ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರ: ಗೋಕುಲ ಕೃಷ್ಣ - ಗೋಕುಲದಲ್ಲಿ ಐಸ್‌ಪೈಸ್!

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನಿರ್ಮಾಪಕ: ಪಿ. ಶೇಖರ್ ಗೌಡ
ನಿರ್ದೇಶಕ: ವಿ.ಎಂ. ಜಯಕಣ್ಣನ್
ತಾರಾಗಣ: ಪ್ರಜ್ವಲ್ ದೇವರಾಜ್, ಅನನ್ಯ, ಜೈಜಗದೀಶ್, ಭವ್ಯಾ, ದೊಡ್ಡಣ್ಣ, ಸಾಧುಕೋಕಿಲ, ಜಯಲಕ್ಷ್ಮಿ ಪಾಟೀಲ್, ಶಶಿಕಲಾ, ಸುರೇಶ್‌ಚಂದ್ರ, ಕುರಿಗಳು ಪ್ರತಾಪ್ ಮತ್ತಿತರರು.
 

ಆಧುನಿಕ ಯುಗದಲ್ಲಿ ಸಂಬಂಧಗಳ ನಡುವೆ ಏರ್ಪಡುತ್ತಿರುವ ಅಂತರ ಮತ್ತು ಸಂಪ್ರದಾಯಕ್ಕೆ ಕಟ್ಟುಬಿದ್ದ ಸಮಾಜ ವ್ಯವಸ್ಥೆಯ ಗೊಂದಲವನ್ನು ನಿರ್ದೇಶಕ ಜಯಕಣ್ಣನ್ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ.
 

ಇವು ನಾಯಕನ ಹುಡುಗಾಟದ ವ್ಯಕ್ತಿತ್ವವನ್ನು ಹಾಗೂ ಆತ ತನ್ನ ಪ್ರೀತಿಯನ್ನು ಗಳಿಸಿಕೊಳ್ಳುವ ಪ್ರಯತ್ನದ ನಡುವೆ ಇಣುಕುವ ಅನುಕೂಲಸಿಂಧು ಸನ್ನಿವೇಶಗಳಾಗಿ ಗೋಚರಿಸುತ್ತವೆಯೇ ಹೊರತು, ತಾರ್ಕಿಕವಾಗಿ ಸಿನಿಮಾದೊಳಗೆ ಒಳಗೊಳ್ಳುವುದಿಲ್ಲ.

ವ್ಯಾಪಾರಿ ಚಿತ್ರದ ಚೌಕಟ್ಟಿನಲ್ಲಿಯೇ ಇವುಗಳನ್ನು, ಪ್ರೀತಿಯ ಬೆನ್ನತ್ತುವ ನಾಯಕನ `ಸ್ಲೋ ಮೋಷನ್~ ಓಟಕ್ಕೆ ಅಡ್ಡಿಯಾಗದಂತೆ ಕಟ್ಟಿಕೊಡುವ ಅವಕಾಶವಿತ್ತು. ಅದನ್ನು ಕೈಚೆಲ್ಲಿ ಅತ್ತ ರಂಜನೆಯೂ ಅಲ್ಲದ, ಇತ್ತ ಸಂವೇದನಾತ್ಮಕವೂ ಅಲ್ಲದ ಮಾರ್ಗದಲ್ಲಿ ಅವರು ಸಾಗಿದ್ದಾರೆ. ಇದರ ಪರಿಣಾಮವೇ `ಗೋಕುಲ ಕೃಷ್ಣ~ ಎಂಬ ಸುದೀರ್ಘ ಧಾರಾವಾಹಿಯ ಸೃಷ್ಟಿ.

ಅವಸರ ಅಪಘಾತಕ್ಕೆ ಕಾರಣ ಎಂಬ ಎಚ್ಚರಿಕೆಯ ಮಾತು ಸಿನಿಮಾ ಮಾಡುವಾಗಲೂ ನಿರ್ದೇಶಕರನ್ನು ಕಾಡಿದಂತಿದೆ. ಹೀಗಾಗಿ ನಿಧಾನಗತಿಯ ಸೂತ್ರಕ್ಕೆ ಮೊರೆಹೊಕ್ಕಿದ್ದಾರೆ. ಸಾವಕಾಶದ ಈ ನಡಿಗೆಯಲ್ಲಿ ಸ್ವಾರಸ್ಯವೂ ಇಲ್ಲ, ಲವಲವಿಕೆಯೂ ಇಲ್ಲ. ಮಾತ್ರವಲ್ಲ, ಐದಾರು ಕನ್ನಡ ಸಿನಿಮಾಗಳನ್ನು ಒಮ್ಮೆಲೆ ನೆನಪಿಗೆ ತರಬಲ್ಲ ಸಾಮರ್ಥ್ಯ ಈ ಚಿತ್ರಕ್ಕಿದೆ. `ಶಾಂತಿನಿವಾಸ~ದ ಸುದೀಪ್ `ಗೋಕುಲ ಕೃಷ್ಣ~ ಪ್ರಜ್ವಲ್ ದೇಹಪ್ರವೇಶ ಮಾಡಿದ್ದಾರೋ ಎನ್ನುವ ಮಟ್ಟಿಗೆ ಆ ಚಿತ್ರದ ಪ್ರಭಾವ ಢಾಳಾಗಿ ಕಾಣುತ್ತದೆ.
 
ದುಃಖದಲ್ಲಿರುವ ಕುಟುಂಬದಲ್ಲಿ ನಗು, ಸಂತೋಷ ಮೂಡಿಸುವ ಅದೇ ಮಂತ್ರವನ್ನು ಪ್ರಜ್ವಲ್ ಇಲ್ಲಿ ಪಠಿಸುತ್ತಾರೆ. ವ್ಯತ್ಯಾಸವೆಂದರೆ, ನಾಯಕನಿಗಿಲ್ಲಿ ತನ್ನ ಪ್ರೀತಿ ಗಿಟ್ಟಿಸಿಕೊಳ್ಳುವ ಸವಾಲು ಇರುತ್ತದೆ. ಬದುಕೆಂದರೆ ಸ್ನೇಹಿತರೊಂದಿಗೆ ಸಂತೋಷದಿಂದ ಕಾಲ ಕಳೆಯುವುದು ಎಂದೇ ಭಾವಿಸಿದ್ದ ಕೋಟ್ಯಧಿಪತಿಯ ಮಗ, ನಾಯಕಿಯ ಪ್ರೀತಿಗಾಗಿ ಆಕೆಯ ಮನೆಯ ಕಾರು ತೊಳೆಯುತ್ತಾನೆ, ಗಿಡಕ್ಕೆ ನೀರು ಹಾಕುತ್ತಾನೆ. ಆದಿಯಿಂದ ಅಂತ್ಯದವರೆಗೂ ನಾಯಕನಾಡಿದ್ದೇ ಆಟ. ಅದರ ದಿಕ್ಕನ್ನು ಹೊರಳಿಸುವ ಸನ್ನಿವೇಶಗಳು ಅಲ್ಲಲ್ಲಿ ಎದುರಾದರೂ ನಾಯಕನ ಗೆಲುವು ಸುಗಮವಾಗಬೇಕಿದ್ದರಿಂದ ಸಂಕಷ್ಟಗಳು ಸುಲಭವಾಗಿ ನಿವಾರಣೆಯಾಗುತ್ತವೆ.

ಸರಳ ಕಥೆಯನ್ನು ಹಿಗ್ಗಿಸಿದಾಗ ಉಂಟಾದ ಖಾಲಿತನವನ್ನು ಭರ್ತಿಮಾಡಲು ಜಯಕಣ್ಣನ್ ವಿಫಲರಾಗಿದ್ದಾರೆ. ಸಾಧುಕೋಕಿಲ ಮತ್ತು ಕುರಿಗಳು ಪ್ರತಾಪ್ ಹಾಸ್ಯ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ಹಾಸ್ಯ ಇಲ್ಲವೇ ಕಥೆಯಲ್ಲಿ ಅಡಕವಾಗಿದ್ದ ವಿಧವಾ ವಿವಾಹದ ಎಳೆಯನ್ನು ಓರಣವಾಗಿ ಜೋಡಿಸಿ ಖಾಲಿತನವನ್ನು ತುಂಬಬಹುದಾಗಿತ್ತು.

ಪ್ರಜ್ವಲ್ ದೇವರಾಜ್ ಚಿತ್ರವಿಡೀ ತುಂಬಿದ್ದರೂ, ಹೆಚ್ಚು ಆಪ್ತವಾಗುವುದು ನಾಯಕಿ ಅನನ್ಯ. ಗಂಭೀರ ಪಾತ್ರವನ್ನು ತಮ್ಮ ಮುಖಭಾವಗಳ ಮೂಲಕವೇ ಪೋಷಿಸಿರುವ ಬಗೆ ಗಮನಾರ್ಹ. ಅವರ ಅಭಿನಯ ಸಾಮರ್ಥ್ಯವನ್ನು ಸೂಕ್ತವಾಗಿ ಬಳಸಿಕೊಳ್ಳದಿರುವುದು ಚಿತ್ರಕ್ಕಾದ ನಷ್ಟ. ಎಸ್.ಎ. ರಾಜ್‌ಕುಮಾರ್ ಸಂಗೀತ, ವಿನೋದ್ ಭಾರತಿ ಛಾಯಾಗ್ರಹಣ ವೈಫಲ್ಯಗಳ ಸಾಲಿಗೆ ಸೇರಿಕೊಳ್ಳುತ್ತವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT