ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರ- ಸಂಜು ವೆಡ್ಸ್ ಗೀತಾ. ಧಗೆದಿನಗಳ ತಂಪುಮಳೆ

Last Updated 2 ಏಪ್ರಿಲ್ 2011, 19:00 IST
ಅಕ್ಷರ ಗಾತ್ರ

ಚಿತ್ರ- ಸಂಜು ವೆಡ್ಸ್ ಗೀತಾ

ನಾಯಕ - ನಾಯಕಿ ಪ್ರೇಮ ನಿವೇದಿಸಿಕೊಂಡ ಕೆಲವೇ ಕ್ಷಣಗಳಲ್ಲಿ ‘ಅಂತಿಮ ಸಂಸ್ಕಾರ’ದ ಮೆರವಣಿಗೆ ಬರುತ್ತದೆ. ನಾಯಕಿ ಕೇಳುತ್ತಾಳೆ- ‘ನಾವು ಒಂದು ದಿನ ಸಾಯುತ್ತೇವಲ್ಲವಾ?’. ಈ ಪ್ರಶ್ನೆಗೆ ನಾಯಕ- ‘ಇತಿಹಾಸದ ಪುಟಗಳನ್ನು ನೋಡು; ಪ್ರೇಮಿಗಳಿಗೆ ಸಾವೇ ಇಲ್ಲ’ ಎನ್ನುವ ಅರ್ಥದ ಮಾತನ್ನಾಡುತ್ತಾನೆ. ಪ್ರೇಮದ ಜೀವಂತಿಕೆ ಹಾಗೂ ಬದುಕಿನ ನಶ್ವರತೆಯನ್ನು ಒಟ್ಟಿಗೇ ಕಟ್ಟಿಕೊಡುವ ‘ಸಂಜು ವೆಡ್ಸ್ ಗೀತಾ’ ಚಿತ್ರದಲ್ಲಿನ ಈ ದೃಶ್ಯ ಸಿನಿಮಾ ಕಥನದ ಕೇಂದ್ರವೂ ಹೌದು. ಬದುಕಿನ ಚೆಲುವು - ಕ್ಷಣಿಕತೆಯನ್ನು ಒಂದೇ ನಾಣ್ಯದ ಎರಡು ಮುಖಗಳಂತೆ ಚಿತ್ರಿಸುವುದು ನಿರ್ದೇಶಕ ನಾಗಶೇಖರ್ ಉದ್ದೇಶ.

‘ಅರಮನೆ’ ಚಿತ್ರದಲ್ಲಿ ಫೋಟೊ ನೆಗೆಟಿವ್‌ಗಳನ್ನು ಬಳಸಿಕೊಂಡು ಸಂಬಂಧಗಳ ತಾಕಲಾಟಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದ ನಾಗಶೇಖರ್, ತಮ್ಮ ನಿರ್ದೇಶನದ ಎರಡನೇ ಚಿತ್ರದಲ್ಲಿ ಇನ್ನಷ್ಟು ಸಾಧ್ಯತೆಗಳಿಗೆ ಪ್ರಯತ್ನಿಸಿದ್ದಾರೆ. ಇಲ್ಲಿ ಕೂಡ ಫೋಟೊ ನೆಗೆಟಿವ್‌ಗಳ ನೆರಳುಗಳಿವೆ. ತೊಂಬತ್ತರ ದಶಕದ ಪರಿಸರವೊಂದನ್ನು ಪುನರ್ ಸೃಷ್ಟಿಸುವ ಪ್ರಯತ್ನವಿದೆ. ಇಲ್ಲಿನ ಕಥೆಯ ವಿಸ್ತಾರ ಕೂಡ ದೊಡ್ಡದೇ. ಮೇಲ್ನೋಟಕ್ಕಿದು

ಪ್ರೇಮಕಥನದಂತೆ ಕಂಡರೂ, ಪ್ರೀತಿಯ ಪರಿಧಿ ಮೀರಿದ ಸಾಮಾಜಿಕ ಆಯಾಮವೊಂದು ಚಿತ್ರದಲ್ಲಿದೆ. ಸೋದರ ಸಂಬಂಧಿಯಿಂದ ಅತ್ಯಾಚಾರಕ್ಕೆ ಒಳಗಾಗಿ, ತನ್ನ ಯಾತನೆಯನ್ನು ಯಾರಲ್ಲೂ ಹೇಳಿಕೊಳ್ಳಲಾಗದೆ ಒದ್ದಾಡುವ ದುರದೃಷ್ಟ ಹೆಣ್ಣಿನ ಕಥೆ ಇಲ್ಲಿಯದು. ರೆಕ್ಕೆ ಕಟ್ಟಿಕೊಂಡು ವಿದೇಶಕ್ಕೆ ಹಾರುವ ತರುಣಪೀಳಿಗೆಯ ಮನಸ್ಥಿತಿಯೂ ಕಥೆಯಲ್ಲಿ ಸೂಚ್ಯವಾಗಿದೆ. ಹಾದಿಬದಿಯ ಭಿಕ್ಷುಕಿಯರನ್ನು ಮಾನವೀಯತೆಯಿಂದ ಕಾಣುವ ಪ್ರಸಂಗಗಳಿವೆ.

‘ಸಂಜು ವೆಡ್ಸ್ ಗೀತಾ’ದ ಚೆಲುವನ್ನು ಹೆಚ್ಚಿಸಿರುವ ಮತ್ತೊಂದು ಅಂಶ ಮಳೆ. ‘ಮುಂಗಾರು ಮಳೆ’ಯಂತೆ ಇಲ್ಲಿಯೂ ಮಳೆ ಸುರಿಯುತ್ತದೆ. ಕಥೆಯ ವಿವಿಧ ಮೂಡ್‌ಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಮಳೆಯನ್ನು ರೂಪಕದಂತೆ ಬಳಸಿಕೊಂಡಿರುವ ನಿರ್ದೇಶಕರ ಸೃಜನಶೀಲತೆ ಇಲ್ಲಿನ ಮಳೆಯನ್ನು ಜೀವಂತವಾಗಿಸಿದೆ. ಕನ್ನಡ ಸಿನಿಮಾ ಇತಿಹಾಸದ ಅಪರೂಪದ ಮಳೆಗಳಲ್ಲಿ ಇಲ್ಲಿನದೂ ಒಂದು.

ಸಂಜು ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಸಲೀಸಾಗಿ ನಟಿಸಿದ್ದಾರೆ. ಚಿತ್ರದ ನಿಜವಾದ ಅಚ್ಚರಿ ಗೀತಾಳಾಗಿ ನಟಿಸಿರುವ ರಮ್ಯಾ. ಚಿತ್ರರಂಗದಿಂದ ನಿವೃತ್ತರಾಗುವುದಾಗಿ ಇತ್ತೀಚೆಗವರು ಹೇಳಿದ್ದರಷ್ಟೇ- ‘ಸಂಜು ವೆಡ್ಸ್ ಗೀತಾ’ ಚಿತ್ರದಲ್ಲಿನ ನಟನೆ ನೋಡಿದರೆ, ಅವರ ನಿವೃತ್ತಿಯ  ಹೇಳಿಕೆಯನ್ನು ಗುಣಾತ್ಮಕವಾಗಿ ನೋಡಬಹುದು. ಗೀತಾಳ ಪಾತ್ರದಲ್ಲಿನ ನಟನೆ ಅವರ ವೃತ್ತಿಜೀವನದಲ್ಲೇ ಪ್ರಬುದ್ಧವಾದದ್ದು. ನಟಿಯರೆಲ್ಲ ಬಬ್ಲಿ ಪಾತ್ರಗಳನ್ನೇ ಪ್ರೀತಿಸುತ್ತಿರುವಾಗ, ನತದೃಷ್ಟ ಹೆಣ್ಣಿನ ಪಾತ್ರವನ್ನು ಒಪ್ಪಿಕೊಂಡು ಅದಕ್ಕವರು ಜೀವತುಂಬಿದ್ದಾರೆ. ವಿಕೃತ ಸೋದರ ಸಂಬಂಧಿಯ ಪಾತ್ರದಲ್ಲಿ ಅರುಣ್ ಸಾಗರ್ ಚಿತ್ರದಲ್ಲಿ ಗಮನಸೆಳೆಯುವ ಮತ್ತೊಬ್ಬ ಕಲಾವಿದ.

ಛಾಯಾಗ್ರಾಹಕ ಸತ್ಯ ಹೆಗಡೆ ಚಿತ್ರವನ್ನು ತುಂಬು ಉತ್ಸಾಹದಿಂದ ಚಿತ್ರಿಸಿದ್ದಾರೆ. ಜೀವಂತ ಮಳೆಯಷ್ಟೇ ಅಲ್ಲ, ಯೌವನ ಕಳಕೊಂಡ ಮಾಸಲು ವಸ್ತುಗಳೂ ಅವರ ಕ್ಯಾಮೆರಾದಲ್ಲಿ ಕಲಾಕೃತಿಗಳಂತೆ ಕಾಣಿಸುತ್ತವೆ. ಜೆಸ್ಸಿ ಗಿಫ್ಟ್ ಸಂಗೀತ, ಸಾಧು ಕೋಕಿಲರ ಹಿನ್ನೆಲೆ ಸಂಗೀತ ಚಿತ್ರದ ಪರಿಣಾಮಕ್ಕೆ ಪೂರಕವಾಗಿವೆ.

ವಿಪರೀತ ಸೌಂದರ್ಯ ಪ್ರಜ್ಞೆಯಲ್ಲಿ, ಆಸ್ಥೆಯಲ್ಲಿ ಕೆಲಸ ಮಾಡಿರುವ ನಿರ್ದೇಶಕರು ಕೊಂಚ ಸಮತೋಲನ ಕಳೆದುಕೊಂಡಿರುವುದು ಚಿತ್ರದ ಉತ್ತರಾರ್ಧದಲ್ಲಿ. ಒಂದರ ಹಿಂದೊಂದು ನಾಟಕೀಯ ಸನ್ನಿವೇಶಗಳು ಸಂಭವಿಸುತ್ತವೆ.

‘ಸಂಜು ಮತ್ತು ಗೀತಾ ಸೇರಬೇಕಂತ ಬ್ರಹ್ಮ ಬರೆದಾಯಿತು’ ಎನ್ನುವುದು ಚಿತ್ರದ ಧ್ಯೇಯವಾದರೂ ನಿರ್ದೇಶಕರು ಪ್ರೇಮಿಗಳನ್ನು ಸೇರಿಸುವುದು ಸಾವಿನಲ್ಲಿ. ಈ ಚಿತ್ರಣ ಬದುಕಿನ ನಶ್ವರತೆಯನ್ನು ಬಿಂಬಿಸುವ ಜೊತೆಗೆ ನಿರ್ದೇಶಕರ ನಕಾರಾತ್ಮಕ ಧೋರಣೆಗೂ ಉದಾಹರಣೆಯಾಗುತ್ತದೆ. ತನ್ನದಲ್ಲದ ತಪ್ಪಿಗೆ ಗರ್ಭ ಧರಿಸಿದ ಹೆಣ್ಣು, ಕಳೆದೇ ಹೋಗುವುದು, ಸಾವಿಗೀಡಾಗುವುದು- ಯಾರಲ್ಲೂ ಉತ್ಸಾಹ ಮೂಡಿಸುವಂತಹದ್ದೇನಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT