಿದ್ದರು.

ಇಂದು ಬೆಳಿಗ್ಗೆಯಿಂದಲೆ ಹೊಸಬಟ್ಟೆ ಧರಿಸಿ ಬ್ಯಾಗ್ ಹಿಡಿದುಕೊಂಡು ಚಿಣ್ಣರು ಶಾಲೆಗಳತ್ತ ಹೆಜ್ಜೆ ಹಾಕಿದರು. ಮೊದಲ ದಿನವಾದ್ದರಿಂದ ಶಾಲೆಗಳಲ್ಲಿ ಪಾಠ ಪ್ರವಚನಗಳ ಒತ್ತಡ ಇರಲಿಲ್ಲ. ಬದಲಾಗಿ ಶಿಕ್ಷಕರು ನಗುಮೊಗದಿಂದ ಮಕ್ಕಳನ್ನು ಸ್ವಾಗತಿಸಿದರು.

ನಿಟುವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಸೇರಿಸಿ ಎಂದು ಜಾಗೃತಿ ಮೂಡಿಸಲು ಪ್ರಭಾತ ಫೇರಿ ನಡೆಸಲಾಯಿತು. ಬಳಿಕ ನಡೆದ ಸರಳ ಸಮಾರಂಭದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು ಸೇರಿ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿದರು. ಮಧ್ಯಾಹ್ನ ಬಿಸಿಯೂಟದಲ್ಲಿ ಕೆಲವೆಡೆ ಪಾಯಸ ಬಡಿಸಿದರೆ, ಹಲವೆಡೆ ಸಿಹಿ ವಿತರಿಸಲಾಯಿತು.

ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆ, ಡಾಂಗೆ ಪಾರ್ಕ್‌ನ ಉರ್ದು ಕಿರಿಯ ಪ್ರಾಥಮಿಕ ಶಾಲೆ, ಶಾಮನೂರಿನ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಹಲವು ಶಾಲೆಗಳಲ್ಲಿ ಹಬ್ಬದ ವಾತಾವರಣ ಕಂಡುಬಂದಿತು.

ಹಳೇಕುಂದವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಪಾಲಿಕೆ ಸದಸ್ಯ ಎಚ್.ತಿಪ್ಪಣ್ಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಸ್.ಸುರೇಶ್, ಬಸವರಾಜಪ್ಪ ಅಕ್ಕಿ, ಎಚ್.ಬಿ. ಕರಿಬಸಪ್ಪ, ಎಚ್.ಜಿ.ಮಂಜಪ್ಪ, ಎಚ್.ಎಸ್.ನಿಂಗಪ್ಪ, ಎಂ.ಹನುಮಂತಪ್ಪ, ಮುಖ್ಯಶಿಕ್ಷಕ ಎ.ಎನ್.ರಾಮಚಂದ್ರಪ್ಪ ಉಪಸ್ಥಿತರಿದ್ದರು.

ಜಿಲ್ಲೆಯ ಒಟ್ಟು 1,551 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 939 ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಆರಂಭೋತ್ಸವ ನಡೆದಿದೆ. ಜಿಲ್ಲೆಯ ಶಾಲೆಗಳಲ್ಲಿ ಒಟ್ಟು 3,27,378 ಮಕ್ಕಳು ಇದ್ದಾರೆ. ಆರ್ಥಿಕವಾಗಿ ಹಿಂದುಳಿದ 2,335 ಮಕ್ಕಳಿಗೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ.ಕೆ.ಶಿವಕುಮಾರ್ ತಿಳಿಸಿದರು.

ಇದೇ ವೇಳೆ ಶಾಲೆಗಳಲ್ಲಿ ಆರಂಭೋತ್ಸವ ಕಾರ್ಯಕ್ರಮ ಪರಿಶೀಲಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದ ತಂಡದಲ್ಲಿ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಒಂದೆಡೆ ಸಂಭ್ರಮದಿಂದ ಮಕ್ಕಳು ಶಾಲೆಗೆ ಹೋಗುತ್ತಿದ್ದರೆ ಚಿಂದಿ ಆಯುವ ಮಕ್ಕಳು ಎಂದಿನಂತೆ ತಮ್ಮ ಕಾಯಕಕ್ಕೆ ತೆರಳುತ್ತಿದ್ದರು. ಕೆಲವು ಶಿಕ್ಷಣವಂಚಿತ ಮಕ್ಕಳು ಶಾಲಾ ಫಲಕವನ್ನು ಆಸೆಗಣ್ಣಿನಿಂದ ನೋಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT